ಬೆಂಗಳೂರು: “ವಂಚನೆ ಪ್ರಕರಣ ಹೊರಬಂದ ನಂತರ ಶೋಭಾ ಕರಂದ್ಲಾಜೆ ಅವರು ಚೈತ್ರ ಕುಂದಾಪುರ ಯಾರೆಂದು ತಮೆಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಚೈತ್ರ ಅವರಿಗೆ ಕಾಳಿಕಾಛಾಯೆ ಎಂದು ಹೆಸರು ನೀಡಿ ಚುನಾವಣೆ ಸಮಯದಲ್ಲಿ ಪ್ರಚಾರ ಮಾಡಿದ್ದು ಬಿಜೆಪಿ ಮತ್ತು ಸಂಘಪರಿವಾರದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ಎಲ್ಲವೂ ಅವರಿಗೆ ಗೊತ್ತಿದ್ದೇ ನಡೆಯುತ್ತಿವೆ” ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಇಲ್ಲಿ ಹೇಳಿದರು. ಅವರು ನಗರದ ಕೆ.ಆರ್. ಸರ್ಕಲ್ ಬಳಿಯ ಅಲುಮ್ನಿ ಹಾಲ್ನಲ್ಲಿ ಬುಧವಾರ ಸಂಜೆ ನಡೆದ ಜನಪರ ಸಂಘಟನೆಗಳ ಸಭೆಯಲ್ಲಿ ಮಾತನಾಡುತ್ತಿದ್ದರು.
ಉಡುಪಿ ಜಿಲ್ಲೆಯ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಕೋಟ್ಯಾಂತರ ರೂ. ವಂಚಿಸಿರುವ ಚೈತ್ರ ಕುಂದಾಪುರ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಎಲ್ಲ ಆಯಾಮಗಳಲ್ಲೂ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಗರದ ಕೆ.ಆರ್. ಸರ್ಕಲ್ ಬಳಿಯ ಅಲುಮ್ನಿ ಹಾಲ್ನಲ್ಲಿ ಬುಧವಾರ ಸಂಜೆ ಜನಪರ ಸಂಘಟನೆಗಳು ರಾಜ್ಯ ಸರ್ಕಾರವನ್ನು ಆಗ್ರಹಿದೆ.
ಇದನ್ನೂ ಓದಿ: ʼಗ್ಯಾರಂಟಿʼಯಲ್ಲಿ ನೂರು ದಿನ ! ಐದು ವರ್ಷ ಕಳೆದರೂ ಅಚ್ಚರಿಯಿಲ್ಲ!!
ಸಭೆಯಲ್ಲಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, “ಬಲಪಂಥೀಯ ದ್ವೇಷ ರಾಜಕಾರಣದ ಮಾದರಿಯೇನು ಎಂಬುವುದನ್ನು ಈ ಪ್ರಕರಣ ದೇಶದ ಜನತೆಯ ಕಣ್ಣು ತೆರೆಸುತ್ತಿದೆ. ಸಂಘ ಪರಿವಾರದ ದ್ವೇಷ ಭಾಷಣದ ಕಾರ್ಖಾನೆಯಲ್ಲಿ ಉದ್ಬವವಾಗುವ ಬಹುತೇಕರು ಈ ರೀತಿ ವಂಚನೆಯಲ್ಲಿ ತೊಡಗಿದ್ದಾರೆ. ನ್ಯಾಯಯುತವಾಗಿ ಈ ಪ್ರಕರಣದ ತನಿಖೆ ಆಗಬೇಕು. ಸರಕಾರದ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಬೇಕಿದೆ. ಇದು ಸಾಮಾನ್ಯವಾದಂತಹ ಆರ್ಥಿಕ ವಂಚನೆಯಲ್ಲ ಇದೊಂದು ರಾಜಕೀಯ ಮತ್ತು ಸಾಮಾಜಿಕ ಹಗರಣವಾಗಿದೆ. ಸರ್ಕಾರ ಇದಕ್ಕೆ ಸರಿಯಾದ ಕಡಿವಾಣ ಹಾಕಬೇಕಿದೆ” ಎಂದರು.
