ನಾನು ಯಾವುದಾದರೂ ಊರಿಗೆ ಹೋದರೆ, ಸಾಮಾನ್ಯವಾಗಿ ಅಲ್ಲಿನ ಸೂಫಿಗಳ ದರ್ಗಾಗಳಿಗೆ ಭೇಟಿ ಕೊಡುತ್ತೇನೆ. ಸಾಧ್ಯವಾದರೆ ಅಲ್ಲೇ ವಸತಿ ಮಾಡುತ್ತೇನೆ. ಇದಕ್ಕೆ ನಾನು ಮಸೀದಿ ಸಂಸ್ಕೃತಿಗಿಂತ ಹೆಚ್ಚಾಗಿ ದರ್ಗಾ ಸಂಸ್ಕೃತಿಯಲ್ಲಿ ಬೆಳೆದಿರುವುದೂ ಒಂದು ಕಾರಣ ಇರಬಹುದು; ಎಲ್ಲರಿಗೂ ತಿಳಿದಿರುವಂತೆ ದರ್ಗಾಗಳಿಗೆ ಎಲ್ಲ ಮುಸ್ಲಿಮರು ಬರುವುದಿಲ್ಲ. ಸೂಫಿ ಸಂಸ್ಕೃತಿಯಲ್ಲಿ ಶ್ರದ್ಧೆಯಿದ್ದವರಷ್ಟೇ ಬರುತ್ತಾರೆ. ವಿಶೇಷವಾಗಿ ಮಹಿಳೆಯರು ಬರುತ್ತಾರೆ. ಜತೆಗೆ ಎಲ್ಲ ಧರ್ಮಗಳಿಗೆ ಸೇರಿದ ಜನರೂ ಬರುತ್ತಾರೆ. ಹೀಗಾಗಿಯೇ ದರ್ಗಾಗಳು ಸಂಪ್ರದಾಯವಾದಿ ಮುಸ್ಲಿಮರ ಕಣ್ಣಲ್ಲಿ ಮಲಿನ ಲೋಕಗಳು. ಅಲ್ಲಾಹನ ಪರಮ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳದೆ ತಮ್ಮ ಭಕ್ತಿಯನ್ನು ನಮ್ಮಂತೆಯೇ ಮನುಷ್ಯರಾಗಿದ್ದವರ ಸಮಾಧಿಗೆ ಅರ್ಪಿಸುವ ದೈವನಿಂದಕರ ಜಾಗಗಳು. ದರ್ಗಾದಲ್ಲಿ
-ರಹಮತ್ ತರೀಕೆರೆ
ಆದರೆ ಈ ಮಲಿನ ಮತ್ತು ದೈವನಿಂದಕರ ಲೋಕದಲ್ಲಿ ಸಂಗೀತವಿದೆ, ಕಾವ್ಯವಿದೆ, ದರ್ಶನವಿದೆ, ಅನುಭಾವವಿದೆ, ಭಕ್ತಿಯಿದೆ. ಬಡವರ ನೋವುಗಳನ್ನು ಕೇಳಿಸಿಕೊಳ್ಳುವ ಕಿವಿಯಿದೆ. ಇದರ ಜತೆಗೆ ಆಯಾ ಸೀಮೆಯ ಬಡತನ ದುಗುಡ ಚೈತನ್ಯ ಮೌಢ್ಯ ಢಾಂಬಿಕತೆಗಳೂ ದರ್ಗಾದ ಉಸ್ತುವಾರಿ ಮಾಡುವವರ ವ್ಯವಹಾರಿಕತೆಯೂ ವಿಚಿತ್ರವಾಗಿ ಸೇರಿಕೊಂಡಿವೆ. ಹೀಗೆ ಸೂಫಿಗಳ ದರ್ಗಾಗಳು ದಮನಿತ, ನಿಷಿದ್ಧ, ಸೃಜನಶೀಲ ಮತ್ತು ವ್ಯಾವಹಾರಿಕ ಧಾರೆಗಳೆಲ್ಲವೂ ವಿಚಿತ್ರವಾಗಿ ಸಂಗಮಿಸುವ ರಂಗಭೂಮಿಗಳಿದ್ದಂತೆ; ಅಲ್ಲಿ ಶೃಂಗಾರ ರೌದ್ರ ಕರುಣ ರಸದ ಅನೇಕ ಪಾತ್ರಗಳು ಬಂದು ಅಭಿನಯಿಸುತ್ತವೆ. ನಮ್ರ ಪ್ರೇಕ್ಷಕನಾಗಿ ನಾನು ಕುಳಿತು ಅವನ್ನು ದರ್ಶಿಸುತ್ತೇನೆ. ಅಲ್ಲಿನ ಚಿತ್ರಗಳ ಮೂಲಕ ನಮ್ಮ ಸಮಾಜದ ಬದುಕನ್ನು ಕಲ್ಪಿಸಿಕೊಳ್ಳುತ್ತೇನೆ. ಅಲ್ಲಿನ ಚಿತ್ರಗಳನ್ನು ಕಾಣುವಾಗ ನನ್ನಲ್ಲೂ ಕರುಣೆ ವ್ಯಗ್ರತೆ ಆನಂದ ಮುಜುಗರ ಎಲ್ಲವೂ ಏಕೀಭವಿಸುತ್ತವೆ. ದರ್ಗಾಗಳ ಜಗತ್ತೇ ಅಂತಹುದು. ದರ್ಗಾದಲ್ಲಿ
ನಾನು ದೆಹಲಿಗೆ ಹೋದಾಗಲೆಲ್ಲ ಅಲ್ಲಿನ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಕ್ಕೆ ತಪ್ಪದೇ ಹೋಗುತ್ತೇನೆ. ನಿಜಾಮುದ್ದೀನ್ ಔಲಿಯಾ ನಮ್ಮ ಗುಲಬರ್ಗೆಯ ಬಂದೇನವಾಜರ ಗುರುವಿನ ಗುರು. ನಿಜಾಮುದ್ದೀನ್ ಎಂದರೆ ಧರ್ಮದ ಸುಲ್ತಾನ ಎಂದರ್ಥ. ಆದರೆ ಯಾವುದನ್ನು