ನ್ಯೂಸ್ ಕ್ಲಿಕ್ ಮೇಲೆ ದಾಳಿ: ರೈತ, ಕಾರ್ಮಿಕರ ಧ್ವನಿ ಅಡಗಿಸುವ ಯತ್ನ: ಸಂಯುಕ್ತ ಹೋರಾಟ ಕರ್ನಾಟಕ ತೀವ್ರ ಖಂಡನೆ

ಬೆಂಗಳೂರು:  ಕೃಷಿ ಕಾಯ್ದೆಗಳ ವಿರುದ್ಧದ ಐತಿಹಾಸಿಕ ದೆಹಲಿ ರೈತ ಚಳವಳಿಯ ಧ್ವನಿಯಾಗಿ ಕೆಲಸ ಮಾಡಿದ್ದ ನ್ಯೂಸ್ ಕ್ಲಿಕ್ ಮತ್ತು ಇತರ ಸ್ವತಂತ್ರ ಮಾಧ್ಯಮ ಸಂಸ್ಥೆಗಳ ಮೇಲೆ ನಡೆಸಿರುವ ದಾಳಿಯನ್ನು ಸಂಯುಕ್ತ ಹೋರಾಟ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ರೈತ- ಕಾರ್ಮಿಕರ ಧ್ವನಿ ಅಡಗಿಸುವ ಬಿಜೆಪಿ- ಆರ್.ಎಸ್.ಎಸ್ ನ ರಾಜಕೀಯ ಸಂಚಿನ ಭಾಗ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದೆ.

ಈ ಕುರಿತು ಸಂಯುಕ್ತ ಹೋರಾಟ ಕರ್ನಾಟಕದ ಸಂಯೋಜಕರಾದ ಜಿಸಿ ಬಯ್ಯಾರೆಡ್ಡಿ, ಬಡಗಲಪುರ ನಾಗೇಂದ್ರ ಜಂಟಿ ಹೇಳಿಕೆ ನೀಡಿದ್ದು, ಯಾವುದೇ ನಿರ್ದಿಷ್ಟ ಆರೋಪದ ಉಲ್ಲೇಖ ಇಲ್ಲದೇ, ಪ್ರಥಮ ವರ್ತಮಾನ ವರದಿ (FIR) ದಾಖಲಿಸಿಕೊಳ್ಳದೇ ಏಕಾಏಕಿ 9 ಮಹಿಳಾ ಪತ್ರಕರ್ತರು ಸೇರಿದಂತೆ 46 ಪತ್ರಕರ್ತರ ಮನೆಗಳ ಮೇಲೆ ಧಾಳಿ ನಡೆಸಿ, ನ್ಯೂಸ್ ಕ್ಲಿಕ್‌ನ ಪ್ರಧಾನ ಸಂಪಾದಕ ಪ್ರಭೀರ್ ಪುರಕಾಯಸ್ತ ಹಾಗೂ ಅಮಿತ್ ಚಕ್ರವರ್ತಿಯವರನ್ನು ಕರಾಳ ಯುಎಪಿಎ ಕಾಯಿದೆಯಡಿಯಲ್ಲಿ ಬಂಧಿಸಿರುವುದು ಹಾಗೂ ಪತ್ರಕರ್ತ ವೃತ್ತಿಗೆ ಸಂಬಂಧಿಸಿದ ಲ್ಯಾಪ್ ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆದಿರುವುದು ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಸ್ವತಂತ್ರ ಮಾಧ್ಯಮಗಳ ಕತ್ತು ಹಿಸುಕುವ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.

