‘ಬಂಟ ಬಂಡವಾಳಶಾಹಿ’ಯನ್ನೂ ಮೀರಿದ, ಕಾರ್ಪೊರೇಟ್ – ಹಿಂದುತ್ವ ಮೈತ್ರಿಕೂಟ

ಪ್ರೊ. ಪ್ರಭಾತ್ ಪಟ್ನಾಯಕ್

ಅನು: ಕೆ.ಎಂ.ನಾಗರಾಜ್

ಒಂದು ನಿರ್ದಿಷ್ಟ ಅರ್ಥದಲ್ಲಿ ಎಲ್ಲ ಬಂಡವಾಳಶಾಹಿ ವ್ಯವಸ್ಥೆಯನ್ನು ‘ಕ್ರೋನಿ ಕ್ಯಾಪಿಟಲಿಸಂ’, ಅಂದರೆ ‘ಬಂಟ ಬಂಡವಾಳಶಾಹಿ’ ಎಂದೇ ಹೇಳಬಹುದು. ಆಳುವವರು ಬಂಡವಾಳಶಾಹಿ ವ್ಯವಸ್ಥೆಯಲ್ಲಿಯೂ ಅನುಸರಿಸಬೇಕಾದ ಕೆಲವು ನಿಯಮಗಳು ಇರುತ್ತವೆ. ಆದರೆ, ಆ ನಿಯಮಗಳಡಿಯಲ್ಲಿ ವಿವೇಚನೆಯನ್ನು ಅವರು ತಮಗೆ ಬಹಳ ಆಪ್ತರಾಗಿರುವವರ, ನಿಖರವಾಗಿ ಹೇಳುವುದಾದರೆ,ಬಂಟ”ರ ಪರವಾಗಿ ಬಳಸುತ್ತಾರೆ. ಸರ್ಕಾರವು ಏಕಸ್ವಾಮ್ಯ ಬಂಡವಾಳಶಾಹಿಗಳ ಪರವಾಗಿ ಎಷ್ಟೇ ವಾಲಿದರೂ ಸಹ, ಅದರ ಎಲ್ಲ ನಡೆವಳಿಕೆಗಳೂ ನಿಯಮಗಳ ಪ್ರಕಾರವೇ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ಈಗ ಹಾಗಿಲ್ಲ. ನಾವೀಗ ನೋಡುತ್ತಿರುವ ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟವು ಬಂಡವಾಳಶಾಹಿ “ಆಟದ ನಿಯಮಗಳನ್ನೂ ಬದಿಗೊತ್ತಿ ತನ್ನದೇ ನಿಯಮಗಳನ್ನು ಚಲಾಯಿಸುತ್ತದೆ.

ಫ್ಯಾಸಿಸ್ಟ್ ಮನೋಭಾವದ ವ್ಯಕ್ತಿಗಳು ಎಲ್ಲ ಆಧುನಿಕ ಸಮಾಜಗಳಲ್ಲೂ ಇರುತ್ತಾರೆ. ಒಂದು ಸಣ್ಣ ಗುಂಪಿನಿಂದ ಹಿಡಿದು ಒಂದು ದೊಡ್ಡ ಸಂಘಟನೆಯ ವರೆಗಿನ ಅಸ್ತಿತ್ವವನ್ನು ಫ್ಯಾಸಿಸ್ಟ್ ಗುಂಪುಗಳು ಹೊಂದಿರುತ್ತವೆ. ಸಾಮಾನ್ಯವಾಗಿ ಫ್ಯಾಸಿಸ್ಟ್ ಸಂಘಟನೆಗಳ ಪ್ರಭಾವವು ನಗಣ್ಯವೇ. ಆದರೆ, ಅವರಿಗೆ ಏಕಸ್ವಾಮ್ಯ ಬಂಡವಾಳಿಗರು ಸಾಕಷ್ಟು ಹಣವನ್ನು ಮತ್ತು ತಮ್ಮ ಒಡೆತನದ ಮಾಧ್ಯಮಗಳ ಮೂಲಕ ಸಾಕಷ್ಟು ಪ್ರಚಾರದ ಸೌಲಭ್ಯವನ್ನು ಒದಗಿಸಿದಾಗ ಮಾತ್ರ ಅವು ಸಮಾಜದ ಆಗು ಹೋಗುಗಳನ್ನು ನಿರ್ಧರಿಸುವ ರಂಗಸ್ಥಳದ ಮಧ್ಯದಲ್ಲಿ ತಮ್ಮನ್ನು ತಾವೇ ಪ್ರತಿಸ್ಠಾಪಿಸಿಕೊಳ್ಳುತ್ತವೆ. ಈ ವಿದ್ಯಮಾನವು ಸಂಭವಿಸುವುದು, ನಿರುದ್ಯೋಗವು ಬೃಹದಾಕಾರದಲ್ಲಿ ಬೆಳೆಯುತ್ತಿರುವ ಮತ್ತು ಏಕಸ್ವಾಮ್ಯ ಬಂಡವಾಳವು ಆವರೆಗೂ ಹೊಂದಿದ್ದ ಪ್ರಾಬಲ್ಯವು ಧಕ್ಕೆಗೊಳಗಾದ ಕಾಲಘಟ್ಟದಲ್ಲಿ. ಅಂಥಹ ಪರಿಸ್ಥಿತಿಯಲ್ಲಿ, ವಾಸ್ತವ ಪರಿಸ್ಥಿತಿಯನ್ನು ಕುರಿತಂತೆ ಕಥನವನ್ನು ಕಟ್ಟುವ, ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪಾತ್ರವನ್ನು ಫ್ಯಾಸಿಸ್ಟ್ ಶಕ್ತಿಗಳು ನಿರ್ವಹಿಸುತ್ತವೆ.

