ಲಕ್ನೋ: ಮುಖ್ಯಮಂತ್ರಿ ಆದಿತ್ಯನಾಥ್ ಅವರ ಬಿಜೆಪಿ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ “ಸುಳ್ಳು ಮತ್ತು ವಿಫಲ ಭರವಸೆ”ಗಳ ವಿರುದ್ಧ ಸೋಮವಾರ ಇಲ್ಲಿನ ಇಕೋ ಗಾರ್ಡನ್ನಲ್ಲಿ ಸಾವಿರಾರು ರೈತರು ಬೃಹತ್ ಪ್ರತಿಭಟನೆ ಮಾಡಿದ್ದಾರೆ. ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸಂಘಟನೆತ ರೈತರು ”ಕಿಸಾನ್ ಮಜ್ದೂರ್ ಮಹಾಪಂಚಾಯತ್” ಹೆಸರನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮಹಾಪಂಚಾಯತ್ ಅನ್ನು ರಾಜಸ್ಥಾನ, ಉತ್ತರಾಖಂಡ ಮತ್ತು ಹರಿಯಾಣದ ರೈತರ ಕೂಡಾ ಬೆಂಬಲಿಸಿದ್ದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್,”ಹರಿಯಾಣದಲ್ಲಿ ಬಿಜೆಪಿಯು ಖಾಪ್ ಪಂಚಾಯತ್ಗಳು, ರೈತರ ಸಂಘಟನೆಗಳು ಮತ್ತು ಕುಸ್ತಿಪಟುಗಳು ಸಂಘಟಿತರಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದೆ. ವಾಸ್ತವವಾಗಿ ಬಿಜೆಪಿ ಎಲ್ಲಿಯೂ ಧರ್ಮದ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಬದಲಾಗಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ” ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆಯಲ್ಲಿ ಏನೇನಿದೆ? | ಇಲ್ಲಿ ಕ್ಲಿಕ್ ಮಾಡಿ
“ಉತ್ತರ ಪ್ರದೇಶ ಸರ್ಕಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಉಚಿತ ವಿದ್ಯುತ್ ನೀಡುತ್ತಿಲ್ಲ. ಜಾರಿ ನಿರ್ದೇಶನಾಲಯ(ಇಡಿ)ವನ್ನು ತೋರಿಸಿ ರಾಜಕೀಯ ನಾಯಕರನ್ನು ಹೇಗೆ ಲೂಟಿ ಮಾಡಲಾಗುತ್ತಿದೆಯೋ, ಅದೇ ರೀತಿ ವಿದ್ಯುತ್ ಹೆಸರಿನಲ್ಲಿ ರೈತರನ್ನೂ ಲೂಟಿ ಮಾಡಲಾಗುತ್ತಿದೆ” ಎಂದು ರಾಕೇಶ್ ಟಿಕಾಯತ್ ಕಿಡಿಕಾರಿದ್ದಾರೆ.
ಭತ್ತದ ಸಂಗ್ರಹಣೆ ದರವನ್ನು ಪ್ರತಿ ಕ್ವಿಂಟಾಲ್ಗೆ 143 ರೂ.ಗಳಷ್ಟು ಹೆಚ್ಚಿಸುವ ಉತ್ತರ ಪ್ರದೇಶ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಅವರು ಅಸಮರ್ಪಕ ಎಂದು ಬಣ್ಣಿಸಿದ್ದಾರೆ. “ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತಾಸಕ್ತಿಗಳನ್ನು ಕಾಪಾಡಲು ಪ್ರಾಮಾಣಿಕವಾಗಿ ಬದ್ಧವಾಗಿದ್ದರೆ, ಅವರು ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ಮಸೂದೆಯನ್ನು ಅನುಮೋದಿಸುತ್ತಿದ್ದರು” ಎಂದು ಟಿಕಾಯತ್ ಹೇಳಿದ್ದಾರೆ.
