ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಹಿಂದಿರುಗಿಸಿದ ಎಲ್ಲಾ 10 ಮಸೂದೆಗಳನ್ನು ಶನಿವಾರ ನಡೆದ ವಿಶೇಷ ಅಧಿವೇಶನದಲ್ಲಿ ರಾಜ್ಯದ ವಿಧಾನಸಭೆಯು ಪುನಃ ಅಂಗೀಕರಿಸಿದ್ದು, ಮರುಪರಿಶೀಲನೆಗೆ ಹಿಂದಿರುಗಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಸದನದ ಕಲಾಪ ಆರಂಭವಾಗುತ್ತಿದ್ದಂತೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಮತ್ತು ಬಿಜೆಪಿ ಶಾಸಕರು ಸಭಾತ್ಯಾಗ ನಡೆಸಿದ್ದಾರೆ.
ವಿಶೇಷ ಅಧಿವೇಶನದಲ್ಲಿ ಕಾನೂನು, ಕೃಷಿ ಮತ್ತು ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡಿರುವ ಮಸೂದೆಗಳನ್ನು ಸದನವು ಅಂಗೀಕರಿಸಿತು. 10 ವಿಧೇಯಕಗಳಿಗೆ ರಾಜ್ಯಪಾಲರ ಒಪ್ಪಿಗೆನೀಡದೆ ತಡೆ ಹಿಡಿದಿರುವ ಕ್ರಮ ತಮಿಳುನಾಡು ಜನತೆಗೆ ಮತ್ತು ತಮಿಳುನಾಡು ವಿಧಾನಸಭೆಗೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಉಡುಪಿ ಹತ್ಯೆ ಪ್ರಕರಣ| ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ವಿಧಾನಸಭೆಯಲ್ಲಿ ಮಾತನಾಡಿದ ಎಂ.ಕೆ. ಸ್ಟಾಲಿನ್, “ಜನರ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ವಿಧಾನಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವುದು ರಾಜ್ಯಪಾಲರ ಕರ್ತವ್ಯ. ಅವರಿಗೆ ಯಾವುದೇ ಪ್ರಶ್ನೆಗಳು ಹೇಳುವುದಿದ್ದರೆ, ಅವರು ಅದನ್ನು ಸರ್ಕಾರದೊಂದಿಗೆ ಕೇಳಬಹುದು. ಈ ಹಿಂದೆ, ರಾಜ್ಯಪಾಲರು ಕೆಲವು ವಿಧೇಯಕಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದಾಗ, ರಾಜ್ಯ ಸರ್ಕಾರ ತಕ್ಷಣವೇ ಪ್ರತಿಕ್ರಿಯೆಯನ್ನು ನೀಡಿತು. ರಾಜ್ಯಪಾಲರು ಸ್ಪಷ್ಟೀಕರಣ ಕೇಳಿದಾಗ ಸರ್ಕಾರ ಎಂದಿಗೂ ಉತ್ತರ ನೀಡದ ಉದಾಹರಣೆ ಇಲ್ಲ” ಎಂದು ಹೇಳಿದ್ದಾರೆ.
“ರಾಜ್ಯಪಾಲರು ಈ 12ವಿಧೇಯಕಗಳು ಮತ್ತು ಇತರ ಕಡತಗಳ ಮೇಲೆ ಕುಳಿತು ಜನತೆ, ಪ್ರಜಾಪ್ರಭುತ್ವ, ಕಾನೂನು ಮತ್ತು ಆತ್ಮಸಾಕ್ಷಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡ ವ್ಯಕ್ತಿ ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಹೊಸ ರೈಲ್ವೆ ಯೋಜನೆಗಳನ್ನು ಪಡೆಯಲು ಅವರು ರಾಜ್ಯಕ್ಕೆ ಸಹಾಯ ಮಾಡಬಹುದು. ಆದರೆ ಇದೆಲ್ಲವನ್ನೂ ಮಾಡುವ ಬದಲು ರಾಜ್ಯಪಾಲರು ಪ್ರತಿದಿನ ರಾಜ್ಯದ ಯೋಜನೆಗಳನ್ನು ಹೇಗೆ ಸ್ಥಗಿತಗೊಳಿಸಬಹುದು ಎಂದು ಯೋಚಿಸುತ್ತಾರೆ” ಎಂದು ಸ್ಟಾಲಿನ್ ಹೇಳಿದ್ದಾರೆ.
ರಾಜ್ಯಪಾಲರ ವಿರುದ್ಧ ಸುಪ್ರೀಂ ಕೋರ್ಟ್ನ ಹೇಳಿಕೆ ತಮಿಳುನಾಡು ವಿಧಾನಸಭೆಗೆ ಸಿಕ್ಕ ಮೊದಲ ಗೆಲುವು ಎಂದು ಅವರು ಹೇಳಿದ್ದಾರೆ. ನವೆಂಬರ್ 10 ರಂದು ರಾಜ್ಯಪಾಲ ರವಿ ಅವರು ಅಸೆಂಬ್ಲಿ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡಿರುವುದು “ಗಂಭೀರ ಕಳವಳಕಾರಿ ವಿಷಯ” ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿತ್ತು.
ಇದನ್ನೂ ಓದಿ: ಕಾರವಾರ | ಡಾ. ವಿಠ್ಠಲ ಭಂಡಾರಿ ನೆನಪಿನ ಉಪನ್ಯಾಸ ಕಾರ್ಯಕ್ರಮ
ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಒಪ್ಪಿಗೆಗಾಗಿ ಸರ್ಕಾರದಿಂದ ಕಳುಹಿಸಲಾದ ಮಸೂದೆಗಳನ್ನು ಗುರುವಾರ ಹಿಂದಿರುಗಿಸಿದ ನಂತರ ತಮಿಳುನಾಡು ವಿಧಾನಸಭೆ ಶನಿವಾರ ತುರ್ತು ಅಧಿವೇಶನವನ್ನು ಕರೆಯಿತು. ಅದಕ್ಕೂ ಹಿಂದೆ, ವಿಧಾನಸಭೆ ಅಂಗೀಕರಿಸಿದ ಮಸೂದೆಗಳ ಅಂಗೀಕಾರಕ್ಕೆ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಡಿಎಂಕೆ ಸರ್ಕಾರವು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿತ್ತು.
ನಾಲ್ಕು ಅಧಿಕೃತ ಆದೇಶಗಳು ಮತ್ತು 54 ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಕಡತದ ಜೊತೆಗೆ ಕನಿಷ್ಠ 12 ವಿಧೇಯಕಗಳು ಬಾಕಿ ಉಳಿದಿವೆ. ತಮಿಳುನಾಡಿನದಲ್ಲಿ ಅಕ್ಟೋಬರ್ನಲ್ಲಷ್ಟೆ ವಿಧಾನಸಭೆ ಅಧಿವೇಶನ ಮುಗಿದಿತ್ತು. ರಾಜಭವನವು 12 ಮಸೂದೆಗಳ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ್ದ ರಾಜ್ಯ ಸರ್ಕಾರದ ಮನವಿಗೆ ಕೇಂದ್ರದ ಪ್ರತಿಕ್ರಿಯೆಯನ್ನು ಸುಪ್ರೀಂಕೋರ್ಟ್ ಕೇಳಿದೆ.
ವಿಡಿಯೊ ನೋಡಿ: ದಲಿತರ ಶೃಂಗಸಭೆ : ಸನಾತನಿ ಸರ್ಕಾರದಿಂದ ದಲಿತರ ಮೇಲೆ ನಿರಂತರ ದರ್ಜನ್ಯ – ಜನಾಕ್ರೋಶ Janashakthi Media