ಬಂಧಿಸಿದ ಮತ್ತು ವಶಕ್ಕೆ ಪಡೆದ ಪತ್ರಕರ್ತರನ್ನು, ದೆಹಲಿ ರೈತರ ಹಾಗೂ ಸಿಎಎ- ಎನ್‌ಆರ್‌ಸಿ ವಿರೋಧಿ ಹೋರಾಟಗಳ ಕುರಿತ ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿದೆ. ಗೋಧಿ ಮಾಧ್ಯಮಗಳು, ಮೋದಿ ಸರ್ಕಾರಕ್ಕೆ ಬಹುಪರಾಕ್ ಹಾಕುವ ಉನ್ಮಾದದ ಸ್ತೋತ್ರಗಳನ್ನು ಪಠಿಸುತ್ತಿರುವಾಗ ,ನ್ಯೂಸ್ ಕ್ಲಿಕ್ ನಂತಹ ಪ್ರಗತಿಪರ ಮಾಧ್ಯಮಗಳು ಕಾರ್ಪೊರೇಟ್ ಶೋಷಣೆ ಹಾಗೂ ಹಿಂದುತ್ವದ ಗೊಂಡಾಪಡೆ ನಡೆಸುವ ಗುಂಪು ಹತ್ಯೆಯಂತಹ ಹೀನ ಅಪರಾಧಗಳನ್ನು ಬಯಲಿಗೆಳೆಯುತ್ತಿತ್ತು. ದುಡಿಯುವ ಜನತೆಗೆ ಸಂಬಂಧಿಸಿದ ಸರ್ಕಾರದ ಧೋರಣೆಗಳು, ಕೋಮು ಗಲಭೆಗಳಲ್ಲಿನ ಸಂಘ ಪರಿವಾರದ ಪಾತ್ರ ಮತ್ತಿತರ ಸತ್ಯ ಶೋಧಕ ವರದಿಗಳು ಆಳುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದವು. ಈ ಕಾರಣಕ್ಕಾಗಿ ಈ ಮಾಧ್ಯಮ ಸಂಸ್ಥೆಯನ್ನು ಗುರಿ ಮಾಡಲಾಗಿದೆ. ಈ ಮೂಲಕ ರೈತ-ಕಾರ್ಮಿಕರ ಪ್ರಬಲ ಧ್ವನಿಯನ್ನು ಅಡಗಿಸುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ನ್ಯೂಸ್ ಕ್ಲಿಕ್ ಮೇಲೆ ದಾಳಿ| ಸ್ವತಂತ್ರ ಮಾಧ್ಯಮ ಮತ್ತು ಭಿನ್ನಮತೀಯ ಧ್ವನಿಗಳ ಮೇಲೆ ಮೋದಿ-ಬಿಜೆಪಿ ಆಡಳಿತದ ದಾಳಿ: ಸಿಪಿಐ(ಎಂಎಲ್) ಖಂಡನೆ

ನ್ಯೂಸ್ ಕ್ಲಿಕ್ ಒಂದು ಸುದ್ದಿ ವೆಬ್ ಸೈಟ್ ಆಗಿದ್ದು, ಇದುವರೆಗಿನ ಎಲ್ಲಾ ವರದಿಗಳು, ಬರಹಗಳು ಎಲ್ಲರಿಗೂ ಮುಕ್ತವಾಗಿ ಇಟ್ಟಿದೆ. ಅತ್ಯುತ್ತಮ ವೃತ್ತಿ ಮಾನದಂಡಗಳಿಗೆ ಹೆಸರಾಗಿರುವ ಈ ಮಾಧ್ಯಮ ಸಂಸ್ಥೆಯನ್ನು 2021 ರಿಂದಲೂ, ಮೋದಿ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ದೆಹಲಿ ಪೊಲೀಸರ ಆರ್ಥಿಕ ವಿಭಾಗ ಹಾಗೂ ಆದಾಯ ತೆರಿಗೆ ಇಲಾಖೆ ವಿವಿಧ ರೀತಿಯ ಸರಣಿ ದಾಳಿಗಳನ್ನು ನಡೆಸಿ ಎಲ್ಲಾ ಉಪಕರಣಗಳು, ಇಮೇಲ್‌ಗಳು ಹಾಗೂ ಎಲ್ಲಾ ರೀತಿಯ ಸಂಪರ್ಕ-ಸಂವಹನಗಳನ್ನು, ಬ್ಯಾಂಕ್ ಖಾತೆಗಳನ್ನು ಅಮೂಲಾಗ್ರವಾಗಿ ಪರಿಶೀಲನೆ ನಡೆಸಿದೆ. ಇಷ್ಟೆಲ್ಲಾ ಮಾಡಿದರೂ ಈ ಎರಡು ವರ್ಷಗಳಲ್ಲಿ ಒಂದೇ ಒಂದು ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆ ಮಾಡಲು ವಿಫಲವಾಗಿದೆ. ಕೋರ್ಟ್‌ಗಳಲ್ಲಿ ನ್ಯೂಸ್ ಕ್ಲಿಕ್ ಮೇಲಿನ ಕ್ರಮಗಳಿಗೆ ಸೂಕ್ತ ಸಮರ್ಥನೆ ಇಲ್ಲದೇ ತಲೆ ತಗ್ಗಿಸಿದೆ. ಹೀಗಿದ್ದರೂ ಈ ಪ್ರಮಾಣದ ಧಾಳಿ ಮತ್ತು ಜಾಮೀನು-ವಿಚಾರಣೆ ಇಲ್ಲದೇ ದೀರ್ಘಾವಧಿವರೆಗೆ ಬಂಧಿಸಿಡುವ ಯುಎಪಿಎ ಕಾಯ್ದೆ ಬಳಕೆ, ಬಹಳ ಸ್ಪಷ್ಟವಾಗಿ ರೈತ ಚಳವಳಿ ಬೆಂಬಲಿಸಿದ ಕಾರಣಕ್ಕಾಗಿ ಮೋದಿ ಸರ್ಕಾರದ ಸೇಡಿನ ಕ್ರಮವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದೆ.

ಜಾಗತಿಕವಾಗಿ ಪತ್ರಿಕಾ ಸ್ವಾತಂತ್ರ‍್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಕಳವಳಕಾರಿಯಾದ ಪ್ರಮಾಣದಲ್ಲಿ ಕುಸಿದಿದೆ. ಪ್ರಜಾಪ್ರಭುತ್ವದ ಅತಿದೊಡ್ಡ ದೇಶ ಎಂಬ ಹೆಗ್ಗಳಿಕೆಯ ಭಾರತವು, ಚುನಾಯಿತ ಸರ್ವಾಧಿಕಾರ ಆಳ್ವಿಕೆ ಎಂಬ ಅಪಕೀರ್ತಿಗೆ ತುತ್ತಾಗಿದೆ. ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಪತ್ರಕರ್ತರು, ಬುದ್ದೀಜೀವಿಗಳು ಪೂರ್ಣ ಪ್ರಮಾಣದಲ್ಲಿ ಜೈಲಿನಿಂದ ಬಿಡುಗಡೆ ಆಗದೇ ಇರುವಾಗಲೇ, ನ್ಯೂಸ್ ಕ್ಲಿಕ್ ಮೇಲಿನ ಈ ಧಾಳಿ ಮತ್ತೊಂದು ದೊಡ್ಡ ಕಳಂಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ  ಸಂಯುಕ್ತ ಹೋರಾಟ ಕರ್ನಾಟಕ, ಕಾರ್ಪೊರೇಟ್ ಹಿಂದೂತ್ವದ ಆಕ್ರಮ ಕೂಟದ ವಿರುದ್ಧ, ಭಾರತದ ಸಂವಿಧಾನ ರಕ್ಷಣೆಗಾಗಿ, ರೈತ- ಕಾರ್ಮಿಕ ಚಳವಳಿಯ ಧ್ವನಿಯಾಗಿ ದುಡಿದ ಕಾಳಜಿಗಾಗಿ ಪೊಲೀಸ್ ದಾಳಿಗೆ ಒಳಗಾಗಿರುವ ನ್ಯೂಸ್ ಕ್ಲಿಕ್ ಹಾಗೂ ಇತರ ಎಲ್ಲಾ ಪತ್ರಕರ್ತರು, ಸಿಬ್ಬಂದಿಗಳಿಗೆ  ಸೌಹಾರ್ದ ಬೆಂಬಲವನ್ನು  ಸೂಚಿಸಿದೆ.

ಈ ಫ್ಯಾಸಿಸ್ಟ್ ದಾಳಿಯ ವಿರುದ್ಧ  ಕರ್ನಾಟಕದ ಸಮಸ್ತ ಜನತೆ, ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ವ್ಯಕ್ತಿಗಳು ಹಾಗೂ ಸಂಘಟನೆಗಳಿಗೆ  ಧ್ವನಿ ಎತ್ತಲು ಕರೆ ನೀಡಿದೆ.

ವಿಡಿಯೋ ನೋಡಿ: ಹೋರಾಟದ ಹಕ್ಕಿಗಾಗಿ ಆಂದೋಲನ – ಪ್ರತಿಭಟನೆಕಾರರ ಬಂಧನ Janashakthi Media

Donate Janashakthi Media

Leave a Reply

Your email address will not be published. Required fields are marked *