ಸಾಂಪ್ರದಾಯಿಕ ಧರ್ಮ ಎನ್ನಲಾಗುತ್ತಿತ್ತೊ ಅದಕ್ಕೆ ಬೇಕಾದಷ್ಟು ಭಿನ್ನವಾಗಿ ನಡೆದುಕೊಂಡ ಸಂತನೀತ. ನಿಜಾಮುದ್ದೀನ್ ದರ್ಗಾದು ದೊಡ್ಡ ಸಂಕೀರ್ಣ. ಅಲ್ಲಿ ತನ್ನ ಗುರುವಿನ ಸನ್ನಿಧಿಯಲ್ಲೇ ಇರಬೇಕೆಂದು ಹಠಹಿಡಿದು ಮಲಗಿರುವ ಹಿಂದೂಸ್ತಾನಿ ಸಂಗೀತದ ಪಿತಾಮಹ ಅಮೀರ್ ಖುಸ್ರೂನ ಸಮಾಧಿಯಿದೆ. ಅಲ್ಲಿಂದ ಹತ್ತುಮಾರು ದೂರದಲ್ಲಿ ಉರ್ದುವಿನ ಪ್ರಸಿದ್ಧ ಕವಿ, ಪಾನಪ್ರತಿಮೆಗಳ ಸರದಾರ ಮಿರ್ಜಾ ಗಾಲಿಬನ ಸಮಾಧಿಯಿದೆ. ಅಲ್ಲೇ ಕೊಂಚ ಹಿಂದೆ 20ನೇ ಶತಮಾನದಲ್ಲಿ ಖ್ಯಾತರಾಗಿದ್ದ ಸೂಫಿ ದಾರ್ಶನಿಕ ಹಾಗೂ ಸಂಗೀತಗಾರ ಹಜರತ್ ಇನಾಯತ್ ಖಾನರ ಸಮಾಧಿಯಿದೆ. ಹೀಗೆ ಸಂತರು, ಸಂಗೀತಗಾರರು, ಕವಿಗಳು, ದಾರ್ಶನಿಕರು, ವಿದ್ವಾಂಸರು ಒಟ್ಟಿಗೇ ಸ್ಮಾರಕಗಳಾಗಿ ನೆಲೆಸಿರುವ ತಾಣವಿದು. ಆದರೆ ಅದೊಂದು ಸಂತೆ ಕೂಡ. ದರ್ಗಾದಲ್ಲಿ
ಇದನ್ನೂ ಓದಿ: ಕೆರಳ | ರಾಹುಲ್ ಗಾಂಧಿ ಕೊಲೆ ಬೆದರಿಕೆ : ಗುಂಡು ಹೊಡೆಯುತ್ತೆವೆ
ಮೊಗಲರ ಕಾಲದ ವಿಶಿಷ್ಟ ಇಸ್ಲಾಮಿಕ್ ಸಂಸ್ಕೃತಿಯ ವಾಸನೆಯುಳ್ಳ ಅನೇಕ ಜಾಗಗಳು ದಿಲ್ಲಿಯಲ್ಲಿವೆ. ಅವುಗಳ ಚಹರೆಯೆಂದರೆ- ಇಕ್ಕಟ್ಟಾದ ಗಲ್ಲಿಗಳು; ಹಾದಿಮಾಡಿಕೊಂಡು ಗಂಟೆ ಬಾರಿಸಿಕೊಂಡು ನುಸುಳುವ ಸೈಕಲ್ ರಿಕ್ಷಾಗಳು; ಗರಂ ಮಸಾಲೆ ಮತ್ತು ಮಾಂಸದ ಕಟುಮಧುರ ಹೊಗೆಯನ್ನು ಎಬ್ಬಿಸಿರುವ ಕೆಂಡದ ಕಬಾಬ್ ಮಾಡುವವರು, ರೊಟ್ಟಿ ಅತ್ತರು ಟೋಪಿ ಶ್ಯಾವಿಗೆ ಮಾರುವ ಅಂಗಡಿಗಳು; ಒಳಗೆ ವಿರಾಮದಲ್ಲಿ ಕುಳಿತು ಹರಟುವ ದಪ್ಪಹೊಟ್ಟೆಯ ದಾಡಿಬಿಟ್ಟ ವಯಸ್ಕರು, ತಿರುಕರಿಗೆ ಬಡವರಿಗೆ ಅಲ್ಲಿರುವ ಹೋಟೆಲುಗಳಲ್ಲಿ ರೊಟ್ಟಿ ಕೊಡಿಸುವ ಭಕ್ತರು, ಕೆಂಪನೆಯ ಚಿಕನ್ ತುಂಡುಗಳನ್ನು ಎಣ್ಣೆಯಲ್ಲಿ ಕರೆಯುವವರು, ಅಲ್ಲೇ ನಿಂತು ಅವನ್ನು ತಿನ್ನುವ ಜನರು-ಇವನ್ನೆಲ್ಲ ನೋಡುತ್ತಿದ್ದರೆ ಮಧ್ಯಕಾಲವು ಬದಲೇ ಆಗಿಲ್ಲವೇನೊ ಅನಿಸುತ್ತದೆ. ಜಾಮಿಯಾ ಮಸೀದಿ, ಚಿರಾಗೆದೆಹಲಿ, ನಿಜಾಮುದ್ದೀನ್ ದರ್ಗಾ ಇವೆಲ್ಲ ಇಂತಹ ಜಾಗಗಳು. ದರ್ಗಾದಲ್ಲಿ
ನಿಜಾಮುದ್ದೀನ್ ದರ್ಗಾ ಇರುವಿಕೆಯಂತೂ ತೀರ ಹತ್ತಿರ ಹೋಗುವವರೆಗೂ ಗೊತ್ತೇ ಆಗುವುದಿಲ್ಲ. ಸಕ್ಕರೆ ತುಂಡಿಗೆ ಇರುವೆ ಮುತ್ತಿಕೊಂಡಂತೆ ಸುತ್ತಮುತ್ತ ಮನೆಗಳೂ ಅಂಗಡಿಗಳೂ ಆವರಿಸಿಕೊಂಡಿವೆ. ಹಾದಿಯ ಎರಡೂ ಬದಿಯಲ್ಲಿ ಹೂವು, ಸಕ್ಕರೆ, ಬೂಂದಿ, ಅತ್ತರ್, ಮಣಿಸರ, ಊದುಬತ್ತಿ, ಧೂಪ, ಪುಸ್ತಕ ಮಾರುವ ಸಾಲುಗಟ್ಟಿದ ಅಂಗಡಿಗಳು. ಗುಲಾಬಿ ಪಕಳೆಗಳನ್ನು ಹಗುರವಾಗಿ ಬಿಡಿಸಿ ಬಿದಿರಿನ ತಟ್ಟೆಯಲ್ಲಿ ಇಟ್ಟುಕೊಂಡು ಮಂಚಿಕೆಯ ಮೇಲೆ ಕುಳಿತು ‘ಸಾಹೇಬ್, ಯಹ್ಞಾ ಆಯಿಯೆ’ ಎಂದು ಕರೆಯುತ್ತ, ಚಪ್ಪಲಿಗಳನ್ನು ತಮ್ಮಲೇ ಬಿಡಿ ಎಂದು ಪೀಡಿಸುವ ಹೂವಾಡಿಗರು; ಹೂವಿನಂಗಡಿಗಳಲ್ಲಿ ಇಳಿಬಿದ್ದ ಹಾರಗಳಿಗೆ ಸುತ್ತಿರುವ ಗಾಳಿಯಲ್ಲಾಟಕ್ಕೆ ಮಿನುಗುವ ನಕ್ಕಿ. ಜೀವಮಾನದಲ್ಲಿ ಹೂದೋಟವನ್ನು ಕಂಡೇ ಇಲ್ಲವೇನೊ ಎಂಬಂತೆ, ಮಧುಶಾಲೆಯಲ್ಲಿ ಬಿದ್ದುಕೊಂಡಿರುವ ಕುಡುಕರಂತೆ ಹೂಮಾಲೆಗಳ ಮೇಲೆ ಮುಕುರಿಕೊಂಡಿರುವ ಆಲಸಿ ದುಂಬಿಗಳು. ದರ್ಗಾದಲ್ಲಿ
ಅಂಗಡಿಕಾರರ ಕಾಟದಿಂದ ತಪ್ಪಿಸಿಕೊಂಡು ಇಕ್ಕಟ್ಟಾದ ಅರೆಗತ್ತಲಿನ ಸಂದಿಯಲ್ಲಿ ನುಸುಳಿ ಹೋದರೆ, ತುಸು ತಗ್ಗಿನಲ್ಲಿ ತಟ್ಟನೆ ಆಗಸ ಕಾಣುವಂತೆ ತೆರೆದ ಬಯಲೊಂದು ಪ್ರತ್ಯಕ್ಷವಾಗುತ್ತದೆ; ಅದರಲ್ಲಿ ದೀಪಗಳಿಂದ ಅಲಂಕರಿಸಿದ ಝೂಮರು ತೂಗುಬಿಟ್ಟಿರುವ ಅರಮನೆಯ ತುಂಡಿನಂತಿರುವ ದರ್ಗಾ ಝಗಝಗಿಸುತ್ತ ಮೈದೋರುತ್ತದೆ. ನಿಜಾಮುದ್ದೀನರ ದರ್ಗಾ ನಿಜವಾಗಿಯೂ ಅರಮನೆಯಂತಿದೆ. ಆದರೆ ತನ್ನ ಜೀವಿತ ಕಾಲದಲ್ಲಿ ಈ ಸಂತ ಅರಮನೆಗೆ ವಿರುದ್ಧವಾಗಿದ್ದವನು. ಅದಿರಲಿ.
ದರ್ಗಾದ ಪಡಸಾಲೆಯಲ್ಲಿ ಸಮಾಧಿಗೆ ಮಣಿಯುತ್ತಿರುವ, ಮೂಲೆ ಹಿಡಿದು ಜಪಮಣಿ ಎಣಿಸುತ್ತಿರುವ, ಕಣ್ಮುಚ್ಚಿ ಧ್ಯಾನಿಸುತ್ತಿರುವ, ಆರ್ತ ಮುಖಭಾವದಲ್ಲಿ ಬೇಡುತ್ತಿರುವ, ಸಕ್ಕರೆ ಉತ್ತತ್ತಿ ಬೂಂದಿಯನ್ನು ಅಲ್ಲಿದ್ದವರಿಗೆ ಸಂಭ್ರಮದಲ್ಲಿ ಹಂಚುತ್ತಿರುವ-ಬಗೆಬಗೆಯ ಜನರು; ಚೆಲ್ಲಿದ ಸಕ್ಕರೆಗೆ ಮುತ್ತುವ ಸುತ್ತುವ ನೊಣಗಳು; ಕುಳಿತವರಿಗೆ ಕೇಳದಿದ್ದರೂ ಕುಡಿನೀರನ್ನು ಮಣ್ಣಿನ ಲೋಟಗಳಲ್ಲಿ ತಂದುಕೊಡುವ ಪರಿಚಾರಕರು; ದರ್ಗಾದ ನೇರ ಅಭಿಮುಖಕ್ಕೆ ಕುಳಿತು ಎಷ್ಟೋ ಹೊತ್ತಿನಿಂದ ಹಾಡುತ್ತಿರುವ ಖವಾಲರು; ಅವರ ಇಕ್ಕೆಲಗಳಲ್ಲಿ ತುಂಬಿಕೊಂಡು ಹರಡಿ ಕುಳಿತು ಗಾನಾಸ್ವಾದ ಮಾಡುತ್ತಿರುವ, ನಡುನಡುವೆ ಖವಾಲರಿಗೆ ನಜರು ಒಪ್ಪಿಸುವ ರಸಿಕರು; ಮೂಲೆಗಳಲ್ಲಿ ತಮ್ಮ ಗಂಟುಮೂಟೆಗಳ ಸಮೇತ ಕುಳಿತು ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಿರುವ ಪರಸ್ಥಳದ ಹಳ್ಳಿಗರು; ಎಲ್ಲವನ್ನು ಹದ್ದುಗಣ್ಣಲ್ಲಿ ನೋಡುತ್ತ ಕೈಮೇಜಿನ ಮುಂದೆ ರಸೀದಿ ಬುಕ್ ಹಿಡಿದು ಕುಳಿತ ದರ್ಗಾದ ಮೊಕ್ತೇಸರರು; ತಮ್ಮ ಪುಟ್ಟಕ್ಯಾಮೆರಾ ತೆಗೆದು ದೃಶ್ಯಾವಳಿಯನ್ನು ಕ್ಲಿಕ್ಕಿಸುವ ವಿದೇಶಿಯರು-ಹೀಗೆ ಬಗೆಬಗೆಯ ನೋಟಗಳು ಅಲ್ಲಿ ಕಾಣಸಿಗುತ್ತವೆ.
