ಬಿಹಾರದಲ್ಲಿ 1600 ಕೋಟಿಯ ವೆಚ್ಚದಲ್ಲಿ ನಿರ್ಮಾಣವಾಗುತಿದ್ದ ಸೇತುವೆ ಕುಸಿತ

ಪಾಟ್ನಾ: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿದ ಘಟನೆ ನಡೆದಿದೆ. ರಾಜಧಾನಿ ಪಾಟ್ನಾದಲ್ಲಿ ನಿರ್ಮಾಣ ಹಂತದ ಸೇತುವೆಯ ಒಂದು ಭಾಗ ಕುಸಿದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಬಿಹಾರದ ಹಲವು ಜಿಲ್ಲೆಗಳಲ್ಲಿ ಹತ್ತಕ್ಕೂ ಹೆಚ್ಚು ಸೇತುವೆಗಳು ಇತ್ತೀಚಿನ ದಿನಗಳಲ್ಲಿ ಕುಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಿರ್ಮಾಣ ಹಂತದಲ್ಲಿರುವ ಸೇತುವೆಯ ಭಾಗವು ಬಿಹಾರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ನಿರ್ವಹಿಸುತ್ತಿರುವ ಭಕ್ತಿಯಾರ್‌ಪುರ-ತಾಜ್‌ಪುರ ಗಂಗಾ ಮಹಾಸೇತುವಿನ ಭಾಗವಾಗಿದೆ. ಗರ್ಡರ್‌ನ ಬೇರಿಂಗ್‌ಗಳನ್ನು ಬದಲಾಯಿಸುವಾಗ ಮತ್ತು ಪಿಲ್ಲರ್‌ಗೆ ಗರ್ಡರ್ ಹಾಕುವಾಗ ಒಂದು ಭಾಗ ಕೆಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಬಿಎಸ್‌ಆರ್‌ಡಿಸಿಎಲ್ ಮುಖ್ಯ ಜನರಲ್ ಮ್ಯಾನೇಜರ್ ಪ್ರವೀಣ್ ಚಂದ್ರ ಗುಪ್ತಾ, ‘ಬೇರಿಂಗ್ ಬದಲಾಯಿಸುವುದು ವಾಡಿಕೆಯ ಕಾರ್ಯವಿಧಾನವಾಗಿದೆ. ಯಾವುದೇ ಸಾವು ನೋವು ಸಂಭವಿಸಿದ ಸುದ್ದಿ ಇಲ್ಲ. ಕಾಮಗಾರಿಯನ್ನು ಪರಿಶೀಲಿಸುತ್ತೇವೆ. ವರದಿಯ ಪ್ರಕಾರ, ಈ ಸೇತುವೆಯ ನಿರ್ಮಾಣವು ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿದೆ.

ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ ಮಾಡಿದ ಹೈಕೋರ್ಟ್

2011ರ ಜೂನ್ ನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 5.57 ಕಿಮೀ ಉದ್ದದ ಭಕ್ತಿಯಾರ್‌ಪುರ-ತಾಜ್‌ಪುರ ಗಂಗಾ ಮಹಾಸೇತು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆ ಸಮಯದಲ್ಲಿ ಈ ಯೋಜನೆಯ ಒಟ್ಟು ವೆಚ್ಚ 1,602.74 ಕೋಟಿ ರೂಪಾಯಿ ಆಗಿತ್ತು. ಈ ಯೋಜನೆ ಪೂರ್ಣಗೊಂಡ ನಂತರ, ಸಮಸ್ತಿಪುರದ ರಾಷ್ಟ್ರೀಯ ಹೆದ್ದಾರಿ 28 ಮತ್ತು ಪಾಟ್ನಾದ ರಾಷ್ಟ್ರೀಯ ಹೆದ್ದಾರಿ 31 ಅನ್ನು ಸಂಪರ್ಕಿಸಬಹುದು.

ಸರ್ಕಾರದ ವಿರುದ್ಧ ತೇಜಸ್ವಿ ವಾಗ್ದಾಳಿ

ಸೇತುವೆಯ ಒಂದು ಭಾಗ ಕುಸಿದ ಘಟನೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ. ಎನ್‌ಡಿಎ ಸರ್ಕಾರದ ಅಡಿಪಾಯವು ಕಮಿಷನ್, ಲಂಚ, ಸಾಂಸ್ಥಿಕ ಭ್ರಷ್ಟಾಚಾರ, ಹಣಕಾಸು ಅಕ್ರಮಗಳು, ಅಕ್ರಮ ಸುಲಿಗೆಗಳ ಮೇಲೆ ಆಧಾರಿತವಾಗಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ ಎಂದು ಟ್ವೀಟಿಸಿದ್ದಾರೆ.

ಇದನ್ನೂ ನೋಡಿ: ಮೂರು ಜನ ವಿಕಲಚೇತನ ಮಕ್ಕಳು, ಮಕ್ಕಳ ಆರೈಕೆಗಾಗಿ ಕೆಲಸಕ್ಕೂ ಹೋಗದ ಪೋಷಕರು | ಬದುಕು ಬೀದಿಗೆ

 

Donate Janashakthi Media

Leave a Reply

Your email address will not be published. Required fields are marked *