ಉಜ್ಜಯಿನಿ: ರಕ್ತಸಿಕ್ತ 12 ವರ್ಷದ ಬಾಲಕಿಯೊಬ್ಬರು ಅರೆಬೆತ್ತಲೆಯಾಗಿ ಬೀದಿಯಲ್ಲಿ ನಡೆಯುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ತೀವ್ರ ಕಳವಳ ಹುಟ್ಟು ಹಾಕಿದೆ. ಮಧ್ಯಪ್ರದೇಶದಲ್ಲಿ ದುಷ್ಕರ್ಮಿಗಳು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ನಗರದ ದಂಡಿ ಆಶ್ರಮದ ಬಳಿ ಅವರನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಸಿಸಿಟಿವಿ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಬಾಲಕಿಯು ಮನೆಗಳ ಮುಂದೆ ನಡೆಯುತ್ತಿರುವುದು ಅದರಲ್ಲಿ ಕಂಡುಬಂದಿದೆ. ಅರೆ ಬೆತ್ತಲೆಯಾಗಿರುವ ಬಾಲಕಿಯ ಮೇಲೆ ಚಿಂದಿ ಬಟ್ಟೆ ಮಾತ್ರ ಇರುವುದು ವಿಡಿಯೊದಲ್ಲಿ ದಾಖಲಾಗಿದೆ. ಬಾಲಕಿಯು ಸಹಾಯಕ್ಕಾಗಿ ಮನೆಯ ಹೊರಗೆ ನಿಂತಿರುವ ವ್ಯಕ್ತಿಯೊಬ್ಬನನ್ನು ಕೇಳುತ್ತಾರಾದರೂ, ಆತ ಬಾಲಕಿಯನ್ನು ಓಡಿಸುತ್ತಾನೆ. ನಂತರ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗಾಗಿ ಇಂದೋರ್‌ಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ನಕಲಿ ಅಕೌಂಟ್ ಆಧಾರದಲ್ಲಿ ಕೆ ಎಲ್ ರಾಹುಲ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಪಬ್ಲಿಕ್ ಟಿವಿ!
“ಈ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿದೆ. ಅಪರಾಧಿಗಳನ್ನು ಶೀಘ್ರವಾಗಿ ಗುರುತಿಸಿ, ಅವರನ್ನು ಬಂಧಿಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದ ದೃಢಪಟ್ಟಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.
“ಬಾಲಕಿಯು ಎಲ್ಲಿಂದ ಬಂದಿದ್ದಾರೆಂದು ನಮಗೆ ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ. ಆದರೆ ಅವರ ಉಚ್ಚಾರಣೆಯು ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು ಎಂದು ಸೂಚಿಸುತ್ತದೆ” ಎಂದು ಸಚಿನ್ ಹೇಳಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಕಿಯ ಅತ್ಯಾಚಾರದ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಸಮಿತಿಯು ಪೊಲೀಸರು ಸಲ್ಲಿಸಿದ ಆರಂಭಿಕ ವರದಿಯ ವಿವರಗಳನ್ನು ಕೇಳಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳನ್ನು ಅನುಸರಿಸುಂವತೆ ಸೂಚಿಸಿದೆ.
ವಿಡಿಯೊ ನೋಡಿ: ಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್. ವಿಮಲಾ ಜೊತೆ ಮಾತುಕತೆ #womensreservationbill