ತಿರುವನಂತಪುರಂ: ಕೊಚ್ಚಿಯ ಕಲಮಸ್ಸೆರಿಯಲ್ಲಿ ಅಕ್ಟೋಬರ್ 29ರ ಭಾನುವಾರ ಪ್ರಾರ್ಥನಾ ಸಭೆಯಲ್ಲಿ ನಡೆದ ಸ್ಪೋಟದ ಬಗ್ಗೆ “ಕೋಮು ದ್ವೇಷ”ದ ಹೇಳಿಕೆ ನೀಡಿ ಬಿಜೆಪಿ ನಾಯಕ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಭಯ ಹರಡದಂತೆ ಮಾಧ್ಯಮಗಳು ನಿರ್ವಹಿಸಿದ ಪಾತ್ರವನ್ನು ಶ್ಲಾಘಸಿದ ಪಿಣರಾಯಿ ವಿಜಯನ್, ಕೆಲವು ಜನರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಅವಕಾಶವನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೇರಳ | ಸ್ಫೋಟ ಪ್ರಕರಣ: 3 ಸಾವು, ಹಮಾಸ್ ದೂಷಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ
ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳ ನಂತರ, ಕೇಂದ್ರ ಐಟಿ ಸಚಿವರಾದ ಚಂದ್ರಶೇಖರ್ ಅವರು ಕೇರಳ ಸಿಎಂ ಮತ್ತು ಆಡಳಿತಾರೂಢ ಸಿಪಿಐ(ಎಂ), ಇಸ್ರೇಲ್-ಹಮಾಸ್ ಸಮಸ್ಯೆಯಲ್ಲಿ ಪ್ಯಾಲೆಸ್ತೀನ್ಗೆ ತೋರುತ್ತಿರುವ ಬೆಂಬಲದ ಬಗ್ಗೆ ವಾಗ್ದಾಳಿ ನಡೆಸಿದ್ದರು.
ಈ ವೇಳೆ ಟ್ವೀಟ್ ಮಾಡಿದ್ದ ಚಂದ್ರಶೇಖರ್ ಅವರು,”ಭ್ರಷ್ಟಾಚಾರದ ಆರೋಪದ ಮೂಲಕ ಅಪಖ್ಯಾತಿ ಪಡೆದ ಸಿಎಂ ಪಿನರಾಯಿ ವಿಜಯನ್ ಅವರು ನಾಚಿಕೆಯಿಲ್ಲದೆ ಕೊಳಕು ರಾಜಕಾರಣ ನಡೆಸುತ್ತಿದ್ದಾರೆ. ಅವರು ದೆಹಲಿಯಲ್ಲಿ ಕುಳಿತು ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ, ಕೇರಳದಲ್ಲಿ ಭಯೋತ್ಪಾದಕ ಹಮಾಸ್ನಿಂದ ಜಿಹಾದ್ಗಾಗಿ ಬಹಿರಂಗ ಕರೆ ನೀಡಲಾಗಿದ್ದು, ಇದು ಅಮಾಯಕ ಕ್ರಿಶ್ಚಿಯನ್ನರ ಮೇಲೆ ದಾಳಿ ಬಾಂಬ್ ಸ್ಫೋಟಗಳನ್ನು ಉಂಟುಮಾಡುತ್ತಿವೆ” ಎಂದು ಯಾವುದೆ ಆಧಾರವಿಲ್ಲದೆ ಆರೋಪ ಮಾಡಿದ್ದರು.
Dirty shameless appeasement politics by a discredited CM (and HM) @pinarayivijayan besieged by corruption charges
Sitting in Delhi and protesting against Israel , when in Kerala open calls by Terrorist Hamas for Jihad is causing attacks and bomb blasts on innocent christians https://t.co/MQH0ycZsqu
— Rajeev Chandrasekhar 🇮🇳 (@Rajeev_GoI) October 29, 2023
ಅವರ ಈ ಹೇಳಿಕೆಗೆ ತೀವ್ರವಾಗಿ ಹರಿಹಾಯ್ದ ಪಿಣರಾಯಿ ವಿಜಯನ್, ಚಂದ್ರಶೇಖರ್ ಅವರ ಹೆಸರನ್ನು ತೆಗೆದುಕೊಳ್ಳದೆ ಪತ್ರಿಕಾಗೋಷ್ಠಿಯಲ್ಲಿ ಟ್ವೀಟ್ ಓದಿ, ಪ್ರಕರಣದ ತನಿಖೆ ಇನ್ನೂ ನಡೆಯುತ್ತಿರುವಾಗ ಸಚಿವರೊಬ್ಬರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಅಜೆಂಡಾವನ್ನು ಹುಟ್ಟುಹಾಕಿದ್ದಾರೆ ಎಂದು ಹೇಳಿದ್ದಾರೆ.
