ತೆಲಂಗಾಣ | ಕಾಂಗ್ರೆಸ್ ಜೊತೆ ಇನ್ನೂ ಮೈತ್ರಿ ಭರವಸೆಯಲ್ಲಿರುವ ಸಿಪಿಐ!

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಕಾಂಗ್ರೆಸ್‌ನೊಂದಿಗೆ ಮೈತ್ರಿ ಒಪ್ಪಂದ ಮಾಡಿಕೊಳ್ಳುವ ಭರವಸೆಯಲ್ಲಿದ್ದು, ತಮಗೆ ನೀಡಿರುವ ಎರಡು ಸ್ಥಾನಗಳು ತೃಪ್ತಿಕರವಾಗಿಲ್ಲ, ಹೀಗಾಗಿ ಮಾತುಕತೆಗಳು ನಡೆಯುತ್ತಿವೆ ಎಂದು ಪಕ್ಷ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಜೊತೆಗೆ ಸೀಟು ಹಂಚಿಕೆಯ ಮಾತುಕತೆಗಳು ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿದ್ದು, ನವೆಂಬರ್ 3 ರಂದು ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ.

ಸೀಟು ಹೊಂದಾಣಿಕೆ ಮಾತುಕತೆ ವಿಫಲವಾದ ಕಾರಣ ಮತ್ತೊಂದು ಎಡಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐ೦-ಎಂ) ಕಳೆದ ವಾರ ಸ್ವಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದು, ತಾನು ಸ್ಪರ್ಧಿಸುವ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಡುವೆ ಬಿಜೆಪಿಯ ಮಾಜಿ ಪೆಡಪಲ್ಲಿ ಸಂಸದ ಜಿ. ವಿವೇಕಾನಂದ್ ಕಾಂಗ್ರೆಸ್‌ಗೆ ಮರಳಿದ್ದು, ಹೀಗಾಗಿ ಪಕ್ಷವೂ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲು ಅಲ್ಪ ವಿಳಂಬ ಮಾಡುತ್ತಿದೆ.

ಇದನ್ನೂ ಓದಿ: ತೆಲಂಗಾಣ: ಕಾಂಗ್ರೆಸ್‌ಗೆ ಬೇಷರತ್ ಬೆಂಬಲ ನೀಡಿದ ವೈಎಸ್‌ಆರ್‌ಟಿಪಿ ನಾಯಕಿ ಶರ್ಮಿಳಾ

“ನಮಗೆ ಚೆನ್ನೂರು ಮತ್ತು ಕೊತಗುಡೆಮ್ ನೀಡಲಾಗುವುದು ಎಂದು ತಿಳಿಸಲಾಯಿತು. ಆದರೆ ಈ ನಡುವೆ ವಿವೇಕಾನಂದ ಅವರಿಗೆ ಚೆನ್ನೂರು ಸೀಟು ಬೇಕಾಗಿದೆ ಎನಿಸುತ್ತಿದೆ. ಹಾಗಾಗಿ ಈ ಕ್ಷೇತ್ರದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ನಮ್ಮ 30ಕ್ಕೂ ಹೆಚ್ಚು ಜಿಲ್ಲಾ ಕಾರ್ಯದರ್ಶಿಗಳು ರಾಜ್ಯದಾದ್ಯಂತ ಆಡಳಿತ ವಿರೋಧಿ ಅಲೆ ಇದೆ ಎಂದು ವರದಿನೀಡಿದ್ದಾರೆ. ಹೀಗಾಗಿ ಸಿಪಿಐ(ಎಂ) ಮೈತ್ರಿ ಮಾತುಕತೆಯಿಂದ ಹೊರಗುಳಿದಿದ್ದರೂ, ನಾವು ಇನ್ನೂ ಮಾತುಕತೆ ನಡೆಸುತ್ತಿದ್ದೇವೆ” ಎಂದು ಹೈದರಾಬಾದ್‌ನ ಸಿಪಿಐನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ ಎಂದು ನ್ಯೂಸ್‌ ಮಿನಿಟ್ ವರದಿ ಹೇಳಿದೆ.

ಸೀಟು ಹಂಚಿಕೆಯ ಮಾತುಕತೆಗಳು ಸುಮಾರು ಒಂದು ತಿಂಗಳಿನಿಂದ ನಡೆಯುತ್ತಿದ್ದು, ನವೆಂಬರ್ 3 ರಂದು ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 10 ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಹಿಂಪಡೆಯುವ ಕೊನೆಯ ದಿನಾಂಕವಾಗಿದೆ. ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.

