ಮಿಜೋರಾಂ | ಆಡಳಿತರೂಢ MNF ಹೀನಾಯ ಸೋಲು, ರಾಜ್ಯ ಗೆದ್ದ ZPM!

ಐಜ್ವಾಲ್: ಮಾಜಿ ಐಪಿಎಸ್ ಅಧಿಕಾರಿ, ರಾಜಕಾರಣಿ ಲಾಲ್ದುಹೋಮ ನೇತೃತ್ವದ ಜೋರಾಮ್ ಪೀಪಲ್ಸ್ ಮೂವ್ಮೆಂಟ್ (ZPM) ಮಿಜೋರಾಂ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಇದೇ ಮೊದಲ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಸೋಮವಾರ ನಡೆದ ಮತ ಎಣಿಕೆಯಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF) ಹೀನಾಯ ಸೋಲು ಕಂಡಿದೆ. ರಾಷ್ಟ್ರಮಟ್ಟದಲ್ಲಿ MNF ಬಿಜೆಪಿಯ ಜೊತೆಗೆ ಮೈತ್ರಿಯಲ್ಲಿದ್ದರೂ, ರಾಜ್ಯ ಚುನಾವಣೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿರಲಿಲ್ಲ.

ಸೋಲನ್ನು ಒಪ್ಪಿಕೊಂಡಿರುವ ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಅವರು ರಾಜೀನಾಮೆ ಪತ್ರವನ್ನು ಸಲ್ಲಿಸಲು ಸಂಜೆಗೆ ಮೊದಲು ರಾಜಭವನದಲ್ಲಿ ರಾಜ್ಯಪಾಲ ಹರಿಬಾಬು ಕಂಬಂಪತಿ ಅವರನ್ನು ಭೇಟಿಯಾಗಲಿದ್ದಾರೆ. 40 ಸದಸ್ಯ ಬಲದ ಅಸೆಂಬ್ಲಿಯಲ್ಲಿ ZPM 27 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಆಡಳಿತರೂಢ MNF 10 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಇದನ್ನೂ ಓದಿ: ಕಾರು ತಾಯಿದ್ದಲ್ಲ ಅವರ ಸ್ನೇಹಿತೆಯದ್ದು | ಸೂರಜ್ ರೇವಣ್ಣ

ಉಳಿದಂತೆ ಬಿಜೆಪಿ 2 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಹಲವು ವರ್ಷಗಳ ಕಾಲ ರಾಜ್ಯವನ್ನು ಆಳಿದ ಕಾಂಗ್ರೆಸ್ ಕೇವಲ ಒಂದು ಸೀಟಿಗೆ ತೃಪ್ತಿಪಟ್ಟಿದೆ. ನವೆಂಬರ್ 7 ರಂದು ರಾಜ್ಯದಲ್ಲಿ ಮತದಾನ ನಡೆಯುವ ವಾರಗಳ ಮೊದಲು ಬಿಜೆಪಿ ಸೇರಿದ್ದ ಮಾಜಿ MNF ಸಚಿವ ಕೆ. ಬೀಚುವಾ ಮತ್ತು ಅವರ ಪಕ್ಷದ ಸಹೋದ್ಯೋಗಿ ಕೆ. ಹ್ರಹ್ಮೋ ಕ್ರಮವಾಗಿ ಸಿಯಾಹಾ ಮತ್ತು ಪಾಲಕ್ ಸ್ಥಾನಗಳನ್ನು ಗೆದ್ದಿದ್ದಾರೆ.

