ಕಿರುಕುಳ ನೀಡುವ ದುರುದ್ಧೇಶದಿಂದ ವರ್ಗಾವಣೆ | ಮಾಜಿ ಸಿಜೆಐ ವಿರುದ್ಧ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆರೋಪ

ಅಲಹಾಬಾದ್: ಈ ಹಿಂದಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ನನಗೆ ಕಿರುಕುಳ ನೀಡುವ ದುರುದ್ಧೇಶದಿಂದ ಛತ್ತೀಸ್‌ಗಢ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತ್ತು ಎಂದು ನಿರ್ಗಮಿತ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಿಟಿಂಕರ್ ದಿವಾಕರ್ ಅವರು ತಮ್ಮ ನಿವೃತ್ತಿ ದಿನದಂದು ಹೇಳಿದ್ದಾರೆ.

ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ದಿವಾಕರ್ ಅವರು, ಮಾಜಿ ಸಿಜೆಐ ದೀಪಕ್ ಮಿಶ್ರಾ ಅವರು ಕಿರುಕುಳ ನೀಡುವ ಉದ್ದೇಶದಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ನನಗೆ ಕಿರುಕುಳ ನೀಡುವ ದುರುದ್ದೇಶದಿಂದ ನನ್ನ ವರ್ಗಾವಣೆ ಆದೇಶವನ್ನು ಹೊರಡಿಸಲಾಗಿದೆ ಎಂದು ತೋರುತ್ತದೆ. ಆದರೆ ಅದೃಷ್ಟವಶಾತ್, ನನ್ನ ಸಹವರ್ತಿ ನ್ಯಾಯಾಧೀಶರು ಮತ್ತು ನ್ಯಾಯಾಲಯದ ವಕೀಲರಿಂದ ನನಗೆ ಅಪಾರ ಬೆಂಬಲ ಸಿಕ್ಕಿದ್ದರಿಂದ ಶಾಪವು ವರವಾಗಿ ಬದಲಾಯಿತು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿದ್ದಕ್ಕಾಗಿ ಹಾಲಿ ಸಿಜೆಐ ಡಿವೈ ಚಂದ್ರಚೂಡ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಅವರು ಹೇಳಿದ್ದಾರೆ. ಸಿಜೆಐ ಚಂದ್ರಚೂಡ್ ನೇತೃತ್ವದ ಪ್ರಸ್ತುತ ಕೊಲಿಜಿಯಂ ಈ ವರ್ಷದ ಆರಂಭದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನ್ಯಾಯಮೂರ್ತಿ ದಿವಾಕರ್ ಅವರ ಹೆಸರನ್ನು ಶಿಫಾರಸು ಮಾಡಿತ್ತು.

ಜಸ್ಟೀಸ್ ದಿವಾಕರ್ ಅವರು 1984 ರಲ್ಲಿ ಮಧ್ಯಪ್ರದೇಶದ ಬಾರ್ ಕೌನ್ಸಿಲ್ ಸದಸ್ಯರಾಗಿ ದಾಖಲಾಗಿದ್ದರು. ಜನವರಿ 2005 ರಲ್ಲಿ ಛತ್ತೀಸ್‌ಗಢದ ಹೈಕೋರ್ಟ್‌ನಿಂದ ಹಿರಿಯ ವಕೀಲರಾಗಿ ಅವರು ನೇಮಕಗೊಂಡರು ಎಂದು ಲೈವ್ ಲಾ ವರದಿ ಹೇಳಿದೆ. ಏಳು ವರ್ಷಗಳ ಕಾಲ ಮಧ್ಯಪ್ರದೇಶ ರಾಜ್ಯ ಬಾರ್ ಕೌನ್ಸಿಲ್‌ನ ಸದಸ್ಯರಾಗಿದ್ದ ಅವರು, ಐದು ವರ್ಷಗಳ ಕಾಲ ಛತ್ತೀಸ್‌ಗಢದ ರಾಜ್ಯ ಬಾರ್ ಕೌನ್ಸಿಲ್‌ನ ಸದಸ್ಯರಾಗಿದ್ದರು.

ಮಾರ್ಚ್ 31, 2009 ರಂದು, ಅವರು ಛತ್ತೀಸ್‌ಗಢ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಛತ್ತೀಸ್‌ಗಢ ಹೈಕೋರ್ಟ್‌ನಲ್ಲಿ ಎಂಟುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಅವರನ್ನು ಅಕ್ಟೋಬರ್ 3, 2018 ರಂದು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಅವರನ್ನು ಈ ವರ್ಷದ ಫೆಬ್ರವರಿ 13 ರಂದು ಅಲಹಾಬಾದ್ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ನಂತರ ಅವರು ಮಾರ್ಚ್ 26 ರಂದು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದರು.

ವಿಡಿಯೊ ನೋಡಿ: ವಿಶ್ವಕಪ್‌ ಮೇಲೆ ಕಾಲಿಟ್ಟಾಗ ಚುರ್‌ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? #worldcup2023

Donate Janashakthi Media

Leave a Reply

Your email address will not be published. Required fields are marked *