ಅಂದರೆ, ಕೆಲವು ಅಸಹಾಯಕರ ಮೇಲೆ ಅಥವಾ ಧಾರ್ಮಿಕ/ಜನಾಂಗೀಯ/ಭಾಷಾ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮತ್ತು ವೈಷಮ್ಯವನ್ನು ಹರಡುವ ಮೂಲಕ, ಬಿಕ್ಕಟ್ಟಿನಿಂದ ಬಳಲುತ್ತಿರುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬದುಕುತ್ತಿರುವ ಜನರ ಮೂಲಭೂತ ಸಂಕಷ್ಟಗಳನ್ನು ಮರೆಮಾಚಲು ಪ್ರಯತ್ನಿಸುತ್ತವೆ. ಅಷ್ಟೇ ಅಲ್ಲ, ಇಂಥಹ ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರಕ್ಕೆ ಬಂದಾಗ ಪ್ರಭುತ್ವದ ಬತ್ತಳಿಕೆಯಲ್ಲಿರುವ ದಮನಕಾರಿ ಅಸ್ತ್ರಗಳನ್ನು ದಮನಿತರನ್ನು ಸೆದೆಬಡಿಯಲು ಬಳಸುತ್ತವೆ , ಜತೆಗೆ ತಮ್ಮದೇ ಫ್ಯಾಸಿಸ್ಟ್ ಗೂಂಡಾ ಪಡೆಯನ್ನು ಕಾವಲುಕೋರ ಗುಂಪುಗಳಾಗಿ, ಅಲ್ಪಸಂಖ್ಯಾತರ ವಿರುದ್ಧ ಮತ್ತು ಚಿಂತಕರು, ಬುದ್ಧಿಜೀವಿಗಳು, ರಾಜಕೀಯ ವಿರೋಧಿಗಳು ಮತ್ತು ಸ್ವತಂತ್ರ ಶಿಕ್ಷಣ ತಜ್ಞರ ವಿರುದ್ಧ ದಾಳಿಮಾಡಲು ಬಳಸಿಕೊಳ್ಳುತ್ತವೆ.

ಭಾರತವು ಈ ಮಾದರಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಫ್ಯಾಸಿಸ್ಟ್ ಗುಂಪುಗಳು ರಾಜಕೀಯ ಅಧಿಕಾರ ಹಿಡಿಯುವುದಕ್ಕೆ ಕಾರಣವಾಗುವ ಮತ್ತೊಂದು ಅಂಶವೂ ಇದೆ. ಏಕಸ್ವಾಮ್ಯ ಬಂಡವಾಳದ ಗುಂಪಿನೊಳಗೆ ಹೊಸದಾಗಿ ಹೊರಹೊಮ್ಮುವ ಮತ್ತು ನಿರ್ದಿಷ್ಟವಾಗಿ ಫ್ಯಾಸಿಸ್ಟ್ ಗುಂಪುಗಳೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ ಹೊಸ ಏಕಸ್ವಾಮ್ಯ ಬಂಡವಾಳಶಾಹಿಯೇ ಈ ಅಂಶ. ಡೇನಿಯಲ್ ಗೆರಿನ್ ಎಂಬ ಒಬ್ಬ ಪ್ರಸಿದ್ಧ ಫ್ರೆಂಚ್ ಅರಾಜಕತಾ-ಮಾರ್ಕ್ಸ್ ವಾದಿ ತನ್ನ ಪುಸ್ತಕ ‘ಫ್ಯಾಸಿಸಂ ಅಂಡ್ ಬಿಗ್ ಬಿಸಿನೆಸ್’ನಲ್ಲಿ, ಜರ್ಮನಿಯಲ್ಲಿ, ವಿಶೇಷವಾಗಿ 1930ರ ದಶಕದಲ್ಲಿ, ಜವಳಿ ಮತ್ತು ಗ್ರಾಹಕ ಸರಕುಗಳ ಉತ್ಪಾದನೆಯಲ್ಲಿ ತೊಡಗಿದ್ದ ಹಳೆಯ ಏಕಸ್ವಾಮ್ಯ ಬಂಡವಾಳಗಾರರಿಗೆ ಹೋಲಿಸಿದರೆ, ಆಗ ತಾನೇ ಹೊಸದಾಗಿ ಹೊರಹೊಮ್ಮುತ್ತಿದ್ದ ಉಕ್ಕು, ಉತ್ಪಾದಕ ಸರಕುಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ತಯಾರಿಕೆಯಲ್ಲಿ ತೊಡಗಿದ್ದ ಏಕಸ್ವಾಮ್ಯ ಬಂಡವಾಳಶಾಹಿಗಳು ನಾಜಿಗಳಿಗೆ ದೃಢವಾದ ಬೆಂಬಲವನ್ನು ನೀಡಿದ್ದರು ಎಂದು ಹೇಳುತ್ತಾರೆ.