“ಈ ರೀತಿಯ ವಂಚನೆ ಗೋವಿಂದ ಪೂಜಾರಿ ಅವರಿಗೆ ಮಾತ್ರ ನಡೆದಿಲ್ಲ, ಚುನಾವಣೆ ವೇಳೆ ಇಂತಹ ಅನೇಕ ತೆರೆಮರೆಯ ವಂಚನೆಗಳು ನಡೆದಿವೆ. ಆರೋಪಿ ಚೈತ್ರಾ ಮೇಲೆ ಈ ಹಿಂದೆಯೂ ಪ್ರಕರಣ ದಾಖಲಾಗಿದೆ. ಆದರೂ ಬಿಜೆಪಿಯವರು ಪಕ್ಷದ ಪ್ರಮುಖ ಸ್ಟಾರ್ ಪ್ರಚಾರಕಿಯಾಗಿ ಅವರನ್ನು ಬಳಸಿಕೊಂಡಿದ್ದರು. ಇದು ಕೇವಲ ಆರ್ಥಿಕ ವಂಚನೆ ಮಾತ್ರವಲ್ಲ, ಸಾಮಾಜಿಕ ಮತ್ತು ರಾಜಕೀಯ ಹಗರಣವಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ಪ್ರಕರಣ ಮೂರು ತಿಂಗಳ ಮುಂಚೆಯೇ ಗೊತ್ತಿದ್ದರೂ, ಬಹಿರಂಗ ಪಡಿಸಿಲ್ಲ. ಬಾಬು ಪೂಜಾರಿಗೆ, ಸಿ.ಟಿ ರವಿಗೆ ಅವರು ಯಾಕೆ ಕರೆ ಮಾಡಿದ್ದರು. ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರಾ?” ಎಂದು ಪ್ರಶ್ನಿಸಿದರು.
“ದ್ವೇಷ ರಾಜಕಾರಣದ ಹಗರಣ ಮತ್ತು ಟಿಕೆಟ್ ಹಂಚಿಕೆ ಕುರಿತು ತನಿಖೆ ನಡೆಸಬೇಕು. ಪ್ರಕರಣ ಹೊರಬಂದ ನಂತರ ಶೋಭಾ ಕರಂದ್ಲಾಜೆ ಅವರು ಚೈತ್ರ ಕುಂದಾಪುರ ಯಾರೆಂದು ತಮೆಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಚೈತ್ರ ಅವರಿಗೆ ಕಾಳಿಕಾಛಾಯೆ ಎಂದು ಹೆಸರು ನೀಡಿ ಚುನಾವಣೆ ಸಮಯದಲ್ಲಿ ಪ್ರಚಾರ ಮಾಡಿದ್ದು ಬಿಜೆಪಿ ಮತ್ತು ಸಂಘಪರಿವಾರದ ರಾಜ್ಯ ಮಟ್ಟದ ನಾಯಕರಾಗಿದ್ದಾರೆ, ಎಲ್ಲವೂ ಅವರಿಗೆ ಗೊತ್ತಿದ್ದೇ ನಡೆಯುತ್ತಿವೆ” ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.
ಇದನ್ನೂ ಓದಿ: ‘ಇಂಡಿಯ’ ಬಣದ ವಿಸ್ತರಣೆಗೆ, ಜನಚಳುವಳಿಗಳನ್ನು ಸೆಳೆಯಲು ವಿಶೇಷ ಗಮನ ನೀಡಬೇಕು-ಸಿಪಿಐ(ಎಂ) ಪೊಲಿಟ್ ಬ್ಯೂರೋ
ಹಿರಿಯ ವಕೀಲ ಕೆ.ಬಾಲನ್ ಮಾತನಾಡಿ, ”ಬಿಜೆಪಿಯೆಂದರೆ ಬಿಸಿನೆಸ್ ಜನತಾ ಪಾರ್ಟಿ. ಚೈತ್ರ ಕುಂದಾಪುರ ವಂಚನೆ ಪ್ರಕರಣವನ್ನು ಗಮನಿಸಿದಾಗ ಇದೊಂದು ಕ್ರಿಮಿನಲ್ ಗ್ಯಾಂಗ್ ಎಂಬುದು ಸಾಬೀತಾಗುತ್ತಿದೆ. ಈ ಗ್ಯಾಂಗ್ ವಿರುದ್ಧ ಕೋಕಾ ಅಥವಾ ಯುಎಪಿಎ ಕಾಯಿದೆ ಜಾರಿ ಮಾಡಬೇಕು. ಇಲ್ಲವಾದರೆ, ಈ ಲಿಂಕ್ ಬೇಧಿಸುವುದು ಸುಲಭವಲ್ಲ. ತನಿಖೆಯಲ್ಲಿ ಆತಂಕಕಾರಿ ವಿಚಾರಗಳು ಹೊರಬರುತ್ತಿವೆ. ಈ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ತನಿಖೆ ಮಾಡಬೇಕಾಗಿದೆ. ಕೇವಲ ಚೈತ್ರಾ ಮಾತ್ರವಲ್ಲ ಇಡೀ ತಂಡವನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸಬೇಕಾಗಿದೆ. ಪ್ರಕರಣದಲ್ಲಿ ಬಿಜೆಪಿ ಪ್ರಮುಖ ನಾಯಕರ ಹೆಸರು ಕೇಳಿಬರುತ್ತಿದೆ. ಅಧಿಕಾರಿಗಳು ಎಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು” ಎಂದರು.
ದಲಿತ ಹಕ್ಕುಗಳ ಹೋರಾಟಗಾರ ಹ.ರಾ. ಮಹೇಶ್ ಮಾತನಾಡಿ, “ಚೈತ್ರ ಕುಂದಾಪುರ ಹಗರಣದ ಹಿಂದೆ ಇರುವಂತಹ ಎಲ್ಲರ ಮೇಲೆಯು ಕಾನೂನಿನ ಕ್ರಮ ಕೈಗೊಳ್ಳುವಂತೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದು ದ್ವೇಷದಿಂದ ಆಡುವ ಮಾತಲ್ಲ. ಯಾವುದೇ ಮುಲಾಜಿಗೆ ಒಳಗಾಗದೆ ಅಪರಾಧಿಗಳನ್ನು ಶಿಕ್ಷೆಗೆ ಒಳಪಡಿಸಬೇಕು. ದ್ವೇಷದ ಕುಲುಮೆಯನ್ನು ನಾಶಪಡಿಸಲು ಸರ್ಕಾರಕ್ಕೆ ಸಾಧ್ಯವಿದೆ. ಆದರೆ ಸರ್ಕಾರವೇ ಅಸಹಾಯಕತೆ ವ್ಯಕ್ತಪಡಿಸಿದರೆ ಜನಸಾಮಾನ್ಯರು ಏನು ಮಾಡಬೇಕು. ಆರೋಪಿಗಳು ಸಾಕ್ಷಿ ನಾಶಪಡಿಸದಂತೆ ಸರ್ಕಾರ ಕಾರ್ಯನಿರ್ವಹಿಸಬೇಕಾಗಿದೆ” ಎಂದರು.
“ಪ್ರಭುತ್ವಗಳು ಬದಲಾದರೂ ಅಧಿಕಾರಿ ವರ್ಗ ಬದಲಾಗುವುದಿಲ್ಲ. ಆರೋಪಿ ಚೈತ್ರ ಮುಖದಲ್ಲಿ ಯಾವ ಆತಂಕವೂ ಕಾಣುತ್ತಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಅನುಮಾನಗಳು ನಮಗೆ ಕಾಡುತ್ತಿವೆ. ‘ಯಥಾ ರಾಜ ತಥಾ ಪ್ರಜೆ’ ಎಂಬ ಮಾತು ಸರಿಯಲ್ಲ, ಅದು ‘ಯಥಾ ರಾಜ ತಥಾ ಆಡಳಿತ ವರ್ಗ’ ಎಂದಾಗಬೇಕಿದೆ. ಪ್ರಭುತ್ವವನ್ನು ಮಾತ್ರ ಬದಲಾಯಿಸಿದರೆ ಸಾಕಾಗುವುದಿಲ್ಲ. ಪ್ರಭುತ್ವದ ಜೊತೆಗೆ ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಬದಲಾಯಿಸಬೇಕಾಗುತ್ತದೆ” ಎಂದು ಮಹೇಶ್ ಹೇಳಿದರು.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?
