ಕುಬೇರರ ಕೂಟದ ಸಭೆಯಲ್ಲಿ ಭಾರತದ ಪ್ರಧಾನಿಯ ಅದ್ಭುತ ನಟನೆ

ಕಪಟ ನಾಟಕ ಸೂತ್ರಧಾರಿಯ ಪಾತ್ರ ನಿರ್ವಹಣೆಗೆ ಪ್ರಖ್ಯಾತರಾಗಿರುವ ನಮ್ಮ ಪ್ರಧಾನಿಗಳು ಜಿ-7 ಶೃಂಗಸಭೆಯಲ್ಲಿ ಕೆಳಗಿನ ಹಂತದಲ್ಲಾದರೂ ಪಾಲ್ಗೊಳ್ಳಲು ಆಹ್ವಾನಿಸಿದ್ದಕ್ಕೆ ಹೆಮ್ಮೆಯಿಂದಮುಕ್ತ ಸಮಾಜಗಳು ಹೇಳಿಕೆಗೆ ಸಹಿ ಮಾಡಿದ್ದಾರೆಜಗತ್ತಿನ ಅತ್ಯಂತ ಸರ್ವಾಧಿಕಾರಶಾಹೀ ಆಡಳಿತಗಾರರಲ್ಲಿ ಒಬ್ಬನೆಂಬ ತಮ್ಮ ಕುರಿತ ವಿಡಂಬನೆ ಬಗ್ಗೆ  ಒಂದಿಷ್ಟು ಅಳುಕೂ ಇಲ್ಲದೆಅತ್ತ ಜಿ-7 ಸಭೆ ಕುಬೇರರಿಗೆ ಸಾಮ್ರಾಜ್ಯಶಾಹಿ ಅಧಿಪತ್ಯವನ್ನು ಹೇಗೆ ಉಳಿಸಿಕೊಳ್ಳುವುದು ಎನ್ನುವುದಕ್ಕೆ ಆದ್ಯತೆಯೇ ಹೊರತು ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸುವುದಕ್ಕೆ ಅಲ್ಲ ಎನ್ನುವುದನ್ನು  ತೋರಿಸಿಕೊಟ್ಟಿದೆ – ಪ್ರಕಾಶ್ ಕಾರಟ್

 

ಇಬ್ಬಗೆ ಮಾತು ಮತ್ತು ಬೂಟಾಟಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ತುಂಬಾ ಪ್ರಖ್ಯಾತರು. ಆದಾಗ್ಯೂ, ಕಾರ್ನ್‌ವಾಲ್‌ನಲ್ಲಿ ನಡೆದ ಜಿ-7 ಶೃಂಗಸಭೆಯ ಮಾಹಿತಿ ನೀಡುವ ಸಭೆಯಲ್ಲಿ ಅವರ ಪ್ರದರ್ಶನ ಹೊಸ ಎತ್ತರವನ್ನು ತಲುಪಿದೆ.

“ಮುಕ್ತ ಸಮಾಜಗಳು” ಎಂಬ ಅಧಿವೇಶನಕ್ಕೆ ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ಭಾರತವನ್ನು ಆಹ್ವಾನಿಸಲಾಗಿತ್ತು. ಅದನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿಯವರು “ಪ್ರಜಾಪ್ರಭುತ್ವ, ಚಿಂತನಾ ಸ್ವಾತಂತ್ರ್ಯ ಮತ್ತು ಅನಿರ್ಬಂಧತೆಗೆ ಭಾರತದ ನಾಗರಿಕತೆ ಬದ್ಧವಾಗಿದೆ” ಎಂದು ಸಾರಿದರು. “ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ” ಎಂಬ ಕ್ಲೀಷೆಯನ್ನು ಪುನರುಚ್ಚರಿಸಿದ ಮೋದಿ, “ಭಾರತವು ಜಿ-7 ಕೂಟ ಮತ್ತದರ ಅತಿಥಿ ಮಿತ್ರರ ಸಹಜ ಮಿತ್ರನಾಗಿದೆ” ಎಂದು ಘೋಷಿಸಿದರು. ತಮ್ಮೆಲ್ಲರ ಸಮಾನ ಮೌಲ್ಯಗಳನ್ನು “ಸರ್ವಾಧಿಕಾರಶಾಹಿ” ಯಂತಹ ಅನಿಷ್ಟಗಳಿಂದ ಉಂಟಾಗುವ ಹಲವು ಅಪಾಯಗಳಿಂದ ರಕ್ಷಿಸಲು ಭಾರತ ನೆರವಾಗುತ್ತದೆ ಎಂದು ಅವರು ಹೇಳಿದರು. ಜಗತ್ತಿನ ಅತ್ಯಂತ ಸರ್ವಾಧಿಕಾರಶಾಹೀ ಆಡಳಿತಗಾರರಲ್ಲಿ ಒಬ್ಬನೆಂಬ ವಿಡಂಬನೆಯ ಬಗ್ಗೆ  ಒಂದಿಷ್ಟು ಅಳುಕೂ ಇಲ್ಲದೆ ಅವರು ಈ ಮಾತುಗಳನ್ನು ಹೇಳಿದರು.