ಆ ಇನ್ನೊಂದು ಗುಂಪು ನಾಜಿಗಳನ್ನು ಬೆಂಬಲಿಸಲಿಲ್ಲ ಎಂಬುದು ಅವರ ಅಭಿಪ್ರಾಯದ ಅರ್ಥವಲ್ಲ. ನಾಜೀ ಆಡಳಿತವನ್ನು ಫ್ಯಾಸಿಸ್ಟ್ ನವೋದ್ಯಮಗಳು ಮತ್ತು ದೊಡ್ಡ ಉದ್ಯಮಗಳ ನಡುವಿನ ಒಂದು ಪಾಲುದಾರಿಕೆ ಎಂಬುದಾಗಿ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮೈಕೆಲ್ ಕಲೆಕಿ ಹೇಳಿದ್ದಾರೆ. ಹೊಸ ಏಕಸ್ವಾಮ್ಯ ಗುಂಪುಗಳು ಫ್ಯಾಸಿಸ್ಟ್ ಶಕ್ತಿಗಳಿಗೆ ಹೆಚ್ಚು ಹೆಚ್ಚು ಬೆಂಬಲ ಕೊಡುತ್ತವೆ ಎಂಬುದಂತೂ ಸತ್ಯವೇ. ಅಂತೆಯೇ, ಜಪಾನಿನಲ್ಲಿ, 1930ರ ದಶಕದಲ್ಲಿ, ಜಪಾನಿನ ಮಿಲಿಟರಿ-ಫ್ಯಾಸಿಸ್ಟ್ ಆಡಳಿತವನ್ನು ಬೆಂಬಲಿಸುವಲ್ಲಿ, ಹಿಂದೆ ಜಪಾನಿನ ಕೈಗಾರಿಕೀಕರಣದಲ್ಲಿ ಮುಂಚೂಣಿಯಲ್ಲಿದ್ದ ಮಿತ್ಸುಯಿ, ಮಿತ್ಸುಬಿಷಿ ಮತ್ತು ಸುಮಿಟೊಮೊದಂತಹ ಕುಟುಂಬ ಸಂಸ್ಥೆಗಳನ್ನು ಒಳಗೊಂಡ ಹಳೆಯ ಝೈಬಾತ್ಸು (ಅಂದರೆ ಜಪಾನೀ ಭಾಷೆಯಲ್ಲಿ ಸಿರಿವಂತರ ಕೂಟ) ಗಿಂತ ಏಕಸ್ವಾಮ್ಯ ಬಂಡವಾಳಶಾಹಿಗಳ ಉದಯೋನ್ಮುಖ ಹೊಸ ಗುಂಪಿನ ನಿಸ್ಸಾನ್ ಮತ್ತು ಮೋರಿಯಂತಹ ‘ಶಿಂಕೊ ಝೈಬಾತ್ಸು’ ಕಂಪನಿಗಳು ಹೆಚ್ಚು ಆಕ್ರಮಣಕಾರಿಯಾಗಿದ್ದವು. ಇಲ್ಲಿಯೂ ಸಹ, ಹಳೆಯ ಏಕಸ್ವಾಮ್ಯ ಸಂಸ್ಥೆಗಳು ಫ್ಯಾಸಿಸ್ಟ್ ಆಡಳಿತವನ್ನು ಬೆಂಬಲಿಸಲಿಲ್ಲ ಎಂದಲ್ಲ.

ಅವು ನಿಸ್ಸಂಶಯವಾಗಿಯೂ ಬೆಂಬಲಿಸಿದ್ದವು (ಹಡಗು ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಮಿತ್ಸುಬಿಷಿ ಸಂಸ್ಥೆಯಂತೂ ಬೆಂಬಲಿಸಲೇಬೇಕಿತ್ತು). ಈ ಬೆಂಬಲವೇ, ಯುದ್ಧಾನಂತರದ ಜಪಾನ್‌ನಲ್ಲಿ, ಜನರಲ್ ಡಗ್ಲಾಸ್ ಮ್ಯಾಕ್ ಆರ್ಥರ್ ನೇತೃತ್ವದ ಅಮೇರಿಕನ್ ಆಕ್ರಮಿತ ಆಡಳಿತವು ಹಳೆಯ ಝೈಬಾತ್ಸು ಕುಟುಂಬ ಸಂಸ್ಥೆಗಳನ್ನು ವಿಸರ್ಜಿಸಲು ಕಾರಣವಾಯಿತು. (ನಂತರ ಅವು ಬೇರೆ ವೇಷದಲ್ಲಿ ಮತ್ತೆ ಕಾಣಿಸಿಕೊಂಡವು ಎಂಬುದು ಬೇರೆ ವಿಷಯ). ಆದರೆ, ಮಿಲಿಟರಿ-ಫ್ಯಾಸಿಸ್ಟ್ ಆಡಳಿತಕ್ಕೆ ಒಂದು ಸಂಪೂರ್ಣ ಮತ್ತು ಹೆಚ್ಚು ಆಕ್ರಮಣಕಾರಿ ಬೆಂಬಲವನ್ನು ಉದಯೋನ್ಮುಖ ಸಂಸ್ಥೆಗಳ ಹೊಸ ಗುಂಪು ಕೊಟ್ಟಿತ್ತು ಎಂಬುದಂತೂ ಸ್ಪಷ್ಟ. ಮೇ 2014ರಲ್ಲಿ ಮೋದಿಯವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರಕ್ಕೆ ಅಹಮದಾಬಾದಿನಿಂದ ದಿಲ್ಲಿಗೆ ಅದಾನಿ ವಿಮಾನದಲ್ಲಿ ಪ್ರಯಾಣ ಮಾಡಿದರು.