ಇದರಲ್ಲೆಲ್ಲ ಚಾಮರಧಾರಿ ಫಕೀರನೊಬ್ಬ ಭಕ್ತರಿಗೆ ಗಾಳಿಬೀಸುವ ದೃಶ್ಯ ಸೆಳೆಯುತ್ತದೆ. ೪೦ ವರ್ಷ ಪ್ರಾಯದ ಈತ ಕುಳಿತವರಿಗೆ ಗಾಳಿಬೀಸುವ ಕಾಯಕದವನು. ದೊಡ್ಡದೊಡ್ಡ ಕಟ್ಟಡಗಳು ದರ್ಗಾವನ್ನು ಅಡ್ಡಗಟ್ಟಿರುವ ಕಾರಣ, ಗಾಳಿಯೆನ್ನುವುದು ಅಲ್ಲಿಗೆ ಕಷ್ಟಪಟ್ಟು ಬರುವಂತಾಗಿ, ಈ ಚಾಮರದವನು ಅನಿವಾರ್ಯವಾಗಿದ್ದಾನೆ. ಈತ ಎಲ್ಲರಿಗೂ ಗಾಳಿ ಹಾಕುತ್ತಾನಾದರೂ ದೊಡ್ಡಮನುಷ್ಯರೆಂದು ಕಂಡವರಿಗೆ ಕೊಂಚ ಹೆಚ್ಚು ಹಾಕುತ್ತಾನೆ. ಚಾಮರ ಬೀಸಿಬೀಸಿ ಅವನೂ ಚಾಮರದ ದಂಡದಂತೆ ತೆಳುವಾಗಿ ಹೋಗಿದ್ದಾನೆ. ಗಾಳಿ ಬೀಸುವಾಗ ಚಾಮರವನ್ನು ಅವನು ಬೀಸುತ್ತಿದ್ದಾನೊ, ಚಾಮರವೇ ಅವನನ್ನು ಬೀಸುತ್ತಿದೆಯೊ ಎಂಬ ಶಂಕೆ ಬರುವಂತೆ ದಂಡದ ಜತೆ ಬಳುಕಾಡುತ್ತಾನೆ. ಹಾಗೆ ಬಳುಕುವಾಗ ಅವನ ಕೊರಳಲ್ಲಿರುವ ದಪ್ಪನೆಯ ಬಣ್ಣಬಣ್ಣದ ಮಣಿಸರವು ಕಡಗಡ ಶಬ್ದಮಾಡುತ್ತದೆ. ಝಗಮಗಿಸುವ ದರ್ಗಾದಲ್ಲಿ ಹರಕು ಬಟ್ಟೆಹಾಕಿಕೊಂಡು ಗಾಳಿಬೀಸುವ ಈ ಬಳ್ಳಿಯಂತಹ ಮನುಷ್ಯ ಪಾದರಸದಂತೆ ಅತ್ತಿಂದಿತ್ತ ಓಡಾಡುತ್ತಾನೆ. ಕಾಸಿಗೆ ಕಾಡುವುದಿಲ್ಲ. ಬೀಸಿದ ಗಾಳಿಗೆ ತೃಪ್ತರಾದ ಭಕ್ತರು ಕಾಸುಕೊಟ್ಟರೆ, ನಿಲುವಂಗಿಯ ದೊಗಳೆ ಜೇಬಿಗೆ ಇಳಿಬಿಡುತ್ತಾನೆ.

ದರ್ಗಾದ ಪಾರುಪತ್ಯೇಗಾರರು-ಸಂತನ ವಂಶಜರು- ಬಿಳಿಯ ಜುಬ್ಬ ಪಾಯಿಜಾಮ ಧರಿಸಿ, ತಲೆಗೆ ಹಳದಿ ಬಣ್ಣದ ಚೂಪನೆಯ ಚಿಸ್ತಿ ಟೋಪಿಯಿಟ್ಟು, ಸುಖಜೀವನದಿಂದ ಬಂದ ತೋರವಾದ ಮೈಯನ್ನು ದರ್ಗಾದ ಕಂಬಗಳಿಗೆ ಒರಗಿಸಿ, ಕಾಣಿಕೆಯ ರಶೀದಿ ಪುಸ್ತಕ ತಿರುವಿ ಹಾಕುತ್ತ, ಆಗಾಗ್ಗೆ ನೋಟುಗಳನ್ನು ಎಣಿಸಿ ಅವಕ್ಕೆ ರಬ್ಬರ್ ಬ್ಯಾಂಡಿನಲ್ಲಿ ಬಂಧಿಸಿ ಇಡುತ್ತ, ಬಂದ ಕಾಣಿಕೆಗಳನ್ನು ವಿಂಗಡಿಸುತ್ತ, ಅವನ್ನು ಸಂಬಂಧಪಟ್ಟ ಅಂಗಡಿಗೆ ಸಾಗಿಸುತ್ತ ಬಿಜಿಯಾಗಿರುತ್ತಾರೆ. ಬಡವರು ಬಂದರೆ ನಿರ್ಲಿಪ್ತರಾಗಿರುವ ಇವರು ದೊಡ್ಡವರು ಬಂದಾಗ ಬಹಳ ಆದರದಿಂದ ಉಪಚರಿಸುತ್ತಾರೆ. ನಾನಲ್ಲಿ ಹೋದಾಗೊಮ್ಮೆ ಅಮೆರಿಕದ ವಿದೇಶಾಂಗ ಕಛೇರಿಯ ಅಧಿಕಾರಿಯೊಬ್ಬ ಬಂದ. ಅವನ ಹಿಂದೆ ಅಂಗರಕ್ಷಕರು. ಅವನ ಮಡದಿ ಬಿಟ್ಟಗಣ್ಣಿಂದ ದರ್ಗಾದ ವೈಭವವನ್ನು ನೋಡುತ್ತಿದ್ದಳು. ಮಲಗಿದ್ದ ಸೂಫಿಸಂತನನ್ನು ಬಿಟ್ಟು ಉಳಿದವರೆಲ್ಲ ಎದ್ದು ಅವನಿಗೆ ಉಪಚಾರ ಮಾಡುವಂತೆ ದರ್ಗಾದಲ್ಲಿ ಸಂಚಲನ ಕಂಡಿತು. ಅಂದು ರಾಯಭಾರ ಕಛೇರಿಯ ಅಧಿಕಾರಿಗಾಗಿ ವಿಶೇಷ ಗಾಯಕರಿಂದ ಖವಾಲಿ ಏರ್ಪಡಿಸಲಾಗಿತ್ತು.