“ಅಪರಾಧಿ ಯಾರೇ ಆಗಿದ್ದರೂ ತಪ್ಪಿಸಿಕೊಳ್ಳಬಾರದು ಎಂಬ ನಿಲುವನ್ನು ರಾಜ್ಯ ಸರ್ಕಾರ ಹೊಂದಿದೆ. ಆದರೆ ಸಚಿವರು ಯಾವುದೇ ಆಧಾರವಿಲ್ಲದೆ ನಿರ್ದಿಷ್ಟ ಸಮುದಾಯವನ್ನು ಯಾವ ಆಧಾರದ ಮೇಲೆ ಗುರಿಯಾಗಿಸುತ್ತಿದ್ದಾರೆ? ಇದು ಅವರ ಕೋಮುವಾದಿ ಅಜೆಂಡಾದ ಭಾಗವಾಗಿದೆ. ಕೋಮು ದ್ವೇಷವನ್ನು ಹರಡಲು ಘಟನೆಯನ್ನು ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಸಿಎಂ ಪಿಣರಾಯಿ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವಸಂಸ್ಥೆ ಎಚ್ಚರಿಕೆ – ಭಾರತದ ಅಂತರ್ಜಲ ಕುಸಿತದತ್ತ!
ಭಾನುವಾರ ಬೆಳಿಗ್ಗೆ ಕೊಚ್ಚಿಯ ಕಲಮಸ್ಸೆರಿಯ ಜಮ್ರಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಕ್ರಿಶ್ಚಿಯನ್ ಧರ್ಮದ “ಯಹೋವನ ಸಾಕ್ಷಿಗಳು” ಎಂಬ ಪಂಗಡದ ಮೂರು ದಿನಗಳ ಸಮಾವೇಶದ ಪ್ರಾರ್ಥನಾ ಸಭೆ ನಡೆಯುತ್ತಿರುವಾಗ ಸತತ ಮೂರು ಸರಣಿ ಸ್ಫೋಟಗಳು ನಡೆದಿದ್ದು ವರದಿಯಾಗಿವೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನೆಗೆ ತಾನೆ ಕಾರಣ ಎಂದು ಕೊಚ್ಚಿ ಮೂಲದ ವ್ಯಕ್ತಿಯೊಬ್ಬರು ಸ್ಫೋಟದ ಹೊಣೆ ಹೊತ್ತು ಫೇಸ್ಬುಕ್ನಲ್ಲಿ ವಿಡಿಯೊ ಅಪ್ಲೋಡ್ ಮಾಡಿದ್ದು, ನಂತರ ತ್ರಿಶೂರ್ನ ಕೊಡಕರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಆರೋಪಿಯನ್ನು ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು, ತಾನು ಈ ಹಿಂದೆ “ಯಹೋವನ ಸಾಕ್ಷಿಗಳು” ಪಂಗಡದ ಸದಸ್ಯನಾಗಿದ್ದು, ಆದರೆ ಈ ಪಂಗಡ ಪಕ್ಷಪಾತ ಮತ್ತು ರಾಷ್ಟ್ರವಿರೋಧಿ ಸಿದ್ಧಾಂತಗಳನ್ನು ಹೊಂದಿದ್ದರಿಂದ ಭ್ರಮನಿರಸನಗೊಂಡು ಸಮಾವೇಶದಲ್ಲಿ ಸ್ಫೋಟಕ ಸಾಧನಗಳನ್ನು ಇರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ವರದಿಗಳ ಪ್ರಕಾರ ಆರೋಪಿಯು ಮಧ್ಯಾಹ್ನ 1.30 ರ ಸುಮಾರಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ವಿಡಿಯೊ ನೋಡಿ: ಕುಸಿಯುತ್ತಿದೆ ಲಿಂಗಾನುಪಾತ- ಸಮಾಜ ಮತ್ತು ಸರಕಾರದ ಜವಾಬ್ದಾರಿ ಏನು?