ಕೊರಟಗೆರೆ : ಏಪ್ರಿಲ್ 1ರಂದು ಕೊರಟಗೆರೆಯ ಪ್ರಸಿದ್ದ ಗಿಡಮೂಲಿಕೆಗಳ ತಾಣವಾದ ಸಿದ್ದೆರಬೆಟ್ಟದಲ್ಲಿ ಬೃಹತ್ ಕಾಡ್ಗಿಚ್ಚು ವ್ಯಾಪಿಸಿದ್ದು, ಮುಜರಾಯಿ ಇಲಾಖೆಯ ಪಾರ್ಕಿಂಗ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಪ್ರವಾಸಿಗರ ಕಾರೊಂದು ಕಾಡ್ಗಿಚ್ಚಿನ ಬೆಂಕಿಯಿಂದ ಆಹುತಿಯಾಗಿ ಹಾನಿಯಾದ ಘಟನೆ ನಡೆದಿದೆ.
ಬಿಸಿಲಿನ ತಾಪಕ್ಕೆ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗಾ ಹೋಬಳಿಯ ಪ್ರಸಿದ್ದ ಸಂಜೀವಿನಿ ತಾಣ ಹಾಗೂ ಪ್ರವಾಸಿ ಸ್ಥಳವಾದ ಸಿದ್ದರಬೆಟ್ಟದಲ್ಲಿ ಬೃಹತ್ ಕಾಡ್ಗಿಚ್ಚು ಸಂಭವಿಸಿದ್ದು, ಶ್ರೀಕ್ಷೇತ್ರದ ಸಿದ್ದೇಶ್ವರ ಸ್ವಾಮಿಯ ದರ್ಶನಕ್ಕೆ ಬಂದಿದ್ದ ಬೆಂಗಳೂರು ಮೂಲದ ವೀರೇಶ್ ಎಂಬವರ ಕಾರು ಕಾಡ್ಗಿಚ್ಚಿನ ಬೆಂಕಿಗೆ ಹಾನಿಯಾಗಿದೆ.
ವೀರೇಶ್ ಏ.1 ರಂದು ಬೆಳಿಗ್ಗೆ ತಮ್ಮ ಕುಟುಂಬ ಸಮೇತ ಸಿದ್ದರಬೆಟ್ಟಕ್ಕೆ ಆಗಮಿಸಿ ಸಿದ್ದರಬೆಟ್ಟದ ಮೇಲಿನ ದೇವರ ದರ್ಶನ ಪಡೆಯಲು ಹೋಗಿದ್ದು ವಾಪಸ್ ಬರುವ ವೇಳೆಗಾಗಲೇ ಕಾರು ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ.
ಇದನ್ನೂ ಓದಿ: ಎಸ್‌ಎಫ್‌ಐ, ಡಿವೈಎಫ್ಐ ನಿಂದ ಮೈಲಾರ ಮಹದೇವಪ್ಪ, ತಿರುಕಪ್ಪ ಮಡಿವಾಳರ, ವೀರಯ್ಯ ಹಿರೇಮಠ ಹುತಾತ್ಮ ಜ್ಯೋತಿ ಯಾತ್ರೆ
ಕಾರು ಮಾಲಿಕ ವೀರೇಶ್ ಮಾತನಾಡಿ, ಬೆಂಗಳೂರಿನಿಂದ ದೇವರ ದರ್ಶನಕ್ಕೆಂದು ಸುಮಾರು ಬೆಳಿಗ್ಗೆ 7.30ಕ್ಕೆ ಆಗಮಿಸಿದ್ದರು. ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೂ ದೇವಾಲಯದ ಮುಜರಾಯಿ ಇಲಾಖೆಯ ವ್ಯಕ್ತಿ ಕಾರು ಪಾರ್ಕಿಂಗ್‌ಗೆ 20 ರೂ. ಪಡೆದು ರಸೀದಿ ನೀಡಿ ಬೆಟ್ಟದ ರಸ್ತೆ ಪಕ್ಕ ನಿಲ್ಲಿಸುವಂತೆ ಸೂಚಿಸಿ ಹೊರಟು ಹೋಗಿದ್ದರು. ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿಯ ದರ್ಶನ ಮಾಡಿಕೊಂಡು ಬರುವ ವೇಳೆಗಾಗಲೇ ಬಿಸಿಲಿನ ತಾಪಕ್ಕೆ ಬೆಟ್ಟದಲ್ಲಿ ಕಾಡ್ಗಿಚ್ಚು ಸಂಭವಿಸಿ ಬೆಂಕಿ ಉಂಟಾಗಿ ಕಾರಿಗೆ ಹಾನಿಯಾಗಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿ, ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸೌಭಾಗ್ಯಮ್ಮ ಎಂಬವರು ಕಾಡ್ಗಿಚ್ಚು ಸಂಭವಿಸಿದ್ದ ಸಮಯದಲ್ಲಿ ಕಂಡು ಕಾಣದಂತೆ ಬೇಜವಾಬ್ದಾರಿ ವಹಿಸಿ ಯಾವುದೇ ಕ್ರಮ ಕೈಗೊಳ್ಳದೆ ಕಾಡ್ಗಿಚ್ಚು ಅರಣ್ಯ ಇಲಾಖೆಗೆ ಸಂಬಂಧಿಸಿದ್ದು ಎಂದು ನಿರ್ಲಕ್ಷ ವಹಿಸಿದ್ದಾರೆ. ಈ ಬಗ್ಗೆ ಅವರಲ್ಲಿ ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿದ ನಂತರ ಅರಣ್ಯ ಇಲಾಖೆಯವರು ಅಗ್ನಿಶಾಮಕ ದಳಕ್ಕೆ ದೂರವಾಣಿ ಮೂಲಕ ವಿಷಯ ತಿಳಿಸಿದ ನಂತರ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಆಗಬಹುದಾದ ಹೆಚ್ಚಿನ ದುರಂತ ತಪ್ಪಿಸಿದರು ಎಂದರು.
ಬೆಂಕಿ ಅನಾಹುತದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನಂತರ ದೇವಾಲಯದ ಮುಜರಾಯಿ ಇಲಾಖೆ ಅಧಿಕಾರಿಯ ನಿರ್ಲಕ್ಷ್ಯದ ಬಗ್ಗೆ ತಹಶೀಲ್ದಾರ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಪ್ರವಾಸಿಗರ ಆಕ್ರೋಶ:
ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪ್ರವಾಸಿಗರಿಂದ ಪಾರ್ಕಿಂಗ್ ಹಣ ವಸೂಲಿ ಮಾಡಿ ರಸ್ತೆ ಪಕ್ಕದಲ್ಲಿ ನಿಲ್ಲಿಸುವಂತೆ ತಿಳಿಸುವುದು. ಅನಾಹುತ ಆದರೆ ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ಹಾಗೂ ಸಿದ್ದರಬೆಟ್ಟದಲ್ಲಿ ಇದ್ದು ಇಲ್ಲದಂತಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿದ್ದು ತಕ್ಷಣ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಯುಗಾದಿ- ರಂಜಾನ್ ಸೌಹಾರ್ದ ಸಂಗಮ – ಕೆ.ಷರೀಫಾ Janashakthi Media