ದರ್ಗಾ ಸಂಸ್ಕೃತಿ ಇಂದಿಗೂ ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ, ಮಹಿಳೆಯರು. ಆದರೆ ಸಂತನ ಸಮಾಧಿಯಿರುವ ಕೋಣೆಯೊಳಗೆ ಅವರಿಗೇ ಪ್ರವೇಶವಿಲ್ಲ. ಅವರಿಗಾಗಿ ಸಮಾಧಿ ನೋಡಲು ಮೂರುಕಡೆ ಕಿಂಡಿಗಳಿರುವ ಅಮೃತಶಿಲೆಯ ಜಾಲರಿ ಮಾಡಿದೆ. ಅವರು ಅಲ್ಲಿಂದಲೇ ಸಮಾಧಿಯತ್ತ ಕಣ್ಣುನೆಟ್ಟು ಏನನ್ನೋ ಬೇಡುತ್ತ ಕುಳಿತಿರುತ್ತಾರೆ. ಕೆಲವು ಕುಲೀನ ಮಹಿಳೆಯರು ಕಟ್ಟಿದ ತೆರೆಯ ಹಿಂದೆ ಕುಳಿತು ಗಾಯನ ಕೇಳುತ್ತಾರೆ. ಅವರಲ್ಲಿ ಕೆಲವರಿಗೆ ಮೈದುಂಬುವುದುಂಟು. ಆಗವರು ತಲೆಗೂದಲನ್ನು ಬಿಚ್ಚಿಕೊಂಡು ಸಮಾಧಿಯೊಳಗೆ ಮಲಗಿದ ಸಂತನಿಗೆ ತಲೆಗೂದಲಿನಿಂದಲೇ ಚವರಿ ಬೀಸುವಂತೆ ಕೊರಳನ್ನು ಗರಗರ ಸುತ್ತುತ್ತ, ಜ್ವರಕ್ಕೆ ಬಂದ ರೇಷ್ಮೆಹುಳವು ತನ್ನ ನೂಲ ತಾನೇ ಸುತ್ತಿ ಗೂಡನ್ನು ನೇಯಲು ತಲೆಯನ್ನು ಒಲೆಯುತ್ತ, ಆವೇಶದಿಂದ ‘ಯಾ ಬಾಬಾ’ ಎಂದು ಕೂಗುತ್ತಾರೆ. ಅಕ್ಕಪಕ್ಕದ ಅವರ ಬಂಧುಗಳು ದಿಕ್ಕುತೋಚದೆ, ಅವರ ಬಟ್ಟೆ ಸರಿಪಡಿಸುತ್ತ, ಆವೇಶ ಶಮನ ಮಾಡುತ್ತ ಇರುತ್ತಾರೆ. ವಜ್ದ್ ಎನ್ನಲಾಗುವ ಈ ಉತ್ಕಟಾವಸ್ಥೆಗೆ ಸೂಫಿಪಂಥದಲ್ಲಿ ದೊಡ್ಡ ಸ್ಥಾನವಿದೆ. ಆದರೆ ಮತ್ತೂ ಕೆಲವು ಭಾವಾವೇಶಗಳಿವೆ. ಅವಕ್ಕೆ ಸಂಗೀತದ ಹಂಗೇಬೇಡ. ದರ್ಗಾಕ್ಕೆ ಎರಡು ಪ್ರದಕ್ಷಿಣೆ ಹಾಕುವಷ್ಟರಲ್ಲಿ ಒಳಗಿನ ‘ಗಾಳಿ’ ಹೊರಬರಲು ಚಡಪಡಿಸುತ್ತ ಮಾತಾಡಲು ಆರಂಭಿಸುತ್ತದೆ. ಕರ್ನಾಟಕದಲ್ಲಿ ಗಾಳಿಬಿಡಿಸುವ ಕಾಯಕವನ್ನೇ ಕೈಗೊಂಡಿರುವ ಕರೋಶಿ, ಮುರುಗಾಮಲೈ, ಲಕ್ಷ್ಮೇಶ್ವರ, ಎಳ್ಳಾರತಿ, ಬಂದೇನವಾಜ ಸಂರ್ಕೀಣದಲ್ಲಿರುವ ಒಂದು ದರ್ಗಾದಲ್ಲಿ ‘ಗಾಳಿ’ ಹಿಡಿದವರ ಚೀತ್ಕಾರಗಳನ್ನು ನೋಡಿಯೇ ಅರಿಯಬೇಕು.
