ನಾ ದಿವಾಕರ
ದೇಶಾದ್ಯಂತ ನ್ಯೂಸ್ ಕ್ಲಿಕ್ ಮೇಲಿನ ದಾಳಿಗೆ ಪ್ರತಿರೋಧ ವ್ಯಕ್ತವಾಗುತ್ತಿದ್ದರೂ, ಪತ್ರಿಕೋದ್ಯಮ ವಲಯದ ಸಂಗಾತಿಗಳು ಬಹುಮಟ್ಟಿಗೆ ತಣ್ಣನೆಯ ಪ್ರತಿಕ್ರಿಯೆ ನೀಡಿರುವುದು ಮತ್ತೂ ಆತಂಕಕಾರಿಯಾಗಿ ಕಾಣುತ್ತದೆ. ಕೆಲವೇ ಮುಖ್ಯವಾಹಿನಿ ಪತ್ರಿಕೆಗಳು ಸಂಪಾದಕೀಯದ ಮೂಲಕ ಸರ್ಕಾರದ ಕ್ರಮವನ್ನು ಖಂಡಿಸಿವೆ. ಕರ್ನಾಟಕದ ಮಟ್ಟಿಗೆ ಪತ್ರಿಕೋದ್ಯಮ ಮಿತ್ರರು ಬಹುಮಟ್ಟಿಗೆ ನಿರ್ಲಿಪ್ತರಾಗಿ ತಮಗೆ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ. ಮಾರುಕಟ್ಟೆ
ಸೋದರತ್ವ ಕಳೆದುಕೊಂಡ ಮಾಧ್ಯಮ ವಲಯ ರಾಜಕೀಯ ಧೃವೀಕರಣಕ್ಕೊಳಗಾಗಿರುವುದು ದುರಂತ
ದೆಹಲಿಯಲ್ಲಿ ನ್ಯೂಸ್ ಕ್ಲಿಕ್ ಸಂಸ್ಥೆಯ ಮೇಲೆ ನಡೆದಿರುವ ದಾಳಿ ನವ ಭಾರತದಲ್ಲಿ ಸ್ವತಂತ್ರ-ಸ್ವಾಯತ್ತ ಮಾಧ್ಯಮಗಳು ಎದುರಿಸುತ್ತಿರುವ ಜಟಿಲ ಸವಾಲನ್ನು ಮತ್ತೊಮ್ಮೆ ನಮ್ಮ ಮುಂದಿರಿಸಿದೆ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಅಥವಾ ನಾಲ್ಕನೆಯ ಆಯಾಮ ಎಂದೇ ಪರಿಭಾವಿಸಲಾಗಿರುವ ಮಾಧ್ಯಮ ವಲಯ ನವ ಉದಾರವಾದಿ ಮಾರುಕಟ್ಟೆ ಬಂಡವಾಳದ ಆಧಿಪತ್ಯಕ್ಕೆ ಒಳಗಾಗಿರುವ ಹೊತ್ತಿನಲ್ಲೇ ಸರ್ಕಾರಗಳು ತಮ್ಮ ವಿರೋಧಿಗಳನ್ನು ಹಣಿಯಲು ಅಥವಾ ಮಣಿಸಲು ಕಾನೂನಾತ್ಮಕ ಎನಿಸುವ ಕರಾಳ ಶಾಸನಗಳನ್ನು ಪ್ರಯೋಗಿಸುತ್ತಿರುವುದು ಸ್ವತಂತ್ರ ಆಲೋಚನೆ ಮಾಡುವ ಯಾರಿಗೇ ಆದರೂ ಆತಂಕ ಮೂಡಿಸುತ್ತದೆ. ಯಾವುದೇ ಆಡಳಿತಾರೂಢ ಸರ್ಕಾರಗಳಿಗೆ ದೇಶದ ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಸಂರಕ್ಷಿಸುವ ನೈತಿಕ ಜವಾಬ್ದಾರಿ ಇದ್ದೇ ಇರುತ್ತದೆ. ಇದಕ್ಕೆ ಭಂಗ ತರುವಂತಹ ಚಟುವಟಿಕೆಗಳನ್ನು, ಯೋಜನೆಗಳನ್ನು ನಿಯಂತ್ರಿಸುವುದು ಪ್ರಜಾಸತ್ತೆಯಲ್ಲೂ ಒಪ್ಪಿತವಾಗಿರುವಂತಹ ಒಂದು ವಿಚಾರ. ಮಾಧ್ಯಮಗಳೂ ಈ ಜಾಗ್ರತೆಯನ್ನು ವಹಿಸಿಯೇ ವೃತ್ತಿಯಲ್ಲಿ ತೊಡಗಿರುತ್ತವೆ.
ಆದರೆ ಆಳುವ ಸರ್ಕಾರಗಳನ್ನು ಟೀಕಿಸುವ, ವಿಮರ್ಶಿಸುವ ಒಂದು ಸ್ವಾಯತ್ತ ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಸ್ತ ನಾಗರಿಕರಿಗೂ ಇರುವಂತೆಯೇ, ನಾಗರಿಕರ ನಡುವೆ ಜಾಗೃತಿ ಮೂಡಿಸುವ ನೈತಿಕ ಜವಾಬ್ದಾರಿ ಇರುವ ಮಾಧ್ಯಮಗಳಿಗೂ ಇರುತ್ತದೆ. ಭಾರತದ ಸಂವಿಧಾನ ಇದನ್ನು ನೀಡಿರುವುದೂ ಹೌದು. ಇದನ್ನು ವಿಶಾಲಾರ್ಥದಲ್ಲಿ ಮಾಧ್ಯಮ ಸ್ವಾತಂತ್ರ್ಯ ಎಂದೂ ಹೇಳಬಹುದು. ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಾಂವಿಧಾನಿಕವಾಗಿ ಸ್ವೀಕರಿಸಿರುವುದರಿಂದಲೇ ಭಾರತದ ಪ್ರಜಾಪ್ರಭುತ್ವ ಇಂದಿಗೂ ಸಹ ಜೀವಂತಿಕೆಯಿಂದ, ಚಲನಶೀಲತೆಯಿಂದ ಮುನ್ನಡೆಯುತ್ತಿದೆ. ಆದರೆ ಈ ಮುನ್ನಡೆಯ ಹಾದಿಯಲ್ಲಿ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳು ಎದುರಿಸಿರುವ ಅಡೆತಡೆಗಳನ್ನು ಮರೆಮಾಚಲಾಗುವುದಿಲ್ಲ. 1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳನ್ನು ಇಲ್ಲಿ ಸ್ಮರಿಸಬಹುದು.
ಸಾಂವಿಧಾನಿಕ ಜವಾಬ್ದಾರಿ
ಪ್ರಜಾಸತ್ತಾತ್ಮಕವಾಗಿ ವಯಸ್ಕ ಮತದಾನದ ಮೂಲಕ ಚುನಾಯಿತವಾದ ಒಂದು ಪ್ರಾತಿನಿಧಿಕ ಸರ್ಕಾರ ಇಡುವ ಪ್ರತಿಯೊಂದು ಹೆಜ್ಜೆಯೂ, ಜಾರಿಗೊಳಿಸುವ ಪ್ರತಿ ಯೋಜನೆಯೂ, ಅನುಸರಿಸುವ ಆಡಳಿತ ನೀತಿಯೂ ಸಹ ಸಮಸ್ತ ಜನಕೋಟಿಯ ಜೀವನಾಭ್ಯುದಯಕ್ಕೆ ಪೂರಕವಾಗಿ ಇರಬೇಕೆಂದು ಆಶಿಸುವುದು ಸಹಜ. ಸಂವಿಧಾನ ದೇಶದ ಜನತೆಗೆ ನೀಡಿರುವ ಹಕ್ಕುಗಳೊಂದಿಗೇ ಕೆಲವು ಕರ್ತವ್ಯ, ಬಾಧ್ಯತೆಗಳನ್ನೂ ನಿಗದಿಪಡಿಸಿದ್ದು, ತಮ್ಮ ಹಕ್ಕೊತ್ತಾಯದ ಹಾದಿಯಲ್ಲಿ ನೈತಿಕ ಬಾಧ್ಯತೆಗಳನ್ನು ನಿಭಾಯಿಸುವ ಸಾಮಾನ್ಯ ಜನತೆ ಸಹಜವಾಗಿಯೇ ಸರ್ಕಾರಗಳಿಂದ ಜನಪರ ಅಥವಾ ಸಮಾಜಮುಖಿ ನೀತಿಗಳನ್ನು ಅಪೇಕ್ಷಿಸುತ್ತದೆ. ಜನಸಾಮಾನ್ಯರ, ಕನಿಷ್ಠ ಪಕ್ಷ ಮತದಾರ ಪ್ರಭುಗಳ ಈ ಅಪೇಕ್ಷೆ ಮತ್ತು ನಿರೀಕ್ಷೆಗಳನ್ನು ಈಡೇರಿಸುವ ಸಾಂವಿಧಾನಿಕ ಹೊಣೆ ಜನಪ್ರತಿನಿಧಿಗಳ, ಶಾಸನಸಭೆಗಳ ಮತ್ತು ಸರ್ಕಾರಗಳ ಮೇಲಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಅಥವಾ ಪ್ರತಿನಿಧಿಗಳು ಎಡವಿದಾಗೆಲ್ಲಾ ಎಚ್ಚರಿಸುವ ಜವಾಬ್ದಾರಿಯನ್ನು ಮಾಧ್ಯಮ ವಲಯ ಸ್ವಾಭಾವಿಕವಾಗಿ ವಹಿಸಿಕೊಳ್ಳಬೇಕಾಗುತ್ತದೆ. ಹಾಗಾಗಿಯೇ ಮಾಧ್ಯಮವನ್ನು ನಾಲ್ಕನೆಯ ಸ್ತಂಭ ಎನ್ನಲಾಗುತ್ತದೆ.
ಇದನ್ನೂ ಓದಿ: ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್ ಆರೋಪ
ಈ ಕನಿಷ್ಠ ಅರಿವು ಇರುವ ಯಾರಿಗೇ ಆದರೂ ದೇಶದ ಮುದ್ರಣ-ವಿದ್ಯುನ್ಮಾನ-ಸಾಮಾಜಿಕ ಮಾಧ್ಯಮಗಳು ಸರ್ಕಾರಗಳಿಂದ, ಸರ್ಕಾರಿ ಸಂಸ್ಥೆಗಳಿಂದ, ಸರ್ಕಾರೇತರ ಸಂಘಟನೆ-ಗುಂಪುಗಳಿಂದ ಎದುರಿಸುತ್ತಿರುವ ದಾಳಿ ಆತಂಕ ಮೂಡಿಸಲೇಬೇಕಿದೆ. ತಮ್ಮದೇ ಆದ ಸಾಂಸ್ಥಿಕ ಚೌಕಟ್ಟುಗಳಿಗೆ ಒಳಪಟ್ಟಿದ್ದರೂ ಮಾಧ್ಯಮಗಳು ಸಾರ್ವಜನಿಕ ವಲಯದಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸುತ್ತಲೇ ತಮ್ಮ ವೃತ್ತಿಪರತೆಯನ್ನು ಮುಂದುವರೆಸುತ್ತವೆ. ಇದು ಪತ್ರಿಕಾರಂಗ ಅಥವಾ ಪತ್ರಿಕೋದ್ಯಮದ ಮೂಲ ತತ್ವವೂ ಹೌದು. ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಾರಿತ್ರಿಕ-ಸಾರ್ವಕಾಲಿಕ ಹೇಳಿಕೆಯೊಂದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ. “ ಭಾರತದಲ್ಲಿ ಪತ್ರಿಕೋದ್ಯಮ ಒಂದು ಕಾಲದಲ್ಲಿ ವೃತ್ತಿಯಾಗಿತ್ತು, ಈಗ ಅದು ವ್ಯಾಪಾರವಾಗಿದೆ,,,,ವ್ಯಕ್ತಿ ಆರಾಧನೆಗಾಗಿ ದೇಶದ ಹಿತಾಸಕ್ತಿಯನ್ನು ವಿವೇಕವಿಲ್ಲದೆ ಯಾವುದೇ ಕಾಲಘಟ್ಟದಲ್ಲೂ ತ್ಯಾಗ ಮಾಡಲಾಗಿಲ್ಲ ,,,,”. ಅಂಬೇಡ್ಕರ್ ಅವರ ಈ ಮಾತುಗಳನ್ನು ಸಮಕಾಲೀನ ಸಂದರ್ಭದಲ್ಲಿಟ್ಟು ನೋಡಿದಾಗ ನಮ್ಮ ಮಾಧ್ಯಮಗಳು ಎದುರಿಸುತ್ತಿರುವ ದ್ವಂದ್ವವನ್ನು ಅರ್ಥಮಾಡಿಕೊಳ್ಳಬಹುದು.
ಸ್ವತಂತ್ರ ಭಾರತದಲ್ಲಿ ಸರ್ಕಾರಗಳು ಅನುಸರಿಸುತ್ತಲೇ ಬಂದಿರುವ ಕರಾಳ ಶಾಸನಗಳು ಏಕೆ ಪತ್ರಿಕಾ ಮಾಧ್ಯಮವನ್ನು ಅಥವಾ ಸಮಸ್ತ ಮಾಧ್ಯಮ ವಲಯವನ್ನು ನಿಯಂತ್ರಿಸಲು ಬಯಸುತ್ತವೆ ಎಂಬ ಪ್ರಶ್ನೆಗೆ ಉತ್ತರ ಸರಳ. ಇಂದು ತಾರಕಕ್ಕೆ ತಲುಪಿರುವ ಮಾಧ್ಯಮಗಳನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಈ ಹಿಂದೆಯೂ ಹಲವು ಸರ್ಕಾರಗಳ ಅಧಿಕಾರಾವಧಿಯಲ್ಲಿ ಕಂಡಿದ್ದಾಗಿದೆ. ಜನಮತವನ್ನೇ ಆಧರಿಸಿ ತಮ್ಮ ಪ್ರಸ್ತುತ ಆಳ್ವಿಕೆ ಮತ್ತು ಭವಿಷ್ಯದ ಅಧಿಕಾರವನ್ನು ಚಲಾಯಿಸುವ ರಾಜಕೀಯ ಪಕ್ಷಗಳಿಗೆ ತಮ್ಮ ಸರ್ಕಾರಗಳು ಅನುಸರಿಸುವ ಆಡಳಿತ ನೀತಿಗಳು ಎಷ್ಟೇ ಜನವಿರೋಧಿಯಾಗಿದ್ದರೂ, ಎಷ್ಟೇ ತಾರತಮ್ಯಗಳನ್ನು ಸೃಷ್ಟಿಸುವಂತಿದ್ದರೂ, ಅವುಗಳನ್ನು ಸಮರ್ಥಿಸಿಕೊಳ್ಳಲು ಸಾರ್ವಜನಿಕ ಸಂವಹನ ಸಾಧನಗಳು ಅತ್ಯವಶ್ಯವಾಗುತ್ತವೆ. ಈ ಸಾಧನಗಳನ್ನು ವಿವಿಧ ಸ್ವರೂಪದ ಮಾಧ್ಯಮಗಳಲ್ಲಿ ಕಂಡುಕೊಳ್ಳುತ್ತವೆ. ತನ್ನ ಹಾದಿ ತುಳಿಯದ ಸಂವಹನ ಮಾಧ್ಯಮಗಳನ್ನು ಹತ್ತಿಕ್ಕುವ ಕ್ರಮಗಳನ್ನೂ ಕೈಗೊಳ್ಳುತ್ತವೆ. ಕಳೆದ ಒಂದು ದಶಕದಲ್ಲಿ ಇದು ಅತಿರೇಕಕ್ಕೆ ತಲುಪಿರುವುದು ವಾಸ್ತವ.
ಮಾರುಕಟ್ಟೆ-ಮಾಧ್ಯಮ-ಸಮಾಜ
ಹಾಗಾಗಿ ಮಾಧ್ಯಮಗಳನ್ನು ನಿಯಂತ್ರಿಸಲು ಸಾಂವಿಧಾನಿಕ ಕ್ರಮಗಳನ್ನಷ್ಟೇ ಅಲ್ಲದೆ ಅಸಾಂವಿಧಾನಿಕ ಎನಿಸುವಂತಹ ಉಪಕ್ರಮಗಳನ್ನೂ ಕೈಗೊಳ್ಳಲು ಸರ್ಕಾರಗಳು ಹಿಂಜರಿಯುವುದಿಲ್ಲ. ಕರಾಳ ಶಾಸನಗಳ ಪ್ರಯೋಗ ಇಂತಹ ಒಂದು ಉಪಕ್ರಮ. 1990ರ ನಂತರದ ಜಾಗತೀಕರಣ ಹಾಗೂ 2000ದ ನಂತರದ ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯಲ್ಲಿ, ಸರ್ಕಾರದ ಬಹುಪಾಲು ಆಡಳಿತ ನೀತಿಗಳು ಉಳ್ಳವರ ಪರವಾಗಿದ್ದು, ಕಾರ್ಪೋರೇಟ್ ಮಾರುಕಟ್ಟೆ ಮತ್ತು ಬಂಡವಾಳವನ್ನು ರಕ್ಷಿಸುವ ಹಾದಿಯಲ್ಲಿ ತಳಮಟ್ಟದ ಜನತೆಯ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಅಡಿಪಾಯವನ್ನು ಶಿಥಿಲಗೊಳಿಸುವ ನಿಟ್ಟಿನಲ್ಲೇ ಸಾಗುತ್ತಿವೆ. ಸಹಜವಾಗಿಯೇ ಇದು ಅವಕಾಶವಂಚಿತರ, ಶೋಷಿತರ, ಅಂಚಿಗೆ ತಳ್ಳಲ್ಪಟ್ಟವರ, ತುಳಿತಕ್ಕೊಳಗಾದವರ ಹಾಗೂ ತಾರತಮ್ಯಕ್ಕೊಳಗಾದವರ ಪ್ರತಿರೋಧವನ್ನು ಎದುರಿಸುತ್ತದೆ. ಸಾಮಾನ್ಯ ಜನತೆಯ ಈ ನೈತಿಕ ಪ್ರತಿರೋಧದ ಹಕ್ಕನ್ನು ಕಸಿದುಕೊಳ್ಳುವುದು ಸುಲಭಸಾಧ್ಯವಲ್ಲ ಹೆಚ್ಚೆಂದರೆ ಕಾನೂನು ವ್ಯಾಪ್ತಿಯಲ್ಲಿ ಹತ್ತಿಕ್ಕಬಹುದು.
ಆದರೆ ಯಾವುದೇ ಒಬ್ಬ ವ್ಯಕ್ತಿಗೆ ಇರುವಂತೆಯೇ ಒಂದು ಸಮಾಜಕ್ಕೂ ಒಳದನಿ ಇರುತ್ತದೆ. ಆಂತರಿಕವಾಗಿ ಸದಾ ತುಡಿತಕ್ಕೊಳಗಾಗುತ್ತಿರುವ ಅಭಿವ್ಯಕ್ತಿ ಇದ್ದೇ ಇರುತ್ತದೆ. ಈ ಒಳದನಿಯು ಪ್ರತಿಭಟನೆ, ಧರಣಿ, ಮುಷ್ಕರ ಮತ್ತಿತರ ಸ್ವರೂಪಗಳಲ್ಲಿ ಹೋರಾಟಗಳಾಗಿ ಪರಿವರ್ತಿತವಾಗುತ್ತದೆ. ಆಳುವ ವರ್ಗಗಳು ಅನುಸರಿಸುವ ಆಡಳಿತ ನೀತಿಗಳು ಶ್ರೀಸಾಮಾನ್ಯರ ದೈನಂದಿನ ಬದುಕಿಗೆ ಧಕ್ಕೆ ಉಂಟುಮಾಡಿದಾಗಲೆಲ್ಲಾ ಸ್ಫೋಟಿಸುವ ಆಕ್ರೋಶ ಮತ್ತು ಅಸಮಾಧಾನಗಳಿಗೆ ನಾಗರಿಕರ ಒಂದು ವರ್ಗವಾದರೂ ಸ್ಪಂದಿಸುತ್ತಲೇ ಇರುತ್ತದೆ. ಆದರೆ ರಾಜಕೀಯ ಒತ್ತಾಸೆಗಳು, ಸೈದ್ದಾಂತಿಕ ನಿಲುವುಗಳು ಹಾಗೂ ಪಕ್ಷ ರಾಜಕಾರಣದ ಅನಿವಾರ್ಯತೆಗಳ ಪರಿಣಾಮ ಈ ವರ್ಗದಲ್ಲಿ ಉಂಟಾಗುವ ಬಿರುಕುಗಳು ಆಳುವ ವರ್ಗಗಳಿಗೆ ಅನುಕೂಲಕರವಾಗಿ ಪರಿಣಮಿಸುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ಅಥವಾ ಅನ್ಯಾಯದ ವಿರುದ್ಧ ಸದಾ ಹೋರಾಡುವ ಪ್ರಗತಿಪರ ಎನ್ನಲಾಗುವ ವರ್ಗದಲ್ಲೂ ಈ ವ್ಯತ್ಯಯ ಸಂಭವಿಸುವುದನ್ನು ಕಾಣುತ್ತಿದ್ದೇವೆ.
ಈ ಸನ್ನಿವೇಶದಲ್ಲಿ ಸದಾ ಅನ್ಯಾಯ-ತಾರತಮ್ಯ-ದೌರ್ಜನ್ಯಕ್ಕೊಳಗುವ ತಳಮಟ್ಟದ ಸಮಾಜದ ಬೇಕು- ಬೇಡಗಳಿಗೆ ಸ್ಪಂದಿಸುವ ಮೂಲಕ ಸರ್ಕಾರಗಳ ತಪ್ಪು ಹೆಜ್ಜೆಗಳನ್ನು ಎತ್ತಿ ತೋರಿಸುವ ನೈತಿಕ-ಸಾಂವಿಧಾನಿಕ-ಪ್ರಜಾಸತ್ತಾತ್ಮಕ ಜವಾಬ್ದಾರಿ ಮಾಧ್ಯಮ ವಲಯದ ಮೇಲಿರುತ್ತದೆ. ಸ್ವಾತಂತ್ರ್ಯೋತ್ತರ ಭಾರತದ ನಡಿಗೆಯಲ್ಲಿ ತುರ್ತುಪರಿಸ್ಥಿತಿಯನ್ನೂ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಂವಹನ ಮಾಧ್ಯಮಗಳು ಈ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಿವೆ. ಹಾಗೆಯೇ ಹೀಗೆ ಜನತೆಯ ದನಿಗೆ ದನಿಗೂಡಿಸುವ ಮಾಧ್ಯಮಗಳನ್ನು ನಿಷ್ಕ್ರಿಯಗೊಳಿಸುವ ಪ್ರಯತ್ನಗಳೂ ಸರ್ಕಾರಗಳಿಂದ ನಡೆದಿವೆ. ಇದು ಪಕ್ಷಾತೀತವಾಗಿ ಗುರುತಿಸಬಹುದಾದ ವಿದ್ಯಮಾನ. ಆದಾಗ್ಯೂ ಸಾರ್ವಜನಿಕ ಅಭಿಪ್ರಾಯವನ್ನು ಕ್ರೋಢೀಕರಿಸುವ ಅಥವಾ ಜನಸಾಮಾನ್ಯರ ಅಭಿವ್ಯಕ್ತಿಗೆ ಒಂದು ವೇದಿಕೆಯನ್ನು ನೀಡುವ ಕೆಲಸವನ್ನು ಮಾಧ್ಯಮ ವಲಯ ಮಾಡುತ್ತಲೇ ಬಂದಿದೆ.
ನವ ಉದಾರವಾದ ಪೋಷಿಸುತ್ತಿರುವ ಮಾರುಕಟ್ಟೆ ಆರ್ಥಿಕತೆ ಹಾಗೂ ಬಿಜೆಪಿ ಅನುಸರಿಸುತ್ತಿರುವ ಬಹುಸಂಖ್ಯಾವಾದದ ರಾಜಕಾರಣಕ್ಕೆ ಸಂವಹನ ಮಾಧ್ಯಮಗಳ ಈ ಪ್ರಜಾಸತ್ತಾತ್ಮಕ ಅಭಿವ್ಯಕ್ತಿ ತೊಡಕಾಗಿ ಕಾಣುತ್ತಿದೆ. ಹಾಗಾಗಿಯೇ ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕ ಬಿಗಿಹಿಡಿತ ತೀವ್ರವಾಗುತ್ತಿರುವಂತೆಲ್ಲಾ, ಇದೇ ಆರ್ಥಿಕತೆಯಿಂದ ತಮ್ಮ ಮೂಲ ನೆಲೆ ಕಳೆದುಕೊಳ್ಳುವ ತಳಮಟ್ಟದ ಜನಸಮುದಾಯಗಳ ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಸರ್ಕಾರದ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕ ನೀತಿ ಹಾಗೂ ಕೋಮು ಧೃವೀಕರಣದ ನೀತಿಗಳನ್ನು ವಿರೋಧಿಸುವ, ಅಪಾರ ಜನಸಂಖ್ಯೆಗೆ ಒತ್ತಾಸೆಯಾಗಿ ನಿಲ್ಲುವ ಯಾವುದೇ ಮಾಧ್ಯಮ ಸಮೂಹ ಆಳುವ ವರ್ಗಗಳಿಗೆ ಅಪಥ್ಯವಾಗಿ ಕಾಣತೊಡಗುತ್ತದೆ. ನ್ಯೂಸ್ ಕ್ಲಿಕ್ ಪ್ರಕರಣದಲ್ಲಿ ಪತ್ರಕರ್ತರ ವಿರುದ್ಧ ಯುಎಪಿಎ ಕಾಯ್ದೆಯನ್ನು ಅನ್ವಯಿಸಿರುವುದು ಈ ಪ್ರಯತ್ನದ ಪರಾಕಾಷ್ಠೆ ಎಂದು ಹೇಳಬಹುದು.
ಇದನ್ನೂ ಓದಿ: ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ವಿರುದ್ಧ ‘ಯುಎಪಿಎ’ ದಾಖಲು; 2 ಪತ್ರಕರ್ತರು ವಶಕ್ಕೆ!
ನ್ಯಾಯದ ಕಟಕಟೆಯಲ್ಲಿ ಮಾಧ್ಯಮ
ಆಡಳಿತಾರೂಢ ಸರ್ಕಾರವು ತನ್ನ ವಿರೋಧಿ ಧ್ವನಿಗಳನ್ನು ಮಣಿಸುವ ಇಂತಹ ಪ್ರಯತ್ನಗಳನ್ನು ಏಕೆ ಎಂಬ ಪ್ರಶ್ನೆಯ ಮೂಲಕ ಪರಾಮರ್ಶಿಸುವುದು ಕ್ಲೀಷೆ ಎನಿಸುವಷ್ಟು ಮಟ್ಟಿಗೆ ಭಾರತದ ಪ್ರಜಾತಂತ್ರ ರೂಪಾಂತರ ಹೊಂದಿದೆ. ಸರ್ಕಾರಗಳು ತಮ್ಮ ಅಸ್ತಿತ್ವಕ್ಕಾಗಿ ಇದನ್ನು ಮಾಡಿಯೇ ತೀರುತ್ತವೆ. ಆದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುವ ಯಾವುದೇ ವ್ಯಕ್ತಿಯನ್ನು ಕಾಡಬೇಕಿರುವುದು ಮುಖ್ಯವಾಹಿನಿ ಮಾಧ್ಯಮಗಳ ನಿಷ್ಕ್ರಿಯತೆ ಅಥವಾ ಪ್ರಜ್ಞಾಪೂರ್ವಕ ನಿರ್ಲಿಪ್ತತೆ. ದೇಶದ ಬಹುತೇಕ ವಿದ್ಯುನ್ಮಾನ ಮಾಧ್ಯಮಗಳ ಒಡೆತನವನ್ನು ವಶಪಡಿಸಿಕೊಳ್ಳುವ ಮೂಲಕ ಕಾರ್ಪೋರೇಟ್ ಮಾರುಕಟ್ಟೆಯ ಔದ್ಯಮಿಕ ವಲಯ “ಮಾಧ್ಯಮ ಸ್ವಾತಂತ್ರ್ಯ” ಎಂಬ ಪದವನ್ನೇ ಅಪಹಾಸ್ಯಕ್ಕೀಡುಮಾಡಿವೆ. ನ್ಯೂಸ್ ಕ್ಲಿಕ್ ಮೇಲಿನ ದಾಳಿಯನ್ನು ವರದಿ ಮಾಡುವಾಗ ಕೆಲವು ವಿದ್ಯುನ್ಮಾನ ವಾಹಿನಿಗಳ ನಿರೂಪಕರಲ್ಲಿ ಕಾಣುವ “ ಸಂಭ್ರಮದ ಛಾಯೆ ” ಈ ಅಪಹಾಸ್ಯವನ್ನು ಅಸಹ್ಯಕರಗೊಳಿಸುವಂತಿರುತ್ತದೆ.
ಪ್ರಜಾಪ್ರಭುತ್ವದ ಅಡಿಪಾಯವನ್ನು ಸದಾ ಕಾಪಿಟ್ಟುಕೊಳ್ಳುವ ಸಂವಿಧಾನ ನಿಷ್ಠೆಯಿಂದ ಬಹುತೇಕ ಮಾಧ್ಯಮ ಸಮೂಹಗಳು ವಿಮುಖವಾಗಿರುವುದರಿಂದಲೇ ಸರ್ಕಾರಗಳು ಪತ್ರಿಕೋದ್ಯಮದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸುಲಭವಾಗುತ್ತದೆ. ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದ 2023ರ ವರದಿಯ ಅನುಸಾರ ಭಾರತ 180 ರಾಷ್ಟ್ರಗಳ ಪೈಕಿ 161 ನೆಯ ಸ್ಥಾನದಲ್ಲಿದ್ದು 11 ಸ್ಥಾನಗಳಷ್ಟು ಕುಸಿತ ಕಂಡಿದೆ. ಇದೇ ವರದಿಯ ಅನುಸಾರ ಪತ್ರಿಕೋದ್ಯಮದ ಕಾರ್ಯನಿರ್ವಹಣೆಯ ದೃಷ್ಟಿಯಿಂದ 31 ದೇಶಗಳಲ್ಲಿ ಪರಿಸ್ಥಿತಿ ಅತಿ ಗಂಭೀರವಾಗಿದ್ದರೆ 42 ದೇಶಗಳಲ್ಲಿ ಕಷ್ಟಕರವಾಗಿದೆ. 55 ದೇಶಗಳಲ್ಲಿ ಸಮಸ್ಯಾತ್ಮಕವಾಗಿದ್ದು 52 ದೇಶಗಳಲ್ಲಿ ಮಾತ್ರವೇ ಉತ್ತಮ ಪರಿಸ್ಥಿತಿ ಇದೆ. ಅಂದರೆ ಹತ್ತರಲ್ಲಿ ಏಳು ದೇಶಗಳಲ್ಲಿ ಪತ್ರಿಕೋದ್ಯಮದ ವಾತಾವರಣ ಹದಗೆಟ್ಟಿದೆ. ವಿಶ್ವದಾದ್ಯಂತ ಬಲಗೊಳ್ಳುತ್ತಿರುವ ಬಲಪಂಥೀಯ ರಾಜಕಾರಣ ಮತ್ತು ನವ ಉದಾರವಾದಿ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ನೆಲೆಯಲ್ಲಿ ನಿಂತು ನೋಡಿದಾಗ, ಈ ಪರಿಸ್ಥಿತಿ ಸುಲಭಗ್ರಾಹ್ಯವಾದೀತು.
ಭಾರತದ ಪ್ರಜಾಪ್ರಭುತ್ವ ಎದುರಿಸುತ್ತಿರುವ ಜಟಿಲ ಸವಾಲುಗಳು ಹಾಗೂ ಶಿಥಿಲವಾಗುತ್ತಿರುವ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಮೌಲ್ಯಗಳು ಸಾರ್ವಜನಿಕ ವಲಯದಲ್ಲಿ ಸೃಷ್ಟಿಸುತ್ತಿರುವ ಆತಂಕ ಹಾಗೂ ತಲ್ಲಣಗಳ ನಡುವೆಯೇ ನಾಗರಿಕರು ಪ್ರಶ್ನಿಸಬೇಕಿರುವುದು ನಿಷ್ಕ್ರಿಯ ಮಾಧ್ಯಮಗಳ ಜಾಣ ಮೌನವನ್ನು ಮತ್ತು ತಣ್ಣನೆಯ ನಿರ್ಲಿಪ್ತತೆಯನ್ನು. ಪ್ರಜಾಪ್ರಭುತ್ವದ ಅಂತಃಸತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಕಟ್ಟಕಡೆಯ ವ್ಯಕ್ತಿಯವರೆಗೂ ಸಮಾಜದ ನಾಡಿಮಿಡಿತವನ್ನು ಅರಿತು ತಮ್ಮ ಬಾಧ್ಯತೆಯನ್ನು ನಿರ್ವಹಿಸಬೇಕಾದ ಮಾಧ್ಯಮ ಲೋಕ ಇಂದು ಧೃವೀಕರಣಕ್ಕೊಳಗಾಗಿದ್ದು ಅಧಿಕಾರ ರಾಜಕಾರಣದ ಪರ-ವಿರೋಧದ ನೆಲೆಯಲ್ಲಿ ವಿಘಟಿತವಾಗಿದೆ. ಹಾಗಾಗಿಯೇ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಅಥವಾ ಪ್ರಜೆಗಳಿಗಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮಾಧ್ಯಮಗಳು ಆಳುವವರ ಕಾಕದೃಷ್ಟಿಗೊಳಗಾಗುತ್ತವೆ. ನ್ಯೂಸ್ ಕ್ಲಿಕ್ ಇತ್ತೀಚಿನ ಒಂದು ನಿದರ್ಶನವಷ್ಟೆ. ಆದರೆ ಮಾಧ್ಯಮ ಸಂಸ್ಥೆಯ ವಿರುದ್ಧ ಯುಎಪಿಎ ಕರಾಳ ಶಾಸನವನ್ನು ಪ್ರಯೋಗಿಸಿರುವುದು ಇದೇ ಮೊದಲ ಸಲ. ಇದು ಆತಂಕ ಮೂಡಿಸುವ ಸಂಗತಿ.
ದೇಶಾದ್ಯಂತ ನ್ಯೂಸ್ ಕ್ಲಿಕ್ ಮೇಲಿನ ದಾಳಿಗೆ ಪ್ರತಿರೋಧ ವ್ಯಕ್ತವಾಗುತ್ತಿದ್ದರೂ, ಪತ್ರಿಕೋದ್ಯಮ ವಲಯದ ಸಂಗಾತಿಗಳು ಬಹುಮಟ್ಟಿಗೆ ತಣ್ಣನೆಯ ಪ್ರತಿಕ್ರಿಯೆ ನೀಡಿರುವುದು ಮತ್ತೂ ಆತಂಕಕಾರಿಯಾಗಿ ಕಾಣುತ್ತದೆ. ಕೆಲವೇ ಮುಖ್ಯವಾಹಿನಿ ಪತ್ರಿಕೆಗಳು ಸಂಪಾದಕೀಯದ ಮೂಲಕ ಸರ್ಕಾರದ ಕ್ರಮವನ್ನು ಖಂಡಿಸಿವೆ. ಕರ್ನಾಟಕದ ಮಟ್ಟಿಗೆ ಪತ್ರಿಕೋದ್ಯಮ ಮಿತ್ರರು ಬಹುಮಟ್ಟಿಗೆ ನಿರ್ಲಿಪ್ತರಾಗಿ ತಮಗೆ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ. ಪ್ರಜಾಪ್ರಭುತ್ವದ ಮೂಲ ಬೇರು ಅಲುಗಾಡಿಸುವಂತಹ ಒಂದು ಬೆಳವಣಿಗೆಗೆ ಎಲ್ಲ ಪ್ರಗತಿಪರ ಸಂಘಟನೆಗಳು ಒಕ್ಕೊರಲ ಪ್ರತಿರೋಧ ವ್ಯಕ್ತಪಡಿಸಬೇಕಿತ್ತು. ಮುದ್ರಣ-ವಿದ್ಯುನ್ಮಾನ-ಡಿಜಿಟಲ್-ಸಾಮಾಜಿಕ ಮಾಧ್ಯಮಗಳನ್ನು ಪ್ರತಿನಿಧಿಸುವವರು ಒಗ್ಗಟ್ಟಿನಿಂದ ಪ್ರತಿಭಟಿಸಬೇಕಿತ್ತು.ಮಾರುಕಟ್ಟೆಯ ಅವಶ್ಯಕತೆಗಳು ಹಾಗೂ ಅಸ್ತಿತ್ವದ ಅನಿವಾರ್ಯತೆಗಳಿಗೆ ತಮ್ಮ ವೃತ್ತಿಪರತೆಯನ್ನು, ಪತ್ರಿಕೋದ್ಯಮ ವೃತ್ತಿಧರ್ಮವನ್ನು ಬಲಿಕೊಡುವುದು ಪ್ರಜಾಸತ್ತೆಗೆ ಮಾಡಿದ ಅಪಚಾರ ಅಲ್ಲವೇ ?
ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂರಕ್ಷಿಸಲು ಕಂಕಣಬದ್ಧರಾಗಿರುವ ನಾಗರಿಕರು ಈ ಸಂದರ್ಭದಲ್ಲಿ ತಮ್ಮ ಸಾತ್ವಿಕ ಪ್ರತಿರೋಧವನ್ನಾದರೂ ತೋರಬೇಕಿದೆ. ಇದು ಒಂದು ಸುದ್ಧಿಮಾಧ್ಯಮದ ಪ್ರಶ್ನೆಯಲ್ಲ. ಭಾರತದ ಸಾಂವಿಧಾನಿಕ ಪ್ರಜಾಸತ್ತಾತ್ಮಕ ಅಸ್ಮಿತೆಯ ಪ್ರಶ್ನೆ. ಇಂತಹ ದಾಳಿಗಳು ನಡೆಯುತ್ತಲೇ ಇವೆ ನಾಗರಿಕರ ಮೌನವೂ ಹೆಚ್ಚಾಗುತ್ತಲೇ ಇದೆ. ಮಾಧ್ಯಮ ವಲಯದ ಒಂದು ವರ್ಗದ ಬೌದ್ಧಿಕ ನಿಷ್ಕ್ರಿಯತೆ ಮತ್ತು ಸೈದ್ಧಾಂತಿಕ ಅಪ್ರಾಮಾಣಿಕತೆ ಶಿಥಿಲವಾಗುತ್ತಿರುವ ಪ್ರಜಾತಂತ್ರದ ಬೇರುಗಳನ್ನು ಮತ್ತಷ್ಟು ಸಡಿಲಗೊಳಿಸಲು ನೆರವಾಗುತ್ತದೆ. ದೇಶದ ನಾಗರಿಕರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೆಚ್ಚಿಸುವ ಜವಾಬ್ದಾರಿ ಇರುವ ಮಾಧ್ಯಮ ವಲಯ ತನ್ನೊಳಗಿನ ಸೋದರತ್ವ ಭಾವವನ್ನು ಕಳೆದುಕೊಂಡು ಪರ-ವಿರೋಧಿ ನೆಲೆಗಳಲ್ಲಿ ವಿಘಟನೆಗೊಳಗಾಗಿರುವ ಈ ಸಂದರ್ಭದಲ್ಲಿ ಸಾಮಾನ್ಯ ಪ್ರಜೆಗಳೇ ನಿಷ್ಕ್ರಿಯ-ನಿರ್ಲಿಪ್ತ ಮಾಧ್ಯಮಗಳ ವಿರುದ್ಧ ದನಿ ಎತ್ತಬೇಕಿದೆ.
ಅಂತಿಮವಾಗಿ ಉಳಿಯಬೇಕಿರುವುದು ಪ್ರಜಾಪ್ರಭುತ್ವ-ಉಳಿಸಬೇಕಿರುವುದು ಪ್ರಜಾಪ್ರಭುತ್ವವನ್ನು !!!
-೦-೦-೦-
ವಿಡಿಯೋ ನೋಡಿ: “ಒಂದು ದೇಶ ಒಂದು ಚುನಾವಣೆ” ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ಕೆಲಸ – ಆರ್, ಸುನಂದಮ್ಮ, ನಿವೃತ್ತ ಕುಲಸಚಿವರು