ಹೈದರಾಬಾದ್: ತೆಲಂಗಾಣದಲ್ಲಿ ತಮ್ಮ ಪಕ್ಷವೂ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ‘ಮುಸ್ಲಿಂ ಯುವಕರಿಗಾಗಿ’ ರಂಗಾರೆಡ್ಡಿ ಜಿಲ್ಲೆಯ ಪಹಾಡಿಶರೀಫ್ನಲ್ಲಿ 50 ಎಕರೆ ಮಾಹಿತಿ ತಂತ್ರಜ್ಞಾನ (ಐಟಿ) ಪಾರ್ಕ್ ಅನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಗುರುವಾರ ಹೇಳಿದ್ದಾರೆ. ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಮುಖ್ಯಸ್ಥರೂ ಆಗಿರುವ ಅವರು, ಪ್ರಸ್ತುತ ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ಅವರ ಕ್ಷೇತ್ರವಾದ ಮಹೇಶ್ವರಂನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
“ಕಾಂಗ್ರೆಸ್ ಮುಸ್ಲಿಂ ಸಮುದಾಯವನ್ನು ಪ್ರಾಥಮಿಕವಾಗಿ ತನ್ನ ಮತಬ್ಯಾಂಕ್ ಎಂದು ಪರಿಗಣಿಸುತ್ತದೆ. ಆದರೆ ಬಿಆರ್ಎಸ್ ಸರ್ಕಾರವು ಅವರಿಗಿಂತ ಭಿನ್ನವಾಗಿ ಹಿಂದೂ ಮತ್ತು ಮುಸ್ಲಿಮರನ್ನು ತನ್ನ ಎರಡು ಕಣ್ಣುಗಳಂತೆ ನೋಡುತ್ತದೆ. ಜೊತೆಗೆ ಪಕ್ಷವು ಜಾತ್ಯತೀತ ದೃಷ್ಟಿಕೋನವನ್ನು ಉಳಿಸಿಕೊಂಡಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾನೂನು ರಚನೆಗೆ ರಾಜ್ಯಪಾಲರು ಅಡ್ಡಿಪಡಿಸಬಾರದು: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಬಿಆರ್ಎಸ್ನ ಕಳೆದ ಒಂಬತ್ತು ವರ್ಷಗಳ ಆಡಳಿತದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳು ಆಗಿಲ್ಲ ಎಂದು ಪ್ರತಿಪಾದಿಸಿದ ಕೆಸಿಆರ್, “ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕೋಮು ಗಲಭೆಗಳು ನಿಯಮಿತವಾಗಿ ಸಂಭವಿಸಿವೆ” ಎಂದು ಹೇಳಿದ್ದಾರೆ. ಮಹೇಶ್ವರಂ ಕ್ಷೇತ್ರದ ತುಕ್ಕುಗುಡದಲ್ಲಿ ತಮ್ಮ ಸರ್ಕಾರದಲ್ಲಿ 52 ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು ಮತ್ತು ಕಂದುಕೂರು ಅಭಿವೃದ್ಧಿಯ ಕೇಂದ್ರವಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ 670 ಕೋಟಿ ವೆಚ್ಚ ಮಾಡಿದೆ ಎಂದು ಕೆಸಿಆರ್ ಹೇಳಿದ್ದಾರೆ. ಮುಸ್ಲಿಂ
ಹೊರ ವರ್ತುಲ ರಸ್ತೆ (ಒಆರ್ಆರ್) ಸುತ್ತಲಿನ ನೀರಿನ ಪೈಪ್ಲೈನ್ ಪೂರ್ಣಗೊಂಡ ನಂತರ ಮಹೇಶ್ವರಂ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆದಾಯ ಹೆಚ್ಚಿದ್ದು, ಅದರ ಸಹಾಯದಿಂದ ಬಿಆರ್ಎಸ್ ಸರ್ಕಾರವು ಕಲ್ಯಾಣ ಕ್ರಮಗಳನ್ನು ಜಾರಿಗೆ ತಂದಿದೆ ಎಂದು ಕೆಸಿಆರ್ ಪ್ರತಿಪಾದಿಸಿದ್ದಾರೆ.
ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಂತರ ಪಿಂಚಣಿ ಮೊತ್ತವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದೆ ಎಂದ ಅವರು, ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕಳೆದ 10 ವರ್ಷಗಳಲ್ಲಿ ಮಾಡಿರುವ ಎಲ್ಲಾ ಕೆಲಸಗಳನ್ನು ರದ್ದು ಮಾಡುತ್ತದೆ ಎಂದು ಕೆಸಿಆರ್ ಹೇಳಿದ್ದಾರೆ.
ವಿಡಿಯೊ ನೋಡಿ: ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ನಿಲುವುಗಳಲ್ಲಿ ಬದಲಾವಣೆ ಇಲ್ಲ – ಬಿ.ಸುರೇಶ್ Janashakthi Media