PSI recruitment| ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ ನಡೆಸಲು ಕರ್ನಾಟಕ ಸರ್ಕಾರ ಸಿದ್ದತೆ – ಸಚಿವ ಜಿ ಪರಮೇಶ್ವರ್

ಬೆಂಗಳೂರು: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಹೊಸದಾಗಿ ಪರೀಕ್ಷೆ ನಡೆಸಲು ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮತಿ ಕೋರಿ ಸರ್ಕಾರ ತನ್ನ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಅವರು ಖಚಿತಪಡಿಸಿದ್ದಾರೆ. ಆದರೆ, ಸದ್ಯಕ್ಕೆ ನ್ಯಾಯಾಲಯದ ತೀರ್ಪು ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.ನೇಮಕಾತಿಗೆ 

‘ನಾವು ಸರ್ಕಾರದ ಮೂಲಕ ನಮ್ಮ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ಪರೀಕ್ಷೆಯನ್ನು (ಪುನಃ) ನಡೆಸಲು ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಮಗೆ ಅನುಮತಿ ನೀಡುವಂತೆ ನಾವು ಕೇಳಿಕೊಂಡಿದ್ದೇವೆ. ನ್ಯಾಯಾಲಯದ ಕಡೆಯಿಂದ ತೀರ್ಪು ಹೊರಬರಬೇಕಿದೆ. ಇದಕ್ಕಾಗಿ ನಾವು ಕಾಯುತ್ತಲೇ ಇದ್ದೇವೆ. ಆದೇಶ ಬಂದ ದಿನವೇ ಪ್ರಕ್ರಿಯೆ ಆರಂಭಿಸುತ್ತೇವೆ’ ಎಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪರಮೇಶ್ವರ ತಿಳಿಸಿದ್ದಾರೆ.

ಇದನ್ನೂ ಓದಿ:ಪಿಎಸ್‌ಐ ನೇಮಕಾತಿ ಹಗರಣ: 545 ಅಭ್ಯರ್ಥಿಗಳಲ್ಲಿ ಎಷ್ಟು ಜನರ ವಿಚಾರಣೆಯಾಗಿದೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳ ಆಯ್ಕೆಯಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಪಿಎಸ್‌ಐ ನೇಮಕಾತಿ ಹಗರಣವು ರಾಜ್ಯದಲ್ಲಿ ರಾಜಕೀಯ ಗದ್ದಲವನ್ನು ಹುಟ್ಟುಹಾಕಿತ್ತು. ಕಳೆದ ವರ್ಷ ಜುಲೈನಲ್ಲಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪಾಲ್, ಪೊಲೀಸ್ ಉಪ ಅಧೀಕ್ಷಕರು (ಡಿವೈಎಸ್ಪಿ), ಇನ್ಸ್‌ಪೆಕ್ಟರ್‌ಗಳು, ವಿವಿಧ ಪೊಲೀಸ್ ಸಿಬ್ಬಂದಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಒಟ್ಟು 65 ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಕಾಂಗ್ರೆಸ್ ಶಾಸಕರ ಗನ್‌ಮ್ಯಾನ್‌ನನ್ನು ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ನೇಮಕಾತಿಗೆ 

ಹಗರಣದ ರೂವಾರಿ ಎನ್ನಲಾದ ಮತ್ತೊಬ್ಬ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ್‌ಗೆ ಹೈಕೋರ್ಟ್‌ ಆದೇಶದ ಮೇರೆಗೆ ಜಾಮೀನು ಮಂಜೂರಾಗಿದ್ದು, ಡಿ.18ರಂದು ಬಿಡುಗಡೆಯಾಗಿದ್ದಾರೆ. ಈಗ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸರ್ಕಾರವು ಈ ಹುದ್ದೆಗಳಿಗೆ ನೇಮಕಾತಿಯನ್ನು ಸ್ಥಗಿತಗೊಳಿಸಿದ್ದರಿಂದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಗಳ ಕೊರತೆ ಉಂಟಾಗಿದೆ. ‘ನೇಮಕಾತಿ ಸ್ಥಗಿತಗೊಂಡಿದ್ದರಿಂದ ಕೊರತೆಯ ಪರಿಣಾಮ ಇಲಾಖೆಯಲ್ಲಿ ಕಂಡುಬರುತ್ತಿದೆ. ನೇಮಕಾತಿ ಇನ್ನೂ ವಿಳಂಬವಾದರೆ, ಅದು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ನಾವು ಇದನ್ನು ಸರ್ಕಾರಕ್ಕೆ ತಿಳಿಸಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಕಾಂಕ್ಷಿ ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಈ ವಿಷಯವನ್ನು ಸಕ್ರಿಯವಾಗಿ ತೆರೆದಿಟ್ಟಿದೆ. ಪಿಎಸ್‌ಐ ನೇಮಕಾತಿ ಪರೀಕ್ಷೆಯ ಹಗರಣಕ್ಕೆ ಎರಡ್ಮೂರು ವಾರಗಳಲ್ಲಿ ಪರಿಹಾರ ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ:ಪಿಎಸ್‌ಐ ಹಗರಣ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶ

ತನಿಖೆಯ ವೇಳೆ ಕಲಬುರಗಿಯಲ್ಲಿ ಎರಡು ಪ್ರತ್ಯೇಕ ಗ್ಯಾಂಗ್‌ಗಳು ಕಾರ್ಯಾಚರಣೆ ನಡೆಸುತ್ತಿರುವುದು ಪೊಲೀಸರಿಗೆ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಮೊದಲ ತಂಡವು ಇನ್ವಿಜಿಲೇಟರ್‌ಗಳ ನೆರವಿನೊಂದಿಗೆ ಉತ್ತರ ಪತ್ರಿಕೆ ತಿದ್ದುವ ದಂಧೆಯಲ್ಲಿ ತೊಡಗಿತ್ತು. ರುದ್ರಗೌಡ ಪಾಟೀಲ ನೇತೃತ್ವದ ಎರಡನೇ ಗ್ಯಾಂಗ್ ಸಂಪರ್ಕಕ್ಕೆ ಬ್ಲೂಟೂತ್ ಸಾಧನಗಳನ್ನು ಬಳಸುತ್ತಿತ್ತು ಎಂದು ತಿಳಿದುಬಂದಿದೆ.

ಈ ಬ್ಲೂಟೂತ್ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಾನ್ಯ ಆಡಿಯೊ ಸಾಧನಗಳಿಗಿಂತ ಭಿನ್ನವಾಗಿವೆ. ನಕಲು ಉದ್ದೇಶಕ್ಕಾಗಿ ವಿಶೇಷವಾಗಿ ತಯಾರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಸಾಧನಗಳು ಸಿಮ್ ಕಾರ್ಡ್‌ನೊಂದಿಗೆ ಟ್ರಾನ್ಸ್‌ಮಿಟರ್ ಅನ್ನು ಒಳಗೊಂಡಿವೆ. ಅದನ್ನು ಅಭ್ಯರ್ಥಿಗಳ ಶರ್ಟ್‌ಗಳಲ್ಲಿ ಮರೆಮಾಡಲಾಗಿತ್ತು ಎಂದು ತಿಳಿದುಬಂದಿದೆ.
ಹಗರಣದಲ್ಲಿ ಭಾಗಿಯಾಗಿರುವ 52 ಅಭ್ಯರ್ಥಿಗಳನ್ನು ಸಿಐಡಿ ಗುರುತಿಸಿದೆ. ಸರ್ಕಾರವು ಅವರನ್ನು ಪಿಎಸ್ಐ ಪರೀಕ್ಷೆಗಳಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿಷೇಧಿಸಿದೆ. ಇಲ್ಲಿಯವರೆಗೆ, ಹಗರಣಕ್ಕೆ ಸಂಬಂಧಿಸಿದಂತೆ ಒಟ್ಟು 110 ವ್ಯಕ್ತಿಗಳನ್ನು ಬಂಧಿಸಲಾಗಿದೆ. ನೇಮಕಾತಿಗೆ 

ವಿಡಿಯೋ ನೋಡಿ:ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದುವುದು ಕಡ್ಡಾಯ – ಸಚಿವ ಹೆಚ್ ಸಿ ಮಹದೇವಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *