ಆಸ್ಪತ್ರೆ ಮೇಲೆ ಬಾಂಬ್ ದಾಳಿ | ಇಸ್ರೇಲ್ ವಿರುದ್ಧ ವಿಶ್ವದಾದ್ಯಂತ ಬೃಹತ್ ಪ್ರತಿಭಟನೆ

ಪ್ಯಾಲೆಸ್ತೀನ್: ಇಸ್ರೇಲ್ ಸೇನೆಯು ಗಾಜಾದ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಮಾಡಿ 500ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿರುವುದನ್ನು ವಿರೋಧಿಸಿ ಹಾಗೂ ಪ್ಯಾಲೆಸ್ತೀನಿಯನ್ನರನ್ನು ಬೆಂಬಲಿಸಿ ಕೋಟ್ಯಾಂತರ ಜನರು ಪ್ರಪಂಚದಾದ್ಯಂತ ಬೀದಿಗಿಳಿದಿದ್ದಾರೆ. ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್, ಲೆಬನಾನ್, ಜೋರ್ಡಾನ್, ಲಿಬಿಯಾ, ಯೆಮೆನ್, ಟುನೀಶಿಯಾ, ಟರ್ಕಿ, ಮೊರಾಕೊ, ಸ್ಪೇನ್, ಅಮೆರಿಕಾ ಮತ್ತು ಇರಾನ್‌ಗಳಲ್ಲಿ ನಡೆದ ಪ್ರತಿಭಟನೆಯ ವೇಳೆ ಇಸ್ರೇಲ್‌ನ ನಡೆಯನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ.

ಈ ನಡುವೆ ಬುಧವಾರ ಪ್ಯಾಲೆಸ್ತೀನ್‌ನ ವೆಸ್ಟ್ ಬ್ಯಾಂಕ್‌ನಲ್ಲಿರುವ ರಾಮಲ್ಲಾ ನಗರದಲ್ಲಿ ನಡೆಸಿದ ಪ್ರತಿಭಟನೆಯ ವೇಳೆ ಇಸ್ರೇಲಿ ಪಡೆಯು 15 ಮತ್ತು 17 ವರ್ಷ ವಯಸ್ಸಿನ ಇಬ್ಬರು ಪ್ಯಾಲೆಸ್ತೀನಿಯನ್ನರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಬಾಲಕರಿಬ್ಬರು ಇಸ್ರೇಲ್ ವಿರುದ್ಧದ ಪ್ರತಿಭಟನೆಯ ವೇಳೆ ಟೈರ್‌ಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾಗ ಇಸ್ರೇಲ್ ಸೇನೆಯು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಆಸ್ಪತ್ರೆಯ ಮೇಲೆ ಬಾಂಬ್ ಸುರಿಸಿ ಜನರ ಕಗ್ಗೊಲೆ ಮಾಡಿದ ಇಸ್ರೇಲ್ – ಪ್ರಧಾನಿ ಮೋದಿ ಖಂಡನೆ

ಇಸ್ರೇಲಿ ಆಕ್ರಮಿತ ವೆಸ್ಟ್ ಬ್ಯಾಂಕ್, ಲೆಬನಾನ್, ಜೋರ್ಡಾನ್, ಲಿಬಿಯಾ, ಯೆಮೆನ್, ಟುನೀಶಿಯಾ, ಟರ್ಕಿ, ಮೊರಾಕೊ, ಸ್ಪೇನ್, ಅಮೆರಿಕಾ ಮತ್ತು ಇರಾನ್‌ಗಳಲ್ಲಿ ಇಸ್ರೇಲ್ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿವೆ. ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆ(ವೆಸ್ಟ್‌ ಬ್ಯಾಂಕ್‌)ಯ ಪ್ಯಾಲೆಸ್ತೀನಿಯನ್ನರು ಗಾಜಾ ನಿವಾಸಿಗಳನ್ನು ಬೆಂಬಲಿಸಿ ರ‍್ಯಾಲಿ ನಡೆಸಿದ್ದಾರೆ.

ಜ್ಯೂಯಿಶ್ ವಾಯ್ಸ್ ಫಾರ್ ಪೀಸ್ ಎಂಬ ಯಹೂದಿ ಸಂಘಟನೆಯ ಸಾವಿರಾರು ಜನರು ಅಮೆರಿಕದ ಸಂಸತ್ತಿನ ಬಳಿಯ ಕ್ಯಾನನ್ ಹೌಸ್ ಆಫೀಸ್ ಕಟ್ಟಡದಲ್ಲಿ ಪ್ರತಿಭಟನೆ ನಡೆಸಿದ್ದು, “ಜಗತ್ತು ವೀಕ್ಷಿಸುತ್ತಿದೆ, ನಮ್ಮ ಹೆಸರಿನಲ್ಲಿ ಹತ್ಯಾಕಾಂಡ ನಡೆಸದಿರಿ” ಎಂದು ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯಹೂದಿಗಳು ಕದನ ವಿರಾಮಕ್ಕೆ ಆಗ್ರಹಿಸಿದ್ದ ಬರಹಗಳನ್ನು ಹೊಂದಿರುವ ಕಪ್ಪು ಟಿ-ಶರ್ಟ್‌ಗಳನ್ನು ಧರಿಸಿದ್ದರು. ನರಮೇಧ ನಡೆಸದಿರಿ ಎಂದು ಇಸ್ರೇಲ್ ಮತ್ತು ಅಮೆರಿಕಾ ಸರ್ಕಾರಕ್ಕೆ ಆಗ್ರಹಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಜಾ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿದ ಸಾವಿರಾರು ವಿದ್ಯಾರ್ಥಿಗಳು ಬುಧವಾರ ಈಜಿಪ್ಟ್ ವಿಶ್ವವಿದ್ಯಾಲಯಗಳಲ್ಲಿ ರ‍್ಯಾಲಿ ನಡೆಸಿದ್ದು, ದೇಶದ ಕೈರೋ, ಅಲೆಕ್ಸಾಂಡ್ರಿಯಾ ಮತ್ತು ಇತರ ನಗರಗಳಲ್ಲಿ ಕೂಡಾ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆದಿದೆ. ಈಜಿಪ್ಟ್‌ನಲ್ಲಿ ಇಂತಹ ಪ್ರತಿಭಟನೆಗಳು ಅಪರೂಪವಾಗಿದ್ದು, ಸುಮಾರು ಒಂದು ದಶಕದ ಪ್ರತಿಭಟನೆಯ ನಿರ್ಬಂಧಕ್ಕೆ ಅಲ್ಲಿ ತಡೆ ಬಿದ್ದಿದೆ.

ಇದನ್ನೂ ಓದಿ: ಇಸ್ರೇಲ್ – ಹಮಾಸ್ ಸಂಘರ್ಷ ಕೊನೆಗೊಳಿಸಿ, ನರಮೇಧ ನಿಲ್ಲಿಸಿ – ಸಿಪಿಐಎಂ ಒತ್ತಾಯ

ಜೋರ್ಡಾನ್‌ನಲ್ಲಿ ಮಂಗಳವಾರ ಸಾಮೂಹಿಕ ಪ್ರತಿಭಟನೆಗಳು ನಡೆದಿದ್ದು, ಇಸ್ರೇಲಿ ರಾಯಭಾರ ಕಚೇರಿಗೆ ಪ್ಯಾಲೇಸ್ಟಿನಿಯನ್ ಪರ ಪ್ರತಿಭಟನಾಕಾರರು ದಾಳಿ ಮಾಡಲು ಪ್ರಯತ್ನಿಸಿದ್ದಾರೆ.  ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್‌ನ ಹೊರಗೆ ಪ್ಯಾಲೆಸ್ತೀನ್ ಪರ ಪ್ರತಿಭಟನಾಕಾರರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ಇರಾನ್‌ನ ಟೆಹ್ರಾನ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಬುಧವಾರ ಮುಂಜಾನೆ ಬ್ರಿಟಿಷ್ ಮತ್ತು ಫ್ರೆಂಚ್ ರಾಯಭಾರ ಕಚೇರಿಗಳ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಫ್ರೆಂಚ್ ರಾಯಭಾರಿ ಕಚೇರಿಯ ಆವರಣದ ಗೋಡೆಗಳ ಮೇಲೆ ಮೊಟ್ಟೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಿಬಿಯಾದಲ್ಲಿ ಪ್ಯಾಲೇಸ್ಟಿನಿಯನ್ ಧ್ವಜಗಳನ್ನು ಬೀಸುತ್ತಾ ಮತ್ತು ಪ್ಯಾಲೇಸ್ಟಿನಿಯನ್ ಕೆಫಿಯೆಹ್‌ಗಳಿಂದ ತಮ್ಮ ಮುಖಗಳನ್ನು ಮುಚ್ಚಿಕೊಂಡು ರ‍್ಯಾಲಿ ನಡೆಸಿದ್ದಾರೆ. ಯೆಮೆನ್‌ನ ನೈಋತ್ಯ ನಗರವಾದ ತಾಜ್‌ ಹಾಗೂ ಮೊರೊಕ್ಕೋ ರಾಜಧಾನಿ ರಬಾತ್ ಮತ್ತು ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ಭಾರಿ ಪ್ರತಿಭಟನೆಗಳು ನಡೆದಿವೆ ಎಂದು ವರದಿಯಾಗಿದೆ.

ಲೆಬನಾನ್‌ನ ಬೈರುತ್‌ನಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ನಿಭಾಯಿಸಲು ಭದ್ರತಾ ಪಡೆಗಳು ನೀರಿನ ಫಿರಂಗಿಯನ್ನು ಬಳಸಿದ್ದಾರೆ. ಯುರೋಪ್‌ನ ಸ್ಪೇನ್‌ನ ಕ್ಯಾಟಲೋನಿಯಾ ಹಾಗೂ ಬಾರ್ಸಿಲೋನಾದಲ್ಲಿ ಪ್ಯಾಲೆಸ್ತೀನ್ ಪರವಾಗಿ ಹೊರಾಟ ನಡೆದಿದ್ದು, ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೊ ನೋಡಿ: “ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” Janashakthi Media

Donate Janashakthi Media

Leave a Reply

Your email address will not be published. Required fields are marked *