ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳನ್ನು ನಡೆಸುವ (ಎನ್ಎಫ್ಹೆಚ್ಎಸ್) ದೇಶದ ಒಂದು ಪ್ರತಿಷ್ಠಿತ ಅಧ್ಯಯನ ಸಂಸ್ಥೆಯಾದ ಐಐಪಿಎಸ್( ಅಂತರ್ರಾಷ್ಟ್ರೀಯ ಜನಸಂಖ್ಯಾಶಾಸ್ತ್ರಗಳ ಸಂಸ್ಥೆ)ನ ನಿರ್ದೇಶಕ ಪ್ರೊ.ಕೆ.ಎಸ್.ಜೇಮ್ಸ್ ರವರ ಅಮಾನತನ್ನು ವಿಸ್ತರಿಸುವುದಿಲ್ಲ ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ಪ್ರಕಟಿಸಿದೆ. ಅದರ ಬೆನಲ್ಲೇ ಅವರ ರಾಜೀನಾಮೆಯನ್ನು ಮಂಜೂರು ಮಾಡಲಾಗಿದೆ ಎಂದೂ ವರದಿಯಾಗಿದೆ.
ಈ ಹಿಂದೆ ವರದಿಯಾದಂತೆ, ಪ್ರೊ. ಜೇಮ್ಸ್ ರವರಿಗೆ ಕಳುಹಿಸಿದ ಅಮಾನತು ಪತ್ರದಲ್ಲಿ ಅವರ ವಿರುದ್ಧ ವಿಚಾರಣೆ ನಡೆಯುತ್ತಿದ್ದು, ಅದರ ಆಧಾರದ ಮೇಲೆ ಅಮಾನತುಗೊಳಿಸಲಾಗಿದೆ ಎಂದು ತಿಳಿಸಲಾಗಿತ್ತು. ಈ ಬಗ್ಗೆ ಅಕೆಡೆಮಿಕ್ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗುವ ಲಕ್ಷಣಗಳು ಕಂಡಾಗ ಬೋಧಕ ವರ್ಗದ ನೇಮಕಾತಿಗಳಲ್ಲಿ ಅಕ್ರಮ ನಡೆದಿರುವುದರ ಬಗ್ಗೆ ವಿಚಾರಣೆ ನಡೆಸುತ್ತಿರುವುದರಿಂದ ವಿಚಾರಣೆಯ ಅವಧಿಗೆ ಮಾತ್ರ ಈ ಕ್ರಮ ಕೈಗೊಳ್ಳಲಾಗಿದೆ, ಇದು ಶಿಕ್ಷಾಕ್ರಮವಲ್ಲ ಎಂದು ‘ಸ್ಪಷ್ಟೀಕರಣ’ ನೀಡಲಾಯಿತು.
ಈಗ ಅಕ್ಟೋಬರ್ 11ರ ಪ್ರಕಟಣೆಯಲ್ಲಿ ಅದೇ ಮಂತ್ರಾಲಯ, ತದನಂತರದ ಪರಾಮರ್ಶೆಯಲ್ಲಿ “ಸನ್ನಿವೇಶದಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಅಮಾನತನ್ನು ವಿಸ್ತರಿಸುತ್ತಿಲ್ಲ” ಎಂದಿದೆ. ಅಮಾನತನ್ನು ರದ್ದುಮಾಡಿ ಅವರನ್ನು ಅಧಿಕೃತವಾಗಿ ಅವರ ಹುದ್ದೆಯಲ್ಲಿ ಮುಂದುವರೆಸಿದೆ. ಆದರೆ ಹಾಗೆಂದು ಪ್ರಕಟಿಸಿದ ಒಂದು ಗಂಟೆಯ ಒಳಗೆ, ಅವರು ಈ ನಡುವೆ (ಆಗಸ್ಟ್ನಲ್ಲಿ) “ವೈಯಕ್ತಿಕ ಕಾರಣ”ಗಳಿಗಾಗಿ ಸಲ್ಲಿಸಿದರು ಎನ್ನಲಾದ ರಾಜೀನಾಮೆಯನ್ನು ಸ್ವೀಕರಿಸಲಾಯಿತು ಎಂದು ತಿಳಿದು ಬಂದಿದೆ(ದಿ ವೈರ್, ಅಕ್ಟೋಬರ್ 16). ಪ್ರೊ.