‘ನನ್ನ ತಂಗಿಯನ್ನು ಕೊಂದಿದ್ದಾರೆ’ | ನ್ಯಾಯಕ್ಕಾಗಿ ಸಿಎಂ ಆದಿತ್ಯನಾಥ್ ಮುಂದೆ ದಯನೀಯವಾಗಿ ಮೊರೆ ಇಟ್ಟ ಮಹಿಳೆ

ಹತ್ರಾಸ್: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ “ಸರ್, ನನ್ನ ಸಹೋದರಿಯನ್ನು ಕೊಂದಿದ್ದಾರೆ, ನಮಗೆ ನ್ಯಾಯ ನೀಡಿ” ಎಂದು ಮಹಿಳೆಯರಿಬ್ಬರು ಕೈ ಮುಗಿದು ಅಳುತ್ತಾ ದಯನೀಯವಾಗಿ ಕೇಳಿಕೊಂಡಿರುವ ಘಟನೆ ಅಕ್ಟೋಬರ್ 18 ಬುಧವಾರ ಇಲ್ಲಿ ನಡೆದಿದೆ. ಕೈ ಬೀಸುತ್ತಾ ಅಳುವ ಮೂಲಕ ವೇದಿಕೆಯಲ್ಲಿರುವವರನ್ನು ಗಮನ ಸೆಳೆಯಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಹತ್ರಾಸ್‌ನಲ್ಲಿ ನಡೆದ ನಾರಿ ಶಕ್ತಿ ವಂದನ್ ಸಮ್ಮೇಳನದ ವೇಳೆ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಮಹಿಳೆಯರಿಬ್ಬರು ಅಳುತ್ತಾ ಮನವಿ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಇದನ್ನೂ ಓದಿ:  “ದಿಲ್ಲಿ ಪೊಲಿಸ್‍ನ ನ್ಯೂಸ್‍ಕ್ಲಿಕ್  ಎಫ್‍ಐಆರ್ ಮಾನಹಾನಿಕರ ಆರೋಪಗಳು ಮತ್ತು ತಪ್ಪು ಸಂಗತಿಗಳಿಂದ ತುಂಬಿದೆ” – ನೆವಿಲ್‍ ರಾಯ್‍ ಸಿಂಘಂ

ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಘಟನೆ ನಡೆದಿದೆ. ಮಹಿಳೆಯೊಬ್ಬರು, “ಸರ್, ನನ್ನ ಸಹೋದರಿಯನ್ನು ಕೊಂದಿದ್ದಾರೆ. ದಯವಿಟ್ಟು ನ್ಯಾಯ ಕೊಡಿ” ಎಂದು ಅಳುತ್ತಾ ದಯನಿಯವಾಗಿ ಜೋರಾಗಿ ಕೂಗಿದ್ದಾರೆ. ಅದೇ ವೇಳೆ ಅವರ ಬಳಿಯಲ್ಲಿ ನಿಂತಿದ್ದ ಮತ್ತೊಬ್ಬ ಮಹಿಳೆ ಕೂಡಾ, “ಯೋಗಿ ಜೀ ನ್ಯಾಯ ಕೊಡಿಸಿ, ನ್ಯಾಯ ಕೊಡಿಸಿ” ಎಂದು ಮನವಿ ಮಾಡುತ್ತಿರುವುದು ಕೇಳಿಬಂದಿದೆ.

ಅಷ್ಟರಲ್ಲಿ ಸ್ಥಳದಲ್ಲಿದ್ದ ಮಹಿಳಾ ಪೊಲೀಸರು ಅಳುತ್ತಿದ್ದ ಮಹಿಳೆ ಹಾಗೂ ಅವರ ಜೊತೆಗೆ ಇದ್ದ ಮತ್ತೊಬ್ಬ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದಾರೆ. ಕೆಲವು ಟ್ವಿಟರ್ ಬಳಕೆದಾರರು ಮಹಿಳೆಯರಿಬ್ಬರು ತಾಯಿ-ಮಗಳು ಎಂದು ಉಲ್ಲೇಖಿಸಿದ್ದಾರೆ.

ಈ ವಿಡಿಯೊಗೆ ಹತ್ರಾಸ್ ಪೊಲೀಸರು ಪ್ರತಿಕ್ರಿಯಿಸಿದ್ದು,”ಈ ಕುರಿತು ಸಿರಾವು ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 03.10.23 ರಂದು ಪ್ರಮುಖ ಆರೋಪಿ (ಮೃತಳ ಪತಿ) ಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಸಾಕ್ಷ್ಯವನ್ನು ವಿಶ್ಲೇಷಿಸಲು ಮತ್ತು ಅದನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡಲು ಎಎಸ್ಪಿ ಹತ್ರಾಸ್‌ನ ಎಸ್ಪಿ ಮತ್ತು ಸಿರಾವು ಸಿಒ ಅವರನ್ನು ಅವರ ನಿಕಟ ಮೇಲ್ವಿಚಾರಣೆಯಲ್ಲಿ ನಿಯೋಜಿಸಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಗಾಜಾ ಬೆಂಬಲಿಸಿ 10 ಸಾವಿರ ಯಹೂದಿಗಳ ರ‍್ಯಾಲಿ | ಅಮೆರಿಕ – ಇಸ್ರೇಲ್ ವಿರುದ್ಧ ಆಕ್ರೋಶ; ಬಂಧನ

ಇಬ್ಬರು ಮಹಿಳೆಯರು ಯಾರು ಮತ್ತು ಯಾವ ಪ್ರಕರಣದಲ್ಲಿ ನ್ಯಾಯ ಕೇಳುತ್ತಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ವೇಳೆ ಅಲ್ಲಿ ನಿಂತಿದ್ದ ಎಲ್ಲ ಮಾಧ್ಯಮದವರ ಗಮನ ಅವರತ್ತ ಹರಿದಿದ್ದು ಘಟನೆಯನ್ನು ಸೆರೆ ಹಿಡಿದಿದ್ದಾರೆ. ಅದೇ ಸ್ಥಳದಲ್ಲಿ ಮತ್ತಿಬ್ಬರು ಮಹಿಳೆಯರನ್ನು ಬಿಜೆಪಿ ಕಾರ್ಯಕರ್ತರು ತಳ್ಳಾಡಿ ಹೊರ ದಬ್ಬುವ ವಿಡಿಯೊ ಕೂಡಾ ವೈರಲ್ ಆಗಿದೆ. ಈ ವೇಳೆ ವೇದಿಕೆಯಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಾತನಾಡುತ್ತಿರುವುದು ಕೇಳಬಹುದಾಗಿದೆ. ಆದಿತ್ಯನಾಥ್

ಈ ಘಟನೆಗೂ ಒಂದು ದಿನ ಹಿಂದೆ, ಉತ್ತರ ಪ್ರದೇಶದ ಜಲೌನ್‌ನಲ್ಲಿ ಆಯೋಜಿಸಲಾದ ನಾರಿ ಶಕ್ತಿ ವಂದನ್ ಸಮ್ಮೇಳನದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಜಗಳವಾಡಿದ ಘಟನೆ ನಡೆದಿತ್ತು. ಮಹಿಳೆಯರು ಹೊಡೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಯುಪಿ ಪೊಲೀಸರು, ಈ ಬಗ್ಗೆ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

2020ರ ಸೆಪ್ಟೆಂಬರ್ 14 ರಂದು ಹತ್ರಾಸ್‌ನಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಭಾರಿ ಆಕ್ರೋಶ ಹುಟ್ಟುಹಾಕಿತ್ತು. ಇದರಲ್ಲಿ ಗ್ರಾಮದ ನಾಲ್ವರು ಮೇಲ್ಜಾತಿ ಯುವಕರು ಆರೋಪಿಗಳಾಗಿದ್ದಾರೆ. ವಿವಾದಾತ್ಮಕ ಘಟನೆಯಲ್ಲಿ ಪೊಲೀಸರು ಮಧ್ಯರಾತ್ರಿ ವೇಳೆ ಬಾಲಕಿಯನ್ನು ಅಂತ್ಯಸಂಸ್ಕಾರ ಮಾಡಿದ್ದರು. ಪ್ರಕರಣದ ಮೂವರು ಆರೋಪಿಗಳು ಈಗಾಗಲೆ ಖುಲಾಸೆಗೊಂಡಿದ್ದಾರೆ.

ವಿಡಿಯೊ ನೋಡಿ: “ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” Janashakthi Media

Donate Janashakthi Media

Leave a Reply

Your email address will not be published. Required fields are marked *