“ಬೆಲೆ ಏರಿಕೆಯ ನೇರ ಲಾಭವನ್ನು ಖಾಸಗಿ ವ್ಯಾಪಾರಿಗಳು ಪಡೆದುಕೊಳ್ಳುತ್ತಿದ್ದಾರೆ. ಅವರು ಖರೀದಿ ಏಜೆನ್ಸಿಗಳೊಂದಿಗೆ ಶಾಮೀಲಾಗಿ, ರೈತರು ತಮ್ಮ ಬೆಳೆಗಳನ್ನು MSP ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಮಾಡುತ್ತಿದ್ದಾರೆ. ಅದೇ ಉತ್ಪನ್ನಗಳನ್ನು ಸರ್ಕಾರಿ ಖರೀದಿ ಕೇಂದ್ರಗಳಲ್ಲಿ ಬೇರೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದರ ಲಾಭವನ್ನು ವ್ಯಾಪಾರಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಅಧಿಕಾರಿಗಳ ನಡುವೆ ಹಂಚಿಕೆಯಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಚೈತ್ರ ಕುಂದಾಪುರ ಹಗರಣದ ಹಿಂದಿರುವ ‘ಪ್ರಭಾವಿ’ಗಳ ತನಿಖೆಗೆ ಬುಧವಾರ ‘ಆಗ್ರಹ ಸಭೆ’
ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಮೂರು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಡೆದ ಹೋರಾಟಕ್ಕಿಂತ “ದೊಡ್ಡ ಯುದ್ಧ” ಕ್ಕೆ ಸಿದ್ಧರಾಗಿರುವಂತೆ ಟಿಕಾಯತ್ ಅವರು ರೈತರಿಗೆ ಕರೆ ನೀಡಿದ್ದಾರೆ. “ಸರ್ಕಾರವು ತನ್ನ ಭರವಸೆಯಿಂದ ಹಿಂದೆ ಸರಿಯುತ್ತಿದೆ. ದೊಡ್ಡ ಕಂಪನಿಗಳಿಗೆ ಲಾಭ ಮಾಡುವ ಮೂಲಕ ಬೆಳೆಗಳನ್ನು ಮತ್ತು ರೈತರನ್ನು ನಾಶಮಾಡಲು ಮುಂದಾಗಿದೆ. ಇದರ ವಿರುದ್ಧ ಹೋರಾಟ ಮಾಡಲು ರಾಜ್ಯಾದ್ಯಂತ ಬೃಹತ್ ಚಳುವಳಿಗೆ ಸಿದ್ಧರಾಗಬೇಕಿದೆ” ಎಂದು ಅವರು ಹೇಳಿದ್ದಾರೆ.
ಮಧ್ಯ ಉತ್ತರ ಪ್ರದೇಶದ ಆಲೂಗಡ್ಡೆ ಬೆಳೆಯುವ ರೈತರು ಬೆಲೆಗಳ ಸಮಸ್ಯೆ ಮತ್ತು ಆಗ್ರಾ ಹಾಗೂ ಫಿರೋಜಾಬಾದ್ನಲ್ಲಿ ಖರೀದಿ ಕೇಂದ್ರಗಳನ್ನು ಸ್ಥಾಪಿಸದಿರುವ ವಿಚಾರಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಮುಂದಿಟ್ಟು ಇತ್ತೀಚೆಗೆ ಪ್ರತಿಭಟನೆ ಮಾಡಿದ್ದರು. ಆಗ್ರಾ ಹಾಗೂ ಫಿರೋಜಾಬಾದ್ ಉತ್ತರ ಪ್ರದೇಶದ ಎರಡು ದೊಡ್ಡ ಆಲೂಗಡ್ಡೆ ಉತ್ಪಾದಿಸುವ ಪ್ರದೇಶಗಳಾಗಿವೆ.
ವಿಡಿಯೊ ನೋಡಿ: “ಹೈದರಾಬಾದ್ ವಿಮೋಚನಾ ದಿನ” ಮರೆಮಾಚಿದ ಸತ್ಯಗಳೇನು? ಜಿ.ಎನ್. ನಾಗರಾಜ್ ವಿಶ್ಲೇಷಣೆಯಲ್ಲಿ | Janashakthi Media