ಭಾರತದ ಸಂದರ್ಭದಲ್ಲಿ-ಅದಾನಿ-ಅಂಬಾನಿ ಮತ್ತು ಮೋದಿ ಆಡಳಿತ

ಈ ಮಾದರಿಗೂ ಭಾರತವು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಮೋದಿ ಆಡಳಿತವನ್ನು ಬೆಂಬಲಿಸುವ ವಿಷಯದಲ್ಲಿ, ಹಳೆಯ ಮತ್ತು ಸ್ಥಾಪಿತ ಕುಟುಂಬ ಏಕಸ್ವಾಮ್ಯ ಸಂಸ್ಥೆಗಳಿಗೆ ಹೋಲಿಸಿದರೆ, ಅದಾನಿ ಮತ್ತು ಅಂಬಾನಿಗಳಂತಹ ಹೊಸ ಕುಟುಂಬ ಏಕಸ್ವಾಮ್ಯ ಸಂಸ್ಥೆಗಳು ಹೆಚ್ಚು ಸಕ್ರಿಯವಾಗಿವೆ ಮತ್ತು ಅದರಿಂದ ಅಪಾರ ಲಾಭವನ್ನೂ ಪಡೆದಿವೆ. ಅಂದ ಹಾಗೆ, ಮೋದಿ ಆಡಳಿತವನ್ನು ಬೆಂಬಲಿಸುವಲ್ಲಿ ಹಳೆಯ ಮತ್ತು ಸ್ಥಾಪಿತ ಕುಟುಂಬ ಏಕಸ್ವಾಮ್ಯ ಸಂಸ್ಥೆಗಳೇನೂ ಹಿಂದೆ ಬೀಳಲಿಲ್ಲ. ಟಾಟಾ ಸಮೂಹ ಸಂಸ್ಥೆಗಳ ನೇತಾರ ರತನ್ ಟಾಟಾರವರೇ ನಾಗ್ಪುರದ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ತಮ್ಮ ಬೆಂಬಲವನ್ನು ಹಿಂದುತ್ವ ಆಡಳಿತಕ್ಕೆ ಸಮರ್ಪಿಸಿದ್ದರು.

ನಿರ್ದಿಷ್ಟವಾಗಿ ಹೊಸ ಏಕಸ್ವಾಮ್ಯ ಸಂಸ್ಥೆಗಳೊಂದಿಗೆ ಮತ್ತು ಒಟ್ಟಾರೆಯಾಗಿ ಏಕಸ್ವಾಮ್ಯ ಬಂಡವಾಳದೊಂದಿಗೆ ಮೋದಿ ಸರ್ಕಾರವು ಹೊಂದಿರುವ ನಿಕಟ ಬಾಂಧವ್ಯವನ್ನು ಬಂಟ ಬಂಡವಾಳವಾದ (ಕ್ರೋನಿ ಕ್ಯಾಪಿಟಲಿಸಂ) ಎಂದು ಬಣ್ಣಿಸಲಾಗಿದೆ. ಆದರೆ, ಈ ವಿವರಣೆಯು, ಅಧಿಕಾರಸ್ತ ಫ್ಯಾಸಿಸ್ಟರಿಗೂ ಮತ್ತು ಏಕಸ್ವಾಮ್ಯ ಬಂಡವಾಳಗಾರರಿಗೂ, ಅದರಲ್ಲೂ ವಿಶೇಷವಾಗಿ ಹೊಸ ಏಕಸ್ವಾಮ್ಯ ಬಂಡವಾಳಗಾರರಿಗೂ ಇರುವ ಸಂಬಂಧದ ನಿಕಟತೆಯನ್ನು ಪೂರ್ಣವಾಗಿ ಬಿಂಬಿಸುವುದಿಲ್ಲ, ಅದು ಇರುವುದಕ್ಕಿಂತಲೂ ತಗ್ಗಿಸಿ ಹೇಳುತ್ತದೆ. ಈ ಸಂಬಂಧದಲ್ಲಿರುವ ಒಂದು ನಿರ್ದಿಷ್ಟತೆಯನ್ನು ಮತ್ತು ಅನನ್ಯತೆಯನ್ನು ಗುರುತಿಸುವಲ್ಲಿ ಈ ಬಣ್ಣನೆಯು ವಿಫಲವಾಗಿದೆ.

ಅರ್ಥಪೂರ್ಣವಾಗಿ ಬಣ್ಣಿಸುವುದಾದರೆ, ಈ ಸಂಬಂಧವನ್ನು ಕಾರ್ಪೊರೇಟ್-ಹಿಂದುತ್ವ ಮೈತ್ರಿ ಎನ್ನಬಹುದು. ಆಧುನಿಕ ಬಂಡವಾಳವಾದದ ಸನ್ನಿವೇಶದಲ್ಲಿ ಫ್ಯಾಸಿಸ್ಟರು ಅಧಿಕಾರ ಹಿಡಿಯುವ ನಿರ್ದಿಷ್ಟ ಪರಿಸ್ಥಿತಿಗೆ ಅನ್ವಯಿಸಿ ಸರ್ವೇಸಾಮಾನ್ಯವಾಗಿ ಹೇಳುವ ಬಂಟ ಬಂಡವಾಳವಾದ  ಪದ ಬಳಕೆಯು ಭಾರತದ ಸಂದರ್ಭದಲ್ಲಿ ಸಮಂಜಸವಾಗದು. ಒಂದು ನಿರ್ದಿಷ್ಟ ಅರ್ಥದಲ್ಲಿ ಎಲ್ಲ ಬಂಡವಾಳವಾದವನ್ನೂ ಬಂಟ ಬಂಡವಾಳವಾದ  ಎಂದೇ ಹೇಳಬಹುದು: ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅನುಸರಿಸಬೇಕಾದ ಕೆಲವು  ನಿಯಮಗಳು ಇರುತ್ತವೆ. ಆದರೆ, ಆ ನಿಯಮಗಳಡಿಯಲ್ಲಿ ವಿವೇಚನೆಯನ್ನು ತಮ್ಮ  ಬಂಟರ ಪರವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಒಂದು ಗುತ್ತಿಗೆಯನ್ನು ಪಡೆಯಲು, ಒಬ್ಬ ಅರ್ಜಿದಾರನು ಕೆಲವು ಕನಿಷ್ಠ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ.

