ಕೊಪ್ಪಳ: ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮ ಸಮಸ್ಯೆಗಳನ್ನು ಹೊದ್ದು ಮಲಗಿದೆ. ಸರ್ಕಾರ ಎಸ್ಸಿ ಮತ್ತು ಎಸ್ಟಿ ಕಾಲೋನಿಗಳ ಅಭಿವೃದ್ದಿಗೆ ಕೋಟಿ ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದೆ. ಅಲ್ಲಿನ ಜನರ ಅಭಿವೃದ್ದಿ, ಶಿಕ್ಷಣ, ಆರೋಗ್ಯದ ಹಿತದೃಷ್ಠಿಯಿಂದ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮ ಪಂಚಾಯಿತಿಯ ಎಸ್.ಸಿ ಮತ್ತು ಎಸ್.ಟಿ ಕಾಲೋನಿಯ 2 ಮತ್ತು 3 ನೇ ವಾರ್ಡಿನಲ್ಲಿ ಅನಧಿಕೃತ ಕೆರೆಯ ಬಸಿ ನೀರಿನ ಸಮಸ್ಯೆಯಿಂದ ಅಲ್ಲಿ ವಾಸಿಸುವ ಜನರು ದಿನನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಮೂಲಭೂತ
ಗ್ರಾಮದಲ್ಲಿರುವ ಜನರು ಸುಮಾರು ಆರು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಗ್ರಾಮದಲ್ಲಿ ಚರಂಡಿ,ಕುಡಿಯುವ ನೀರು, ವಿದ್ಯುತ್ ಹಾಗೂ ಸಿ.ಸಿ.ರಸ್ತೆಗಳಿಲ್ಲದೆ ಮಳೆ ಬಂದರೆ ಸಾಕು ರಸ್ತೆಯ ಮೇಲೆ ಮಳೆ ನೀರು ಮತ್ತು ಚರಂಡಿ ನೀರು ಹರಿದು ರಸ್ತೆ ಕೆಸರುಗದ್ದೆಯಂತೆ ಆಗುತ್ತದೆ. ಇದಕ್ಕೆ ಪರ್ಯಾಯವಾಗಿ ನೀರು ಹೊರ ಹೊಗುವುದಕ್ಕೆ ಯಾವುದೇ ರೀತಿಯ ಚರಂಡಿ ವ್ಯವಸ್ಥೆ ಕೂಡ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇದನ್ನೂ ಓದಿ:ದೇಗುಲ ಪ್ರವೇಶಿಸಿದ ದಲಿತ ವ್ಯಕ್ತಿಗೆ ದಂಡ : ಪಶ್ಚಾತಾಪಕ್ಕೆ 5 ಲಕ್ಷ ದಂಡ ಕಟ್ಟಲು ಆಜ್ಞಾಪಿಸಿದ್ದ ಗ್ರಾಮಸ್ಥರು
ಮಳೆ ಬಂದರೆ ಸಾಕು ಬಸಿ ನೀರು ಮನೆಯೊಳಗೆ ನಿಲ್ಲುತ್ತದೆ ಅಡುಗೆ ಮಾಡುವುದು ತುಂಬಾ ಕಷ್ಟವಾಗುತ್ತದೆ. ಎಲೆಕ್ಷನ್ನಲ್ಲಿ ಗೆದ್ದವರು ಯಾರು ಕೂಡ ನಮ್ಮನ್ನು ತಿರುಗಿ ನೋಡುವುದಿಲ್ಲ ನಮ್ಮ ಕಷ್ಟ ಯಾರಿಗೆ ಹೇಳ್ಬೇಕು ಎಂದು ಗ್ರಾಮಸ್ಥರು ಜನಶಕ್ತಿ ಮೀಡಿಯ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಸಂಬಂಧ ಗ್ರಾಮದಲ್ಲಿರುವ ಹಲವಾರು ಸಮಸ್ಯೆಯ ಬಗ್ಗೆ ಹಲವು ದಿನಗಳ ಹಿಂದೆ ಮುಖ್ಯ ಅಧಿಕಾರಿ ಹಾಗೂ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ ಆದರೆ ಸುಮಾರು ಒಂದು ವರ್ಷವಾಯಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕರ್ಜುನ ಗೌಡ ಅವರು ಆರೋಪಿಸಿದರು.
ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡುವಲ್ಲಿ ಅಲ್ಲಿನ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ತಾಲೂಕ ಆಡಳಿತದ ನಿರ್ಲಕ್ಷ್ಯತನದಿಂದ ದಲಿತ ಕಾಲೋನಿಗಳಲ್ಲಿ ಅನೇಕ ಸಮಸ್ಯೆಗಳು ಉದ್ಬವಿಸಿವೆ. ಮೈಲಾಪುರ ಗ್ರಾಮದಲ್ಲಿರುವ ಅನಧಿಕೃತ ಕೆರೆಯ ಬಸಿ ನೀರಿನ ಸಮಸ್ಯೆಯಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಇಲ್ಲಿನ ಆಡಳಿತ ವ್ಯವಸ್ಥೆ ಹಾಗೂ ಇಲ್ಲಿನ ಅಧಿಕಾರಿಗಳು ಕಣ್ಣಿದ್ದು ಕಣ್ಮುಚ್ಚಿ ಕುಳಿತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ಕುರಿತು ಜನಶಕ್ತಿ ಮೀಡಿಯ ಮೈಲಾಪುರ ಪಂಚಾಯತ್, ಪಿಡಿಒ ಅವರನ್ನು ಸಂಪರ್ಕಿಸಿದಾಗ, ವಿಷಯ ನನಗೆ ನಿಮ್ಮಂದ ಗೊತ್ತಾಗಿದೆ, ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು. ಆರು ವರ್ಷದಿಂದ ಅಲ್ಲಿ ಸಮಸ್ಯೆ ಇದೆಯಲ್ಲ ಎಂದು ಕೇಳಿದ್ದಕ್ಕೆ, ಇಲ್ಲ ನನಗೆ ವಿಷಯ ಗೊತ್ತಾಗಿದ್ದೆ ಈಗ, ಆದಷ್ಟು ಬೇಗ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು.
ಜನಶಕ್ತಿ ಮೀಡಿಯಾ ದೂರವಾಣಿ ಮೂಲಕ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ.
ಮೈಲಾಪುರ ಗ್ರಾಮದಲ್ಲಿನ ಸಮಸ್ಯೆಗಳಿಗೆ ಆದಷ್ಟೂ ಬೇಗನೆ ಸರ್ಕಾರ ಹಾಗೂ ತಾಲೂಕು ಆಡಳಿತ ಸಂಬಂಧಪಟ್ಟ ಶಾಸಕರು ಖುದ್ದು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾಗಿದೆ. ಜನರ ಕೈಗೆ ಅಧಿಕಾರ ನೀಡುತ್ತೇವೆ ಎಂದು ಕೊಚ್ಚಿ ಕೊಳ್ಳುವ ಸರ್ಕಾರ ಹಾಗೂ ಜಿಲ್ಲಾಡಳಿತ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ. ಮೂಲಭೂತ
ವಿಡಿಯೋ ನೋಡಿ:ನ್ಯಾಯ ಕೇಳಿದ ಕಾರ್ಮಿಕರನ್ನು ಕೂಡಿ ಹಾಕಿದ ಬಾಲಾಜಿ ಗಾರ್ಮೆಂಟ್ಸ್ ವಿರುದ್ಧ ಆಕ್ರೋಶ Janashakthi Media