ದಲಿತ ಹಕ್ಕುಗಳ ಹಿರಿಯ ಹೋರಾಟಗಾರ ಮಾವಳ್ಳಿ ಶಂಕರ್ ಮಾತನಾಡಿ, “ಸಂಘಪರಿವಾರ ದೇಶಭಕ್ತಿಯ ಹೆಸರಿನಲ್ಲಿ ಭೂಮಿ ಕಬಳಿಕೆ, ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಕೋಟಿ ಹಣ ಲಪಟಾಯಿಸುತ್ತಿದೆ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಆರ್ಎಸ್ಎಸ್ ಲೂಟಿ ಮಾಡಿದ ಭೂಮಿಯನ್ನು ತನಿಖೆಗೆ ಒಳಪಡಿಸಬೇಕು. ಚೈತ್ರ ಕುಂದಾಪುರ ವಂಚನೆ ಪ್ರಕರಣ ಹಳ್ಳ ಹಿಡಿಯದ ರೀತಿಯಲ್ಲಿ ತನಿಖೆ ನಡೆಸಬೇಕು. ರಾಜ್ಯ ಸರ್ಕಾರದ ಗೃಹ ಸಚಿವರು ಸೌಜನ್ಯ ಪ್ರಕರಣ ಒಳಗೊಂಡು ಬೇಕಾಬಿಟ್ಟಿ ಹೇಳಿಕೆ ಕೊಡುತ್ತಾರೆ. ಇದು ಅಪಾಯಕಾರಿ ನಡೆಯಾಗಿದೆ. ಚೈತ್ರಾ ಪ್ರಕರಣದ ತನಿಖೆಯ ಜಾಡು ತಪ್ಪದ ರೀತಿಯಲ್ಲಿ ನೋಡಿಕೊಳ್ಳಬೇಕಿದೆ. ಪ್ರಕರಣದಲ್ಲಿ ಸುಲಭವಾಗಿ ಜಾಮೀನಿಗೆ ಅವಕಾಶ ಸಿಗಬಾರದು. ಹಾಗಾದಲ್ಲಿ ಇಂತಹ ಶಕ್ತಿಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಪುನೀತ್ ಕೆರೆ ಹಳ್ಳಿ ಪ್ರಕರಣದ ನಿರ್ವಹಣೆ ಗಮನಿಸಿದಾಗ ಸರ್ಕಾರದ ಒಳಗಡೆ ಹಿಂದುತ್ವವಿದೆ ಎಂಬುದು ಸಾಬೀತಾಗುತ್ತಿದೆ” ಎಂದು ಹೇಳಿದರು.
ಹಿರಿಯ ಹೋರಾಟಗಾರ ಸಿರಿಮನೆ ನಾಗರಾಜ್ ಮಾತನಾಡಿ,”ಕಾಂಗ್ರೆಸ್ ಸರ್ಕಾರ ಸಂಘಪರಿವಾರದ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಸಂಘಪರಿವಾದ ನಾಯಕರ ಮೇಲೆ ಎಫ್ಐಆರ್ ದಾಖಲಾಗುತ್ತಿವೆ ಹೊರತು, ಬಂಧನವಾಗುತ್ತಿಲ್ಲ. ಚೈತ್ರ ಪ್ರಕರಣದ ಜಾಲಗಳನ್ನು ನೋಡಿದರೆ ಇದು ಇನ್ನೂ ದೊಡ್ಡದಿದೆ ಎಂಬ ಅನುಮಾನವಿದೆ. ಹಗರಣದ ತನಿಖೆಗೆ ಎಟಿಎಸ್ ನೇಮಕ ಮಾಡಬೇಕಿದೆ. ಚೈತ್ರ ಕುಂದಾಪುರ ಎಂಬ ಪ್ರಿಂಜ್ ಎಲಿಮೆಂಟ್ ಅನ್ನು ಮುಂದಕ್ಕೆ ಇಟ್ಟು ಉಳಿದವರನ್ನು ಬಚಾವ್ ಮಾಡಲು ನೋಡಲಾಗುತ್ತಿದೆ” ಎಂದು ಆಕ್ರೊಶ ವ್ಯಕ್ತಪಡಿಸಿದರು.
ಚಿಂತಕ ಶಿವಸುಂದರ್, ಕನ್ನಡ ಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್, ಕಾಂಗ್ರೆಸ್ ನಾಯಕ ಸೂರ್ಯ ಮುಕುಂದರಾಜ್, ಸಮುದಾಯ ಕರ್ನಾಟಕದ ಸುರೇಂದ್ರ ರಾವ್, ಹಿರಿಯ ಹೋರಾಟಗಾರ ಡಾ. ರಮೇಶ್ ಸೇರಿದಂತೆ ಚಿಂತಕರು ಹಾಗೂ ಹೋರಾಟಗಾರರು ಮಾತನಾಡಿದರು. ಪ್ರಾಸ್ತವಾವಿಕವಾಗಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ವಿಮಲ ಕೆ.ಎಸ್. ಅವರು ಕಾರ್ಯಕ್ರಮವನ್ನು ನಿರೂಪಿಸದರು.
ವಿಡಿಯೊ ನೋಡಿ: ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್ ವೇಣುಗೋಪಾಲ್ ಜೊತೆ ಮಾತುಕತೆ