ವಿಬಿ-ಜಿ ರಾಮ್ ಜಿ ಭಾರತದಲ್ಲಿ ಕಡು ಬಡವರಾಗಿರುವ ಗ್ರಾಮೀಣ ಬಡವರ ಮೇಲೆ ನೆಡೆಸಿದ ದಾಳಿ ಮಾತ್ರವಲ್ಲ; ಇದು ಭಾರತದ ಸಂವಿಧಾನದ ಮೇಲಿನ ಒಂದು ಬೃಹತ್ ಬಹುಮುಖೀ ದಾಳಿಯೂ ಹೌದು. ಹಕ್ಕುಗಳ ಈ ರದ್ದತಿಯು ಗ್ರಾಮೀಣ ಬಡವರನ್ನು ಒಂದು ಸ್ವತಂತ್ರ ದೇಶದ ಹೆಮ್ಮೆಯ ನಾಗರಿಕರ ಸ್ಥಾನ-ಮಾನದಿಂದ ಒಂದು ಹತಾಶ ಭಿಕ್ಷುಕರ ಗುಂಪಿಗೆ ಇಳಿಸುತ್ತದೆ. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಫ್ಯಾಸಿಸ್ಟ್ ತೆರನ ಸರ್ವಾಧಿಕಾರದತ್ತ ಹೊರಳಿಸುವ ಪರಿವರ್ತನೆಯನ್ನು ಸುಗಮಗೊಳಿಸುವ ಸಲುವಾಗಿ ಒಂದು ಅಸಾಮಾನ್ಯ ಯೋಜನೆಯಾಗಿದ್ದ ಮತ್ತು ಇಡೀ ವಿಶ್ವದಲ್ಲೇಅತಿ ದೊಡ್ಡ ಉದ್ಯೋಗ ಕಾರ್ಯಕ್ರಮವಾಗಿದ್ದ ಮನರೇಗವನ್ನು ಧ್ವಂಸಗೊಳಿಸುವುದು ಒಂದು ದೊಡ್ಡ ಹೆಜ್ಜೆಯಾಗಿದೆ.
– ಪ್ರೊ. ಪ್ರಭಾತ್ ಪಟ್ನಾಯಕ್
– ಅನು: ಕೆ.ಎಂ.ನಾಗರಾಜ್
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು(ಮನರೇಗ) ಬರುವ ಮೊದಲು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಉದ್ಯೋಗ ಯೋಜನೆಗಳಿದ್ದವು. ಆದರೆ ಅವುಗಳ ವ್ಯಾಪ್ತಿ ಸೀಮಿತವಾಗಿತ್ತು ಮತ್ತು ಅವಕ್ಕೆ ಹಣಕಾಸು ಸಂಪನ್ಮೂಲಗಳ ಲಭ್ಯತೆಯ ಮೇಲೆ ಮಿತಿಗಳಿದ್ದವು. ಆದರೆ, 2005ರಲ್ಲಿ ಜಾರಿಗೆ ತಂದ ಮನರೇಗ ಒಂದು ಏಕರೂಪದ, ರಾಷ್ಟ್ರವ್ಯಾಪಿಯಾದ, ಬೇಡಿಕೆ-ಚಾಲಿತವಾದ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ನೆರವಿನಿಂದ ಜಾರಿ ಮಾಡಲಾದ ಒಂದು ಯೋಜನೆಯಾಗಿತ್ತು. ಪ್ರತಿ ಗ್ರಾಮೀಣ ಕುಟುಂಬದ ಒಬ್ಬ ವ್ಯಕ್ತಿಗೆ ಬೇಡಿಕೆಯ ಮೇರೆಗೆ ನೂರು ದಿನಗಳ ಉದ್ಯೋಗವನ್ನು ಒದಗಿಸುವ ಮತ್ತು ಒಂದು ವೇಳೆ ಒದಗಿಸದಿದ್ದರೆ ಉದ್ಯೋಗ ಕೇಳಿದ ವ್ಯಕ್ತಿಗೆ ಪರಿಹಾರ ನೀಡುವ ಅವಕಾಶವನ್ನು ಈ ಯೋಜನೆಯಡಿಯಲ್ಲಿ ಕಲ್ಪಿಸಲಾಗಿತ್ತು.