ಭಾರತದಲ್ಲಿ ದರ್ಗಾಗಳು ಬಗೆಬಗೆಯ ತಿಂಡಿಗಳಿಗೂ ಖ್ಯಾತವಾಗಿವೆ. ನಿಜಾಮುದ್ದೀನ್ ದರ್ಗಾದಲ್ಲಿ ಲೋಬಾನದ ಹೊಗೆಗಿಂತ, ಹೆಚ್ಚಾಗಿ ಸುತ್ತಮುತ್ತಲಿನ ಅಂಗಡಿಗಳಿಂದ ಮಾಂಸ ಹುರಿವ ವಾಸನೆ ಮತ್ತು ಹೊಗೆ ಸುತ್ತಿಕೊಂಡಿರುತ್ತದೆ. ಎಣ್ಣೆಯಲ್ಲಿ ಕರೆವ ಕಬಾಬ್, ಸಲಾಕಿಗಳಿಗೆ ಕೈಮಾ ಮೆತ್ತಿ ಕೆಂಡದ ಮೇಲಿಟ್ಟು ಚುರುಚುರು ಸುಡುವ ತಂದೂರಿಶೀಕ್, ದೊಡ್ಡ ಹೆಂಚಿನ ಮೇಲೆ ಹುರಿಯುವ ಟಿಕ್ಕಾ- ಹುರಿದ ಮಾಂಸದ ತಿನಿಸುಗಳನ್ನು ತಿನ್ನಬೇಕಾದರೆ, ನಿಜಾಮುದ್ದೀನ್ ದರ್ಗಾಕ್ಕೆ ಹೋಗಬೇಕು. ಮುಂಬೈ ಕಲ್ಯಾಣದ ದರ್ಗಾದಲ್ಲಿ ಬೃಹದಾಕಾರದ ರುಮಾಲಿ ರೊಟ್ಟಿ ಮಾಡುತ್ತಾರೆ. ಜತೆಗೆ ಕ್ಯಾರೆಟ್ ಹಲವಾ. ದರ್ಗಾದಲ್ಲಿ
ನಿಜಾಮುದ್ದೀನ್ ದರ್ಗಾದ ಆಕರ್ಷಣೆಯೆಂದರೆ, ಪ್ರತಿಸಂಜೆ ನಡೆಯುವ ಸೂಫಿ ಗಾಯನ. ಆಸ್ಥಾನ ಗಾಯಕರು ಮೇಳ ಕಟ್ಟಿಕೊಂಡು ಖವಾಲಿ ಹಾಡುವರು. ಭಕ್ತರ ಗಜಿಬಿಜಿ ಸದ್ದಿನೊಳಗೂ ದನಿಯೆತ್ತರಿಸಿ ನಾಭಿಯಿಂದ ದನಿಹೊರಡಿಸುತ್ತ ಹಾಡುವುದು ಅವರಿಗೆ ಅಭ್ಯಾಸವಾಗಿದೆ. ಹೆಚ್ಚಿನ ದರ್ಗಾಗಳಲ್ಲಿ ಕ್ಯಾಸೆಟ್ ಅಂಗಡಿಯವರು ದೊಡ್ಡ ದನಿಯಲ್ಲಿ ಖವಾಲಿಗಳನ್ನು ಹಾಕಿ ಧ್ಯಾನಕ್ಕೆ ಬೇಕಾದ ಮೌನವನ್ನೇ ಕದಡುವುದುಂಟು. ಮುಂಬೈನ ಕಡಲೊಳಗಿರುವ ಹಾಜಿಅಲಿ ಮತ್ತು ಹೈದರಾಬಾದಿನ ನಾಂಪಲ್ಲಿ ದರ್ಗಾಗಳಲ್ಲಿ ಒಳ್ಳೇ ಗಾಯಕರಿದ್ದಾರೆ. ನಾನು ಕೇಳಿದ ಅತ್ಯುತ್ತಮ ದರ್ಗಾ ಗಾಯನ ಬಹುಶಃ ಫತೇಪುರ ಸಿಕ್ರಿಯದು. ಅಲ್ಲಿನ ಸಲೀಂ ಚಿಸ್ತಿ ದರ್ಗಾದಲ್ಲಿ ಇಬ್ಬರು ಕುರುಡರಿದ್ದಾರೆ. ಅವರು ಬಂದು ಹೋಗುವವವರ ಪರಿವೆ ಇಲ್ಲದಂತೆ ಹಕ್ಕಿಗಳಂತೆ ನಿರಂತರ ಹಾಡುತ್ತಿರುತ್ತಾರೆ. ಅದೃಷ್ಟವಿದ್ದರೆ ದರ್ಗಾಗಳಲ್ಲಿ ಮೆಹಫಿಲೆ ಸಮಾ ಕೂಡ ಸಿಗಬಹುದು. ಸಮಾ ಎಂದರೆ ಭಾವಸಮಾಧಿಯ ಮೂಲಕ ಆನುಭಾವಿಕ ಸ್ತರಗಳಿಗೆ ಏರಲು ಸಾಧಕರಿಗೆ ಏರ್ಪಡಿಸುವ ಸೂಫಿ ಗಾಯನದ ನಿಶಾರಾತ್ರಿಯ ಸಭೆ. ದರ್ಗಾದಲ್ಲಿ
ದರ್ಗಾಗಳಲ್ಲಿ ಸಂಗೀತ ಸಾಹಿತ್ಯದಂತಹ ಕಲೆಗಳ ಜತೆಗೆ ಅಧೋಲೋಕವೊಂದು ಸೇರಿಕೊಂಡಿರುತ್ತದೆ. ದರ್ಗಾಕ್ಕೆ ಬರುವ ಭಕ್ತರು ಸಾರ್ವಜನಿಕರಿಗೆ ಉಣಿಸುವ ಪದ್ಧತಿಯಿದೆಯಷ್ಟೆ. ಹೀಗಾಗಿ ಅಲ್ಲಿ ತಿರುಕರ ಬಡವರ ಹಿಂಡು; ಇದಕ್ಕೆ ಹೊಂಚು ಹಾಕಿರುವಂತೆ ದರ್ಗಾ ಬಾಗಿಲಲ್ಲಿ ಹೋಟೆಲುಗಳಿರುತ್ತವೆ. ಇದೊಂದು ದಂಧೆ. ಕೆಲವರು ಉಣ್ಣುವುದಕ್ಕಾಗಿಯೆ ಬಡವರೂ ತಿರುಕರೂ ಆಗಿದ್ದಾರೋ ಏನೊ? ಅವರಲ್ಲಿ ಕೆಲವರು ಕುಸ್ತಿಯಾಡಲು ಕಳಿಸುವಷ್ಟು ಗಟ್ಟಿಗರಾಗಿರುತ್ತಾರೆ. ಮುಂಬೈನ ಹಾಜಿಅಲಿಯಲ್ಲಿ ತಿರುಕರು ಒಟ್ಟಿಗೆ ಬಿಸಿಲಲ್ಲಿ ಬಿದ್ದುಕೊಂಡು ‘ಯಾಅಲ್ಲಾ’ ಎಂದು ಲಯಬದ್ಧವಾಗಿ ಕಿರುಚುತ್ತ ವಿಲವಿಲ ಒದ್ದಾಡುವರು. ಇವರ ಜತೆಗೆ ಸುತ್ತಮುತ್ತ ಚೆಲ್ಲಾಡುವ ರೊಟ್ಟಿ ಬಿರಿಯಾನಿ ತಿನ್ನಲು ಕಾಗೆ ನಾಯಿಗಳ ಹಿಂಡು. ನಿಜಾಮುದ್ದೀನ್ ದರ್ಗಾದ ವಿಶೇಷವೆಂದರೆ, ಚೆಲ್ಲುವ ಪ್ರಸಾದ ತಿನ್ನಲು ಮೇಕೆ ಮತ್ತು ಕುರಿಗಳೂ ಸ್ಪರ್ಧೆ ಮಾಡುವುದು. ಕೆಲವು ಕುರಿಗಳಂತೂ ರೊಟ್ಟಿ ತಿಂದು ಕೊಬ್ಬಿ, ಆನೆಯ ಮರಿಗಳಂತೆ ಕುಂಡೆಗಳನ್ನು ಹೊರಲಾರದೆ ಹೊರುತ್ತ ಓಡಾಡಿಕೊಂಡಿರುತ್ತವೆ. ಬಹುಶಃ ನಿಜವಾಗಿಯೂ ಸೂಫಿಗಳ ಇಷ್ಕ್ ತತ್ವವನ್ನು ಅನುಭವಿಸುವರು, ಅಲ್ಲಿಗೆ ಬರುವ ಪ್ರೇಮಿಗಳೋ ಏನೊ? ಅವರು ಜನಜಂಗುಳಿಯಲ್ಲಿ ಮೈಮೈ ತಾಗಿಕೊಂಡು ಕೈಕೈಹಿಡಿದು ಹಕ್ಕಿಗಳಂತೆ ವಿಹರಿಸುತ್ತಿರುತ್ತಾರೆ.
