ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಜೀವ ಬೆದರಿಕೆ ಒಡ್ಡಿರುವ ಕರೆಯೊಂದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 1ರಂದು ಪೊಲೀಸ್ ಮುಖ್ಯ ಕಚೇರಿಯ ನಿಯಂತ್ರಣ ಕೊಠಡಿಗೆ ಜೀವ ಬೆದರಿಕೆಯ ಫೋನ್ ಕರೆಯನ್ನು ಮಾಡಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ಕರೆ ಮಾಡಿದಾತ 12 ವರ್ಷದ ಬಾಲಕ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಳಿಕ ಪೊಲೀಸರು ಬಾಲಕನ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಕೇರಳ | ಸ್ಫೋಟ ಪ್ರಕರಣ: 3 ಸಾವು, ಹಮಾಸ್ ದೂಷಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ
ಪಿಣರಾಯಿ ವಿಜಯನ್ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಫೋನ್ ಬಳಸಿ ಜೀವ ಬೆದರಿಕೆ ಒಡ್ಡಿರುವುದರ ವಿರುದ್ಧ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118(ಬಿ) ಹಾಗೂ 120(ಒ) ಅಡಿ ಮ್ಯೂಸಿಯಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಿಳಿದೂ ವದಂತಿಗಳನ್ನು ಹರಡುವುದು ಅಥವಾ ಪೊಲೀಸರು, ಅಗ್ನಿಶಾಮಕ ದಳದವರು ಅಥವಾ ಮತ್ಯಾವುದೇ ಅಗತ್ಯ ಸೇವೆಗಳಿಗೆ ಸುಳ್ಳು ಎಚ್ಚರಿಕೆಗಳನ್ನು ನೀಡುವುದರ ವಿರುದ್ಧ ಸೆಕ್ಷನ್ 118(ಬಿ) ಅಡಿ ಕ್ರಮ ಕೈಗೊಳ್ಳಬಹುದಾದರೆ, ಪುನರಾವರ್ತಿತ ಅಥವಾ ಅನಪೇಕ್ಷಿತ ಕರೆ, ಪತ್ರ, ಬರಹ, ಸಂದೇಶ, ಇಮೇಲ್ ಅಥವಾ ಮೆಸೆಂಜರ್ ಮೂಲಕ ಯಾವುದೇ ವ್ಯಕ್ತಿ ಸ್ವಯಂಪ್ರೇರಿತವಾಗಿ ತೊಂದರೆ ನೀಡಿದರೆ ಅಂಥವರ ವಿರುದ್ಧ ಸೆಕ್ಷನ್ 120(ಒ) ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.