ಇದನ್ನೂ ಓದಿ:ಕರ್ನಾಟಕಕ್ಕೆ ಅಕ್ಕಿ ನಿರಾಕರಿಸುವ ಆಹಾರ ನಿಗಮದ ವಿಲಕ್ಷಣ ತರ್ಕ

ಆದರೆ, ಈ ಮಾನದಂಡಗಳನ್ನು ಅನೇಕ ಮಂದಿ ಹೊಂದಿದ್ದರೂ ಸಹ, ಅವರ ಪೈಕಿ ಸರಿಯಾದ ಸಂಪರ್ಕ  ಹೊಂದಿದ ಅಥವಾ ಸರಿಯಾದ ಸಾರ್ವಜನಿಕ ಶಾಲಾ ಶಿಕ್ಷಣ ಹೊಂದಿದ ಅಥವಾ ಸರಿಯಾದ ಹಿನ್ನೆಲೆ ಹೊಂದಿದ ವ್ಯಕ್ತಿಯು ಈ ಗುತ್ತಿಗೆಯನ್ನು ಪಡೆಯುತ್ತಾನೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಗುತ್ತಿಗೆಗಳನ್ನು ನೀಡುವ ಕ್ರಮವು ಇಡಿಯಾಗಿ ಕುರುಡಲ್ಲ. ಆದರೆ, ನಿಯಮಗಳಿಗೆ ಕುರುಡಾಗದ ರೀತಿಯಲ್ಲಿ ಮತ್ತು ನಿರ್ದಿಷ್ಟ  ನಿಯಮ ಗಳಿಗೆ ಒಳಪಟ್ಟೇ ಪಕ್ಷಪಾತವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ.

ಏಕಸ್ವಾಮ್ಯ ಬಂಡವಳಿಗರು ಮತ್ತು ಸರಕಾರ

ಏಕಸ್ವಾಮ್ಯ ಬಂಡವಾಳಶಾಹಿಯ ಅಡಿಯಲ್ಲಿ ಏಕಸ್ವಾಮ್ಯ ಬಂಡವಾಳಗಾರರು ಮತ್ತು ಸರ್ಕಾರದ ಸಂಬಂಧವು ಹೆಚ್ಚು ಗಾಢವಾಗುತ್ತದೆ. ರುಡಾಲ್ಫ್ ಹಿಲ್ಫರ್‌ಡಿಂಗ್ ತನ್ನ ‘ದಾಸ್ ಫಿನಾನ್ಝ್ಕಪಿಟಲ್’(ಹಣಕಾಸು ಬಂಡವಾಳ)ಎಂಬ ಕೃತಿಯಲ್ಲಿ ಬ್ಯಾಂಕುಗಳು ಮತ್ತು ಕೈಗಾರಿಕಾ ಬಂಡವಾಳದ ನಡುವೆ ಇರುವ ಖಾಸಾ ಸೇರಿಕೆಯ ಆಧಾರದ ಮೇಲೆ ಹಣಕಾಸು ಕುಳ(ಒಲಿಗೋಪಲಿ)ಗಳನ್ನು ಸೃಷ್ಟಿಸುವ ಬಗ್ಗೆ ಮಾತನಾಡಿದ್ದರು ಮತ್ತು ಹಣಕಾಸು ಕುಳಗಳು ಮತ್ತು ಪ್ರಭುತ್ವದ ನಡುವೆ ಇದೇ ರೀತಿಯ ಖಾಸಾ ಸೇರಿಕೆಯನ್ನು ರಚಿಸುವಂತೆ ಸೂಚಿಸಿದ್ದರು. ಬಹುರಾಷ್ಟ್ರೀಯ ಕಂಪನಿಗಳ ಕಾರ್ಯನಿರ್ವಾಹಕರನ್ನು ಸರ್ಕಾರದ ಹಿರಿಯ ಹುದ್ದೆಗಳಿಗೆ ನೇಮಿಸಲಾಗುತ್ತದೆ ಮತ್ತು ಅದೇ ರೀತಿಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಬಹುರಾಷ್ಟ್ರೀಯ ಕಂಪನಿಗಳ ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಸರಾಗವಾಗಿ ಸ್ಥಳಾಂತರಗೊಳ್ಳುತ್ತಾರೆ. ಆ ಮೂಲಕ ಏಕಸ್ವಾಮ್ಯ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅನುವಾಗುವಂತೆ ಸರ್ಕಾರದ ನೀತಿಗಳನ್ನು ರೂಪಿಸಲಾಗುತ್ತದೆ. ಆದರೆ ಸರ್ಕಾರವು ಏಕಸ್ವಾಮ್ಯ ಬಂಡವಾಳಶಾಹಿಗಳ ಪರವಾಗಿ ಎಷ್ಟೇ ವಾಲಿದರೂ ಸಹ, ಅದರ ಈ ಎಲ್ಲ ನಡೆವಳಿಕೆಗಳೂ ನಿಯಮಗಳ ಪ್ರಕಾರವೇ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ.

ಗ್ವಾಟೆಮಾಲಾದಲ್ಲಿ ಭೂ ಸುದಾರಣೆಗಳನ್ನು ಕೈಗೊಳ್ಳುವ ಮೂಲಕ ಅಮೆರಿಕದ ಯುನೈಟೆಡ್ ಫ್ರೂಟ್ ಕಂಪನಿಗೆ ಹಾನಿಯುಂಟುಮಾಡಿದ ಜಾಕೋಬೊ ಅರ್ಬೆಂಜ್ ಅವರನ್ನು ಪದಚ್ಯುತಗೊಳಿಸಲು ಗ್ವಾಟೆಮಾಲಾದಲ್ಲಿ ಒಂದು ಕ್ಷಿಪ್ರಕ್ರಾಂತಿಯನ್ನು ಸಿಐಎ ನಡೆಸಿದಾಗ ಅಥವಾ ತೈಲ ಉದ್ಯಮವನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ಅಲ್ಲಿಯವರೆಗೂ ಪ್ರಮುಖ ಸ್ಥಾನ ಹೊಂದಿದ್ದ ಬ್ರಿಟಿಷ್ ಒಡೆತನದ ಆಂಗ್ಲೋ-ಇರಾನಿಯನ್ ತೈಲ ಕಂಪನಿಯನ್ನು ನಿರ್ಲಕ್ಷಿಸಿದ ಇರಾನಿನ ಪ್ರಧಾನ ಮಂತ್ರಿ ಮೊಸ್ಸಾಡೆಗ್ ಅವರನ್ನು ಪದಚ್ಯುತಗೊಳಿಸಲು, ಸಿಐಎ ಮತ್ತು ಎಂಐ – 6 ಈ ಎರಡೂ ಸೇರಿ ಒಂದು ಕ್ಷಿಪ್ರಕ್ರಾಂತಿಯನ್ನು ನಡೆಸಿದಾಗ, ಈ ಕೃತ್ಯಗಳ ಹಿಂದಿದ್ದ ಆಕ್ರಮಣಕಾರಿ ಪ್ರಭುತ್ವಗಳು ಹೊಂದಿದ್ದ ಉದ್ದೇಶವು ನಿರ್ದಿಷ್ಟವಾಗಿ ಏಕಸ್ವಾಮ್ಯ ಬಂಡವಾಳಶಾಹಿಗಳ ಹಿತಾಸಕ್ತಿಗಳನ್ನು ರಕ್ಷಿಸುವುದೇ ಆಗಿತ್ತು. ಈ ಪ್ರಭುತ್ವಗಳು ತಾವು ಮಾಡಿದನಿಯಮಗಳ ಉಲ್ಲಂಘನೆಯಾಗಿದೆ ಎಂದೂ ಒಪ್ಪಿಕೊಳ್ಳಲಿಲ್ಲ ಮತ್ತು ಏಕಸ್ವಾಮ್ಯ ಹಿತಾಸಕ್ತಿಗಳನ್ನು ರಕ್ಷಿಸುವ ನಿರ್ದಿಷ್ಟ ಉದ್ದೇಶಕ್ಕಾಗಿ ಈ ಕ್ಷಿಪ್ರಕ್ರಾಂತಿಗಳನ್ನು ನಡೆಸಲಾಯಿತು ಎಂಬುದನ್ನೂ ಒಪ್ಪಿಕೊಳ್ಳಲಿಲ್ಲ. ಒಂದು ವಾಸ್ತವಾಂಶವನ್ನು ಹೇಳುವುದಾದರೆ, ಮೊಸ್ಸಾಡೆಗ್ ಅವರನ್ನು ಪದಚ್ಯುತಗೊಳಿಸಿ ಮೊಹಮದ್ ರೇಜಾ ಷಾ ಪೆಹ್ಲಾವಿ ಅವರನ್ನು ಅಧಿಕಾರದಲ್ಲಿ ಕೂರಿಸಿದ ಇರಾನಿನ ಕ್ಷಿಪ್ರಕ್ರಾಂತಿಯೊಂದಿಗಿನ ಸಂಬಂಧವನ್ನು ಬ್ರಿಟಿಷ್ ಸರ್ಕಾರವು ಇಂದಿಗೂ ನಿರಾಕರಿಸುತ್ತದೆ.

ಕೈಬಿಟ್ಟ “ಆಟದ ನಿಯಮಗಳು

ಫ್ಯಾಸಿಸ್ಟ್ ಶಕ್ತಿಗಳು ಅಧಿಕಾರ ಹಿಡಿದಾಗ ಕೆಲವು ಬದಲಾವಣೆಗಳು ಗೋಚರಿಸುತ್ತವೆ. ಈ ಬದಲಾವಣೆಗಳು ಕೆಲವು ಮೂಲಭೂತ ಅಂಶಗಳಿಗೆ ಸಂಬಂಧಿಸುತ್ತವೆ. ಅಂದರೆ, ಕೆಲವು ನಿಯಮಗಳನ್ನು ಬದಿಗೊತ್ತಲಾಗುತ್ತದೆ. ಭಾರತದ ಪ್ರಕರಣದಲ್ಲೂ ಈ ಅಂಶವು ಸ್ಪಷ್ಟವಾಗಿ ಗೋಚರಿಸುತ್ತದೆ.