ನಿಜಾಮುದ್ದೀನರ ಶಿಷ್ಯನೂ, ಗುಲಬರ್ಗೆಯ ಬಂದೇನವಾಜರ ಗುರುವೂ ಆದ ನಾಸಿರುದ್ದೀನ್ ದರ್ಗಾ ಚಿರಾಗೆ ದೆಹಲಿಯಲ್ಲಿದೆ. ಚಿರಾಗೆ ದೆಹಲಿ ಎಂದರೆ ದೆಹಲಿಯ ದೀಪ ಎಂದರ್ಥ. ಅದೊಂದು ಕಸದ ತೊಟ್ಟಿಯಂತಹ ಜಾಗದಲ್ಲಿದೆ. ತಮ್ಮ ದರ್ಗಾಗಳಿಗೆ ಜಗತ್ತಿನ ಮೂಲೆಗಳಿಂದ ಜನ ಬರುತ್ತಾರೆ ಎಂಬ ಖಬರೂ ಅಲ್ಲಿನವರಿಗೆ ಇಲ್ಲ. ವಿಚಿತ್ರವೆಂದರೆ, ಆ ಕಸದ ರಾಶಿಯಲ್ಲಿ ಆಡುವ ನವಿಲುಗಳು. ಅವು ಕೋಳಿಗಳ ಹಾಗೆ ಮೇಯುತ್ತ ಅಲ್ಲಿನ ಮರಗಳ ಮೇಲೆ ಕುಳಿತುಕೊಳ್ಳುತ್ತವೆ. ನಾಸಿರುದ್ದೀನ್ ದರ್ಗಾದ ಮುಂದೆ ನಿಂತಿದ್ದಾಗ ಎರಡು ನವಿಲುಗಳು ಬಿಸಿಲು ಕಾಸುತ್ತ ಏನನ್ನೋ ನೋಟು ಪುಸ್ತಕದಲ್ಲಿ ಬರೆಯುತ್ತಿದ್ದ ಭಿಕ್ಷುಕನ ಬಳಿ ಹೋಗಿ ಸತಾಯಿಸುತ್ತಿದ್ದವು. ಒಂದು ತೀರ ಹತ್ತಿರಕ್ಕೆ ಹೋಗಿ ‘ಏನು ಬರೆಯುತ್ತಿದ್ದೀಯಾ ತೋರಿಸು’ ಎಂಬಂತೆ ಇಣುಕಿತು. ಅವನು ತಪ್ಪಿಸಿಕೊಳ್ಳಲು ಪಕ್ಕಕ್ಕೆ ಹೊರಳಿ ಕಡೆಗೆ ಕಂಗಾಲಾಗಿ ನೋಡತೊಡಗಿದ. ಜಾಗದ ಮಹಿಮೆ. ನವಿಲಿಗೂ ಜನರನ್ನು ಕಾಡುವ ಗುಣ ಬಂದಂತಿದೆ.
ಆದರೆ ನಿಜಾಮುದ್ದೀನ್ ದರ್ಗಾದ ಹಿಂದೆ ಹೋದರೆ, ಅಲ್ಲಿ ಇನಾಯತಖಾನರ ದರ್ಗಾಯಿದೆ. ಟಿಪ್ಪುವಿನ ಮರಿಮೊಮ್ಮಗನಾಗಿದ್ದ ಇನಾಯತಖಾನ್ ಪ್ರಸಿದ್ಧ ಸೂಫೀ ದಾರ್ಶನಿಕ. ಸ್ವತಃ ಸಂಗೀತಗಾರರೂ ಆಗಿದ್ದ ಅವರು ಯೂರೋಪು ಅಮೆರಿಕೆಯಲ್ಲಿ ಸೂಫಿದರ್ಶನ ಹರಡಿದವರು. ಅಮೆರಿಕೆಯ ಹೆಣ್ಣನ್ನು ಲಗ್ನವಾದವರು. ಇನಾಯತ್ ಖಾನರು ತೀರಿಕೊಂಡ ಬಳಿಕ, ಅವರ ಮಗಳು ನೂರುನ್ನೀಸಾ, ಎರಡನೇ ಮಹಾಯುದ್ಧ ಕಾಲದಲ್ಲಿ ಬ್ರಿಟಿಶ್ ಮಿಲಿಟರಿ ಗೂಢಚಾರಿಣಿಯಾಗಿದ್ದು, ನಾಜಿಗಳಿಂದ ಪ್ಯಾರಿಸ್ಸಿನಲ್ಲಿ ಸೆರೆಸಿಕ್ಕು, ಡಕಾವ್ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿ ಕೊಲೆಯಾದಳು. ಅದೊಂದು ದೊಡ್ಡಕತೆ.
ಇನಾಯತ್ ಖಾನರ ದರ್ಗಾದಲ್ಲಿ ನಿಜಾಮುದ್ದೀನ್ ದರ್ಗಾದ ಕೊಳಚೆಯಿಲ್ಲ; ನಾಸಿರುದ್ದೀನ್ ದರ್ಗಾದ ಕಸವಿಲ್ಲ. ಕಾಡುವ ನೊಣ ಕಾಗೆ ನಾಯಿ ಮೇಕೆ ಭಿಕ್ಷುಕರಿಲ್ಲ. ಮೂಗಿನೊಳಗೆ ನುಗ್ಗುವ ಮಾಂಸ ಹುರಿವ ಸಿನುಗು ವಾಸನೆಯಿಲ್ಲ. ರಸೀದಿ ಪುಸ್ತಕ ಹಿಡಿದು ನಿಂತ ಪಾರುಪತ್ಯೇದಾರರಿಲ್ಲ. ಅಲ್ಲಿ ಅನೂಹ್ಯವಾದ ನಿರ್ಜನತೆಯಿದೆ. ಮೌನವಿದೆ. ಅಲ್ಲಿಗೆ ಬರುವುದು ಎಂದರೆ ರುದ್ರಾನುಭವ ಕೊಡುವ ವೈತರಣಿ ನದಿಯನ್ನು ದಾಟಿ ಸ್ವರ್ಗಕ್ಕೆ ಬಂದಂತೆ. ದರ್ಗಾದಲ್ಲಿ ಸ್ಟಾರ್ ಹೋಟೆಲಿನಲ್ಲಿರುವವಂತೆ ಮಂದವಾದ ದೀಪಗಳನ್ನು ಹಾಕಿ ಒಳಗೆ ಕುಂಡದಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಕೂರಲು ಮೆತ್ತೆ ಹಾಕಿದ ಆಸನಗಳಿವೆ. ಶುಭ್ರವಾದ ದಿರಿಸು ಧರಿಸಿದ ಸೇವಕರು ಮೆಲುದನಿಯಲ್ಲಿ ಮಾತಾಡುತ್ತ ಇಡೀ ಕಟ್ಟಡವನ್ನು ತೋರಿಸುತ್ತಾರೆ. ಇಲ್ಲಿ ಗ್ರಂಥಾಲಯವಿದೆ. ಕುಳಿತು ಅಧ್ಯಯನ ಮಾಡಬಹುದು. ಕೆಲವು ಬಿಳಿಯರು ಹಾಗೆ ಅಧ್ಯಯನ ಮಾಡುವುದನ್ನು ನೋಡಬಹುದು. ಧ್ವನಿಮದ್ರಿಕೆಗಳಿವೆ. ಸಂಗೀತ ಕೇಳಬಹುದು. ಇನಾಯತ್ ಖಾನರ ಟ್ರಸ್ಟಿನ ಮೂಲಕ ಇದರ ದೇಖರೇಖಿ. ಹಿಂದೊಂದು ಕಾಲಕ್ಕೆ ಜನ ವಿದ್ಯೆಕಲಿಯಲು, ಆನುಭಾವಿಕ ಸಾಧನೆ ಮಾಡಲು, ವಿನಯದಿಂದ ಶ್ರದ್ಧೆಯಿಂದ ಸೂಫಿಸಂತರ ಆಶ್ರಮಕ್ಕೆ ಬರುತ್ತಿದ್ದರಂತೆ. ಅಂತಹ ಕಾಲಕ್ಕೆ ಹೋದಂತಾಗಿ ಮನಸ್ಸು ನಿರುಮ್ಮಳವಾಗುತ್ತದೆ.
ಆದರೆ ಇಲ್ಲಿ ಬಹಳ ಹೊತ್ತು ಕೂರಲಾಗುವುದಿಲ್ಲ. ಮೌನ ಮತ್ತು ಏಕಾಂತಗಳು ಉಸಿರುಗಟ್ಟಿಸತೊಡಗುತ್ತವೆ. ಮುಖ್ಯವೆಂದರೆ ಇಲ್ಲಿ ಜನರೇ ಬರುವುದಿಲ್ಲ. ಇಲ್ಲಿ ಖವಾಲರ ಗಾಯನವಿಲ್ಲ. ಬೀಸಣಿಗೆಯವನಿಲ್ಲ. ನೀರುಕೊಡುವವರಿಲ್ಲ. ಮಾನುಷವಾದ ಚಟುವಟಿಕೆಗಳಿಲ್ಲ. ಜೀವಂತಿಕೆ ತುಂಬಿದ ಗಲೀಜುಗದ್ದಲ ಅಥವಾ ನಿರ್ಜೀವ ಮೌನ ಮತ್ತು ಸ್ವಚ್ಛತೆ -ಎರಡರಲ್ಲಿ ಯಾವುದಾದರೂ ಒಂದನ್ನು ಆರಿಸಿಕೊ ಎಂಬಂತೆ ಎರಡು ದರ್ಗಾಗಳು ಅಕ್ಕಪಕ್ಕದಲ್ಲಿವೆ-ನರಕ-ಸ್ವರ್ಗಗಳಂತೆ; ಸಾವು-ಬದುಕಿನಂತೆ; ಪೂರ್ವ-ಪಶ್ಚಿಮಗಳಂತೆ; ಗತ-ವರ್ತಮಾನಗಳಂತೆ; ಹಗಲು-ರಾತ್ರಿಗಳಂತೆ ಅಥವಾ ಹುಲಿ-ಹುಲ್ಲೆಗಳಂತೆ.
ಇವೇನು ನಮ್ಮ ಅಗ್ನಿಪರೀಕ್ಷೆ ಕೊಳ್ಳುತ್ತಿವೆಯೇ? ಇಲ್ಲಿನ ಏಕಾಂತ ಅಲ್ಲಿನ ಗದ್ದಲವನ್ನೂ ಅಲ್ಲಿನ ಗಲೀಜು ಇಲ್ಲಿನ ಸ್ಚಚ್ಛತೆಯನ್ನೂ ಎತ್ತಿ ತೋರಿಸುತ್ತದೆ. ಒಂದನ್ನೇ ನೋಡಿದರೆ ಅದರ ಮಹತ್ವ ಕೊರತೆ ಎರಡೂ ತಿಳಿಯುವುದಿಲ್ಲ. ಇನ್ನೊಂದರ ಕನ್ನಡಿಯಲ್ಲಿ ಅದನ್ನು ಮತ್ತೆ ನೋಡಬೇಕು. ಎಂತಲೇ ಎರಡೂ ದರ್ಗಾಗಳು ಒಂದೇ ಸಂಕೀರ್ಣದಲ್ಲಿದ್ದಂತಿವೆ. ಅಲ್ಲಮ ಹೇಳುವಂತೆ ಕತ್ತಲೆಯೂ ಅದೆ. ಬೆಳಗೂ ಅದೆ. ಒಂದರೊಳಗೊಂದಿದೆ.
ಇದನ್ನೂ ನೋಡಿ: ಧರ್ಮಸ್ಥಳ | ಕಾಗೆ – ಗಿಳಿ ಕಟ್ಟಿದ ಷಡ್ಯಂತ್ರ ಕಥೆ – ಸೂರ್ಯ ಮುಕುಂದರಾಜ್ Janashakthi Media