“ಇದು ಕಾಂಗ್ರೆಸ್‌ನ ಸಂಸ್ಕೃತಿಯಾಗಿದ್ದು, ಅವರು ಯಾವಾಗಲು ಹೀಗೆಯೆ ಮಾಡುತ್ತಾರೆ. ನಾವು ಮೊದಲು ಆಡಳಿತರೂಢ ಭಾರತ್ ರಾಷ್ಟ್ರ ಪಕ್ಷದೊಂದಿಗೆ (BRS) ಮಾತುಕತೆ ನಡೆಸಿದ್ದೆವು. ಅವರಿಗೆ ಬೆಂಬಲ ನೀಡಿದರೆ ಪ್ರತಿಯಾಗಿ ಒಂದು ಎಂಎಲ್‌ಎ ಸ್ಥಾನ ಮತ್ತು ಎರಡು ಎಂಎಲ್‌ಸಿ ಸ್ಥಾನಗಳನ್ನು ನೀಡುವ ಬಗ್ಗೆ ಆಫರ್ ಮಾಡಲಾಗಿತ್ತು. ಆದರೆ BRS ಪಕ್ಷದ ಎರಡನೇ ಹಂತದ ನಾಯಕರಿಂದ ಈ ಆಫರ್ ಬಂದಿತ್ತು. ಸಿಎಂ ಕೆಸಿಆರ್ (ಕೆ ಚಂದ್ರಶೇಖರ್ ರಾವ್) ಅಥವಾ ಅವರ ಮಗ ನಮ್ಮೊಂದಿಗೆ ಮಾತನಾಡಿದ್ದರೆ ನಾವು ಅದನ್ನು ಗಂಭೀರವಾಗಿ ಪರಿಗಣಿಸಬಹುದಿತ್ತು” ಎಂದು ಸಿಪಿಐ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: ತೆಲಂಗಾಣ | ಕಾಂಗ್ರೆಸ್ ಜೊತೆ ಸೀಟು ಹೊಂದಾಣಿಕೆ ವಿಫಲ; 17 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂ)

2018 ರ ಚುನಾವಣೆಯಲ್ಲಿ ಸಿಪಿಐ ತೆಲಂಗಾಣ ಜನ ಸಮಿತಿ (ಟಿಜೆಎಸ್) ಸೇರಿದಂತೆ ಇತರ ಪಕ್ಷಗಳೊಂದಿಗೆ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟಕ್ಕೆ ಸೇರಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಟಿಜೆಎಸ್‌ಗೆ ನೀಡಲಾದ ಕ್ಷೇತ್ರದಲ್ಲಿ ಕೂಡಾ ತನ್ನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಮೈತ್ರಿಯನ್ನು ಮುರಿದಿತ್ತು.

“ಸಿಪಿಐ(ಎಂ) ತಾನು ಸ್ಪರ್ಧಿಸುತ್ತಿರುವ ಕ್ಷೇತ್ರಗಳ ಹೆಸರುಗಳನ್ನು ಬಿಡುಗಡೆ ಮಾಡಿದ್ದರೂ, ದೆಹಲಿಯಲ್ಲಿ ಇನ್ನೂ ಮಾತುಕತೆಗಳು ನಡೆಯುತ್ತಿವೆ. ಆದ್ದರಿಂದ ಅಂತಿಮವಾಗಿ ಏನು ನಿರ್ಧರಿಸಲಾಗುವುದು ಎಂಬುದನ್ನು ನಾವು ನೋಡಬೇಕಾಗಿದೆ” ಎಂದು ಸಿಪಿಐ ನಾಯಕ ಹೇಳಿದ್ದಾರೆ.

2018 ರ ಚುನಾವಣೆಯಲ್ಲಿ, ಸಿಪಿಐ(ಎಂ) ಬಹುಜನ ಎಡರಂಗ ಎಂಬ ಇತರ ಎಡ ಮತ್ತು ಬಹುಜನ ಪಕ್ಷಗಳೊಂದಿಗೆ ತನ್ನದೇ ಆದ ಮೈತ್ರಿಯನ್ನು ರಚಿಸಿತ್ತು. ಆದರೆ ಈ ಮೈತ್ರಿಗೆ ಸೇರದ ಸಿಪಿಐ ಕಾಂಗ್ರೆಸ್ ಅನ್ನು ಬೆಂಬಲಿಸಿತ್ತು. ಆದರೆ ಅಂದಿನ ಚುನಾವಣೆಯಲ್ಲಿ ಸಿಪಿಐ ಆಗಲಿ, ಸಿಪಿಐಎಂ ಆಗಲಿ ಯಾವುದೆ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ವಿಡಿಯೊ ನೋಡಿ: ಗಾಜಾಪಟ್ಟಿಯನ್ನು ಇಸ್ರೇಲ್ ಗೆಲ್ಲುತ್ತಾ? ಪ್ಯಾಲಿಸ್ಟೈನ್ ತಿರುಗಿ ಬಿದ್ದರೆ ಏನಾಗಬಹುದು? Janashakthi Media

Donate Janashakthi Media

Leave a Reply

Your email address will not be published. Required fields are marked *