ಅನಿಲ್ ಅಂಬಾನಿ ಹೊಸದಾಗಿ ಹುಟ್ಟುಹಾಕಿದ ಮತ್ತು ಕೇವಲ ನಾಮ ಫಲಕವನ್ನು ಮಾತ್ರ ಹೊಂದಿದ್ದ ಅಂಬಾನಿ ಸಂಸ್ಥೆಯನ್ನು ರಫೇಲ್ ವಿಮಾನದ ಸ್ಥಳೀಯ ತಯಾರಕನಾಗಿ ಒಪ್ಪಿಕೊಳ್ಳುವಂತೆ ಫ್ರೆಂಚ್ ಸರ್ಕಾರವನ್ನು ನಮ್ಮ ಪ್ರಧಾನಿ ಕೋರಿದಾಗ, ಬಂಡವಾಳಶಾಹಿಯೇ ಹೇಳುವ ಮುಕ್ತಸ್ಪರ್ಧೆಗೆ ಅವಕಾಶ ನೀಡುವ ಜಾಗತಿಕ ಟೆಂಡರ್ ಕರೆಯುವ ಪ್ರಶ್ನೆಯನ್ನೇ ಎತ್ತಲಿಲ್ಲ, ಮತ್ತು ಒಂದು ಕನಿಷ್ಠ ಅರ್ಹತೆಯ ಪ್ರಶ್ನೆಯನ್ನೂ ಎತ್ತಲಿಲ್ಲ. ಈ ಯುದ್ಧ ವಿಮಾನವನ್ನು ಸ್ಥಳೀಯವಾಗಿ ತಯಾರಿಸುವ ಸಾಮರ್ಥ್ಯ ಹೊಂದಿದ್ದ ಒಂದು ಪ್ರಖ್ಯಾತ ಸಾರ್ವಜನಿಕ ವಲಯದ ಉದ್ದಿಮೆಯು ತಯಾರಿಸುವ ಬಗ್ಗೆ ಹಿಂದಿನ ಯುಪಿಎ ಸರ್ಕಾರವು ರಫೇಲ್ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಒಡಂಡಿಕೆಯನ್ನು ರದ್ದುಪಡಿಸಿದ ಬಗ್ಗೆ ಮತ್ತು ಸಾಮರ್ಥ್ಯ ಹೊಂದಿದ್ದ ಈ ಉದ್ದಿಮೆಯನ್ನು ನಿರ್ಲಕ್ಷಿಸಿದ ಬಗ್ಗೆ ಯಾವ ವಿವರಣೆಯನ್ನೂ ನೀಡಲಿಲ್ಲ. ಅಂತೆಯೇ, ಅದಾನಿ ಉದ್ದಿಮೆ-ಸಮೂಹದ ವಂಚನೆಯ ಬಗ್ಗೆ ಅಮೆರಿಕದ ಹಿಂಡೆನ್‌ಬರ್ಗ್ ಸಂಸ್ಥೆಯು ಹಲವು ಸಂಗತಿಗಳನ್ನು ಬಹಿರಂಗಪಡಿಸಿದ ನಂತರವೂ ಅದಾನಿ ಸಮೂಹದ ಲೋಪ-ದೋಷಗಳ ಬಗ್ಗೆ ಸರ್ಕಾರ ಯಾವುದೇ ತನಿಖೆಯನ್ನು ಆದೇಶಿಸದಿದ್ದಾಗ, ನಾವು ಕಂಡಿರುವುದು ಆಟದ ನಿಯಮಗಳನ್ನು ಕೈಬಿಟ್ಟದ್ದನ್ನು.

ಬಿಜೆಪಿ ಸರ್ಕಾರವು ಕೆಲವು ಖಾಸಗಿ ಉದ್ದಿಮೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ಇತರ ದೇಶಗಳ ಸಂಸ್ಥೆಗಳೊಂದಿಗಿನ ಸ್ಪರ್ಧೆಯಲ್ಲಿ ವಿಜಯ  ಸಾಧಿಸುವ ಮಟ್ಟದ ಸಂಸ್ಥೆಗಳಾಗಿ ನಿರ್ಮಿಸುವ ಚಿಂತನೆ ಮಾಡಿದೆ ಎಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಅಂಶವು, ಏಕಸ್ವಾಮ್ಯ ಬಂಡವಾಳ, ಅದರಲ್ಲೂ ವಿಶೇಷವಾಗಿ ಹೊಸ ಏಕಸ್ವಾಮ್ಯ ಬಂಡವಾಳ ಮತ್ತು ಪ್ರಭುತ್ವದ ನಡುವೆ ಇರುವ ನಿಕಟ ಬಾಂಧವ್ಯವನ್ನು ಸೂಚಿಸುತ್ತದೆ. ಈ ವಿಜಯ  ಸಾಧಿಸಬಹುದಾದ ಖಾಸಗಿ ಉದ್ದಿಮೆಗಳನ್ನು ಆಯ್ಕೆ ಮಾಡುವಾಗ ಯಾವ ನಿಯಮಗಳೂ ಇರುವುದಿಲ್ಲ. ಅಂದರೆ, ಹಿಂದುತ್ವ ಶಕ್ತಿಗಳು ಮೈತ್ರಿ ಹೊಂದಿರುವ ಏಕಸ್ವಾಮ್ಯ ಬಂಡವಾಳಶಾಹಿಗಳು ತಮ್ಮ ಸಾಮ್ರಾಜ್ಯಗಳನ್ನು ನಿರ್ಮಿಸಲು ಸರ್ಕಾರ ಸಹಾಯವನ್ನು ಒದಗಿಸುತ್ತದೆ.