ಈ ಬೇಡಿಕೆ-ಚಾಲಿತ ಯೋಜನೆಯು ಜನರಿಗೆ ಒಂದು ಹಕ್ಕನ್ನು ನೀಡುತ್ತದೆ. ಆದ್ದರಿಂದ ಈ ಉದ್ಯೋಗ ಖಾತ್ರಿ ಯೋಜನೆಯು ಉದ್ಯೋಗದ ಒಂದು ಹಕ್ಕನ್ನು ಪರಿಚಯಿಸಿತು. ಭಾರತದ ಸಂವಿಧಾನವು ಉದ್ಯೋಗದ ಹಕ್ಕನ್ನು ಒಳಗೊಂಡಂತೆ ಆರ್ಥಿಕ ಹಕ್ಕುಗಳನ್ನು ಮೂಲಭೂತ ಹಕ್ಕುಗಳ ಜೊತೆಯಲ್ಲಿ ಇಡದೆ, ಪ್ರಭುತ್ವ ನೀತಿ ನಿರ್ದೇಶನ ತತ್ವಗಳ ಜೊತೆಯಲ್ಲಿ ಇರಿಸಿದೆ. ಈ ಲೋಪವನ್ನು ಭಾಗಶಃವಾಗಿಯಾದರೂ ಸರಿಪಡಿಸುವ ಮತ್ತು ಸಾಕಾರಗೊಳಿಸುವ ಪ್ರಯತ್ನವನ್ನು ಈ ಉದ್ಯೋಗ ಖಾತ್ರಿ ಯೋಜನೆ ಪ್ರತಿನಿಧಿಸಿತ್ತು.
ಇದನ್ನೂ ಓದಿ: ತೋರಣಗಲ್ಲು | ದಿನಗೂಲಿ ಕೆಲಸಗಾಗರರ ಹಾಗೂ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ರೈಲು ಸಮಯ ಹೆಚ್ಚಿಸಿ
ಧ್ವನಿಮತದಿಂದ ಹಕ್ಕು ಕಸಿದುಕೊಳ್ಳುವ ಹೊಸ ಚಾಳಿ
ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭಿಸುವ ಮೊದಲು ಆ ಕುರಿತ ಶಾಸನದ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ತಿಂಗಳುಗಳ ಕಾಲ ಚರ್ಚೆ ನಡೆದಿತ್ತು. ಒಂದು ಸಂಸದೀಯ ಸಮಿತಿಯು ಈ ಸಂಬಂಧವಾಗಿ ಹಲವಾರು ವ್ಯಕ್ತಿಗಳಿಂದ ಮತ್ತು ಸಂಸ್ಥೆಗಳಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅವುಗಳ ಮೇಲೆ ಚರ್ಚೆ ನೆಡೆಸಿತು. ಅಂತಿಮವಾಗಿ, ಅದರ ವಿಧಿ ವಿಧಾನಗಳ ಬಗ್ಗೆ ಒಂದು ಒಮ್ಮತ ಏರ್ಪಟ್ಟಾಗ ಅದನ್ನು ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ರೀತಿಯಲ್ಲಿ ರಾಷ್ಟ್ರದ ಇಚ್ಛಾಶಕ್ತಿಯನ್ನು ಮತ್ತು ಸಂವಿಧಾನವು ಕಲ್ಪಿಸಿಕೊಂಡಿದ್ದ ಒಂದು ಹಕ್ಕನ್ನು ಸಾಕಾರಗೊಳಿಸಲಾಯಿತು. ಆ ಹಕ್ಕನ್ನು ರದ್ದುಗೊಳಿಸುವುದು ಸಂವಿಧಾನವನ್ನು ಅಕ್ಷರಷಃ ಅಲ್ಲದಿದ್ದರೂ, ಖಂಡಿತವಾಗಿಯೂ ಅದರ ಚೇತನವನ್ನು ಸಮಾಧಿ ಮಾಡುವ ಕ್ರಮವಾಗುತ್ತದೆ.

ಆದರೂ ಎನ್‌ಡಿಎ ಸರ್ಕಾರ ಇದನ್ನೇ ಮಾಡಿದೆ. ಸಂಸತ್ತಿನಲ್ಲಿ ಕೇವಲ ಒಂದು ನಿರ್ಣಯವನ್ನು ಧ್ವನಿ ಮತದಿಂದ ಅಂಗೀಕರಿಸುವ ಮೂಲಕ ಅದು ಜನರ ಒಂದು ಹಕ್ಕನ್ನು ಕಸಿದುಕೊಂಡಿದೆ. ಜನರು ಅನುಭೋಗಿಸಬೇಕೆಂದು ಇಡೀ ರಾಷ್ಟ್ರವು ಬಯಸಿದ್ದ ಮತ್ತು ಸಾಂವಿಧಾನಿಕವಾಗಿ ಅನುಮೋದಿಸಲಾದ ಈ ಹಕ್ಕನ್ನು ಕೇವಲ ಧ್ವನಿ ಮತದ ಮೂಲಕ ಸಂಸತ್ತಿನಲ್ಲಿ ರದ್ದುಗೊಳಿಸಲಾಗಿದೆ. ಇದು ಒಂದು ಘೋರ ಕೃತ್ಯವೇ ಸರಿ. ತಾನು ಏನು ಮಾಡುತ್ತಿದ್ದೇನೆಯೋ ಅದು ಸಂಪೂರ್ಣವಾಗಿ ಅನುಚಿತವಾಗಿದೆ ಎಂಬುದನ್ನು ಅರಿತುಕೊಂಡಿದೆ ಎಂಬಂತೆ, ಸರ್ಕಾರವು ಭಾರಿ ಗುಟ್ಟಿನಲ್ಲಿ ತರಾತುರಿಯಿಂದ ಇದನ್ನುಮಾಡಿದೆ.
ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾಯಿಸುವ ಪ್ರಸ್ತಾವಿತ ಮಸೂದೆಯನ್ನು ಡಿಸೆಂಬರ್ 15ರಂದು ಮಂಡಿಸಲಾಯಿತು. 17ರ ರಾತ್ರಿ ಚರ್ಚೆ ನೆಡೆಸಲಾಯಿತು ಮತ್ತು ಗ್ರಾಮೀಣಾಭಿವೃದ್ಧಿ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಲಿಖಿತ ಮನವಿಗೂ ಲಕ್ಷ್ಯಗೊಡದೆ ಮತ್ತು ಮಸೂದೆಗೆ ಯಾವುದೇ ತಿದ್ದುಪಡಿಗಳನ್ನು ಮಂಡಿಸಲು ಅನುಮತಿ ನೀಡದೇ, ಡಿಸೆಂಬರ್ 18ರಂದು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಈ ಕ್ರಮವು, ರಾಷ್ಟ್ರದ ಆಶಯಗಳಿಗೆ ಅನುಗುಣವಾಗಿ ಮತ್ತು ಸಂವಿಧಾನದ ವಿಧಿ ವಿಧಾನಗಳಿಗೆ ಅನುಗುಣವಾಗಿ ಜನರಿಗೆ ಕಲ್ಪಿಸಿಕೊಟ್ಟ ಯಾವುದೇ ಹಕ್ಕನ್ನು ಕೇವಲ ಧ್ವನಿ ಮತದ ಮೂಲಕ ಯಾವುದೇ ಕ್ಷಣದಲ್ಲಿ ಸಂಸತ್ತಿನಲ್ಲಿ ಕಸಿದುಕೊಳ್ಳಬಹುದು ಎಂಬ ಒಂದು ವಿಸ್ಮಯಗೊಳಿಸುವ ಮತ್ತು ಒಂದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ಪೂರ್ವನಿದರ್ಶನವನ್ನು ಪರಿಚಯಿಸುತ್ತದೆ.
ಗೊಂದಲ ಹರಡಿಸುವ ಎಂದಿನ ಪ್ರಯತ್ನ
ಹೊಸ ಮಸೂದೆಯು ಒಳಗೊಂಡಿರುವ ವಿಷಯಗಳ ಬಗ್ಗೆ ಸರ್ಕಾರವು ಎಂದಿನಂತೆ ಗೊಂದಲ ಹರಡಿಸುವ ಶತಪ್ರಯತ್ನ ನಡೆಸಿದೆ. ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗರಿಷ್ಠ 100 ದಿನಗಳ ಉದ್ಯೋಗದ ಬದಲಿಗೆ, ಈಗ 125 ದಿನಗಳ ಅವಕಾಶ ಇರುವುದರಿಂದ ಹೊಸ ಯೋಜನೆ ಶ್ರೇಷ್ಠವಾಗಿದೆ ಎಂದು ಹರಡಿಸುತ್ತಿದೆ. ಆದರೆ, ಹೊಸ ಕಾಯ್ದೆ ಹೇಳುತ್ತಿರುವುದು ಉದ್ಯೋಗ ಖಾತ್ರಿ ಯೋಜನೆಯ ಗರಿಷ್ಠ 100 ದಿನಗಳ ಜೊತೆಗೆ 25 ದಿನಗಳ ಅಧಿಕ ಉದ್ಯೋಗವನ್ನು ಕೊಡಲಾಗುವುದು ಎಂದೇನೂ ಅಲ್ಲ ಎಂಬುದನ್ನು ಅದು ಮರೆ ಮಾಚುತ್ತಿದೆ. ಏಕೆಂದರೆ ಈ ಹೊಸ ಕಾಯ್ದೆ ಮನರೇಗವನ್ನೇ ಇಲ್ಲದಂತೆ ಮಾಡುವ ಮೂಲಕ ಉದ್ಯೋಗ ಕೇಳುವವರಿಗೆ ಅದನ್ನು ಸರಕಾರ ಕೊಡಬೇಕಾಗಿಲ್ಲ ಎಂದೇ ಬದಲಿಸಿದೆ. ಹೊಸ ಕಾಯ್ದೆಯು, ಬೇಡಿಕೆ-ಚಾಲಿತ ಯೋಜನೆಯಾಗಿದ್ದರಿಂದಾಗಿ ಹಕ್ಕು-ಆಧಾರಿತ ಯೋಜನೆಯ ಬದಲಿಗೆ ಈಗ ಉದ್ಯೋಗ ನೀಡಿಕೆ ಕೇಂದ್ರ ಸರ್ಕಾರದ ಮರ್ಜಿಯ ಮೇಲೆ ನಿಂತಿದೆ. ಇದನ್ನು ಹಲವು ರೀತಿಯಲ್ಲಿ ಮಾಡಲಾಗುತ್ತದೆ.
ಮೊದಲನೆಯದು, ಇನ್ನು ಮುಂದೆ ಉದ್ಯೋಗ ಒದಗಿಸುವುದು ಭಾರತದ ಸಮಸ್ತ ಗ್ರಾಮೀಣ ಪ್ರದೇಶದಲ್ಲಿ ಅಲ್ಲ, ಬದಲಾಗಿ, ಕೇಂದ್ರ ಸರ್ಕಾರವು ಗೊತ್ತುಪಡಿಸಿದ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಇರುತ್ತದೆ. ಆದ್ದರಿಂದ, ಹಳ್ಳಿಯ ಪ್ರತಿ ಕುಟುಂಬವೂ 100 ದಿನಗಳ (125 ದಿನಗಳ ಮಾತಿರಲಿ) ಉದ್ಯೋಗಕ್ಕೆ ಅರ್ಹರು ಎಂಬುದೇ ಇರುವುದಿಲ್ಲ. ಎರಡನೆಯದು, ಯಾವುದೇ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಎಷ್ಟು ಬೇಡಿಕೆಯಿದೆ ಎಂಬುದನ್ನು ಲೆಕ್ಕಿಸದೆ, ರಾಜ್ಯಗಳಿಗೆ ಎಷ್ಟು ಹಣ ಕೊಡಬಹುದು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಮೂರನೆಯದು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೇಂದ್ರವು ಶೇ. 90ರಷ್ಟು ಹಣವನ್ನು ಒದಗಿಸುತ್ತಿತ್ತು. ಈಗ, ಕೇಂದ್ರವು ಶೇ. 60ರಷ್ಟನ್ನು ಒದಗಿಸುತ್ತದೆ, ಮತ್ತು ಉಳಿದ ಶೇ. 40ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಹೊಂದಿಸಿಕೊಳ್ಳಬೇಕಾಗುತ್ತದೆ.
ಆದ್ದರಿಂದ, ಕೇಂದ್ರ ಸರ್ಕಾರದಿಂದ ಈಗ 60 ರೂ.ಗಳನ್ನು ಪಡೆಯಲು ಒಂದು ರಾಜ್ಯವು 40 ರೂ.ಗಳನ್ನು ಈ ಯೋಜನೆಗಾಗಿ ಖರ್ಚುಮಾಡಬೇಕಾಗುತ್ತದೆ. ಆದರೆ, ಎಲ್ಲ ರಾಜ್ಯಗಳೂ ಆರ್ಥಿಕವಾಗಿ ಒತ್ತಡದಲ್ಲಿ ಸಿಲುಕಿರುವುದರಿಂದ, ಒಂದು ರಾಜ್ಯವು ಯೋಜನೆಯ ಪ್ರಕಾರ ಅಗತ್ಯವಿರುವ 40 ರೂ.ಗಳನ್ನಲ್ಲ, ಕೇವಲ 20 ರೂ.ಗಳನ್ನು ಮಾತ್ರ ಒದಗಿಸಿಕೊಳ್ಳುವುದು ಸಾಧ್ಯವಿದೆ ಎಂದಾದರೆ, ಆಗ ಆ ರಾಜ್ಯದಲ್ಲಿ ಕಾರ್ಯಕ್ರಮದ ಒಟ್ಟು ಗಾತ್ರವು 100 ರೂ.ಆಗುವುದಿಲ್ಲ, ಅದು 50 ರೂ. ಮಾತ್ರ ಆಗಿರುತ್ತದೆ. ಏಕೆಂದರೆ ಕೇಂದ್ರ ಸರಕಾರ ಆಗ ಕೊಡುವುದು 30ರೂ. ಮಾತ್ರ ಇದು ಕಾರ್ಯಕ್ರಮವನ್ನು ನಿರ್ವೀರ್ಯಗೊಳಿಸುವುದು ಮಾತ್ರವಲ್ಲದೆ, ರಾಜ್ಯ ಸರ್ಕಾರವನ್ನು ಬಲಿಪಶು ಮಾಡಿ ತಾನು ತಪ್ಪಿಸಿಕೊಳ್ಳುವ ಅವಕಾಶವನ್ನು ಕೇಂದ್ರಕ್ಕೆ ಒದಗಿಸುತ್ತದೆ. ಏಕೆಂದರೆ, ಜನರ ಬೇಡಿಕೆಗೆ ತಕ್ಕನಾಗಿ ಉದ್ಯೋಗ ಒದಗಿಸಲಾಗದಿದ್ದರೆ, ರಾಜ್ಯ ಸರ್ಕಾರವೇ ಅದಕ್ಕೆ ಕಾರಣ ಎಂದು ಕೇಂದ್ರ ಸರ್ಕಾರ ಹೇಳುತ್ತದೆ.
ಹಾಗಾಗಿ, ಉದ್ಯೋಗ ದಿನಗಳನ್ನು ಗರಿಷ್ಠ 125 ದಿನಗಳಿಗೆ ಏರಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಏಕೆಂದರೆ, ಹೊಸ ಉದ್ಯೋಗ ಯೋಜನೆಯು ಬೇಡಿಕೆ-ಚಾಲಿತವಲ್ಲ; ಇದು ಪೂರೈಕೆ-ಚಾಲಿತವಾಗಿದೆ ಮತ್ತು ಈ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜನರಿಗೆ ಕಲ್ಪಿಸಿಕೊಡಲಾದ ಹಕ್ಕನ್ನು ರದ್ದುಪಡಿಸುತ್ತದೆ.
ಊಳಿಗದಾಳುಗಳಾಗಿ ರಾಜ್ಯಗಳು
ಭಾರತದ ಸಂವಿಧಾನದ ಮೇಲೆ ಎನ್‌ಡಿಎ ಸರ್ಕಾರ ನೆಡೆಸಿದ ಈ ದಾಳಿಯು ಕೇವಲ ಒಂದು ಹಕ್ಕಿನ ರದ್ದತಿಯ ಪ್ರಶ್ನೆಗೆ ಮಾತ್ರ ಸೀಮಿತವಾಗಿಲ್ಲ. ಇದು ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ನೆಡೆಸಿದ ದಾಳಿಯೂ ಹೌದು. ರಾಜ್ಯ ಸರ್ಕಾರಗಳ ಶೋಚನೀಯ ಹಣಕಾಸು ಪರಿಸ್ಥಿತಿಗಳ ಬಗ್ಗೆ ಅರಿವಿದ್ದರೂ, ರಾಜ್ಯಗಳೊಂದಿಗೆ ಸಮಾಲೋಚನೆ ನೆಡೆಸದೆ, ಕೇಂದ್ರವು ಏಕಪಕ್ಷೀಯವಾಗಿ ಮತ್ತು ಅನಿರೀಕ್ಷಿತವಾಗಿ, ಉದ್ಯೋಗ ಯೋಜನೆಗೆ ರಾಜ್ಯಗಳ ಕೊಡುಗೆಯ ಪಾಲನ್ನು ಪ್ರಸ್ತುತ ಶೇ. 10ರಿಂದ ಶೇ. 40ಕ್ಕೆ ಏರಿಸಿದೆ. ಅಷ್ಟು ಮಾತ್ರವೇ ಅಲ್ಲ.
ಪ್ರತಿ ರಾಜ್ಯದ ಒಟ್ಟು ಖರ್ಚಿನ ಗಾತ್ರವನ್ನು ಕೇಂದ್ರವೇ ನಿರ್ಧರಿಸುತ್ತದೆ. ರಾಜ್ಯದ ಯಾವ ಪ್ರದೇಶಗಳಿಗೆ ಈ ವೆಚ್ಚವನ್ನು ಮಾಡಬೇಕೆಂಬುದನ್ನು ಕೇಂದ್ರವೇ ನಿರ್ಧರಿಸುತ್ತದೆ. ಯಾವ ಉದ್ಯೋಗ ಯೋಜನೆಗಳಿಗೆ ಈ ವೆಚ್ಚವನ್ನು ಮಾಡಬೇಕೆಂಬುದನ್ನೂ ಕೇಂದ್ರವೇ ನಿರ್ಧರಿಸುತ್ತದೆ. ಮತ್ತು, ಒಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವು ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ಖರ್ಚು ಮಾಡ ಬಯಸಿದರೆ, ಅದನ್ನೂ ಸಹ ಕೇಂದ್ರ ಸರ್ಕಾರವು ನಿರ್ಧರಿಸಿದ ಮಾನದಂಡಗಳಿಗೆ ಅನುಸಾರವಾಗಿ ಮಾತ್ರವೇ ಮಾಡಬೇಕಾಗುತ್ತದೆ.
ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜ್ಯಗಳು ತಮ್ಮ ಖರ್ಚು ವೆಚ್ಚಗಳನ್ನು ಹೆಚ್ಚಿನ ಮಟ್ಟದಲ್ಲಿ ಕೈಗೊಳ್ಳುವಂತೆ ಇದ್ದಕ್ಕಿದ್ದಂತೆಯೇ ಹೇಳಲಾಗಿದೆ. ಆದರೆ. ಅವರು ಎಲ್ಲಿ ಮತ್ತು ಹೇಗೆ ಖರ್ಚು ಮಾಡಬಹುದು ಎಂಬುದರ ಕುರಿತು ಎಲ್ಲವನ್ನೂ ಕೇಂದ್ರ ಸರ್ಕಾರವೇ ನಿರ್ಧರಿಸುತ್ತದೆ. ಇದು ರಾಜ್ಯ ಸರ್ಕಾರಗಳನ್ನು ಕೇಂದ್ರ ಸರ್ಕಾದ ಅಧೀನದಲ್ಲಿರುವ ಊಳಿಗದಾಳುಗಳಂತೆ ಪರಿಗಣಿಸುವುದಕ್ಕೆ ಸಮನಾಗುತ್ತದೆ. ಇದು ಸಂವಿಧಾನದಲ್ಲಿ ಕಲ್ಪಿಸಲಾದ ಒಕ್ಕೂಟ ವ್ಯವಸ್ಥೆಯ ವಿಡಂಬನೆಯಾಗುತ್ತದೆ.
ಇದನ್ನೂ ನೋಡಿ: ಬಿಗ್ ಡಿಬೇಟ್ : ಕೋಗಿಲು ಪ್ರಕರಣ | ವಾಸವಿದ್ದವರು ಯಾರು? ಹೊರ ರಾಜ್ಯದವರೇ? ಹೊರ ದೇಶದವರೇ?Janashakthi Media
ಇಲ್ಲಿ ರಾಜ್ಯ ಸರ್ಕಾರಗಳು ಮಾತ್ರ ತುಳಿತಕ್ಕೊಳಗಾಗುತ್ತಿಲ್ಲ. ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು ನಿರ್ವಹಿಸುತ್ತಿದ್ದ ಪಾತ್ರವನ್ನು ಕೈಬಿಡಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗಗಳನ್ನು ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳು ಆಯೋಜಿಸುತ್ತಿದ್ದವು. ಈ ಕಾರ್ಯವನ್ನು ಈಗ ಕೇಂದ್ರ ಸರ್ಕಾರವೇ ವಹಿಸಿಕೊಂಡಿದೆ. ಇದು 73ನೇ ಸಂವಿಧಾನ ತಿದ್ದುಪಡಿಯಲ್ಲಿ ಪ್ರತಿಷ್ಠಾಪಿಸಲಾದ ಪ್ರಜಾಸತ್ತಾತ್ಮಕ ಅಧಿಕಾರ ವಿಕೇಂದ್ರೀಕರಣದ ಸಾಂವಿಧಾನಿಕ ಪರಿಕಲ್ಪನೆಯ ಮೇಲೆ ನಡೆದ ಮತ್ತೊಂದು ದಾಳಿಯಾಗಿದೆ.
ಆದ್ದರಿಂದ ವಿಬಿ-ಜಿ ರಾಮ್ ಜಿ ಭಾರತದಲ್ಲಿ ಕಡು ಬಡವರಾಗಿರುವ ಗ್ರಾಮೀಣ ಬಡವರ ಮೇಲೆ ನೆಡೆಸಿದ ದಾಳಿ ಮಾತ್ರವಲ್ಲ; ಇದು ಭಾರತದಸಂವಿಧಾನದ ಮೇಲಿನ ಒಂದು ಬೃಹತ್ ಬಹುಮುಖೀ ದಾಳಿಯೂ ಹೌದು. ಬಡವರ ಮೇಲಿನ ದಾಳಿಯನ್ನು ಸುಲಭವಾಗಿ ಗ್ರಹಿಸಬಹುದು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಲಕ್ಷೋಪಲಕ್ಷ ಗ್ರಾಮೀಣ ಬಡವರನ್ನು ಬದುಕಿಸುತ್ತಿರುವ ಜೀವನಾಡಿಯಾಗಿದೆ ಎಂಬುದು ಕೋವಿಡ್ ಸಮಯದಲ್ಲಿ ಸ್ಪಷ್ಟವಾಗಿ ತಿಳಿದುಬಂದಿತ್ತು. ಲಾಕ್‌ಡೌನ್‌ನಿಂದ ಸ್ಥಳಾಂತರಗೊಂಡ ಲಕ್ಷಾಂತರ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳಿದರು ಮತ್ತು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅವರು ಅನುಭವಿಸಿದ ಹಕ್ಕುಗಳಿಂದಾಗಿ ಅಲ್ಲಿ ಬದುಕುಳಿಯುವಲ್ಲಿ ಯಶಸ್ವಿಯಾದರು. ಅದು ಅವರಿಗೆ ಉದ್ಯೋಗವನ್ನು ಖಚಿತಪಡಿಸಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಧ್ವಂಸದ ಮೂಲಕ ಬಡವರ ಜೀವನದ ಮೇಲೆ ನೆಡೆಸುವ ದಾಳಿಯು ಏಕಕಾಲದಲ್ಲಿ ಅವರ ಹಕ್ಕುಗಳ ಮೇಲಿನ ದಾಳಿಯ ರೂಪವನ್ನು ಪಡೆಯುತ್ತದೆ ಮತ್ತು ಒಟ್ಟಾರೆಯಾಗಿ, ಸಂವಿಧಾನದ ಮೇಲಿನ ದಾಳಿಯ ರೂಪವನ್ನೂ ಪಡೆಯುತ್ತದೆ.
‘ನಾಯಕ’ನಿಗೆಋಣಿ!
ಹಕ್ಕುಗಳ ಈ ರದ್ದತಿಯು ಗ್ರಾಮೀಣ ಬಡವರನ್ನು ಒಂದು ಸ್ವತಂತ್ರ ದೇಶದ ಹೆಮ್ಮೆಯ ನಾಗರಿಕರ ಸ್ಥಾನ-ಮಾನದಿಂದ ಒಂದು ಹತಾಶ ಭಿಕ್ಷುಕ ಗುಂಪಿಗೆ ಇಳಿಸುತ್ತದೆ. ಅವರ ಜೀವನ ಪರಿಸ್ಥಿತಿಗಳು ಹದಗೆಡುತ್ತಿದ್ದಂತೆಯೇ, ಕೇಂದ್ರ ಸರ್ಕಾರವು ನಿಸ್ಸಂದೇಹವಾಗಿ ನರೇಂದ್ರ ಮೋದಿಯವರ ಫೋಟೋದೊಂದಿಗೆ ಒಂದಿಷ್ಟು ಉದಾರ ದಾನವನ್ನು ಧಾರಾಳವಾಗಿ ನೀಡಲು ಮುಂದೆ ಬರುತ್ತದೆ. ಇದು ಅವರ ಪರಿಸ್ಥಿತಿಯನ್ನೇನೂ ಮೊದಲಿಗಿಂತಲೂ ಉತ್ತಮಗೊಳಿಸುವುದಿಲ್ಲ. ಆದರೆ, ಅವರು ಪಡೆಯುವ ರೊಟ್ಟಿತುಣುಕುಗಳಿಗೆ ಅವರು ಮೋದಿಯವರಿಗೆ ಸದಾ ಋಣಿಯಾಗಿರಬೇಕಾಗುತ್ತದೆ. ಒಬ್ಬ “ನಾಯಕ”ನ ಆರಾಧನೆಯನ್ನೇ ಸದಾ ಉತ್ತೇಜಿಸುವ ಎಲ್ಲ ಫ್ಯಾಸಿಸ್ಟ್ ಗುಂಪುಗಳೂ ದುಡಿಯುವ ಬಡವರನ್ನು ಹೆಮ್ಮೆಯ ನಾಗರಿಕ ಸ್ಥಾನ-ಮಾನದಿಂದ ಭಿಕ್ಷುಕರ ಸ್ಥಾನಕ್ಕೆ ಇಳಿಸುವುದನ್ನು ಒಂದು ಅಂತಿಮ ಗುರಿಯಾಗಿ ಹೊಂದಿರುತ್ತವೆ.
ಈ ಪ್ರಕ್ರಿಯೆಯ ಒಂದು ಅವಿಭಾಜ್ಯ ಅಂಗವಾಗಿಯೇ ಸಂವಿಧಾನದ ಮೇಲೆ ಈ ದಾಳಿ ನೆಡೆದಿರುವುದು. ವಸಾಹತುಶಾಹಿ ವಿರೋಧಿ ಹೋರಾಟದ ಫಲವಾಗಿ ರಚನೆಯಾದ ಭಾರತದ ಸಂವಿಧಾನವು ಭಾರತದ ಜನತೆಯನ್ನು ಒಳಗೊಂಡ “ರಾಷ್ಟ್ರ”ವನ್ನು ತನ್ನ ಆರಂಭಿಕ ಅಂಶವಾಗಿ ತೆಗೆದುಕೊಂಡಿದೆ. ಈ ಸಂವಿಧಾನದ ಅಡಿಯಲ್ಲಿ ರಚನೆಯಾಗುವ ಯಾವುದೇ ಸರ್ಕಾರವು ಈ “ರಾಷ್ಟ್ರ”ಕ್ಕೆ ಸೇವೆ ಸಲ್ಲಿಸಬೇಕಾಗುತ್ತದೆ. ಆದರೂ, ಫ್ಯಾಸಿಸ್ಟ್ ಗುಂಪುಗಳು ಈ ಇಡೀ ಸಂಬಂಧವನ್ನು ತಲೆಕೆಳಗು ಮಾಡುತ್ತವೆ: “ರಾಷ್ಟ್ರ”ವನ್ನು “ನಾಯಕ”ನೊಂದಿಗೆ ಗುರುತಿಸಲಾಗುತ್ತದೆ ಮತ್ತು ಜನರು “ನಾಯಕ”ನಿಗೆ ಋಣಿಯಾಗಿರಬೇಕಾಗುತ್ತದೆ ಮತ್ತು ಅವನನ್ನು ಮತ್ತೆ ಮತ್ತೆ ಆಯ್ಕೆ ಮಾಡುವುದೂ ಸೇರಿದಂತೆ ಎಲ್ಲಾ ಸಂಭಾವ್ಯ ರೀತಿಯಲ್ಲೂ ಅವನಿಗೆ ಸೇವೆ ಸಲ್ಲಿಸಬೇಕಾಗುತ್ತದೆ.
ಜನರ ಹಕ್ಕುಗಳ ರದ್ದತಿ, ಚೂರು ಪಾರು ಕೊಡುಗೆಗಳಿಗೆ “ನಾಯಕ”ನಿಗೆ ಸದಾ ಋಣಿಯಾಗಬೇಕಿರುವ ಜನರನ್ನು ಭಿಕ್ಷುಕ ಮಟ್ಟಕ್ಕೆ ಇಳಿಸುವುದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಫ್ಯಾಸಿಸ್ಟ್ ತೆರನ ಸರ್ವಾಧಿಕಾರದತ್ತ ಹೊರಳಿಸುವ ಪರಿವರ್ತನೆಯನ್ನು ಸುಗಮಗೊಳಿಸುವ ಸಲುವಾಗಿ ಒಂದು ಸಾಂವಿಧಾನಿಕ ವ್ಯವಸ್ಥೆಯನ್ನು ಹಾಳುಗೆಡುವುದು, ಹೀಗೆ ಇವೆಲ್ಲವೂ ಒಂದು ಸಮಗ್ರ ಪ್ರಕ್ರಿಯೆಯ ಅವಿಭಾಜ್ಯ ಅಂಶವಾಗುತ್ತವೆ. ಈ ಪರಿವರ್ತನೆಯನ್ನು ಜಾರಿಗೆ ತರುವಲ್ಲಿ ಒಂದು ಅಸಾಮಾನ್ಯ ಯೋಜನೆಯಾಗಿದ್ದ ಮತ್ತು ಇಡೀ ವಿಶ್ವದ ಅತಿ ದೊಡ್ಡ ಉದ್ಯೋಗ ಕಾರ್ಯಕ್ರಮವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಧ್ವಂಸಗೊಳಿಸುವುದು ಒಂದು ದೊಡ್ಡ ಹೆಜ್ಜೆಯಾಗಿದೆ.

“ವಿಕಸಿತಭಾರತ” ಬರುತ್ತಿದೆ,
ದಾರಿಬಿಡಿ!
ವ್ಯಂಗ್ಯಚಿತ್ರಕೃಪೆ: ಸಜಿತ್ ಕುಮಾರ್,
ಡೆಕ್ಕನ್ ಹೆರಾಲ್ಡ್