ಜೇಮ್ಸ್ ಅಮಾನತಿನ ಬಗ್ಗೆ ಏನೂ ಹೇಳಲು ನಿರಾಕರಿಸಿದ್ದಾರೆ, ಆದರೆ ತಾನು ರಾಜೀನಾಮೆ ಸ್ಲಲ್ಲಿಸಿರುವುದನ್ನು ಪುಷ್ಟೀಕರಿಸಿದ್ದಾರೆ. ಸದ್ಯಕ್ಕೆ ವಿಯನ್ನಾದಲ್ಲಿರುವ ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್ ನಲ್ಲಿ ಅಲ್ಪಾವಧಿಯ ಸಂದರ್ಶಕ ವಿದ್ವಾಂಸರ ಹುದ್ದೆಯನ್ನು ಸ್ವೀಕರಿಸಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ನವ-ಉದಾರವಾದಿ ಕಾಲದಲ್ಲಿ ‘ರಾಷ್ಟ್ರೀಯ ಹಿತಾಸಕ್ತಿ’ ಮತ್ತು ಯುರೋಪಿನ ಹೊಸ ತಳಿಯ ರಾಜಕಾರಣಿಗಳು
ಜುಲೈ 2023ರಲ್ಲಿ ಜೇಮ್ಸ್ ಅವರನ್ನು ಅಮಾನತು ಮಾಡಿದಾಗ ಅವರ ವಿರುದ್ಧ 35 ದೂರುಗಳು ಬಂದಿದ್ದು, ಅವುಗಳಲ್ಲಿ 11ರಲ್ಲಿ ಮೇಲ್ನೋಟಕ್ಕೇ ತಥ್ಯ ಇದೆಯೆಂಬುದನ್ನು ಗಮನಿಸಲಾಗಿತ್ತು ಎಂದು ಮಂತ್ರಾಲಯ ಹೇಳಿತ್ತು. ಅಲ್ಲದೆ ಅವರು ‘ಚೀನಾ ನೆಲೆಯ ವೆಬಿನಾರ್’ನ’ಲ್ಲಿ ಭಾಗವಹಿಸಿದ್ದರು ಎಂದು ಮಂತ್ರಾಲಯದವರೊಬ್ಬರು ‘ದಿ ಪ್ರಿಂಟ್’ ಪತ್ರಿಕೆಗೆ ಹೇಳಿದುದಾಗಿಯೂ ವರದಿಯಾಗಿತ್ತು. ಕೇಂದ್ರ ಆರೋಗ್ಯಮಂತ್ರಿಗಳು ಐಐಪಿಎಸ್ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದು, ಆಡಳಿತ ಮಂಡಳಿಯ ಒಂದು ಸಭೆಯಲ್ಲಿ ಪ್ರೊ.ಜೇಮ್ಸ್ ರೊಂದಿಗೆ ಕಟುವಾಗಿ ಮಾತಾಡಿದರು, ಇದು ಯಾವುದಾದರೂ ಪಾಶ್ಚಿಮಾತ್ಯ ಪಿತೂರಿಯ ಭಾಗವೇ ಎಂದು ಕೇಳಿದರು ಎಂದು ವರದಿಯಾಗಿತ್ತು(ದಿ ವೈರ್, ಜುಲೈ30).
ಆದರೆ ಈಗ ಜುಲೈನಲ್ಲಿ ನಡೆಸಲಾಗಿದೆ ಎನ್ನಲಾದ ವಿಚಾರಣೆಯ ಫಲಿತಾಂಶ ಏನು ಎಂಬುದನ್ನು ಕೂಡ ಸ್ಪಷ್ಟೀಕರಿಸದೆಯೇ ಅವರ ಅಮಾನತನ್ನು ರದ್ದುಮಾಡಲಾಗಿದೆ!
ನಿಜವಾದ ಕಾರಣ ಸಾಬೀತು?
ಜುಲೈ ತಿಂಗಳಲ್ಲಿಯೇ, ಪ್ರೊ.ಜೇಮ್ಸ್ ರವರ ಅಮಾನತಿಗೆ ನಿಜವಾದ ಕಾರಣ ಬೇರೆಯೇ ಇದೆ ಎಂಬ ಸಂದೇಹ ಬಲವಾಗಿತ್ತು. ಏಕೆಂದರೆ ಬೋಧಕ ವರ್ಗದ ನೇಮಕಾತಿಗಳಲ್ಲಿ ನಿರ್ದೇಶಕರ ಪಾತ್ರ ಅತ್ಯಂತ ಗೌಣ ಎಂದು ಹೇಳಲಾಗಿತ್ತು. ಎನ್ಎಫ್ಹೆಚ್ಎಸ್ ಸಮೀಕ್ಷೆಗಳು ಸಾರ್ವಜನಿಕಗೊಳಿಸಿರುವ ಫಲಿತಾಂಶಗಳು ಕೇಂದ್ರ ಸರಕಾರಕ್ಕೆ ರುಚಿಸದಿರುವುದೇ ವಾಸ್ತವ ಕಾರಣಗಳು ಎಂಬುದು ನಿಜವೆಂದು ಈಗ ಸಾಬೀತಾದಂತಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.
ಐಐಪಿಎಸ್ ನಡೆಸಿದ ಸಮೀಕ್ಷೆಯ ಪ್ರಕಾರ ಇಂದು ಭಾರತದಲ್ಲಿ ಶೇಕಡ 19ರಷ್ಟು ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಇದಕ್ಕೆ ಮೊದಲು ಇಡೀ ದೇಶವನ್ನು ಬಯಲು ಶೌಚಾಲಯಮುಕ್ತ ದೇಶ ಎಂದು ಘೋಷಿಸಿ ಭಾರತ ಸರ್ಕಾರ ಸಂಭ್ರಮಿಸುತ್ತಿತ್ತು.
ಇಷ್ಟೇ ಅಲ್ಲ, ಭಾರತ ಸರ್ಕಾರವು ಉಜ್ವಲ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೂ ಅಡುಗೆ ಅನಿಲ ಸಿಲಿಂಡರ್ಗಳನ್ನು ತಲುಪಿಸಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾಗ, ಸಮೀಕ್ಷಾ ವರದಿ ಕೊಟ್ಟಿರುವ ಚಿತ್ರವೇ ಬೇರೆ. ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ಶೇ 40ರಷ್ಟು ಕುಟುಂಬಗಳು ಇನ್ನೂ ಅಡುಗೆ ಅನಿಲ ಸಂಪರ್ಕ ಹೊಂದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಶೇ.57ರಷ್ಟು ಕುಟುಂಬಗಳಿಗೆ ಇನ್ನೂ ಅಡುಗೆ ಅನಿಲ ಲಭ್ಯವಿಲ್ಲ.