ಮತ್ತೊಂದೆಡೆಯಲ್ಲಿ, ಹಿಂದುತ್ವ ಸರ್ಕಾರಕ್ಕೆ ಮಾಧ್ಯಮಗಳು ಇಡಿಯಾಗಿ ಬೆಂಬಲ ಕೊಡುತ್ತವೆ ಎಂಬುದನ್ನು ಹೊಸ ಏಕಸ್ವಾಮ್ಯ ಸಂಸ್ಥೆಗಳು ಖಚಿತಪಡಿಸಿಕೊಳ್ಳುತ್ತವೆ ಮತ್ತು ಸರ್ಕಾರದಿಂದ ಪ್ರತ್ಯುಪಕಾರವನ್ನೂ ಪಡೆದುಕೊಳ್ಳುತ್ತವೆ. ಕಾರ್ಪೊರೇಟ್-ಹಿಂದುತ್ವ ಮೈತ್ರಿಗೆ ಮಾಧ್ಯಮಗಳ ಸರ್ವಾನುಮತ ಬೆಂಬಲವನ್ನು ಗಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉದ್ದೇಶದಿಂದ, ಸರ್ಕಾರದಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಒಂಟಿ ಟಿವಿ ಚಾನೆಲ್‌ಅನ್ನು ಅದಾನಿಗಳು ಖರೀದಿಸಿರುವುದು ಆಶ್ಚರ್ಯವೇನಲ್ಲ. ಯಾವುದನ್ನು ಪ್ರಭುತ್ವ ಮತ್ತು ಕಾರ್ಪೊರೇಟ್ ಶಕ್ತಿಗಳ ಬೆಸುಗೆ ಎಂದು ಮುಸೊಲಿನಿ ಕರೆದಿದ್ದನೋ ಅದನ್ನು ನೆನಪಿಸುವ ಈ ಇಡೀ ಪ್ರಕ್ರಿಯೆಯನ್ನು ಒಂದು ಬಂಟ ಬಂಡವಾಳಶಾಹಿ ಅಥವಾ ಕ್ರೋನಿ ಕ್ಯಾಪಿಟಲಿಸಂ ಪ್ರಕರಣ ಎಂದಷ್ಟೇ ಕರೆದರೆ ಅದು ಈ ಪ್ರಕ್ರಿಯೆಯ ಪೂರ್ಣ ಚಿತ್ರವನ್ನು ಕೊಡುವುದಿಲ್ಲ.

ಸ್ವತಃ  ಬಂಟ  ಎಂಬ ಪದವೇ, ಒಂದು ‘ಪರಿಶುದ್ಧ’ವಾದ , ‘ಬಂಟ’ ಅಲ್ಲದ ಬಂಡವಾಳಶಾಹಿಯೂ ಇದೆ ಮತ್ತು ಅದನ್ನು ಹಿಂದುತ್ವ ಶಕ್ತಿಗಳ ಆಳ್ವಿಕೆಯಲ್ಲಿ ದಾಟಿ ಹೋಗಲಾಗಿದೆ ಎಂಬುದಾಗಿ ಊಹಿಸಿಕೊಂಡಿರುತ್ತದೆ. ವಾಸ್ತವಿಕವಾಗಿ ಹೇಳುವುದಾದರೆ, ಆ ರೀತಿಯದ್ದು ಏನೂ ಇಲ್ಲವೇ ಇಲ್ಲ. ಎಲ್ಲಾ ಬಂಡವಾಳವಾದವೂ ಬಂಟ ಬಂಡವಾಳಶಾಹಿಯೇ. ಕಾಲಕ್ರಮೇಣ ಬದಲಾಗುವ ಪ್ರಭುತ್ವ ಮತ್ತು ಬಂಡವಾಳದ ಸಂಬಂಧವು ಏಕಸ್ವಾಮ್ಯ ಬಂಡವಾಳಶಾಹಿಯ ಅಡಿಯಲ್ಲಿ ಹೆಚ್ಚು ನಿಕಟವಾಗುತ್ತದೆ ಫ್ಯಾಸಿಸ್ಟ್ ಮಾದರಿಯ ಆಳ್ವಿಕೆಯ ಅವಧಿಯಲ್ಲಿ ಈ ಸಂಬಂಧವು ಗುಣಾತ್ಮಕವಾಗಿ ಮಾರ್ಪಾಡಾಗುತ್ತದೆ. ಅಂದರೆ, ಬಂಡವಾಳಶಾಹಿಯು ಗುಣಾತ್ಮಕವಾಗಿ ಇನ್ನಷ್ಟು ರೂಪಾಂತರಗೊಳ್ಳುತ್ತದೆ. ಆಗ, ನಿಯಮಗಳನ್ನು ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟವೇ ಚಲಾಯಿಸುತ್ತದೆ.

(ವ್ಯಂಗ್ಯಚಿತ್ರ ಕೃಪೆ: ನ್ಯೂಸ್‍ಕ್ಲಿಕ್ ಮತ್ತು ಸಜಿತ್‍ ಕುಮಾರ್, ಡೆಕ್ಕನ್ ಹೆರಾಲ್ಡ್)

Donate Janashakthi Media

Leave a Reply

Your email address will not be published. Required fields are marked *