ಕೊಪ್ಪಳ: ಗಂಗಾವತಿ ನಗರದಲ್ಲಿ ಅಂಧ ಮುಸ್ಲಿಂ ವೃದ್ಧರೊಬ್ಬರಿಗೆ ಜೈ ಶ್ರೀರಾಮ್ ಕೂಗುವಂತೆ ಒತ್ತಾಯಿಸಿ ಅವರ ಮೇಲೆ ಹಲ್ಲೆ ನಡೆಸಿ, ಅವರ ಗಡ್ಡಕ್ಕೆ ಬೆಂಕಿ ಹಚ್ಚಿರುವ ಪ್ರಕರಣ ನವೆಂಬರ್ 25ರಂದು ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ಆರೋಪಿಗಳ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಮುಸ್ಲಿಂ
ಗಂಗಾವತಿಯ ಕುವೆಂಪು ಬಡಾವಣೆಯ ಸಾಫ್ಟ್ವೇರ್ ಎಂಜಿನಿಯರ್ ಸಾಗರ ಶೆಟ್ಟಿ ಕಲ್ಕಿ ಹಾಗೂ ಕಲ್ಲಪ್ಪನ ಕ್ಯಾಂಪ್ನ ನರಸಪ್ಪ ದನಕಾಯರ ಬಂಧಿತರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಇದುರವರೆಗೆ ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗಿದೆ. ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಡ ಹೇರಲಾಗಿದೆ ಎನ್ನುವ ಆರೋಪಕ್ಕೆ ಯಾವುದೆ ಆಧಾರ ಲಭಿಸಿಲ್ಲ. ಹುಸೇನಸಾಬ್ ಗಡ್ಡಕ್ಕೆ ಬೆಂಕಿ ಹಚ್ಚಲಾಗಿತ್ತು ಎನ್ನುವುದಕ್ಕೂ ದಾಖಲೆ ಲಭಿಸಿಲ್ಲ ಎಂದು ತಿಳಿಸಿದರು.
ಆರೋಪಿಗಳಿಗೆ ವೃದ್ಧ ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದ. ಅವರು ಬೈಕ್ ಮೇಲೆ ಕೂಡಿಸಿಕೊಂಡು ಹೋಗುವಾಗ ಮಧ್ಯದಲ್ಲಿ ಕುಳಿತಿದ್ದ ನರಸಪ್ಪ ವೃದ್ದನ ಟೋಪಿ ಜಗ್ಗಿದ್ದಾನೆ. ಇದಕ್ಕೆ ವೃದ್ಧ ಕೋಪಗೊಂಡಿದ್ದರಿಂದ ಬುದ್ಧಿ ಕಲಿಸಬೇಕು ಎಂದು ಯುವಕರು ರೈಲ್ವೆ ಸೇತುವೆ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಗಂಗಾವತಿ | ಅಂಧ ಮುಸ್ಲಿಂ ವೃದ್ಧನಿಗೆ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಗಡ್ಡಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಘಟನೆ ಹಿನ್ನಲೆ:
ಸಂತ್ರಸ್ತ ವ್ಯಕ್ತಿಯನ್ನು ಮೆಹಬೂಬ್ ನಗರದ ಹುಸೇನ್ ಸಾಬ್(65) ಎಂದು ಗುರುತಿಸಲಾಗಿದ್ದು, “ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ” ಎಂದು ಅವರು ಪೊಲೀಶರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿ ನವೆಂಬರ್ 25ರಂದು ಮಧ್ಯರಾತ್ರಿ ಗಂಗಾವತಿಗೆ ಬಂದು ಮನೆಗೆ ಹೋಗಲು ಆಟೊ ನಿಲ್ದಾಣದ ಬಳಿ ಕಾಯುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
“ಬೈಕ್ ಮೇಲೆ ಬಂದ ಕೆಲವು ಯುವಕರು ಎಲ್ಲಿಗೆ ಹೋಗುತ್ತಿದ್ದಿಯಾ? ಎಂದು ಪ್ರಶ್ನಿಸಿದರು. ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಪಂಪಾನಗರ ಬಳಿ ಕರೆದುಕೊಂಡು ಹೋದರು. ಬಳಿಕ ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿ ಹಲ್ಲೆ ಮಾಡಿದ್ದಾರೆ. ನೆಲದ ಮೇಲೆ ಬೀಳಿಸಿ ಹಲ್ಲೆ ಮಾಡಿದ ಯುವಕರ ಗುಂಪು, ನನ್ನ ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ” ಎಂದು ಅವರು ಹೇಳಿದ್ದಾರೆ.
“ನನಗೆ ಕಣ್ಣು ಕೂಡ ಕಾಣುವುದಿಲ್ಲ. ನನ್ನ ಬಳಿಯಿದ್ದ ಹಣ ದೋಚಿಕೊಂಡು ಹೋಗಿದ್ದಾರೆ. ಬಳಿಕ ಬೆಳಗಿನ ಜಾವ ಕುರಿ ಕಾಯುವ ಹುಡುಗರು ನನ್ನ ಮನೆಯ ವಿಳಾಸ ಕೇಳಿ ರಕ್ಷಣೆ ಮಾಡಿ, ಮನೆಗೆ ತಲುಪಿಸಿದ್ದಾರೆ” ಎಂದು ಸಂತ್ರಸ್ತ ಹುಸೇನ್ ಸಾಬ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಯ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಡಿಯೋ ನೋಡಿ: ಮಳವಳ್ಳಿ | ಹಕ್ಕುಪತ್ರ ಕೇಳಿದವರ ಮೇಲೆ ಪೊಲೀಸ್ ದೌರ್ಜನ್ಯ, ಮುಂದುವರೆದ ಪ್ರತಿಭಟನೆ Janashakthi Media