‘ಮುಕ್ತ ಸಮಾಜಗಳು ಹೇಳಿಕೆ’(ಓಪನ್ ಸೊಸೈಟೀಸ್ ಸ್ಟೇಟ್‌ಮೆಂಟ್)ಗೆ  ಮೋದಿಯವರೂ ಸಹಿ ಮಾಡಿದ್ದಾರೆ. ಈ ಹೇಳಿಕೆಯು ಎಲ್ಲರಿಗೂ “ಅಂತರ್ಜಾಲದಲ್ಲಿ ಮತ್ತು ಅದರ ಹೊರಗೆ (ಆನ್‌ಲೈನ್ ಮತ್ತು ಆಫ್‌ಲೈನ್) ಮಾನವ ಹಕ್ಕುಗಳ” ಬಗ್ಗೆ ಮಾತನಾಡಿದೆ,  “ಸಭೆ ಸೇರುವ ಹಕ್ಕು, ಸಂಘಟನೆ ಮತ್ತು ಶಾಂತಿಯುತವಾಗಿ ಒಂದುಗೂಡುವ ಹಕ್ಕು” ಇತ್ಯಾದಿಗಳ ಬಗ್ಗೆಯೂ ಮಾತಾಡಿದೆ.

ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ವಿವಿಧ ವಿಭಾಗಗಳಿಂದ ಅಪಾಯ ಎದುರಾಗುತ್ತಿರುವ “ಸಂಕೀರ್ಣ ಕಾಲಘಟ್ಟದಲ್ಲಿ ನಾವಿದ್ದೇವೆ”,  ವಿವಿಧ ದಿಕ್ಕುಗಳಿಂದ “ಹೆಚ್ಚುತ್ತಿರುವ ಸರ್ವಾಧಿಕಾರಶಾಹಿ”, “ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದುರುಪಯೋಗಗಳು” ಹಾಗೂ “ರಾಜಕೀಯ ಪ್ರೇರಿತ ಅಂತರ್ಜಾಲ ಮುಚ್ಚಿಕೆಗಳು”(ಇಂಟರ್‌ನೆಟ್ ಶಟ್‌ಡೌನ್) ಇವೇ ಮೊದಲಾದ ಅಪಾಯಗಳು ಬರುತ್ತಿವೆ ಎಂದು ಅದು ಹೇಳುತ್ತದೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ಜಿ-7 ಹೇಳಿಕೆಗೆ ಭಾರತ ಸಹಿ ಹಾಕಿದೆ. ವ್ಯಂಗ್ಯಚಿತ್ರ: ಸತೀಶ ಆಚಾರ್ಯ

ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿರುವ ಈ ಎಲ್ಲ ವಿಷಯಗಳ ಸಂಬಂಧದಲ್ಲಿ ಮೋದಿ ಸರ್ಕಾರದ  ದಾಖಲೆ ತೀರಾ ಕಳಪೆಯಾಗಿದೆ. ಪ್ರತಿಬಂಧಕ ಬಂಧನಗಳಲ್ಲಿ ಹೊಸ ದಾಖಲೆಯನ್ನೇ ಬರೆದಿರುವ ಆಡಳಿತದ ನೇತೃತ್ವ ವಹಿಸಿರುವ ಮೋದಿಯವರು “ಚಿಂತನಾ ಸ್ವಾತಂತ್ರ್ಯ ಹಾಗೂ ನಿರ್ಬಂಧತೆ”ಯನ್ನು ಶ್ಲಾಘಿಸುತ್ತಾರೆ! ಅಧಿಕೃತ ಅಂಕಿಸಂಖ್ಯೆಗಳೇ ಹೇಳುವಂತೆ ಮೋದಿ ಆಡಳಿತದ 2015ರಿಂದ 2019ರ ಅವಧಿಯ ಐದು ವರ್ಷಗಳಲ್ಲಿ ‘ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು’ (ಯುಎಪಿಎ) ಅನ್ವಯ 5,128 ಮೊಕದ್ದಮೆಗಳು ದಾಖಲಾಗಿವೆ. 2015ಕ್ಕೆ ಹೋಲಿಸಿದರೆ, 2019ರಲ್ಲಿ ಯುಎಪಿಎ ಅಡಿ ಆದ ಬಂಧನಗಳ ಪ್ರಮಾಣದಲ್ಲಿ ಶೇಕಡ 72 ಏರಿಕೆಯಾಗಿದೆ. ಈ ಅವಧಿಯಲ್ಲಿ ರಾಜದ್ರೋಹದ ಪ್ರಕರಣಗಳು 229ಕ್ಕೆ ಏರಿವೆ. 2020ರಲ್ಲೂ, 2021ರ ಮೊದಲ ಐದು ತಿಂಗಳಲ್ಲೂ ಅವು ಏರುತ್ತಲೇ ಇವೆ.

ಮೂವರು ವಿದ್ಯಾರ್ಥಿ ಕಾರ್ಯಕರ್ತರಿಗೆ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್, ಯುಎಪಿಎ ದುರುಪಯೋಗದ ಬಗ್ಗೆ ತೀಕ್ಷ್ಣ ಟೀಕೆ ಮಾಡಿದ್ದರೂ ಸರ್ಕಾರ ಈ ವಿಚಾರದಲ್ಲಿ ಸರಿದಾರಿಗೆ ಬರುವಂತೆ ಕಾಣುತ್ತಿಲ್ಲ. ಕೇಂದ್ರ ಗೃಹ ಸಚಿವಾಲಯದಡಿ ಬರುವ ದೆಹಲಿ ಪೊಲೀಸ್ ಇಲಾಖೆ, ಜಾಮೀನು ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದರಿಂದ ಇದು ಗೊತ್ತಾಗುತ್ತದೆ.

‘ಅಂತರ್ಜಾಲದಲ್ಲಿ ಸ್ವಾತಂತ್ರ್ಯ’ ಮತ್ತು ‘ಅಂತರ್ಜಾಲ ಮುಚ್ಚಿಕೆ’ಗಳಿಗೆ ಸಂಬಂಧಿಸಿ ಹೇಳುವುದಾದರೆ, ಜಗತ್ತಿನಾದ್ಯಂತ ಸಂಭವಿಸಿದ 155 ಮುಚ್ಚಿಕೆಗಳಲ್ಲಿ ಭಾರತದ ಪಾಲೇ 109 ಆಗಿದೆ. ಅಂದರೆ ಶೇಕಡ 70ರಷ್ಟಿದೆ. ಕಟು ವಾಸ್ತವ ಹೀಗಿದ್ದರೂ ಮಾನ್ಯ ಮೋದಿಯವರು ‘ರಾಜಕೀಯ ಪ್ರೇರಿತ ಅಂತರ್ಜಾಲ ಮುಚ್ಚಿಕೆಗಳು’, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದುದು ಎಂದು ಬಹಳ ರಸವತ್ತಾಗಿ ಹೇಳುತ್ತಾರೆ.

ಪ್ರತಿಕಾ ಸ್ವಾತಂತ್ರ್ಯದ ವಿಚಾರಕ್ಕೆ ಬಂದರೆ, ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 142ನೇ ಅಂಕ ಪಡೆದಿದೆ. ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆ ಈ ಅಂಕಿಅಂಶಗಳನ್ನು ಸಿದ್ಧಪಡಿಸುತ್ತದೆ. ಅದಾಗಲೇ ಜಾರಿಗೆ ಬಂದಿರುವ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು ಭಿನ್ನಮತವನ್ನು ಕ್ರಿಮಿನಲ್ ಚಟುವಟಿಕೆ ಎಂದು ಪರಿಗಣಿಸುತ್ತವೆ, ನಾಗರಿಕರ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಸ್ವಯಂ-ಸೆನ್ಸಾರ್‌ಶಿಪ್ ಅನ್ನು ಪ್ರೋತ್ಸಾಹಿಸುತ್ತದೆ. ಅಂತರ್ಜಾಲ ಸುದ್ದಿ ತಾಣಗಳು ಮತ್ತು ವೆಬ್‌ಸೈಟ್‌ಗಳನ್ನು ಸರಕಾರದ ನಿಯಂತ್ರಣ ಮತ್ತು ಸೆನ್ಸಾರ್‌ಶಿಪ್ ಅಡಿ ತರಲಾಗಿದೆ. ಗುಂಪು ಹತ್ಯೆಗಳು ಮತ್ತು ದ್ವೇಷಾಪರಾಧಗಳನ್ನು ಎಗ್ಗಿಲ್ಲದಂತೆ ನಡೆಸಲಾಗುತ್ತಿದೆ. ಅವುಗಳಲ್ಲಿ ಪಾಲ್ಗೊಂಡ ಅಪರಾಧಿಗಳಿಗೆ ಶಿಕ್ಷೆಯೇ ಆಗುವುದಿಲ್ಲ.

ವಾರೆವ್ವಾ! ಅಂತರ‍್ರಾಷ್ಟ್ರೀಯ ಮೈದಾನಕ್ಕೆ ಎಂತಹ ಲಾಂಗ್ ಪಾಸ್!  ಒಂದು ಭೂಮಿ ಒಂದು ಆರೋಗ್ಯ ಗ್ರಾಮೀಣ ಭಾರತ…? ವ್ಯಂಗ್ಯಚಿತ್ರ: ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

‘ಮುಕ್ತ ಸಮಾಜಗಳು ಹೇಳಿಕೆ’ಯಲ್ಲಿ ಉಲ್ಲೇಖಿಸಿರುವ ಮಾನದಂಡಗಳನ್ನು ಪರಿಗಣಿಸುವುದಾದಲ್ಲಿ, ಮೋದಿ ಸರ್ಕಾರವನ್ನು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದ ಆಡಳಿತ ಎಂದು ಗುರುತಿಸಬೇಕಾಗುತ್ತದೆ.

ಕುಬೇರರ ಕೂಟವಾದ ಜಿ-7 ನಾಯಕರು ಭಾರತದ ಪ್ರಧಾನಿಯ ಈ ಅದ್ಭುತ ನಟನೆಯನ್ನು ಮೆಚ್ಚಿಕೊಂಡಿರಬಹುದು. ಯಾಕೆಂದರೆ ಜಿ-7 ಶೃಂಗದ ಪ್ರಧಾನ ಗುರಿ ಚೀನಾ. ಜಿ-7 ದೇಶಗಳ ನಾಯಕರು ಸಹಿ ಮಾಡಿರುವ ಶೃಂಗಸಭೆ ಹೇಳಿಕೆಯಲ್ಲಿ ಚೀನಾಕ್ಕೆ ಸಂಬಂಧಿಸಿ ಅನೇಕ ಟೀಕೆಗಳಿವೆ. ಕೋವಿಡ್ ವೈರಸ್ ಹುಟ್ಟು, ನ್ಯಾಯಸಮ್ಮತವಲ್ಲದ ಮಾರುಕಟ್ಟೆಯೇತರ ನೀತಿಗಳು, ಮಾನವ ಹಕ್ಕುಗಳಿಗೆ ಅಗೌರವ, ಬೆಳೆಯುತ್ತಿರುವ ಆರ್ಥಿಕ ಮತ್ತು ಮಿಲಿಟರಿ ಶಕ್ತಿಯ ಅವಶ್ಯಕತೆಗಳಿಗೆ ಸಂಬಂಧಿಸಿದ ಸವಾಲುಗಳು -ಇವೇ ಮೊದಲಾದ ವಿಚಾರಗಳಲ್ಲಿ ಚೀನಾವನ್ನು ತರಾಟೆಗೆ ತೆಗೆದು ಕೊಳ್ಳಲಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ, ಅಮೆರಿಕ ನೇತೃತ್ವದ ಈ ಪಾಶ್ಚಿಮಾತ್ಯ ಮಿತ್ರಕೂಟಕ್ಕೆ ಮೋದಿ ನೇತೃತ್ವದಲ್ಲಿ ಭಾರತ ಒಂದು ಸ್ವಾಗತಾರ್ಹ ಆದರೆ ಅಧೀನ ಗೆಳೆಯನಾಗಿದೆ. ಹೀಗಾಗಿಯೇ, ಪಾಶ್ಚಿಮಾತ್ಯರ ಕಣ್ಣಿನಲ್ಲಿ ರಾಜಕೀಯ ಕೈದಿಗಳನ್ನು ಲಾಕ್‌ಅಪ್‌ನಲ್ಲಿ ಹಾಕುವುದು, ಮಾಧ್ಯಮ ದನಿಯನ್ನು ದಮನಿಸುವುದು ಮತ್ತು ಇಂಟರ್‌ನೆಟ್ ಶಟ್‌ಡೌನ್ ಇವೇ ಮುಂತಾದ ಮೋದಿ ಸರಕಾರದ ಐಬುಗಳು  ‘ಸಮಾನ ಮೌಲ್ಯಗಳ’ ರಕ್ಷಣೆಯ ಹೋರಾಟದಲ್ಲಿ ತೆರುವ ಸಣ್ಣ ಬೆಲೆಯಾಗಿ ಕಾಣಿಸುತ್ತದೆ. ಕೆಳಗಿನ ಹಂತದಲ್ಲಾದರೂ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಹಾನಿಸಿದ್ದಕ್ಕೆ ಮೋದಿ ಹೆಮ್ಮೆ ಪಡಬಹುದು. ಆದರೆ, ಜಿ-7 ಎನ್ನುವುದು ಸಾಮ್ರಾಜ್ಯಶಾಹಿ ಸಿರಿವಂತ ರಾಷ್ಟ್ರಗಳ ಕೂಟ ಎಂಬ ವಾಸ್ತವತೆ ಬದಲಾಗದು. ಅಭಿವೃದ್ಧಿಶೀಲ ದೇಶಗಳಿಗೆ ನೂರು ಕೋಟಿ ಡೋಸ್ ಕೋವಿಡ್-ನಿರೋಧಕ ಲಸಿಕೆ ಒದಗಿಸುವ ‘ಮಹಾ’ ನಿರ್ಧಾರವನ್ನು ಶೃಂಗಸಭೆ ಪ್ರಕಟಿಸಿದ್ದರಲ್ಲೇ ಅದು ಸ್ಪಷ್ಟವಾಗಿ ಗೋಚರವಾಗುತ್ತದೆ. ಇದು ಅಭಿವೃದ್ಧಿಶೀಲ ದೇಶಗಳಿಗೆ ಅಗತ್ಯವಾದ ಲಸಿಕೆಯಲ್ಲಿ ಒಂದು ಸಣ್ಣ ಭಾಗವಷ್ಟೇ ಆಗಿದೆ ಎಂದು ಅನೇಕ ಅಂತಾರಾಷ್ಟ್ರೀಯ ಆರೋಗ್ಯ ಮತ್ತು ನಾಗರಿಕ ಸಂಘಟನೆಗಳು ಅಭಿಪ್ರಾಯ ಪಟ್ಟಿವೆ. ನಿಜ ಹೇಳಬೇಕೆಂದರೆ ಜಿ-7 ದೇಶಗಳು 1000 ಕೋಟಿ (10 ಬಿಲಿಯ) ಡೋಸ್ ಲಸಿಕೆಯನ್ನು ಸುಲಭವಾಗಿ ಕೊಡಬಹುದಾಗಿದೆ ಎಂಬುದು ಅವುಗಳ ಅಭಿಮತ. ಆದರೆ ಶ್ರೀಮಂತ ಬಂಡವಾಳಶಾಹಿ ದೇಶಗಳ ನೇತಾರರರಿಗೆ ಜನರ ಆರೋಗ್ಯಕ್ಕಿಂತ ಲಾಭವೇ ಮುಖ್ಯವಾಗಿದೆ.

ಇವರಿಗೆ ಸಾಮ್ರಾಜ್ಯಶಾಹಿ ಅಧಿಪತ್ಯವನ್ನು ಹೇಗೆ ಉಳಿಸಿಕೊಳ್ಳುವುದು ಎನ್ನುವುದಕ್ಕೆ ಆದ್ಯತೆಯೇ  ಹೊರತು ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸುವುದಕ್ಕೆ ಅಲ್ಲ ಎನ್ನುವುದನ್ನು ಜಿ-7 ಶೃಂಗಸಭೆ ಹಾಗೂ ನಂತರದ ನ್ಯಾಟೋ ಕೂಟದ ಬ್ರಸೆಲ್ಸ್ ಸಭೆಯ ನಡವಳಿಕೆಗಳು ತೋರಿಸಿಕೊಟ್ಟಿವೆ.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *