ನವದೆಹಲಿ: ಬಾಬರಿ ಮಸೀದಿ ಧ್ವಂಸ ಮಾಡಿ ಅಯೋಧ್ಯೆಯಲ್ಲಿ ಕಟ್ಟಲಾಗಿರುವ ರಾಮ ಮಂದಿರ ಎಂಬ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಹ್ವಾನವನ್ನು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮಂಗಳವಾರ ತಿರಸ್ಕರಿಸಿದ್ದಾರೆ. ಧಾರ್ಮಿಕ ಸಮಾರಂಭವನ್ನು ರಾಜಕೀಯ ಲಾಭಕ್ಕಾಗಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನಾಗಿ ಪರಿವರ್ತಿಸುತ್ತಿರುವ ಆಡಳಿತಾರೂಢ ಬಿಜೆಪಿಯನ್ನು ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಕಟ್ಟಲಾಗಿರುವ ಕಟ್ಟಡದ ಉದ್ಘಾಟನೆಯಾಗಲಿದೆ. ಉದ್ಘಾಟನೆಗೆ ಪೂರ್ವಭಾವಿಯಾಗಿ ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಮಹಿಳೆಯರ ಅವಹೇಳನ | ಹೋರಾಟಗಾರ್ತಿ ನಜ್ಮಾ ನಜೀರ್ ದೂರು; ಕಲ್ಲಡ್ಕ ಭಟ್ ವಿರುದ್ಧ ಎಫ್‌ಐಆರ್
ಪ್ರಧಾನ ಮಂತ್ರಿ, ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಇತರ ಸರ್ಕಾರಿ ವ್ಯಕ್ತಿಗಳನ್ನು ಈ ಕಾರ್ಯಕ್ರಮದಲ್ಲಿ ನೇರವಾಗಿ ಒಳಗೊಳಿಸಿ ಬಿಜೆಪಿ ಮತ್ತು ಆರೆಸ್ಸೆಸ್ ಇದನ್ನು ಒಂದು ಪ್ರಭುತ್ವ- ಪ್ರಾಯೋಜಿತ ಕಾರ್ಯಕ್ರಮವನ್ನಾಗಿ ಪರಿವರ್ತಿಸಿರುವುದು ಅತ್ಯಂತ ದುರದೃಷ್ಟಕರ ಎಂದಿರುವ ಪೊಲಿಟ್ ಬ್ಯುರೊ, ಸಂವಿಧಾನದ ಅಡಿಯಲ್ಲಿ ಭಾರತದಲ್ಲಿನ ಪ್ರಭುತ್ವವು ಯಾವುದೇ ಮತೀಯ ಸಂಬದ್ಧತೆಯನ್ನು ಹೊಂದಿರಬಾರದು ಎಂಬುದು ದೇಶ ಸರ್ವೋಚ್ಚ ನ್ಯಾಯಾಲಯ ಪುನರುಚ್ಚರಿಸಿರುವ ಭಾರತದಲ್ಲಿನ ಆಳ್ವಿಕೆಯ ಒಂದು ಮೂಲಭೂತ ತತ್ವವಾಗಿದೆ ಎಂದು ನೆನಪಿಸುತ್ತ ಈ ಸಮಾರಂಭದ ಆಯೋಜನೆಯಲ್ಲಿ ಆಳುವ ಸರಕಾರ ಇದನ್ನು ಉಲ್ಲಂಘಿಸುತ್ತಿದೆ ಎಂದು ಯೆಚೂರಿ ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು ಬಾಬರಿ ಮಸೀದಿ ಇದ್ದ ಜಾಗದಲ್ಲಿ ನಿರ್ಮಿಸಲಾಗಿರುವ ಕಟ್ಟಡದ ಉದ್ಘಾಟನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೂ ಆಹ್ವಾನ ನೀಡಿತ್ತು. ಆದರೆ ಜನವರಿ 22 ರಂದು ಕಾಂಗ್ರೆಸ್ ಭಾಗವಹಿಸುವ ಬಗ್ಗೆ ತಿಳಿಯಲಿದೆ ಎಂದು ಕಾಂಗ್ರೆಸ್ ಹೇಳಿದೆ.
CPI(M) believes that religion is a personal choice not to be converted into an instrument for political gain. Therefore, we will not be attending the inauguration of the Ram temple in Ayodhya. pic.twitter.com/glF4gluMzi
— CPI (M) (@cpimspeak) December 26, 2023
ಸಿಪಿಐ-ಎಂ ಪಕ್ಷದ ಹಿರಿಯ ನಾಯಕಿ ಬೃಂದಾ ಕಾರಟ್ ಅವರು ತಮ್ಮ ಪಕ್ಷವು ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ ಆದರೆ, ಧರ್ಮದ ರಾಜಕೀಯೀಕರಣವನ್ನು ವಿರೋಧಿಸುತ್ತದೆ ಎಂದು ಹೇಳಿದ್ದಾರೆ. “ಅಯೋಧ್ಯೆಯ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ನಮ್ಮ ಪಕ್ಷ ಭಾಗವಹಿಸುವುದಿಲ್ಲ ಎಂದು ನಾವು ನಿರ್ಧರಿಸಿದ್ದೇವೆ. ನಾವು ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ, ಆದರೆ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯದೊಂದಿಗೆ ಹೆಣೆದುಕೊಂಡಿರುವುದು ಸ್ಪಷ್ಟವಾಗಿದೆ. ಈ ಧಾರ್ಮಿಕ ಸಮಾರಂಭವನ್ನು ರಾಜಕೀಯಗೊಳಿಸುವುದು ಸೂಕ್ತವಲ್ಲ” ಎಂದು ಅವರು ಹೇಳಿದ್ದಾಗಿ ಸುದ್ದಿ ಸಂಸ್ಥೆ ANI ವರದಿ ಹೇಳಿದೆ.
ಇದನ್ನೂ ಓದಿ:ಡಬ್ಲ್ಯುಎಫ್‌ಐ ಅಮಾನತು ಹಿಂಪಡೆಯುವಂತೆ ಕೋರಿ ಕ್ರೀಡಾ ಸಚಿವರನ್ನು ಭೇಟಿಯಾಗಲಿರುವ ಸಂಜಯ್ ಸಿಂಗ್!
2020 ರಲ್ಲಿ ಕೂಡಾ ಸೀತಾರಾಮ್ ಯೆಚೂರಿ ಅವರು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಒಡೆದು ಕಟ್ಟಲಾಗುತ್ತಿದ್ದ ರಾಮ ಮಂದಿರ ಕಟ್ಟಡದ ಶಂಕುಸ್ಥಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಪ್ರಧಾನಿಯ ಇಂತಹ ನಡೆಯು ಸಂವಿಧಾನದ ಮೂಲ ತತ್ವಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದ್ದರು.
ಬಾಬರಿ ಮಸೀದಿ ಒಡೆದು ಕಟ್ಟಲಾಗಿರುವ ಕಟ್ಟಡದ ಉಧ್ಘಾಟನೆಗೆ ಕಾಂಗ್ರೆಸ್ ಮಾತ್ರವಲ್ಲದೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ವಿಪಕ್ಷ ಇತರ ನಾಯಕರಿಗೂ ಆಹ್ವಾನ ನೀಡಲಾಗಿದೆ. ರಾಮಜನ್ಮಭೂಮಿ ಟ್ರಸ್ಟ್‌ನ ಆಹ್ವಾನಕ್ಕೆ ಕಾಂಗ್ರೆಸ್‌ನಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ, ಪಕ್ಷದ ಉನ್ನತ ನಾಯಕರು ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆಯೇ ಎಂಬುದನ್ನು ಪಕ್ಷವು ಖಚಿತವಾಗಿ ತಿಳಿಸಿಲ್ಲ.
ವಿಡಿಯೊ ನೋಡಿ: ಕಲ್ಲಡ್ಕ ಪ್ರಭಾಕರ್ ಭಟ್‌ನದ್ದು ಕೊಳಕು ಮನಸ್ಸು, ಭಯೋತ್ಪಾದಕ ಮನಸ್ಥಿತಿ – ಹೋರಾಟಗಾರರ ಆಕ್ರೋಶ Janashakthi Media