ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳು ಸೋಮವಾರ ಸೆಪ್ಟೆಂಬರ್ 11 ಹಮ್ಮಿಕೊಂಡಿದ್ದ ಮುಷ್ಕರವನ್ನು ವಾಪಾಸ್ ಪಡೆದಿವೆ.
ಸ್ವಾತಂತ್ರ್ಯ ಉದ್ಯಾನದಲ್ಲಿ ಖಾಸಗಿ ಸಾರಿಗೆ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದರು. ಮಧ್ಯಾಹ್ನ ವೇಳೆಗೆ ಅಲ್ಲಿಗೆ ತೆರಳಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಸಾರಿಗೆ ನೌಕರರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರ್ಥಿಕ ಇಲಾಖೆಯಲ್ಲಿ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಹೊರತುಪಡಿಸಿ 30ರಲ್ಲಿ 27 ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಇದನ್ನೂ ಓದಿ:ಖಾಸಗಿ ಸಾರಿಗೆ ಬಂದ್: ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿಯಿಂದ 4000 ಹೆಚ್ಚುವರಿ ಟ್ರಿಪ್
ಸೋಮವಾರ ಬೆಳಿಗ್ಗೆಯಿಂದಲೇ ಆರಂಭವಾದ ಮುಷ್ಕರ ಬಹುತೇಕ ಶಾಂತಿಯುತವಾಗಿ ನಡೆಯಿತು. ಪ್ರಯಾಣಿಕರು ತೀವ್ರವಾಗಿ ಪರದಾಡಿದರು. ಬೇಡಿಕೆಗಳನ್ನು ಪರಿಗಣಿಸಿ ಈಡೇರಿಸುವುದಾಗಿ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ ನಂತರ ಖಾಸಗಿ ಸಾರಿಗೆ ಮುಷ್ಕರ ಅಂತ್ಯಗೊಳಿಸಲು ಖಾಸಗಿ ಸಾರಿಗೆ ಸಂಘಟನೆಗಳು ತೀರ್ಮಾನಿಸಿವೆ.