ಸರಕಾರಕ್ಕೆ ಮುಜುಗರ ಉಂಟು ಮಾಡಿರುವ ಮತ್ತೊಂದು ಅಂಶವೆಂದರೆ ಎನ್ಎಫ್ಹೆಚ್ಎಸ್-5 ರ ಪ್ರಕಾರ ಭಾರತದಲ್ಲಿ ರಕ್ತಹೀನತೆಯಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಅಂತರರಾಷ್ಟ್ರೀಯ ಆರೋಗ್ಯ/ಲಿಂಗ ಸೂಚ್ಯಂಕಗಳಲ್ಲಿ ಭಾರತವು ಹಿಂದುಳಿದಿರುವುದಕ್ಕೆ ಒಂದು ಕಾರಣವೆಂದರೆ ರಕ್ತಹೀನತೆಯ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು. ಈಗಾಗಲೇ ವರದಿಯಾಗಿರುವಂತೆ ಎನ್ಎಫ್ಹೆಚ್ಎಸ್-6 ಸಮೀಕ್ಷೆಯ ಪ್ರಶ್ನಾವಳಿಯಿಂದ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಶ್ನೆಯನ್ನು ತೆಗೆದುಹಾಕಲು ಭಾರತ ಸರ್ಕಾರ ನಿರ್ಧರಿಸಿರುವುದು ಅದರ ಮುಜುಗರಕ್ಕೆ ಸಾಕ್ಷಿ. ಐಐಪಿಎಸ್ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತಂತೆ.
ಇದನ್ನೂ ಓದಿ: ಇದು ಹದಿನೆಂಟು ಆದಿವಾಸಿ ಯುವತಿಯರ ಮೇಲಿನ ಅತ್ಯಾಚಾರದ ಕಥನ….
“ಭಾರತದ ನಷ್ಟ, ಐಐಪಿಎಸ್ ನಷ್ಟ”
ಕೇಂದ್ರ ಸರಕಾರದ ಪ್ರಸ್ತುತ ನಡೆ ಐಐಪಿಎಸ್ ಪ್ರಾಧ್ಯಾಪಕರನ್ನು ಕುಪಿತಗೊಳಿಸಿದೆ ಎಂದೂ ‘ದಿ ವೈರ್’ ಹೇಳಿದೆ. ಪ್ರೊ. ಜೇಮ್ಸ್ ರಾಜೀನಾಮೆ ದೇಶಕ್ಕೆ ಮತ್ತು ಐಐಪಿಎಸ್ ಗೆ ಆಗಿರುವ ನಷ್ಟ ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ. ಎನ್ಎಫ್ಹೆಚ್ಎಸ್ ಕೇಂದ್ರ ಆರೋಗ್ಯ ಮಂತ್ರಾಲಯಕ್ಕಾಗಿ ನಡೆಸಲಾಗುತ್ತಿರುವ ಎಲ್ಲ ರಾಜ್ಯಗಳನ್ನು, ಕೇಂದ್ರಾಡಳಿತ ಪ್ರದೇಶಗಳನ್ನು ವ್ಯಾಪಿಸಿರುವ ಸಮೀಕ್ಷೆ, ಆರೋಗ್ಯ ಮಾತ್ರವಲ್ಲ, ಮಾನವ ಅಭಿವೃದ್ಧಿಯ ಎಲ್ಲ ಅಂಶಗಳಿಗೆ ಸಂಬಂಧಪಡುವ ಸಮೀಕ್ಷೆಗಳಿವು. ಈ ದತ್ತಾಂಶಗಳು ಸರಕಾರದ ಯೋಜನೆಗಳನ್ನು ರೂಪಿಸಲು ನೆರವಾಗುವುದಲ್ಲದೆ, ಅಕೆಡೆಮಿಕ್ ಮತ್ತು ನೀತಿ ನಿರೂಪಣೆಯ ವಲಯಗಳಲ್ಲಿ ಬಹುವಾಗಿ ನೆಚ್ಚಿರುವಂಥವುಗಳೂ. ಇನ್ನು ಮುಂದೆ ಈ ಸಮೀಕ್ಷೆಗಳ ದತ್ತಾಂಶಗಳ ನೆಚ್ಚಿಕೆಯ ಬಗ್ಗೆ ಸಂದೇಹಗಳೂ ಏಳುತ್ತವೆ ಎಂಬ ಭೀತಿ ಈ ಪ್ರಾಧ್ಯಾಕರುಗಳದ್ದು.