2018 ರ ಚುನಾವಣೆಯಲ್ಲಿ, MNF 40 ಸದಸ್ಯರಿರುವ ವಿಧಾನಸಭೆಯಲ್ಲಿ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅಂದಿನ ಚುನಾವಣೆಯಲ್ಲಿ ZPM ಎಂಟು ಸ್ಥಾನಗಳನ್ನು ಪಡೆದುಕೊಂಡಿತ್ತು ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ ಐದು ಮತ್ತು ಒಂದು ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ZPM ನ ಅಧ್ಯಕ್ಷ, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಲಾಲ್ದುಹೋಮ ಅವರು ತಮ್ಮ ಹತ್ತಿರದ MNF ಪ್ರತಿಸ್ಪರ್ಧಿ ಜೆ. ಮಲ್ಸಾವ್ಮ್ಜುವಾಲಾ ವಂಚೌಂಗ್ ಅವರನ್ನು 2,983 ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆಲುವು ಕಂಡಿದ್ದಾರೆ. ಲಾಲ್ದುಹೋಮ ಅವರು ಸತತ ಎರಡನೇ ಬಾರಿಗೆ ರಾಜ್ಯ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. “ಮಂಗಳವಾರ ಅಥವಾ ಬುಧವಾರ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಈ ತಿಂಗಳೊಳಗೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೆ ಬಿಜೆಪಿ ಶಾಸಕಾಂಗ ಸಭೆಗೆ ಹಾಜರಾಗಲ್ಲ | ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಇದೇ ವೇಳೆ ಮಿಜೋರಾಂ ಮುಖ್ಯಮಂತ್ರಿ, MNF ಅಭ್ಯರ್ಥಿ ಝೋರಂತಂಗ ಅವರು ತಮ್ಮ ಐಜ್ವಾಲ್ ಪೂರ್ವ-1 ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಅಲ್ಲಿ ZPM ಅಭ್ಯರ್ಥಿ ಲಾಲ್ತನ್ಸಂಗ 2,101 ಮತಗಳ ಅಂತರದಿಂದ ಗೆದ್ದಿದ್ದಾರೆ. ಉಪಮುಖ್ಯಮಂತ್ರಿ ತವ್ನ್‌ಲುಯಾ ಕೂಡಾ 909 ಮತಗಳ ಅಂತರದಿಂದ ZPM ಅಭ್ಯರ್ಥಿ ಡಬ್ಲ್ಯೂ ಚುವಾನಾವ್ಮಾ ಮುಂದೆ ಸೋಲುಂಡಿದ್ದಾರೆ. ರಾಜ್ಯದ ಹಲವಾರು ಮಂತ್ರಿಗಳು ಚುನಾವಣೆಯಲ್ಲಿ ಸೋತಿದ್ದಾರೆ.

ನವೆಂಬರ್ 7 ರಂದು ನಡೆದ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ರಾಜ್ಯದ ಎಲ್ಲಾ 11 ಜಿಲ್ಲೆಗಳಲ್ಲಿ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳ ನಡುವೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು. ಆರಂಭದಲ್ಲಿ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ ನಂತರ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ಮತ ಎಣಿಕೆ ಕಾರ್ಯ ಕೈಗೆತ್ತಿಕೊಳ್ಳಲಾಯಿತು ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಚ್ ಲಿಯಾಂಜೆಲಾ ತಿಳಿಸಿದ್ದಾರೆ.

ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ಪ್ರಮುಖ ವಿರೋಧ ಪಕ್ಷವಾದ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ZPM) ಮತ್ತು ಕಾಂಗ್ರೆಸ್ ಎಲ್ಲಾ 40 ಸ್ಥಾನಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ ಆಮ್ ಆದ್ಮಿ ಪಕ್ಷ (AAP) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಭಾಷಾ ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳ ಮೇಲೆ ವಿಶೇಷ ಗಮನಹರಿಸಿದ್ದ ಬಿಜೆಪಿ 23 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ವಿಡಿಯೊ ನೋಡಿ: ಪಿಚ್ಚರ್ ಪಯಣ – 143, ಸಿನೆಮಾ : ಗಂಗೂಬಾಯಿ ಕಾಠೆವಾಡಿ, ವಿಶ್ಲೇಷಣೆ : ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *