ಬೆಂಗಳೂರು: ಹಣಕಾಸು ವಿವಾದದ ಹಿನ್ನೆಲೆಯಲ್ಲಿ 37 ವರ್ಷದ ಕ್ಯಾಬ್ ಚಾಲಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಪಾರ್ಕಿಂಗ್ ಏರಿಯಾದಲ್ಲಿ ಆತನ ಸ್ನೇಹಿತ ಕೊಲೆ ಮಾಡಿದ ಘಟನೆ ನಡೆದಿದೆ.ಸಾಲ
ಬೆಂಗಳೂರು ಪೊಲೀಸರ ಪ್ರಕಾರ, ಮೃತನನ್ನು ಜೆಪಿ ನಗರದ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಸಾರಕ್ಕಿ ಪ್ರದೇಶದಲ್ಲಿ ವಾಸಿಸುತ್ತಿರುವ ಆತನ ಸ್ನೇಹಿತ ಮುತ್ತುರಾಜ್ (31) ಎಂದು ಗುರುತಿಸಲಾಗಿದೆ.
ಕೆಐಎ ಪಾರ್ಕಿಂಗ್ ಏರಿಯಾದಲ್ಲಿ ಮಂಗಳವಾರ ರಾತ್ರಿ 11.30ರ ಸುಮಾರಿಗೆ ಲೋಕೇಶ್ ಪಡೆದಿದ್ದ 6 ಲಕ್ಷ ರೂಪಾಯಿ ಸಾಲವನ್ನು ಹಿಂದಿರುಗಿಸುವ ವಿಚಾರದಲ್ಲಿ ಜಗಳ ನಡೆದು ಘಟನೆ ನಡೆದಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮುತ್ತುರಾಜ್ ಲೋಕೇಶ್ ಕಾರಿನಲ್ಲಿ ಇಟ್ಟುಕೊಂಡಿದ್ದ ಚಿಕ್ಕ ಚಾಕುವನ್ನು ಹೊರತೆಗೆದು ಚಾಲಕನ ಎದೆಗೆ ಇರಿದಿದ್ದಾನೆ.
ಇದನ್ನೂ ಓದಿ: ತಿರುಪತಿಗೆ ತೆರಳುತ್ತಿದ್ದ ಬಸ್‌ಗೆ ಲಾರಿ ಡಿಕ್ಕಿ; 9 ಮಂದಿ ಸಾವು
ನೋವಿನಿಂದ ಚೀರಾಡುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದಲ್ಲಿದ್ದ ಇತರ ಚಾಲಕರು ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲೋಕೇಶ್ ಸಾವನ್ನಪ್ಪಿದ ತಕ್ಷಣ ಮುತ್ತುರಾಜ್ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಲೋಕೇಶ್ ಮತ್ತು ಮುತ್ತುರಾಜ್ ಇಬ್ಬರೂ ಜಗಳ ಪ್ರಾರಂಭವಾಗುವ ಮೊದಲು ಮದ್ಯ ಸೇವಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ಡೆಂಗ್ಯು ಪ್ರಕರಣ ಹೆಚ್ಚಳ : ಸರ್ಕಾರದ ಹೊಣೆಗಾರಿಕೆ ಏನು? ಜನರ ಜವಾಬ್ದಾರಿ ಏನು? ಡಾ. ಅನೀಲ್ ಕುಮಾರ್ ಜೊತೆ ಮಾತುಕತೆ