ಡಿಸೆಂಬರ್ 14ರಿಂದ 2024ರ ಮಾರ್ಚ್ 14ರವರೆಗೆ ಮೈ ಆಧಾರ್ ಪೋರ್ಟಲ್ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ದಾಖಲೆಗಳನ್ನು ಅಪ್ಡೇಟ್ ಮಾಡುವ ಗಡುವನ್ನು ವಿಸ್ತರಿಸಲಾಗಿದೆ. ಮೊದಲಿಗೆ ಸೆಪ್ಟೆಂಬರ್ 14ರವರೆಗೂ ಗಡುವು ಇತ್ತು. ಬಳಿಕ ಡಿಸೆಂಬರ್ 14ಕ್ಕೆ ಅದನ್ನು ಹೆಚ್ಚಿಸಲಾಗಿತ್ತು. ಈ ಗಡುವನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ. ಜನರು ಉತ್ತಮವಾಗಿ ಸ್ಪಂದಿಸುತ್ತಿರುವ ಹಿನ್ನೆಲೆಯಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಯುಐಡಿಎಐ ಹೇಳಿದೆ.
‘ಹೆಚ್ಚೆಚ್ಚು ಜನರು ತಮ್ಮ ಆಧಾರ್ನಲ್ಲಿರುವ ದಾಖಲೆಗಳನ್ನು ಅಪ್ಡೇಟ್ ಮಾಡಲು ಉತ್ತೇಜಿಸುವ ಸಲುವಾಗಿ ಮೈ ಆಧಾರ್ ಪೋರ್ಟಲ್ ಮೂಲಕ ಉಚಿತವಾಗಿ ದಾಖಲೆ ಅಪ್ಡೇಟ್ ಮಾಡಲು 2023ರ ಡಿಸೆಂಬರ್ 14ರವರೆಗೆ ಅವಕಾಶ ನೀಡಲಾಗಿತ್ತು. ಜನರಿಂದ ಸಕಾರಾತ್ಮಕ ಸ್ಪಂದನೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಮೂರು ತಿಂಗಳು ಇದನ್ನು ವಿಸ್ತರಿಸಲಾಗಿದೆ. 2023ರ ಡಿಸೆಂಬರ್ 15ರಿಂದ 2024ರ ಮಾರ್ಚ್ 14ರವರೆಗೆ ಈ ಸೌಲಭ್ಯ ಇರುತ್ತದೆ,’ ಎಂದು ಯುಐಡಿಎಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮೈ ಅಧಾರ್ನ ಅಧಿಕೃತ ಪೋರ್ಟಲ್ನಲ್ಲಿ ಮಾತ್ರ ಈ ಉಚಿತ ಸೇವೆ ಲಭ್ಯ ಇರುತ್ತದೆ. ವಿವಿಧ ಕಡೆ ಇರುವ ಆಧಾರ್ ಕೇಂದ್ರಗಳಲ್ಲೂ ಆಧಾರ್ ಅಪ್ಡೇಟ್ ಮಾಡಬಹುದು. ಆದರೆ, ಅದಕ್ಕೆ 50 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಮೈ ಆಧಾರ್ನಲ್ಲಿ ಮಾರ್ಚ್ 14ರವರೆಗೂ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಬಹುದು. ಆ ಬಳಿಕ ಪೋರ್ಟಲ್ನಲ್ಲೂ ಕೂಡ ಶುಲ್ಕ ಪಾವತಿಸಿಯೇ ಅಪ್ಡೇಟ್ ಮಾಡಬೇಕಾಗುತ್ತದೆ.
ಹತ್ತಕ್ಕೂ ಹೆಚ್ಚು ವರ್ಷಗಳಿಂದ ಆಧಾರ್ ಅಪ್ಡೇಟ್ ಮಾಡದೇ ಇರುವ ನಿವಾಸಿಗಳು ತಮ್ಮ ಹೊಸ ಐಡಿ ಪ್ರೂಫ್ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್ನಲ್ಲಿ ಅಪ್ಡೇಟ್ ಮಾಡಬೇಕೆಂದು ಯುಐಡಿಎಐ ಶಿಫಾರಸು ಮಾಡಿದೆ. ಇದರಿಂದ ಆಧಾರ್ ಅಥೆಂಟಿಕೇಶನ್ ಕಾರ್ಯ ಸುಲಭವಾಗುತ್ತದೆ ಎಂದು ಹೇಳಿದೆ.