ವಾಸ್ತವತೆಯೊಂದಿಗೆ ಮುಖಾಮುಖಿಯಾಗುವ ಬದಲು, ಅದನ್ನು ಬಿಂಬಿಸುವ ಅಂಕಿ-ಅಂಶಗಳೊಡನೆಯೇ ಗುದ್ದಾಟ ಈ ಸರಕಾರಕ್ಕೆ ಹೊಸದೇನಲ್ಲ ಎಂಬುದನ್ನು ಈಗಾಗಲೇ ವಿಶ್ಲೇಷಕರು ಗಮನಿಸಿದ್ದಾರೆ. ಈ ಹಿಂದೆ ಜನವರಿ 2019ರಲ್ಲಿ, ನಿರುದ್ಯೋಗದ ದತ್ತಾಂಶಗಳನ್ನು ತಡೆಹಿಡಿದುದರಿಂದಾಗಿ, ರಾಷ್ಟ್ರೀಯ ಅಂಕಿ-ಅಂಶಗಳ ಆಯೋಗದ ಹಂಗಾಮಿ ಅಧ್ಯಕ್ಷರು ಮತ್ತು ಹಲವು ಸದಸ್ಯರು ರಾಜೀನಾಮೆ ನೀಡಿದರು. ಈಗ ಪ್ರೊ. ಜೇಮ್ಸ್ ರಾಜೀನಾಮೆಯೊಂದಿಗೆ ಅದು ಇನ್ನೊಂದು ಹಂತ ತಲುಪಿರುವಂತೆ ಕಾಣುತ್ತದೆ.
2019ರ ಸಾರ್ವತ್ರಿಕ ಚುನಾವಣೆಗಳ ನಂತರ ನಿರುದ್ಯೋಗದ ತಡೆಹಿಡಿದ ದತ್ತಾಂಶಗಳನ್ನು ಪ್ರಕಟಿಸಲಾಯಿತು, ಆದರೆ ಅದರೊಂದಿಗೆ ನಿರುದ್ಯೋಗ ಸಮೀಕ್ಷೆಯ ಹಿಂದಿನ ವ್ಯವಸ್ಥೆ ಕೊನೆಗೊಂಡಿತು ಎಂಬುದು ಅಂಕಿ-ಅಂಶಗಳ ಬಗ್ಗೆ ಸರಕಾರದ ಭೀತಿಯನ್ನು ಪ್ರದರ್ಶಿಸಿತು. ನಂತರ ಆರಂಭಿಸಿದ ತ್ರೈಮಾಸಿಕ ‘ಆವರ್ತಕ ಕಾರ್ಮಿಕ ಬಲ ಸಮೀಕ್ಷೆ’ ಎಂಬುದು ಈಗ ತಡವಾಗಿಯಾದರೂ ಉದ್ಯೋಗ ಸಮೀಕ್ಷೆಯ ದತ್ತಾಂಶಗಳನ್ನು ಒದಗಿಸುತ್ತಿದೆ. ಆದರೆ ಮೋದಿ ಸರಕಾರ ಮೊದಲ ಅಧಿಕಾರಾಧಿಯಲ್ಲಿ ಕೈಬಿಟ್ಟ ಗ್ರಾಹಕ ಬಳಕೆ ವೆಚ್ಚ ಸಮೀಕ್ಷೆಯನ್ನು ಮತ್ತೆ ಆರಂಭಿಸಿಯೇ ಇಲ್ಲ. ಇನ್ನು ಕೊವಿಡ್ ಬಾಧೆಯ ಹೆಸರಿನಲ್ಲಿ 150ವರ್ಷಗಳಲ್ಲಿ ಮೊತ್ತಮೊದಲ ಬಾರಿಗೆ ಮುಂದೂಡಿರುವ 2021ರ ಜನಗಣತಿ ಪರಿಸ್ಥಿತಿ ಸಾಮಾನ್ಯವಾದ ಮೇಲೂ ನಡೆದಿಲ್ಲ, 2025ರ ಮೊದಲು ನಡೆಯುವಂತೆಯೂ ಕಾಣುತ್ತಿಲ್ಲ.
ವಿಡಿಯೋ ನೋಡಿ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ Janashakthi Media