ಇದು ಹದಿನೆಂಟು ಆದಿವಾಸಿ ಯುವತಿಯರ ಮೇಲಿನ ಅತ್ಯಾಚಾರದ ಕಥನ….

ಕೆ.ಮಹಾಂತೇಶ್

ಕಾಡಂಚಿನ ಆದಿವಾಸಿಗಳ ಮೇಲೆ ಅರಣ್ಯ-ಪೊಲೀಸ್-ಕಂದಾಯ ಇಲಾಖೆ  ಏಕೀಕೃತವಾಗಿ ನಡೆಸಿದ ಪೈಶಾಚಿಕ ಕ್ರೌರ್ಯ ನರ್ತನ. ಮೂವತ್ತು ವರ್ಷದ ಹಿಂದಿನ ಪ್ರಕರಣ ಇದಾಗಿದ್ದು,  215 ಅಪರಾಧಿಗಳಿಗೆ ಶಿಕ್ಷೆ  ನೀಡಿದ್ದು, ಈಗ ಇಡೀ ದೇಶದ ಗಮನ ಸೆಳೆದ ಮಹತ್ವದ ತೀರ್ಪಾಗಿದೆ.

ಅದೊಂದು ಮಟಮಟ ಮಧ್ಯಾನ್ಹದ ದಿನ. ಕಾಡಿನಂಚಿನ ತಪ್ಪಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಆ ಬಡವರ ಪಾಲಿಗೆ ಆ ದಿನದ ಸೂರ್ಯೋದಯ ಎಂದಿನಂತೆ ಇರಲಿಲ್ಲ. ಮದ್ಯಾನ್ಹವಾಗುತ್ತಿದ್ದಂತೆ ಆಗಸದಲ್ಲಿ ನೆತ್ತಿಮೇಲೆ ಬಂದ ಸೂರ್ಯ ಕೆಂಡದಂತೆ ನಿಗಿ ನಿಗಿ ಉರಿಯುತ್ತಿದ್ದ.. ಕಾಡಿನೊಳಗೆ ಜೀವಿಸುವ ಜನರು ಸಹಜವಾಗಿಯೇ ತಮ್ಮ ಸುತ್ತ ಮುತ್ತ ಸಂಭವಿಸುವ ಹಲವು ಪ್ರಾಕೃತಿಕ ದುರಂತಗಳು, ಪ್ರಾಣಿಗಳ ದಾಳಿಗಳ ಮುನ್ಸೂಚನೆಗಳನ್ನು ಗ್ರಹಿಸುವ ಗುಣವನ್ನು ಹೊಂದಿರುತ್ತಾರೆ ಎನ್ನುವುದು ಅವರನ್ನು ಅಭ್ಯಸಿಸಿದ ಮನೋಶಾಸ್ತ್ರಜ್ಞರ ಮಾತು ಆದರೆ ಅಂದು ಅರಣ್ಯವನ್ನೆನಂಬಿದ್ದ ಆ ಜನರು ತಮ್ಮ ಮೇಲೆ ಎರಗಿ ಬಂದ ಆ‌ ಮನುಷ್ಯರೂಪದ ಕ್ರೂರ, ಅಮಾನವೀಯ ರಾಕ್ಷಸಿ ದೌರ್ಜನ್ಯೌವನ್ನು ಊಹೆ ಕೂಡ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು..!

ನಿಜ, ಅದು 1992 ಜೂನ್ 20ರ ಮಧ್ಯಾನ್ಹ  ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಶಿತೇರಿ ಬೆಟ್ಟದ ತಪ್ಪಲಿನಡಿ ಬರುವ ಹೆರೂರ ಸಮೀಪದ ವಾಚಾತಿ ಎನ್ನುವ ಮಲೆಯಾಳಿ ಆದಿವಾಸಿಗಳ ಒಂದು ಕುಗ್ರಾಮ. ಅಲ್ಲಿನ ಜನರಿಗೆ ಆ ದಿನ ತಮ್ಮ ಬದುಕಿನಲ್ಲೇ ಎಂದೂ ಮರೆಯದ  ಕರಾಳ ದಿನವಾಗಲಿದೆ ಎನ್ನುವ ಕಲ್ಪನೆಯೇ ಇರಲಿಲ್ಲ ಆ ನಡು ಮಧ್ಯಾನ್ಹ  ಆದಿವಾಸಿ ಹಟ್ಟಿಗೆ ಹತ್ತಾರು ವಾಹನಗಳಲ್ಲಿ ನುಗ್ಗಿದ ನೂರಾರು ಸಂಖ್ಯೆಯ ಅರಣ್ಯ ಇಲಾಖೆ ಸಿಬ್ಬಂದಿಗಳು,ಖಾಕಿ ಪೊಲೀಸರು, ಕಂದಾಯ ಅಧಿಕಾರಿಗಳು ಸಿಕ್ಕ ಸಿಕ್ಕವರನ್ನು ಅವರ ಗುಡಿಸಲುಗಳಿಂದ, ಸುತ್ತಲಿನ ಹೊಲಗಳಿಂದ ಹಿಡಿದು ಲಾಠಿ ಬೂಟುಗಳಿಂದ ಹೊಡೆಯುತ್ತಾ, ಅವಾಚ್ಯವಾಗಿ ಬೈಯ್ಯತ್ತಾ ಹಟ್ಟಿಯ ಗುಡಿಸಲುಗಳಲ್ಲಿದ್ದ ಕಾಳುಕಡಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯುತ್ತಾ ಕೈಗೆ ಸಿಕ್ಕ ಗಂಡಸರು, ಹೆಂಗಸರು ಮಕ್ಕಳಾದಿಯಾಗಿ ಎಲ್ಲರನ್ನೂ
ಹಾಡಿಯ ಹೊರಗಿರೋ ಆಲದ‌ ಮರದಡಿ ತಂದು ಕೂಡಿಹಾಕಿದರು. ಪ್ರತಿಭಟಿಸಿದ ಯುವತಿಯರು ಹಾಗೂ ಹೆಂಗಸರ ಸೀರೆಗಳನ್ನು, ಅವರ ತಲೆಗೂದಲನ್ನು ಹಿಡಿದು ಧರಧರನೆ ಬೀದಿಯಲ್ಲಿ ಪ್ರಾಣಿಗಳನ್ನು ರೀತಿ ಎಳೆತಂದಂತ ಅಂದಿನ ಸ್ಥಿತಿಯ ಘಟನೆ ನಡೆದಾಗ ಕೇವಲ 13 ವರ್ಷ ಮತ್ತು 8 ನೇ ತರಗತಿ ಓದುತ್ತಿದ್ದ
ರಾಣಿ ಇಂದು ಕಣ್ಣೆದುರು ತಂದುಕೊಂಡು ನೆನಪಿಸಿಕೊಂಡಾಗ ಆಕೆಗೆ ಗೊತ್ತಾಗದ ಹಾಗೆ ಕಣ್ಣಿಂದ ಜಿನುಗಿದ ಕಣ್ಣೀರು ಆಗಲೇ ಕಪಾಳದ ಮೇಲೆ ಬಂದು ನಿಂತಿತ್ತು.

ಅರಣ್ಯ ಇಲಾಖೆ ಪೋಲೀಸರ ಇಂತಹ ಅನಿರೀಕ್ಷಿತ ದಾಳಿಗೆ ಹೆದರಿಸಿದ  ಆದಿವಾಸಿ ಹಟ್ಟಿಯ ಗಂಡಸರನೇಕರು ಭೀತಿಯಿಂದ ಸಮೀಪದ ಶಿತೇರಿಗಿರಿಗಳ ತಪ್ಪಲುಗಳಿಗೆ ಓಡಿಹೋಗಿ ಅವಿತುಕೊಂಡರು. ಹಟ್ಟಿದಲ್ಲಿ ವಯಸ್ಸಾದವರು,ಮಹಿಳೆಯರು,ಯುವತಿಯರು ಕೋಳಿ,ಕುರಿ ಮತ್ತು ಸಾಕುಪ್ರಾಣಿಗಳ ಬಿಟ್ಟು ಇನ್ನೇನೂ
ಇರಲಿಲ್ಲ. ಮಹಿಳೆಯರು ಮತ್ತು ಯುವತಿಯರಿಗೆ ಅರಣ್ಯ ಪೋಲೀಸರು ಯಾವುದೇ ಹಿಂಸೆ ನೀಡುವುದಿಲ್ಲ ಎನ್ನುವ ಭಾವನೆಯಿಂದ ಗಂಡಸರನೇಕರು ಅಲ್ಲಿಂದ ಓಡಿ ತಲೆಮೆರೆಸಿಕೊಂಡಿದ್ದರು. ಆದರೆ ಆ ದಿನ ಇಡೀ ಕಾಡಿನಂಚಿನ ಆ ಕುಗ್ರಾಮ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಖಾಕಿ ಕಾರುಬಾರುಗಳು ನಡೆಸಿದ ಪೈಶಾಚಿಕ ದಾಳಿಗೆ ಸಿಕ್ಕು ನುಜ್ಜುಗುಜ್ಜಾಗಿತ್ತು  ಮುಂದಿನ ಕೆಲವು ವಾರಗಳ ಮಟ್ಟಿಗಂತೂ ವಾಚಾತಿಯ ಮೇಲೆ ಅಮವಾಸ್ಯೆಯ ಕತ್ತಲೇ ಮನೆ ಮಾಡಿತ್ತು..!

18 ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಆ ಕುಗ್ರಾಮದ ಹೊರಗಡೆಯ ಆಲದಮರದಡಿಯಲ್ಲಿ ತಂದು ಎಲ್ಲರನ್ನು ಹೊಡೆದು, ಬಡಿದು ಬೈಯುತ್ತಾ ಎಳೆತಂದು ಗುಡ್ಡೆ ಹಾಕಿದ್ದ ಪೊಲೀಸರ ದಾಹ ಅಲ್ಲಿಗೆ ನಿಲ್ಲಲಿಲ್ಲ. ಭಯದಿಂದ ತತ್ತರಿಸಿ ಗೋಳಿಡುತ್ತಾ ನಿಂತಿದ್ದ ನೂರಾರು ಆದಿವಾಸಿಗಳನ್ನು ದುರುಗುಟ್ಟಿ ಒಂದು ಬಾರಿ ನೋಡಿದ ಅರಣ್ಯ ಇಲಾಖೆ ಪೋಲಿಸರು,ಅವರ ಜತೆ ಬಂದಿದ್ದ ಕಂದಾಯ ಇಲಾಕೆ ಸಿಬ್ಬಂದಿಗಳು ಗುಂಪಿನಲ್ಲಿದ್ದ ಯುವತಿಯರನ್ನೆಲ್ಲ ಹೆಕ್ಕಿಹೆಕ್ಕಿ ಗುರುತಿಸಿ ಗಂಧದಮರಗಳ್ಳರನ್ನು ಹುಡುಕಲು ನೀವು ಬೇಕು ಎಂದು ಅವರನ್ನು ಗುಂಪಿನಿಂದ ಪ್ರತ್ಯೇಕಿಸಿ ಹಲವು ಲಾರಿಗಳಿಗೆ ಹತ್ತಿಸಿಕೊಂಡರು. ಬಳಿಕ ದೂರದಲ್ಲಿದ್ದ ಕೆರೆಯ ಸಮೀಪ ಕರೆದೊಯ್ದರು ನಂತರ ನಡೆದಿದ್ದೆ ಈ ಹದಿನೆಂಟು ಯುವತಿಯರ ಸಾಮೂಹಿಕ ಅತ್ಯಾಚಾರ.

ನನ್ನ ಮೇಲೆ ಅತ್ಯಾಚಾರ ನಡೆಸಿದ ಅರಣ್ಯ ಸಿಬ್ಬಂದಿ ಬೆದರಿಕೆ ಹಾಕಿ ಕೈಬಿಟ್ಟರು ನಾನು ನಾನು ನಾಲಿಗೆಗೆ ತುಟಿಕಚ್ಚಿಕೊಂಡು ಮನದಾಳದಲ್ಲಿ ದುಗುಡ, ಅವಮಾನ ತುಂಬಿಕೊಂಡು ಮೌನವಾಗಿ ನೆಲವನ್ನೇ ನೋಡುತ್ತಾ ನನ್ನ ಕರೆತಂದಿದ್ದ ಆಲದಮರದತ್ತ  ಹೆಜ್ಜೆ ಹಾಕಿದೆ.  ಹೀಗೆ ಕರೆದೊಯ್ದ ಎಲ್ಲ ಹಾಡಿಯ ಯುವತಿಯರು ನನ್ನಂತೆಯೇ ಅತ್ಯಾಚಾರ ಎನ್ನುವ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿದ್ದರು ಅವರ ಸಂಖ್ಯೆ ಬರೋಬ್ಬರಿ 18 ರಷ್ಟಿತ್ತು ಎನ್ನುತ್ತಾ ಗದ್ಗದಿತರಾದರು ಅಂದು ಸ್ವತಃ ಅತ್ಯಾಚಾರಕ್ಕೆ ಸಿಕ್ಕು ಬಲಿಪಶುವಾಗಿದ್ದ ಲಲಿತಾ. ಇದಾದ ಬಳಿಕ ಹೆರೂರ್ ಅರಣ್ಯ ಕಚೇರಿಗೆ 30 ಜನ ಮಹಿಳೆಯರು ಸೇರಿ 15 ಜನ ಹಾಡಿ ಆದಿವಾಸಿ ಗಂಡಸರನ್ನು ಕರೆದೊಯ್ದುರು. ನಮ್ಮ ಜತೆ ಇದ್ದ ಹಿರಿಕ ಊರ ಗೌಡ ಪೆರುಮಾಳ್ ಅವರನ್ನು ನಾವೇ ಹೊಡೆಯಬೇಕೆಂದು ಪೊರಕೆಕಟ್ಟಿಗೆಯನ್ನು ನಮ್ಮ ಕೈಗೆ ನೀಡಿ ಅರಣ್ಯ ಆಧಿಕಾರಿಗಳು ಆದೇಶಿಸಿದರು.

ಇದನ್ನೂ ಓದಿ: ಪ್ಯಾಲೆಸ್ಟೈನ್ ‌ಇಸ್ರೇಲ್ ಘರ್ಷಣೆಯನ್ನು ವಸಾಹತುಶಾಹಿ ನೆಲೆಯಲ್ಲಿಯೇ‌ ನೋಡಬೇಕು

ಆದರೆ  ನಾವೆಲ್ಲ ಆಳುತ್ತಾ ನಮ್ಮ ಸಂಬಂಧಿಯೂ ಹಾಗೂ ನಮ್ಮ ಹಳ್ಳಿಯ ರಕ್ಷಕನೂ ಆಗಿದ್ದ ಗೌಡ ಪೆರುಮಾಳ್ ಮೇಲೆ ಹಲ್ಲೆ ನಡೆಸಲು ನಿರಾಕರಿಸಿದಾಗ ಅದೇ ಪೊರಕೆ ಕಡ್ಡಿಯಿಂದ ನಮ್ಮನ್ನೆಲ್ಲ ಮನಸ್ಸಿಗೆ ಬಂದಂತೆ ಹೊಡೆದರು ಮಾತ್ರವಲ್ಲ ಆ ರಾತ್ರಿ ಅರಣ್ಯ ಇಲಾಖೆ ಕಚೇರಿಯಲ್ಲೇ ನಮ್ಮನ್ನೆಲ್ಲ ಕೂಡಿ ಹಾಕಿದ್ದರು ಅಲ್ಲಿದ್ದ ಯುವತಿಯರೆಲ್ಲ ತಮ್ಮ ತಮ್ಮ ಕುಟುಂಬದ ಸದಸ್ಯರ ಜತೆ ಮೂಲೆಯೊಂದರಲ್ಲಿ ಅವಿತು ಕೂತಿದ್ದರು ಆದರೆ ಒಬ್ಬಳೇ ಇದ್ದ ನಾನು ನನ್ನ ಮೇಲೆ ಪುನಃ ಅತ್ಯಾಚಾರ ನಡೆಸಿಯಾರು ಎನ್ನುವ ಭಯದಿಂದ ಹೊರಗೆ ಕಾಲಿಡಲೇ ಇಲ್ಲ ಆ ನೆನಪು ಈಗಲೂ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ ಎಂದು ನಿಟ್ಟುಸಿರು ಬಿಟ್ಟಳು ಲಲಿತಾ.

ಮುವತ್ತು ವರ್ಷದ ಪ್ರಕರಣ ಈಗ ಮುನ್ನಲೆಗೆ ಬಂದಿದ್ದು ಯಾಕೆ?

ಇದು ಮೂರು ದಶಕಗಳ ಹಿಂದಿನ ಅಂದರೆ 31 ವರ್ಷಗಳ ಹಳೆಯ  ಪ್ರಕರಣವಾದರೂ ಈಗ  ಮತ್ತೆ ಮುನ್ನಲೆಗೆ ಬರಲು ಕಾರಣವಾದುದ್ದು   ಸೆಪ್ಟಂಬರ್ 29  2023 ರಂದು ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪು 1992ರಲ್ಲಿ ನಡೆದ ಈ ಭೀಬತ್ಸ ಅತ್ಯಾಚಾರ ಪ್ರಕರಣವನ್ನು 2011ರಲ್ಲಿ ಇತ್ಯರ್ಥ್ಯಗೊಳಿಸಿದ್ದ ವಿಚಾರಣಾ ನ್ಯಾಯಾಲಯವು ಈ ಪ್ರಕರಣದಲ್ಲಿ ಭಾಗಿಯಾದ ಅರಣ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಯ 269 ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿತ್ತು.  ಈ ತೀರ್ಪನ್ನು ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ  ಪ್ರಶ್ನಿಸಿದ್ದರು ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಎಲ್ಲ ಮೇಲ್ಮನವಿಗಳನ್ನು ವಜಾಗೊಳಿಸಿ  ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದು 215 ಜನ ಅಪರಾಧಿಗಳೆಂದು ಪ್ರಕಟಿಸಿತು‌.

ಘೋಷಿತ ಅಪರಾಧಿಗಳಲ್ಲಿ  17 ಮಂದಿ ಅತ್ಯಾಚಾರದ ಆರೋಪದ ಮೇಲೆ ಶಿಕ್ಷೆಗೊಳಗಾದವರು. 52 ಆರೋಪಿಗಳು ಅದಾಗಲೇ ನಿಧನರಾಗಿದ್ದಾರೆ ಉಳಿದ  217 ಸಿಬ್ಬಂದಿ ಪ್ರಭುತ್ವ ಹಿಂಸಾಚಾರದಲ್ಲಿ  ಭಾಗಿಯಾದಕ್ಕಾಗಿ  ಜೈಲು ಶಿಕ್ಷೆಗೆಗುರಿಯಾದರು. ಒಂದೇ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧಿಗಳಿಗೆ
ಏಕಕಾಲದಲ್ಲಿ ಶಿಕ್ಷೆ ವಿಧಿಸಿದ ಹಾಗೂ ಈಗ ಇಡೀ ದೇಶದ ಗಮನ ಸೆಳೆದ ಮಹತ್ವದ ತೀರ್ಪು ಇದಾಗಿದೆ. ಇದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ತೀರ್ಪು ಇದಾಗಿದೆ ಮಾತ್ರವಲ್ಲ  ನ್ಯಾಯದ ನಿರೀಕ್ಷೆಯಲ್ಲಿದ್ದ ಆದಿವಾಸಿಗಳಿಗೆ ನ್ಯಾಯದಾನ ಮಾಡಿದ ತೀರ್ಪಾಗಿದೆ.

ಈ ಕ್ರೂರ ದಾಳಿ ನಡೆದಿದ್ದಾದರೂ ಯಾಕೆ..?

ಆದಿವಾಸಿ ಮಹಿಳೆಯರು ಹಾಗೂ ಜನರ ಮೇಲೆ ನಡೆದ 1992 ಜೂನ್ 20 ರಂದು ನಡೆಸಲಾದ ದಾಳಿ ಹಿಂದಿದ್ದ ಕಾರಣವೇ “ಬೇರೆ. ಅದುವೇ “ಗಂಧದ ಮರಗಳ ಕಳ್ಳಸಾಗಣಿಕೆಯ ಜಾಲ” ವಾಚಾತಿ ಆದಿವಾಸಿಗಳ ಮೇಲೆ ಈ ಕ್ರೂರ ದಾಳಿ ನಡೆಯುವ ಹಿಂದಿನ ದಿನ  ಶಿಥೇರಿ ಬೆಟ್ಟದಲ್ಲಿ ಗಂಧದಮರಗಳ್ಳರು ಅರಣ್ಯ
ಸಿಬ್ಬಂದಿ ಅಂದಿನ ಆಡಳಿತರೂಢ ಎಐಎಡಿಎಂಕೆ ಪಕ್ಷದ ಜತೆ ಅನೈಕ್ಯತೆಯ ಸಖ್ಯತೆಯಿಂದ ಬೆಲೆಬಾಳುವ ನೂರಾರು ಗಂಧದ ಮರಗಳನ್ನು ಕಡಿದು ಹಾಕಿದ್ದರು. ಅವುಗಳ ಸಾಗಣಿಕೆಗಾಗಿ ಕಲಾಸಂಬಡಿ ಹಾಡಿಯ ಕೂಲಿಕಾರರನ್ನು ಬಳಸಿದ್ದರು. ಆದರೆ ಹಾಗೆ ಮರಕಡಿದು ಕಳ್ಳ ಸಾಗಣಿಕೆ ಮಾಡುವಾಗ ಸುಮಾರು 30-40
ಮೆಟ್ರಿಕ್ ಟನ್ ಗಂಧದ ಮರದ ತುಂಡುಗಳು ನಾಪತ್ತೆಯಾಗಿದ್ದವು. ನಾಪತ್ತೆಯಾದ ಗಂಧದ ಮರಗಳ ಪತ್ತೆಗಾಗಿ ಅರಣ್ಯ ಸಿಬ್ಬಂದಿ ಹಾಗೂ ಖಾಕಿಪಡೆ ಕಲಾಸಂಬಡಿಯಿಂದ ವಾಚಾತಿ ಆದಿವಾಸಿಗಳ ಹಟ್ಟಿಗೆ ಬಂದು ಈ ದಾಳಿ ನಡೆಸಿತ್ತು ಎನ್ನುತ್ತಾರೆ ಹರೂರ ಕ್ಷೇತ್ರದ ಮಾಜಿ ಸಿಪಿಐ(ಎಂ) ಶಾಸಕರಾದ ದಿಲ್ಲಿಬಾಬು.

ಮೂರಾಬಟ್ಟೆಯಾದ ಆದಿವಾಸಿಗಳ ಬದುಕು

ಅರಣ್ಯ ಸಿಬ್ಬಂದಿ ಮತ್ತು ಖಾಕಿ ಪಡೆಯ ಈ ಪೈಶಾಚಿಕ ಕೃತ್ಯ ಕೇವಲ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆಸೀಮಿತವಾಗಲಿಲ್ಲ. ಎಂದು ಮಾತು ಮುಂದುವರೆಸಿದ ಲಲಿತಾ ಹೇಳಿದ್ದು ಹೀಗೆ…. ನಾನು ವಾಪಸ್ ಹಟ್ಟಿಗೆ ಬಂದಾಗ ನನ್ನ ತಂದೆ ತಾಯಿಗಳ್ಯಾರು ಕಾಣಲಿಲ್ಲ. ಅವರೆಲ್ಲ ಸಮೀಪದ ಶಿತೇರಿ ಬೆಟ್ಟದ ತಪ್ಪಲಿನಲ್ಲಿ ಅವಿತಿದ್ದರು. ಬಾಯಾರಿಕೆಯಾಗಿದ್ದರಿಂದ ನಾನು ಬರಿಗಾಲಲ್ಲೇ ಹಾಡಿಯ ಬಾವಿಯತ್ತ ನೀರು ಕುಡಿಯಲು ತೆರಳಿದೆ ಆದರೆ ಬಾವಿ ನೀರಿಗೆ ಮೇಲೆ ಅರಣ್ಯ ಸಿಬ್ಬಂದಿ ಸುರಿದಿದ್ದ ಸೀಮೆಎಣ್ಣೆ ತೇಲುತ್ತಿತ್ತು ಜತೆಗೆ ಸತ್ತ ಪ್ರಾಣಿಗಳ ದೇಹಗಳು,ಅಕ್ಕಿಯಮೂಟೆಗಳು ತೇಲುತಿದ್ದವು. ಆದರೆ ಹೆರೂರ ಅರಣ್ಯ ಕಚೇರಿಯಲ್ಲಿ ನಮ್ಮನ್ನು ಕೂಡಿ ಹಾಕಿಯೇ ನಮ್ಮ ಹಟ್ಟಿಯಿಂದ ಕದ್ದೊಯ್ದ ಪ್ರಾಣಿಗಳಿಂದ ಮಾಸ ಬೇಯಿಸಿ ಗಡದ್ದಾಗಿ ತಿಂದು ತೇಗಿದ ಅರಣ್ಯ ಸಿಬ್ಬಂದಿ ನಮಗೆ ಮಾತ್ರ ಎಂಜಲನ್ನೂ ತಿನ್ನುವ ಪರಿಸ್ಥಿತಿಗೆ ದೂಡಿದ್ದರು ಆ ಸನ್ನಿವೇಶ ನಮ್ಮನ್ನು ಎಷ್ಟೊಂದು ಅಸಹಾಯಕರನ್ನಾಗಿಸಿತ್ತು ಎನ್ನುವುದನ್ನು ನೆನಪಿಸಿಕೊಂಡರು.

ನಾನು ಈ ಪ್ರಕರಣದಲ್ಲಿ ಸಾಕ್ಷೀ ಹೇಳಲು ವರ್ಷಾನುಗಟ್ಟಲೇ ನನ್ನ ಸಣ್ಣ ಮಗಳನ್ನು ಸೊಂಟದಲ್ಲಿ ಎತ್ತಿಕೊಂಡು ಕೋರ್ಟಗೆ ಅಲೆದಾಡುತ್ತಿದ್ದೆ. ಅವಳು ದೊಡ್ಡವಾಳದ ಬಳಿಕಾ ನಾವು ಪ್ರತಿಬಾರಿ ಕೋರ್ಟ್‌ ವಿಚಾರಣೆಗೆ ಹೋಗುವಾಗಲೂ ನಮ್ಮ ಹಳ್ಳಿಯ ಮೇಲೆ ನಡೆಯುವ ಇಂತಹುಗಳೆಲ್ಲ ಕೊನೆ ಯಾವಾಗ? ಎಂದು ಕೇಳುತ್ತಿದ್ದಳು ಅವಳ ಆ ಪ್ರಶ್ನೆಗೆ ಮಾತ್ರವಲ್ಲ ನಮ್ಮ ಎಲ್ಲ ಮಕ್ಕಳ ಈ ಪ್ರಶ್ನೆಗೂ ಇಂದು ನ್ಯಾಯಾಲಯ ಉತ್ತರ ನೀಡಿದೆ ಎಂದು ಉತ್ತರಿಸಿದಳು ಮುವತ್ತು ವರ್ಷಗಳ ಹಿಂದೆ 16 ರ ಹರಯದ ಯುವತಿಯಾಗಿದ್ದಾಗ ಅರಣ್ಯ ಸಿಬ್ಬಂದಿಯಿಂದ ಅತ್ಯಾಚಾರಕ್ಕೊಳಗಾದ ಕಲಾ ಎನ್ನುವ ಯುವತಿ.

ಅರಣ್ಯವಾಸಿಗಳನ್ನು ಶೋಷಿಸುವ ಅರಣ್ಯಸಿಬ್ಬಂಧಿ ಹಾಗೂ ಶ್ರೀಗಂಧ ಕಳ್ಳರು

ವಾಚಾತಿ ಹಾಗೂ ಶಿಥೇರಿಗಿರಿಗಳಲ್ಲಿ ಅರಣ್ಯ ಸಿಬ್ಬಂದಿಗಳ ಜತೆ ಶಾಮೀಲಾಗಿರುವ ಮರಗಳ್ಳರು ಕಲಾಸಂಬಡಿಯ ಆದಿವಾಸಿ  ಗಂಡಸರು ಕೆಲವರನ್ನು ಹುಡುಕಿ 100 ರುಪಾಯಿಗಳ ಆಮಿಷವೂಡ್ಡಿ ಗಂಧದ ಮರ ಕಡಿಸುತ್ತಾರೆ ಅದೇ ರೀತಿ ಹೆಣ್ಣು ಮಕ್ಕಳಿಂದ ಅರಣ್ಯದಿಂದ ಮಾವುಗಳನ್ನು  ಸಂಗ್ರಹಿಸಿ ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಾರೆ ಆದರೆ ನಮ್ಮನ್ನು ಮರಗಳ್ಳರು ಎಂದು ಆರೋಪಿತ್ತಾರೆ. ಈ ಸಂಗತಿ ಅರಣ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಹಿರಿಯ ಅಧಿಕಾರಿಗಳಿಗೂ ಗೊತ್ತಿದ್ದೆ ನಡೆಯುತ್ತಿದೆ ಎನ್ನುವ ಸಂಗತಿಯನ್ನು ಹೈಕೋರ್ಟ್ ‌ನ್ಯಾಯಮೂರ್ತಿ ವೇಲುಮುರುಗನ್ ನಡೆಸಿದ ವಿಚಾರಣೆಯ ಮುಂದೆ
ವಾಚಾತಿ ಆದಿವಾಸಿ ಜನರು ನೇರವಾಗಿ ಹೇಳಿ ತಮ್ಮ ನೋವಾ ತೋಡಿಕೊಂಡಿದ್ದರು.

ಎರಡು ದಶಕಗಳ ನಿರಂತರ ಕಾನೂನು- ಜನರ ಹೋರಾಟ

ವಾಚಾತಿ ಜನರ ಮೇಲೆ ನಡೆದ ಈ ಅನ್ಯಾಯದ ವಿರುದ್ದ ತಮಿಳುನಾಡಿನ  ಜನಪರ ಸಂಘಟನೆಗಳು ಸುದೀರ್ಘವಾದ 19 ವರ್ಷಗಳ ಕಾನೂನು ಹೋರಾಟ ನಡೆಸಿದರು ಸ್ವಾತಂತ್ರ್ಯೋತ್ತರ ಭಾರತದ ಕಾನೂನು ಇತಿಹಾಸದಲ್ಲಿ ಇದೊಂದು ಮಹತ್ವದ  ಪ್ರಕರಣವನ್ನು ವಿಚಾರಣೆ ನಡೆಸಿದ ಧರ್ಮಪುರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಕುಮಾರ ಅವರು, 2011ರ ಸೆಪ್ಟೆಂಬರ್ 29 ರಂದು, ಸಿಬಿಐ ಸಲ್ಲಿಸಿದ ಚಾರ್ಜ್‍ ಷೀಟಿನಲ್ಲಿ ಆರೋಪಿತರಾದ ಎಲ್ಲಾ 269 ಅಧಿಕಾರಿಗಳನ್ನು ದೋಷಿಗಳು ಎಂದು ತೀರ್ಪು ನೀಡಿದ್ದರು.

ವಾಚಾತಿ ಆದಿವಾಸಿಗಳ ಮೇಲೆ ನಡೆದ ಈ ಕ್ರೂರ ಹಾಗೂ ಪೈಶಾಚಿಕ ದಾಳಿಯ ಸುಳಿವು ಸಿಕ್ಕ ತಕ್ಷಣವೇ ಆಗಷ್ಟೇ ಸಿಪಿಐ(ಎಂ) ನೇತೃತ್ವದಲ್ಲಿ  ರಚನೆಯಾಗಿದ್ದ ತಮಿಳುನಾಡು ಆದಿವಾಸಿ ಅಸೋಸಿಯೇಷನ್ (TNTA) ಮುಖ್ಯಸ್ಥ ಪಿ.ಷಣ್ಮುಗಂ ಶಿಥೇರಿಬೆಟ್ಟದಲ್ಲಿ ಸಭೆ ನಡೆಸಿ ಘಟನೆ ನಡೆದ  ವಾಚಾತಿಗೆ ಜುಲೈ 14 1992 ರಂದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕೂಡಲೇ ಅಂದಿನ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯರೂ ಆದ ಎ.ನಲ್ಲಶಿವನ್ ಅಂದಿನ ಮುಖ್ಯಮಂತ್ರಿ ಜೆ.ಜಯಲಲಿತಾಗೆ ಪತ್ರ ಬರೆದು ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿದರು.

ಆದರೆ ವಿಧಾನಸಭೆಯಲ್ಲಿ ಎತ್ತಲಾದ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಅಂದಿನ ಅರಣ್ಯ ಮಂತ್ರಿ ಕೆ.ಎ.ಸೆಂಗೋಟಿಯನ್ ಆದಿವಾಸಿ ಜನರ ಮೇಲೆ ಅರಣ್ಯ ಪೊಲೀಸರು ನಡೆಸಿದ ದಾಳಿಯನ್ನು ಸಮರ್ಥಿಸಿಕೊಂಡಿದ್ದಲ್ಲದೆ ವಾಚಾತಿ ಆದಿವಾಸಿಗಳೆಲ್ಲರೂ ಸ್ಮಗ್ಮಲರ್‌ಗಳು ಎಂದು ಆರೋಪಿಸಿದ್ದರು ಮಾತ್ರವಲ್ಲದೆ 1992 ಆಗಸ್ಟ್‌ ನಲ್ಲಿ ರಾಷ್ಟ್ರೀಯ ಎಸ್.ಸಿ.ಎಸ್.ಟಿ  ಆಯೋಗವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಲ್ಲಿಸಿದ ವಿಚಾರಣಾ ವರದಿಯ ಮೇಲೆ ಯಾವುದೇ ಕೇಸು ದಾಖಲಿಸಲು ಜಯಲಲಿತಾ ಸರ್ಕಾರ ತಿರಸ್ಕರಿಸಿತ್ತು. ಇದಾದ ಬಳಿಕ ಸಿಪಿಎಂ ರಾಜ್ಯ ಕಾರ್ಯದರ್ಶಿ  ಎ.ನಲ್ಲಶಿವನ್ ಸಲ್ಲಿಸಿದ್ದ ಮೊದಲ ಕಾನೂನಾತ್ಮಕ ಅರ್ಜಿಯನ್ನು  ಅಂದಿನ ಮದ್ರಾಸ್ ಹೈಕೋರ್ಟ್ ನ್ಯಾಯಧೀಶೆ ಶ್ರೀಮತಿ ಪದ್ಮಿನಿ ಜೇಸುದೊರೈ ಮಾನ್ಯ ಮಾಡಲಿಲ್ಲ ಮಾತ್ರವಲ್ಲ ಆರೋಪಿಗಳೆಲ್ಲರೂ ವಿದ್ಯಾವಂತರಾಗಿರುವುದರಿಂದ ಅವರಿಂದ ಇಂತಹ ಅಪರಾಧಗಳು ಸಂಭವಿಸಿರಲು ಸಾಧ್ಯವೇ ಇಲ್ಲ..(!) ಎನ್ನುವ ತೀರ್ಮಾನಕ್ಕೆ ಬಂದಿದ್ದರು.

ಆದಿವಾಸಿಗಳ ಪರವಾಗಿ ಪ್ರತಿಭಟನೆಗಳ ಮಹಾಪೂರ

ವಾಚಾತಿ ಆದಿವಾಸಿ ಜನರ ಮೇಲೆ ನಡೆದ ಈ ಕ್ರೂರ ದಬ್ಬಾಳಿಕೆ ನ್ಯಾಯ ಸಿಗುವುದು ಮರಿಚೀಕೆ ಯಾಗತೊಡಗಿತು ಇದರಿಂದ ಎಚ್ಚೆತ್ತ ತಮಿಳುನಾಡು ಅದಿವಾಸಿ ಅಸೋಸಿಯೇಷನ್ (TNTA) ಸಂಘಟನೆಯು ತಮಿಳುನಾಡಿದ ಎಲ್ಲ ರೈತ ಕಾರ್ಮಿಕ ಹಾಗೂ ನೌಕರರ ವರ್ಗದವರ ಬೆಂಬಲ ಅಣಿನೆರೆಸಲು ಶ್ರಮಿಸಿತು. ಇದರ ಪರಿಣಾಮವಾಗಿ ರಾಜ್ಯದ ಉದ್ದಗಲಕ್ಕೂ ವಾಚಾತಿ ಆದಿವಾಸಿ ಜನರ ಪರವಾಗಿ ಸೌಹಾರ್ದ ಸಮಿತಿಗಳು ರಚನೆಯಾಗಿ ಪ್ರದರ್ಶನಗಳು ನಡೆದವು. ತಮಿಳುನಾಡಿನ ಜನಪರ ವಕೀಲರು ಸೇರಿ ಹೈಕೋರ್ಟನಲ್ಲಿ ಕಾನೂನು ಹೋರಾಟಕ್ಕೆ ಮುಂದಾದರು. ಜನಪರ ಕಾಳಜಿಯ ಸಂಘಟನೆಗಳು ಜನರು
ಸ್ವಯಂ ಸ್ಪೂರ್ತಿ ಈ ಹೋರಾಟಕ್ಕೆಧನಸಹಾಯವನ್ನು ಸಂಗ್ರಹಿಸಿ ನೀಡಿದರು. ಈ ಒತ್ತಡದ ಪರಿಣಾಮ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ನ್ಯಾಯ ಸಮ್ಮತ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿತು.

ಅಂತಿಮವಾಗಿ 1995 ರಲ್ಲಿ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ(ಸಿಬಿಐ) ಎತ್ತಿಕೊಂಡು ಆರೋಪ ಪಟ್ಟಿ ಸಲ್ಲಿಸಿತು. ಇದು ವಾತಾಪಿ ಆದಿವಾಸಿಗಳ ಹೋರಾಟಕ್ಕೆ ಸಿಕ್ಕ ಮೊದಲು ಗೆಲುವಾಗಿತ್ತು.ವಾಚಾತಿ ಸಂತ್ರಸ್ತರ ಪರವಾಗಿ ವಾದಿಸಿದ ಸಿಬಿಐನ ಪಬ್ಲಿಕ್‍ ಪ್ರಾಸಿಕ್ಯೂಟರ್ ಕೆ. ಜಯಬಾಲನ್ ಆರೋಪಿಗಳ ಪರವಾಗಿ ವಾದಿಸುತ್ತಿದ್ದ 12ವಕೀಲರುಗಳ ಪಾಟಿ ಸವಾಲುಗಳನ್ನು ಏಕಾಂಗಿಯಾಗಿ ಎದುರಿಸಿ ಈ ಪ್ರಕರಣವನ್ನು ಗೆಲುವಿನ ಹಂತಕ್ಕೆ ತಲುಪಿದರು.

ದೌರ್ಜನ್ಯದ ಪರಾಕಾಷ್ಠೆ ಗಮನಿಸಿದ ನ್ಯಾಯಾಧೀಶರು;

ಈ ಪ್ರಕರಣ ವಿಚಾರಣೆ ಹಂತದಲ್ಲಿ ಸಂತ್ರಸ್ಥೆ ಮಹಿಳೆಯೊಬ್ಬರು  ಕೋರ್ಟ್‌ ಕಟಾಕಟೆಯಲ್ಲಿ  ಹೇಳಿದ ಸಾಕ್ಷ್ಯಾ ಹೇಳಿಕೆಯು ಧರ್ಮಪುರಿ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಅಶೋಕ್ ಕುಮಾರ್ ಅವರನ್ನೇ ದಿಗ್ಮೂಢರನ್ನಾಗಿತ್ತು.  1992 ಜೂನ್ 20-21 ರಾತ್ರಿ ಹರೂರ ಅರಣ್ಯಕಚೇರಿಯ ವಶದಲ್ಲಿದ್ದಾಗ ಸಂತ್ರತ್ಥೆಯು ತನ್ನ ಮಗುವಿಗೆ ಕುಡಿಯುವ ನೀರನ್ನು ಕೇಳಿದಾಗ  ಕರ್ತವ್ಯದಲ್ಲಿ ಅಧಿಕಾರಿಯೊಬ್ಬ ತನ್ನ ಮೂತ್ರವನ್ನು ಮಗುವಿನ ಬಾಯಿಗೆ ಹುಯ್ಯಲು ನಡೆಸಿದ ಯತ್ನವನ್ನು ವಿವರಿಸಿದ್ದು ಮಾತ್ರವಲ್ಲ ಕೋರ್ಟ್‌ನಲ್ಲಿ ಹಾಜರಿದ್ದ ಆ ವ್ಯಕ್ತಿಯನ್ನು ಸ್ವತಃ ಗುರುತಿಸಿಳು.ಸಂತ್ರಸ್ಥೆಯ ಆ ಹೇಳಿಕೆ ನ್ಯಾಯಾಧೀಶರಲ್ಲಿ ಎಷ್ಟು ಕೋಪ ತರಿಸಿತ್ತೆಂದರೆ ಒಂದು ಹಂತದಲ್ಲಿ ಅದನ್ನೇ ನೀನು ಅವನಿಗೆ‌ ಹಾಗೆ ಮಾಡು ಎಂದು ನ್ಯಾಯಧೀಶರು ಹೇಳಿದ್ದು ಮಾತ್ರವಲ್ಲ ಇಡೀ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಆ ಅಧಿಕಾರಿಗೆ ಕೋರ್ಟ್‌ ನಲ್ಲಿ ಒಂದು ಬಾರಿಯೂ ಕುಳಿತುಕೊಳ್ಳಲು ಅವಕಾಶವನ್ನೇ ಕೊಡಲಿಲ್ಲ ಎಂದು ನೆನಪಸಿಕೊಳ್ಳುತ್ತಾರೆ ಇಡೀ ವಿಚಾರಣೆಯ ಪ್ರತಿ ಹಂತದಲ್ಲೂ ಹಾಜರಿರುತ್ತಿದ್ದ ಸಿಪಿಎಂ ನಾಯಕ ದಿಲ್ಲಿಬಾಬು.

ಹೈಕೋರ್ಟ್‌ಗೆ ಮೇಲ್ಮನವಿ ವಿಚಾರಣೆ; ಸಮಗ್ರ ಅಭಿವೃದ್ಧಿಗೆ ಆದೇಶ

ಈ ಕೇಸಿನಲ್ಲಿ  ಗರಿಷ್ಠ ಶಿಕ್ಷೆ ಪಡೆದ 27 ಮಂದಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಗಳ ತನಿಖೆಯನ್ನು ನ್ಯಾಯಮೂರ್ತಿ ವೇಲ್ಮುರುಗನ್ ತನಿಖೆ ನಡೆಸಿದರು. ವಿಚಾರಣೆಯ  ಭಾಗವಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳಗಳು ಮತ್ತು ಜನರ ನಡುವೆ ವೈಯಕ್ತಿಕ ಭೇಟಿ ಹಾಗೂ ತನಿಖೆಗಾಗಿ  ಮಾರ್ಚ್  4, 2023 ರಂದು ನ್ಯಾಯಮೂರ್ತಿಗಳು ನೇರವಾಗಿ  ಘಟನೆಗೆ ಸಂಬಂಧಿಸಿದ ಗಿರಿಜನ  ಪ್ರಾಥಮಿಕ ಶಾಲೆ, ಕೆರೆ ಪ್ರದೇಶ, ಆಲದ ಮರ, ನೀರಿನ ತೊಟ್ಟಿ, ಬೆಟ್ಟ ಪ್ರದೇಶಕ್ಕೆ ಭೇಟಿ  ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರನ್ನು ಭೇಟಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿ ಮಾತ್ರವಲ್ಲ  ಆದಿವಾಸಿಗಳ
ಇತರ ಬೇಡಿಕೆಗಳನ್ನು ಸಹ ಆಲಿಸಿದರು.

ಸೆಪ್ಟೆಂಬರ್ 29 ರಂದು ನೀಡಲಾದ ತೀರ್ಪಿನಲ್ಲಿ ಪ್ರತಿ ಅತ್ಯಾಚಾರ ಸಂತ್ರಸ್ತರಿಗೆ ಈ ಹಿಂದೆ ನೀಡಲಾಗಿದ್ದ 15 ಸಾವಿರ ರೂ.ನ್ನು ಹೆಚ್ಚಿಸಿ 10 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ನ್ಯಾಯಾಮೂರ್ತಿಗಳು ಸೂಚಿಸಿದ್ದಾರೆ. ಇದಲ್ಲದೆ, ಅತ್ಯಾಚಾರ ಅಪರಾಧಗಳಿಗೆ ಶಿಕ್ಷೆಗೊಳಗಾದವರಿಂದ ಈ ಪರಿಹಾರದ ಶೇಕಡಾ 50 ರಷ್ಟನ್ನು ವಸೂಲಿ ಮಾಡುವಂತೆ ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ತೆಲಂಗಾಣ ಉದ್ಯೋಗಾಕಾಂಕ್ಷಿ ಆತ್ಮಹತ್ಯೆ: ಯುವಕರ ಕನಸು ಮತ್ತು ಆಕಾಂಕ್ಷೆಗಳ ಕೊಲೆ: ರಾಹುಲ್‌ಗಾಂಧಿ

ಅತ್ಯಾಚಾರ ಸಂತ್ರಸ್ತರಿಗೆ ಸರಿಯಾದ ವೈದ್ಯಕೀಯ ನೆರವು ನೀಡಲು ನಿರಾಕರಿಸಿದ ವೈದ್ಯಕೀಯ ಸಿಬ್ಬಂದಿಯಿಂದಲೂ ಪರಿಹಾರವನ್ನು ವಸೂಲಿ ಮಾಡುವಂತೆ ನ್ಯಾಯಮೂರ್ತಿ ವೇಲ್ಮುರುಗನ್ ಆದೇಶಿಸಿದ್ದಾರೆ. ಅಲ್ಲದೆ ಗ್ರಾಮಸ್ಥರನ್ನು ರಕ್ಷಿಸುವಲ್ಲಿ ವಿಫಲರಾದ ಹಿಂದಿನ ಧರ್ಮಪುರಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾ ಅರಣ್ಯಾಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ನ್ಯಾಯಾಧೀಶರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ವಿವಿಧ ಕಾರಣಗಳಿಂದ ಸರ್ಕಾರಿ ಉದ್ಯೋಗಗಳು ಕಾರ್ಯಸಾಧ್ಯವಾಗದ ಸಂದರ್ಭಗಳಲ್ಲಿ, ಸಂತ್ರಸ್ತರಿಗೆ ಸ್ವಯಂ ಉದ್ಯೋಗ ಚಟುವಟಿಕೆಗಳಿಗೆ ಸಾಕಷ್ಟು ತರಬೇತಿಯನ್ನು ನೀಡಬೇಕು.
ಹೆಚ್ಚುವರಿಯಾಗಿ,ವಾಚಾತಿ ಗ್ರಾಮದಲ್ಲಿ ತಕ್ಷಣದ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾರಂಭಿಸಲು, ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, ಎಲ್ಲ ರೀತಿಯಲ್ಲೂ ಅಭಿವೃದ್ಧಿ ಪಡಿಸಲು ಸಂಘಟಿತ ಪ್ರಯತ್ನ ನಡೆಸಬೇಕಿದೆ ಎಂದು ನ್ಯಾಯಮೂರ್ತಿಗಳು  ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಸೆಪ್ಟೆಂಬರ್ 29 ರಂದು ಹೈಕೋರ್ಟ್ ನೀಡಿದ  ಈ ತೀರ್ಪು ವಾಚಾತಿ ಬಡ ಆದಿವಾಸಿ ಜನರಲ್ಲಿ ವಿಶ್ವಾಸವನ್ನು ಮೂಡಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಅವರ ಮೇಲೆ “ಶ್ರೀಗಂಧಗಳ್ಳರು” ಎಂದು ಅರಣ್ಯ ಸಿಬ್ಬಂಧಿ,ಪೊಲೀಸ್ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಹೇರಲ್ಪಟ್ಟಿದ್ದ “ಹಣೆಪಟ್ಟಿ”ನ್ನು ಈ ಆದೇಶ ಅಳಿಸಿ ಹಾಕಿದೆ.

ಇದು ನಮಗೆ ಮಾತ್ರವಲ್ಲ ನಮ್ಮ ಮಕ್ಕಳ ಭವಿಷ್ಯಕ್ಕೂಕವಿದಿದ್ದ ಕಾರ್ಮೋಡಗಳನ್ನು ದೂರ ಸರಿದಂತಾಗಿದೆ ಎನ್ನುವ ಸಂತಸ ಹಚ್ಚಿಕೊಂಡರು ವಾಚಾತಿ ಗ್ರಾಮಸ್ಥರು.

ಲೇಖಕರ ವಿಳಾಸ: ನಂ 40/5 16 ನೇ ಅಡ್ಡರಸ್ತೆ,2 ನೇ ಬಿ ಮೇನ್ ಸಂಪಂಗಿರಾಮನಗರ ಬೆಂಗಳೂರು, 560027 ಪೋನ್ 9448415167

ವಿಡಿಯೋ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

Donate Janashakthi Media

Leave a Reply

Your email address will not be published. Required fields are marked *