ದೋಹಾ: ಕತಾರ್‌ನಲ್ಲಿ ಬೇಹುಗಾರಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಲಾಗಿದೆ. ಆರೋಪಿಗಳು ಈ ಹಿಂದೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು ವರದಿಗಳು ಹೇಳಿವೆ. ಪ್ರಸ್ತುತ ಎಲ್ಲಾ ಎಂಟು ಮಂದಿ ಕತಾರ್‌ನ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸರ್ವಿಸ್ ಜಲಾಂತರ್ಗಾಮಿ ಸಂಸ್ಥೆಯು ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿಯನ್ನು ನೀಡುತ್ತಿತ್ತು. ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದೆ ಮತ್ತು ಸೂಕ್ಷ್ಮ ದಾಖಲೆಗಳನ್ನು ರವಾನಿಸುತ್ತಿದೆ ಎಂದು ಕತಾರ್ ಆರೋಪಿಸಿದ ನಂತರ 2023ರ ಮೇ ತಿಂಗಳಲ್ಲಿ ಸಂಸ್ಥೆಯನ್ನು ಮುಚ್ಚಲಾಗಿತ್ತು.
ಇದನ್ನೂ ಓದಿ: ಚಿಕ್ಕಬಳ್ಳಾಪುರ: ನಿಂತಿದ್ದ ಲಾರಿಗೆ ಟಾಟಾ ಸುಮೋ ಡಿಕ್ಕಿ; ಭೀಕರ ಅಪಘಾತದಲ್ಲಿ 13 ಮಂದಿ ಸಾವು
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮೋಡೋರ್ ಅಮಿತ್ ನಾಗ್ಪಾಲ್, ಸಿಡಿಆರ್ ಪೂರ್ಣೇಂದು ತಿವಾರಿ, ಸಿಡಿಆರ್ ಸುಗುಣಾಕರ್ ಪಕಾಲ, ಸಿಡಿಆರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಪ್ರಸ್ತುತ ಮರಣದಂಡನೆಗೆ ಗುರಿಯಾಗಿದ್ದಾರೆ. ಆಗಸ್ಟ್ 2022 ರಿಂದಲೂ ಅವರು ಏಕಾಂತ ಬಂಧನದಲ್ಲಿದ್ದರು.
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 75 ಭಾರತೀಯ ಪ್ರಜೆಗಳನ್ನು 31 ಮೇ 2023 ರೊಳಗೆ ಕೆಲಸ ತೊರೆಯುವಂತೆ ಕೇಳಲಾಗಿದ್ದು, ಅವರ ವೀಸಾಗಳನ್ನು ರದ್ದುಗೊಳಿಸಲಾಯಿತು ಎಂದು ದೋಹಾ ನ್ಯೂಸ್ ಹೇಳಿದೆ. ಈ ಎಲ್ಲಾ ನೌಕರರಿಗೆ ಪ್ಯಾಕೇಜ್ ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: ಇಸ್ರೇಲ್‌ನಿಂದ ಗಾಜಾ ನರಮೇಧ | ಪ್ಯಾಲೆಸ್ತೀನ್ ಬೆಂಬಲಿಸಿ ಯುರೋಪಿನಾದ್ಯಂತ ರ‍್ಯಾಲಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನ್ಯಾಯಾಲಯದ ತೀರ್ಪಿನಿಂದ ಆಘಾತವಾಗಿದೆ ಎಂದು ತಿಳಿಸಿದ್ದು, “ಪ್ರಸ್ತುತ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಹಾಗೂ ಅದನ್ನು ನಿಕಟವಾಗಿ ಅನುಸರಿಸುತ್ತಿದ್ದೇವೆ. ನಾವು ಕಾನೂನು ಸಹಾಯವನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ. ಈ ಪ್ರಕರಣದ ವಿಚಾರಣೆಯ ಗೌಪ್ಯ ಸ್ವರೂಪದ ಕಾರಣ, ಈ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ” ಎಂದು ಹೇಳಿದೆ.
“ಅಲ್ ದಹ್ರಾ ಕಂಪನಿಯ 8 ಭಾರತೀಯ ಉದ್ಯೋಗಿಗಳನ್ನು ಒಳಗೊಂಡ ಪ್ರಕರಣದಲ್ಲಿ ಕತಾರ್‌ನ ಪ್ರಥಮ ನಿದರ್ಶನದ ನ್ಯಾಯಾಲಯವು ಇಂದು ತೀರ್ಪು ನೀಡಿದೆ ಎಂದು ನಮಗೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಮರಣದಂಡನೆಯ ತೀರ್ಪಿನಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಆರೋಪಿಗಳ ಕುಟುಂಬದ ಸದಸ್ಯರು ಮತ್ತು ಕಾನೂನು ತಂಡದೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲಾ ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತಿದ್ದೇವೆ” ಎಂದು ವಿದೇಶಾಂಗ ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ. ಬೇಹುಗಾರಿಕೆ
ವಿಡಿಯೊ ನೋಡಿ: ಬೆಳಕಿನ ಚಿತ್ತಾರದಲ್ಲಿ ಮೈಸೂರು ದಸರಾ