ಕಾವೇರಿ ನೀರು ಹಂಚಿಕೆ:ಇಂದು ಮಂಡ್ಯ ಮದ್ದೂರು ಬಂದ್‌

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂ ಕೋರ್ಟ್‌ನ ಆದೇಶ ವಿರೋಧಿಸಿ ಇಂದು ರೈತ, ಕನ್ನಡ ಪರ, ಪ್ರಗತಿ ಪರ ಸಂಘಟನೆಗಳಿಂದ ಮಂಡ್ಯ ನಗರ ಹಾಗೂ ಮದ್ದೂರು ಪಟ್ಟಣ ಬಂದ್‍ಗೆ ಕರೆ ನೀಡಿವೆ. ಕಾವೇರಿ ನೀರು

ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆವರೆಗೆ ಎರಡೂ ನಗರಗಳು ಸಂಪೂರ್ಣ ಸ್ಥಬ್ದವಾಗಲಿದೆ. ವರ್ತಕರ ಸಂಘ, ಹೋಟೆಲ್, ಪೆಟ್ರೋಲ್ ಬಂಕ್ ಮಾಲೀಕರು, ಆಟೋ ಚಾಲಕರು, ಖಾಸಗಿ ಬಸ್, ಲಾರಿ ಮಾಲೀಕರು ಸಂಘಗಳು ಬೆಂಬಲ ಸೂಚಿಸಿದ್ದು. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೂ ಬಂದ್ ಬೆಂಬಲಿಸಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಾವೇರಿ ನೀರು 

ಇದನ್ನೂ ಓದಿ:ಮಹಿಳಾ ಮೀಸಲು ಮಸೂದೆ ತಕ್ಷಣ ಜಾರಿಗೊಳಿಸಿ: ರಾಹುಲ್‌ ಗಾಂಧಿ

ಬೆಳಗ್ಗೆ 8ಗಂಟೆಗೆ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದ್ದು, ಮತ್ತೊಂದು ತಂಡದಿಂದ ನಗರದ ಹಲವು ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಬೆಂಬಲಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಲಿದ್ದಾರೆ.

ಮದ್ದೂರಿನಲ್ಲಿ ಬೆಳಗ್ಗೆ 9 ಗಂಟೆಗೆ ಪ್ರತಿಭಟನೆ ಆರಂಭವಾಗಲಿದೆ. 10 ಗಂಟೆಗೆ ಸಂಜಯ ವೃತ್ತದಲ್ಲಿ ಪ್ರತಿಭಟನೆ, ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದು, ರೈತ ಸಂಘ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ. ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್ ರ್ಯಾಲಿ, ಬಳಿಕ ಮದ್ದೂರಿನ ಕೊಲ್ಲಿ ಸರ್ಕಲ್‍ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ.

ರೈತರು ಮಂಡ್ಯ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಂಡ್ಯಕ್ಕೆ ಆಗಮಿಸಲಿದ್ದು, ಅ ನಂತರ ಮಧ್ಯಾಹ್ನ ಸುಮಾರು 12 ಗಂಟೆಗೆ ದೆಹಲಿಯಿಂದ ನೇರವಾಗಿ ಮಂಡ್ಯಕ್ಕೆ ಆಗಮಿಸಲಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ. ಕಾವೇರಿ ನೀರು

ಸಿಎಂ ಭೇಟಿ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘದ ನಿಯೋಗ 

ತಮಿಳುನಾಡಿಗೆ ಅವೈಜ್ಞಾನಿಕವಾಗಿ ಹರಿಸುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸುವಂತೆ ಇಂದು ಮುಖ್ಯಮಂತ್ರಿಗಳನ್ನು ಕರ್ನಾಟಕ ರಾಜ್ಯ ರೈತ ಸಂಘದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭ ಮಾನ್ಯ ಮುಖ್ಯಮಂತ್ರಿಗಳು ಇದೇ ತಿಂಗಳು 26 ನೇ ತಾರೀಕು ನಡೆಯಲಿರುವ C.W.R.C ಸಭೆಯಲ್ಲಿ ಯಾವುದೇ ಕಾರಣಕ್ಕೂ ನಾವು ನೀರನ್ನು ಬಿಡುವುದಿಲ್ಲ ಎಂಬ ನಿರ್ಣಯವನ್ನು ತಿಳಿಸುತ್ತೇವೆ ಎಂದು ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.

ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರು ಹಾಗೂ ಇನ್ನಿತರ ರಾಜ್ಯ ಮುಖಂಡರು ಉಪಸ್ಥಿತರಿದ್ದರು.

ಯಾವುದೇ ಕಾರಣಕ್ಕೂ ಒಂದೇ ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡಕೂಡದು:

ಕರ್ನಾಟಕ ರಾಜ್ಯ ಸರ್ಕಾರ ಕೆ.ಆರ್.ಎಸ್ ಜಲಾಶಯನದ ವಸ್ತು ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ತಮಿಳುನಾಡು ಕುರುವಾಯಿ ಬೆಳೆಗೆ ನೀರನ್ನು ಕೇಳುತ್ತಿದೆ, ಆದರೆ ನಾವು ಕುಡಿಯಲು ನೀರನ್ನು ಕೇಳುತ್ತಿದ್ದೇವೆ. ಕರ್ನಾಟಕದ ಮೂರನೇ ಒಂದು ಭಾಗದಷ್ಟು ಜನ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾವೇರಿ ನೀರನ್ನು ಅವಲಂಬಿಸಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರ ಒಂದು ದೃಢ ನಿರ್ಧಾರವನ್ನು ಕೈಗೊಂಡು ಯಾವುದೇ ಕಾರಣಕ್ಕೂ ಒಂದೇ ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡಕೂಡದು ಎಂದು ಸರ್ಕಾರವನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದ್ದಾರೆ.

ಒಂದು ವೇಳೆ ರಾಜಕೀಯ ಒತ್ತಡಗಳಿಗೆ ಮಣಿದು, ಕರ್ನಾಟಕ ಸರ್ಕಾರ ನೀರನ್ನು ಬಿಡಲು ಮುಂದಾದರೆ ರೈತರ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡುತ್ತೇನೆ ಎಂದರು.

ಬೆಂಗಳೂರಿನಲ್ಲೂ ಆಕ್ರೋಶ:

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರಿನಲ್ಲೂ ಇಂದು ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಫ್ರೀಡಂ ಪಾರ್ಕ್‌ನಲ್ಲಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಮಲ್ಲೇಶ್ವರದ ಮೇಲ್ಸೆತುವೆ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯವು ಬರ ಪರಿಸ್ಥಿತಿ ಎದುರಿಸುತ್ತಿದೆ. ನಮಗೇ ನೀರಿಲ್ಲ. ಇಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಯಾವ ನ್ಯಾಯ? ತಕ್ಷಣವೇ ಕೆಆರೆಎಸ್‌ ಜಲಾಶಯದಿಂದ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾವೇರಿ ಪ್ರಾಧಿಕಾರದ ಸೂಚನೆಯನ್ನು ಯಾವ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ವಿಡಿಯೋ ನೋಡಿ:ಬಳ್ಳಿ ಮಾತ್ರವಲ್ಲ ಬೇರುಗಳನ್ನು ಕೂಡಾ ನಾಶ ಪಡಿಸಬೇಕು: ಚೈತ್ರ ಕುಂದಾಪುರ ವಂಚನೆ ಹಗರಣದ ಬಗ್ಗೆ ಹೋರಾಟಗಾರರ ಆಗ್ರಹ

Donate Janashakthi Media

Leave a Reply

Your email address will not be published. Required fields are marked *