ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಈಡಿಗ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿರುದ್ಧ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ನೋಟಿಸ್ ಜಾರಿಗೊಳಿಸಿದೆ. ವಿರುದ್ಧ
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರಿಗೆ ನೋಟಿಸ್ ನೀಡಲಾಗಿದೆ. ಎಐಸಿಸಿ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿ ಮಾಡಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ತಾಕೀತು ಮಾಡಲಾಗಿದೆ.
ಇದನ್ನೂ ಓದಿ:ಭ್ರಷ್ಟಾಚಾರ ನಡೆಸುವುದು ಬಿಜೆಪಿಗೆ ಕಾನೂನು ಬಾಹಿರವಲ್ಲ; ಬಿ.ಕೆ. ಹರಿಪ್ರಸಾದ್
ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಖಾಯಂ ಸದಸ್ಯರೂ ಆಗಿರುವ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು, ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಎಂಬ ದೂರನ್ನು ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಸ್ವೀಕರಿಸಿದ್ದಾರೆ. ಸೆ-9 ರಂದು ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾರ್ವಜನಿಕವಾಗಿ ಟೀಕಿಸಿದ ಮತ್ತು ಬಿಜೆಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ವೇದಿಕೆ ಹಂಚಿಕೊಂಡ ಆರೋಪ ಕೂಡ ಕೇಳಿಬಂದಿದೆ. ಈ ವಿಷಯವನ್ನು ಶಿಸ್ತು ಕ್ರಮ ಸಮಿತಿಗೆ ಒಪ್ಪಿಸಲಾಗಿದ್ದು, 10 ದಿನಗಳೊಳಗೆ ತಮ್ಮ ನಡೆಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಶೋಕಾಸ್ ನೋಟಿಸ್ ಕೊಡಲಾಗಿದೆ.
ಕಳೆದ ಶನಿವಾರ ಸೆ-9 ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿಎಂ ವಿರುದ್ಧ ಬಹಿರಂಗ ವಾಗ್ದಾಳಿ ಮಾಡಿದ್ದರು. ದೇವರಾಜ ಅರಸು ಕಾರಿನಲ್ಲಿ ಹೋದಾಕ್ಷಣ ದೇವರಾಜು ಅರಸು ಆಗುವುದಿಲ್ಲ. ಇನ್ನು ಸಿದ್ದರಾಮಯ್ಯ ಅವರು ಒಳಗಡೆ ಖಾಕಿ ಚಡ್ಡಿ (ಆರ್ಎಸ್ಎಸ್ ಚಡ್ಡಿ) ಹಾಕಿಕೊಂಡಿದ್ದಾರೆ. ಜೊತೆಗೆ, ಬಿಜೆಪಿ ಸೇರಲು ಹಿಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಎಲ್.ಕೆ ಅಡ್ವಾಣಿಯನ್ನ ಭೇಟಿ ಮಾಡಿದ್ದರು ಎಂದು ಆರೋಪ ಮಾಡಿದ್ದರು. ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಬಳಿ ಸಿಎಂ ಸಿದ್ದರಾಮಯ್ಯ ಅವರು ತೀವ್ರ ಅಸಮಾಧಾನ ಹೊರ ಹಾಕಿದ್ದರು. ಇದರ ಬೆನ್ನಲ್ಲಿಯೇ ಹರಿಪ್ರಸಾದ್ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೇಳಿಬಂದಿದೆ.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ: ಹರಿಪ್ರಸಾದ್ಗೆ ಎಂ.ಬಿ.ಪಾಟೀಲ್ ಎಚ್ಚರಿಕೆ
ನನ್ನ ಮೇಲೆ ಯಾರಾದರೂ ದೂರು ಕೊಡಲಿ ಎಂದಿದ್ದ ಹರಿಪ್ರಸಾದ್:
ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಸಮಾವೇಶದಲ್ಲಿ ಅಸಮಾಧಾನ ಹೊರಹಾಕಿದ್ದಕ್ಕೆ ನನ್ನ ಮೇಲೆ ಯಾರಾದರೂ ಯಾರಿಗೆ ಬೇಕಾದರೂ ದೂರು ಕೊಡಲಿ. ಅದಕ್ಕೂ ಮೊದಲು ತಾವೇನು ಅಂತ ತಿಳಿದುಕೊಳ್ಳಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದರು. ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರಿಗೆ ಸಿಎಂ ದೂರು ನೀಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಎಲ್ಲರೂ ದೂರು ನೀಡಲಿ. ಅದು ನನಗೆ ಸಂತೋಷ. ಅದುವೇ ಪ್ರಜಾಪ್ರಭುತ್ವ. ಆದರೆ, ದೂರು ನೀಡುವವರು ತಾವೇನು ಅಂತ ತಿಳಿದುಕೊಳ್ಳಲಿ ಎಂದು ಅವರು ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು.
ಪರಮೇಶ್ವರ್ ಅವರನ್ನು ಸಿಎಂ ಮಾಡಲಿಲ್ಲ:
ರಾಜ್ಯದಲ್ಲಿ ಡಾ.ಜಿ.ಪರಮೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚಿನ ಸಮಯ ಅಧ್ಯಕ್ಷರಾಗಿದ್ದರು. ಅವರನ್ನು ಮುಖ್ಯಂತ್ರಿ ಮಾಡುವುದಕ್ಕೆ ಎಲ್ಲ ರೀತಿಯ ಅರ್ಹತೆ ಇದ್ದವರು. ಅವರನ್ನು ಸಿಎಂ ಇರಲಿ, ಡಿಸಿಎಂ ಸ್ಥಾನದಿಂದ ಡಿಪ್ರಮೋಟ್ ಮಾಡಲಾಯ್ತು. ಅರ್ಹತೆ ಇರುವ ಪರಮೇಶ್ವರ್ ಅವರನ್ನೇ ಸಿಎಂ ಮಾಡಲು ಸಾಧ್ಯವಾಗಿಲ್ಲ. ಈಗಲೂ ಉಪಮುಖ್ಯಮಂತ್ರಿ ಮಾಡುವಾಗ ದಲಿತರನ್ನು ಮಾಡಬಹುದಿತ್ತು. ಸತೀಶ್ ಜಾರಕಿಹೊಳಿಯನ್ನು ಡಿಸಿಎಂ ಮಾಡಬಹುದಿತ್ತು. ಅಲ್ಪಸಂಖ್ಯಾತರನ್ನ ಡಿಸಿಎಂ ಮಾಡಬಹುದಿತ್ತು, ಆದರೆ ಮಾಡಲಿಲ್ಲ ಎಂದು ಬಿ.ಕೆ. ಹರಿಪ್ರಸದ್ ಹರಿಹಾಯ್ದಿದ್ದರು.