“ವಿಷ ತುಂಬಿಕೊಂಡವರು ವಿಷವನ್ನೇ ಉಗುಳುತ್ತಿರುತ್ತಾರೆ”-ಪಿಣರಾಯಿ ವಿಜಯನ್

ಕೇರಳ ಬಾಂಬ್‍ ಸ್ಫೋಟದ ಬಗ್ಗೆ ಕೇಂದ್ರ ಮಂತ್ರಿಗಳ ಸತ್ಯಾಸತ್ಯ ವಿವೇಚನೆಯಿಲ್ಲದ ಟಿಪ್ಪಣಿಗಳು – ಸಿಪಿಐ(ಎಂ) ಕೇಂದ್ರ ಸಮಿತಿ ಖಂಡನೆ

 ಕೇರಳದ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಮೂವರು ಸತ್ತಿದ್ದಾರೆ, ಹಲವರಿಗೆ ಗಾಯಗಳಾಗಿವೆ. ಇದನ್ನು ಬಲವಾಗಿ ಖಂಡಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿಯು, ರಾಜ್ಯ ಪೊಲೀಸರು ಈಗಾಗಲೇ ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ ಎಂದು ಗಮನಿಸುತ್ತಲೇ,  ಕೇಂದ್ರ ಸಂಪುಟ ಸಚಿವರೊಬ್ಬರು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳದೆ ಸಾಮಾಜಿಕ ಮಾಧ್ಯಮದಲ್ಲಿ ಕೇರಳ ಮತ್ತು ಅದರ ಜನರ ವಿರುದ್ಧ ಕೋಮು ದೂಷಣೆಗಳನ್ನು ತೂರಿದ್ದಾರೆ ಎಂದು ಖಂಡಿಸಿದೆ. ಕೇರಳದ ವಿಶಿಷ್ಟವಾದ ಮತ್ತು ಸರಿಸಾಟಿಯಿಲ್ಲದ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಅಂಶಗಳ ವಿರುದ್ಧ ರಾಜ್ಯದ ಜನರು ಎಂದಿನಂತೆ ಎದ್ದು ನಿಲ್ಲಬೇಕು  ಕೇರಳದ ಜನತೆಗೆ ಕೇಂದ್ರ ಸಮಿತಿಯು ಕರೆ ನೀಡಿದೆ.

ಅಕ್ಟೋಬರ್ 27ರಿಂದ 29 ರ ವರೆಗೆ ನವದೆಹಲಿಯಲ್ಲಿ ನಡೆದ ಕೇಂದ್ರ ಸಮಿತಿಯ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಇದನ್ನು ತಿಳಿಸಲಾಗಿದೆ.

ಈ ಬಗ್ಗೆ ಟಿಪ್ಪಣಿ ಮಾಡುತ್ತ ಕೇರಳದ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಪಿಣರಾಯಿ ವಿಜಯನ್ “ವಿಷ ತುಂಬಿಕೊಂಡವರು ವಿಷವನ್ನು ಉಗುಳುತ್ತಲೇ ಇರುತ್ತಾರೆ” ಎಂದು ಮಾರ್ಮಿಕವಾಗಿ ಟಿಪ್ಪಣಿ ಮಾಡಿದ್ದಾರೆ.

ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯ ನಂತರ ಕೇಂದ್ರ ಸಮಿತಿಯ ಸದಸ್ಯರೆಲ್ಲರೂ ಮೋದಿ ಸರಕಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಭಾರೀ ಬಹುಮತದಿಂದ ಕದನ ವಿರಾಮಕ್ಕೆ ಕರೆಕೊಡುವ ನಿರ್ಣಯವನ್ನು ಅಂಗೀಕರಿಸಿರುವಾಗ ಅದರಿಂದ ದೂರವುಳಿದಿರುವುದನ್ನು ಪ್ರತಿಭಟಿಸಿ ಧರಣಿ ನಡೆಸಿದರು.

“ ನಾನು ತುಷ್ಟೀಕರಣದ ರಾಜಕೀಯ ಮಾಡುತ್ತಿದ್ದೇನೆ,ಇಸ್ರೇಲ್‍ ವಿರುದ್ಧ ಪ್ರತಿಭಟಿಸುತ್ತಿದ್ದೇನೆ ಎಂದೊಬ್ಬ ಕೇಂದ್ರ ಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಅವರೊಬ್ಬ ಮಂತ್ರಿ, ತನಿಖಾ ಸಂಸ್ಥೆಗಳಿಗೆ ಅವರಾದರೂ ಕನಿಷ್ಟ ಗೌರವವನ್ನು ಕೊಡಬೇಕು; ತನಿಖೆ ನಡೆಯುತ್ತಿದೆ. ಇಂತಹ ಒಂದು ಗಂಭೀರ ಘಟನೆಯಲ್ಲಿ , ಇಂತಹ ಆರಂಭಿಕ ಹಂತದಲ್ಲಿ, ಅವರೆಲ್ಲ ಒಂದು ನಿರ್ದಿಷ್ಟ ಜನಸಮುದಾಯದ ಮೇಲೆ ಗುರಿಯಿಟ್ಟು ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸುತ್ತ, ಇದು ಅವರ ಕೋಮುವಾದಿ ಅಜೆಂಡಾವನ್ನು ಆಧರಿಸಿದೆ, ಆದರೆ ಕೇರಳಕ್ಕೆ ಇಂತಹ ಅಜೆಂಡಾವೇನೂ ಇಲ್ಲ, ಅದು ಸದಾ ಕೋಮುವಾದದ ವಿರುದ್ಧ ನಿಂತಿದೆ ಎಂದು ವಿಜಯನ್‍ ಹೇಳಿದರು. “ರಾಜೀವ ಚಂದ್ರಶೇಖರರ ವಿಕೃತಗೊಂಡ ಮನಸ್ಸು ಅದನ್ನು ನೋಡಲಾರದಷ್ಟೇ, ಆದರೆ ಕೇರಳದ ಅಸ್ಮಿತೆಯನ್ನು ಧ್ವಂಸ ಮಾಡಲು ಸಾಧ್ಯವಿಲ್ಲ” ಎಂದಿರುವ ಅವರು ಮುಂದುವರೆದು “ಯಾವ ಆಧಾರದಲ್ಲಿ ಈ ಮಂದಿ ಒಂದು ಸಮುದಾಯದ ಮೇಲೆ ಒಂದು ವಿಶೇಷ ಕೋನದಿಂದ ಗುರಿಯಿಡುತ್ತಾರೆ? ಆತನಿಗೇನಾಗಿದೆ ಎಂದೇನೂ ನಾನು ಕೇಳುವುದಿಲ್ಲ. ಅವರು ಬಿಜೆಪಿಯ ರಾಜಕೀಯದ ಬಗ್ಗೆ ಚೆನ್ನಾಗಿ ತಿಳಿದೇ ರಾಜಕೀಯ ಪ್ರವೇಶಿಸಿದವರು. ಅವರೊಂದಿಗೆ ನಾನು ಮಾತಾಡಿ, ಈ ವಿಷಯವನ್ನು ವಿವರವಾಗಿ ತಿಳಿಸಿದ್ದೆ. ಅವರ ಮತ್ತು ಅವರ ಸಹಯೋಗಿಗಳ ಟಿಪ್ಪಣಿಗಳು ಒಂದು ವಿಭಾಗದ ಮೇಲೆ ಗುರಿಯಿಟ್ಟಂತವುಗಳು” ಎಂದು ಪಿಣರಾಯಿ ವಿಜಯನ್‍ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ | ಸ್ಫೋಟ ಪ್ರಕರಣ: 3 ಸಾವು, ಹಮಾಸ್‌ ದೂಷಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ

ಮಾನವೀಯ ದೃಷ್ಟಿಯ ಕದನ ವಿರಾಮ, ಎಲ್ಲಾ ನಾಗರಿಕರಿಗೆ ರಕ್ಷಣೆ ಮತ್ತು ತಕ್ಷಣದ ಮಾನವೀಯ ನೆಲೆಯಲ್ಲಿ ನೆರವಿಗೆ ಕರೆ ನೀಡುವ ವಿಶ್ವ ಸಂಸ್ಥೆಯ ನಿರ್ಣಯಕ್ಕೆ ಮತ ನೀಡಲು ಮೋದಿ ಸರ್ಕಾರ ನಿರಾಕರಿಸಿದ್ದನ್ನು ತೀವ್ರವಾಗಿ ಖಂಡಿಸುತ್ತ, ಮೋದಿ ಸರ್ಕಾರದ ಗೈರುಹಾಜರಿ ಮತ್ತು ಸಾಮ್ರಾಜ್ಯಶಾಹಿ ಯುದ್ಧಕೋರರ ಪಕ್ಷ ವಹಿಸಿರುವುದು  ಪ್ಯಾಲೆಸ್ತೀನ್ ಗುರಿಸಾಧನೆಗೆ  ಭಾರತದ ಬೆಂಬಲದ ಇತಿಹಾಸ ಮತ್ತು ಪರಂಪರೆಗೆ ವಿರುದ್ಧವಾಗಿದೆ ಎಂದಿರುವ ಸಿಪಿಐ(ಎಂ)ನ  ಕೇಂದ್ರಸಮಿತಿಯ ಎಲ್ಲ ಸದಸ್ಯರುಗಳೂ , ಇದನ್ನು ಪ್ರತಿಭಟಿಸಿ  ಮತ್ತು  ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಸಭೆಯ ನಂತರ ಧರಣಿ ನಡೆಸಿದರು. . ಇದಕ್ಕೆ ಮೊದಲು, ಇಸ್ರೇಲ್  ಎಲ್ಲಾ ಅಂತರರಾಷ್ಟ್ರೀಯ ಕಾನೂನುಗಳನ್ನು ನಿರ್ಲಜ್ಜವಾಗಿ ಉಲ್ಲಂಘಿಸಿ ನರಮೇಧಕಾರೀ ಯುದ್ಧ ನಡೆಸುತ್ತಿದೆ ಎನ್ನುತ್ತ ಕೇಂದ್ರ ಸಮಿತಿ ಪ್ಯಾಲೆಸ್ಟೈನಿನ ನರಳುತ್ತಿರುವ ಜನರಿಗೆ ಸೌಹಾರ್ದವನ್ನು  ವ್ಯಕ್ತಪಡಿಸಿತ್ತು. ಇಲ್ಲಿಯವರೆಗೆ, ಅಧಿಕೃತವಾಗಿ, 4000 ಮಕ್ಕಳು ಸೇರಿದಂತೆ 8000 ಜನರು ಕೊಲ್ಲಲ್ಪಟ್ಟಿದ್ದಾರೆ, ಮತ್ತು ಗಾಜಾದಲ್ಲಿ ಮಾತ್ರವಲ್ಲದೆ ಪಶ್ಚಿಮ ದಂಡೆಯಲ್ಲಿಯೂ ಸಹ ಹತ್ಯೆಗಳು ವರದಿಯಾಗುತ್ತಿದ್ದು, ಪ್ರತಿದಿನವೂ ಸತ್ತವರ, ಗಾಯಗೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳೆಯುತ್ತಿರುವ ಬೃಹತ್ ಜಾಗತಿಕ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಸಿಪಿಐ(ಎಂ) ಕೂಡ ಭಾಗಿಯಾಗುತ್ತಿದೆ ಎನ್ನುತ್ತ  ಇಸ್ರೇಲ್ ತಕ್ಷಣವೇ ಕದನ ವಿರಾಮವನ್ನು ಘೋಷಿಸಬೇಕು ಮತ್ತು 1967ರ ಮೊದಲಿನ ಪೂರ್ವದ ಗಡಿಗಳೊಂದಿಗೆ, ರಾಜಧಾನಿಯಾಗಿ ಪೂರ್ವ ಜೆರುಸಲೆಮನ್ನು ರಾಜಧಾನಿಯಾಗಿ ಹೊಂದಿರುವ ಪ್ಯಾಲೆಸ್ಟೀನಿಯನ್ ಪ್ರಭುತ್ವ ಸ್ಥಾಪನೆಯಾಗಬೇಕು ಎಂದು ಆದೇಶಿಸುವ ವಿಶ್ವಸಂಸ್ಥೆಯ 2-ಪ್ರಭುತ್ವ  ಪರಿಹಾರದ ಅನುಷ್ಠಾನವಾಗಬೇಕು ಎಂದು  ಸಿಪಿಐ(ಎಂ) ಕೇಂದ್ರ ಸಮಿತಿ  ಆಗ್ರಹಿಸಿದೆ.

ಪ್ಯಾಲೆಸ್ತೀನ್ ಜನರು ತಾಯ್ನಾಡಿಗಾಗಿ ಮತ್ತು ಇಸ್ರೇಲಿ ನರಮೇಧದ ಆಕ್ರಮಣದ ವಿರುದ್ಧ ನಡೆಸುತ್ತಿರುವ ಹೋರಾಟದೊಂದಿಗೆ ಸೌಹಾರ್ದ ವ್ಯಕ್ತಪಡಿಸುವ ಕಾರ್ಯಾಚರಣೆಗಳನ್ನು ಹೆಚ್ಚಿಸಬೇಕು ಎಂದು ಪಕ್ಷದ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

ಗಾಝಾದಲ್ಲಿ ಮಾನವೀಯತೆಯ ನೆಲೆಯಲ್ಲಿ ಕದನ ವಿರಾಮಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕರೆಯಲ್ಲದೆ , ಐದು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆಗಳು, ಮಣಿಪುರದಲ್ಲಿ ಮುಂದುವರೆಯುತ್ತಿರುವ ಧ್ವಂಸ ಕಾರ್ಯ, ಹತೋಟಿಗೆ ಬಾರದ ಬೆಲೆಯೇರಿಕೆಗಳು ಮತ್ತು ನಿರುದ್ಯೋಗ ಉಂಟುಮಾಡಿರುವ ಸಂಕಟಗಳು, ಒಂದು ರಾಷ್ಟ್ರ-ಒಂದು ಚುನಾವಣೆಯೆಂಬ ಪ್ರಸ್ತಾವನೆ, ಜಾತಿಗಣತಿ ಮುಂತಾದ ಪ್ರಸಕ್ತ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಬೆಳವಣಿಗೆಗಳನ್ನು ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ಚರ್ಚಿಸಿತು  ಎಂದು ತಿಳಿದು ಬಂದಿದೆ.

ಪ್ಯಾಲೆಸ್ಟೈನ್‍ ಜನತೆಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲು ಕರೆ ನೀಡಿರುವುದಲ್ಲದೆ, ಸಿಪಿಐ(ಎಂ) ಕೇಂದ್ರ ಸಮಿತಿ

  • ವಿದ್ಯುಚ್ಛಕ್ತಿಯನ್ನು ಖಾಸಗೀಕರಣಗೊಳಿಸುವ ಪ್ರಯತ್ನದಲ್ಲಿ, ಮೋದಿ ಸರ್ಕಾರವು ವಿದ್ಯುತ್ ಗ್ರಾಹಕರಿಗೆ ಪ್ರಿಪೇಯ್ಡ್ ವ್ಯವಸ್ಥೆಗಳೊಂದಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂಲಕ ಹೆಚ್ಚಿನ ದರಗಳ ಮೂಲಕ ಜನತೆಯ ಮೇಲೆ ತೀವ್ರ ಸಂಕಷ್ಟಗಳನ್ನು ಹೇರಿ, ವಿದ್ಯುತ್ ಉತ್ಪಾದನೆಯನ್ನು ಗರಿಷ್ಟ ಲಾಭ ಗಳಿಕೆಗಾಗಿ ಖಾಸಗಿ ಸಂಸ್ಥೆಗಳಿಗೆ  ಹಸ್ತಾಂತರಿಸಲು ಅದು ಮುಂದಾಗಿದೆ. ಇದರಿಂದ ಬಡವರು ಮತ್ತು ರೈತರ ಮೇಲೆ ಅಸಹನೀಯ ಹೊರೆ ಬೀಳಲಿದೆ. ಎಲ್ಲೆಲ್ಲಿ ಇಂತಹ ಮೀಟರ್ ಅಳವಡಿಕೆ ಜಾರಿಯಾಗುತ್ತಿದೆಯೋ ಅಲ್ಲಲ್ಲಿ ಅದರ ಅಳವಡಿಕೆಯನ್ನು ತಡೆಯಲು ಪ್ರತಿಭಟನಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದೆ.
  • ನವೆಂಬರ್ 26-28 ರ ನಡುವೆ ದೇಶಾದ್ಯಂತ ನಡೆಯುವ ಕಿಸಾನ್-ಮಜ್ದೂರ್ ಮಹಾಪಡಾವ್‌ಗೆ ಪಕ್ಷದ ಬೆಂಬಲವನ್ನು ವ್ಯಕ್ತಪಡಿಸಿದೆ ಮತ್ತು
  • ಡಿಸೆಂಬರ್ 4, 2023 ರಂದು ದಲಿತ ಸಂಘಟನೆಗಳು ಮತ್ತು ವೇದಿಕೆಗಳು ನೀಡಿದ ಸಂಸದ್‍ ಚಲೋ ಕರೆಗೆ ಸೌಹಾರ್ದ ಬೆಂಬಲ ನೀಡಲು ನಿರ್ಧರಿಸಿದೆ.

ವಿಡಿಯೋ ನೋಡಿ: ಬಿಸಿಯೂಟ ನೌಕರರ ಬದುಕು ಹಳಸದಿರಲಿ Janashakthi Media

Donate Janashakthi Media

Leave a Reply

Your email address will not be published. Required fields are marked *