ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ 17 ವರ್ಷದ ಸೌಜನ್ಯ ಅವರ 2012ರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಹೊಸದಾಗಿ ಅಥವಾ ಮರು ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಅರ್ಜಿದಾರರ ಮೇಲೆ ವೆಚ್ಚ ವಿಧಿಸುವುದಿಲ್ಲ ಎಂದ ಪೀಠ, ಅರ್ಜಿಯನ್ನು ವಜಾಗೊಳಿಸಲು ಕಾರಣವನ್ನು ನಂತರ ಬಿಡುಗಡೆ ಮಾಡುವ ಲಿಖಿತ ಆದೇಶದಲ್ಲಿ ದಾಖಲಿಸುವುದಾಗಿ ಹೇಳಿದೆ.
ಬೆಂಗಳೂರಿನ ಗಿರೀಶ್ ಭಾರದ್ವಾಜ್, ಬೆಳ್ತಂಗಡಿಯ ನವೀನ್ ಕುಮಾರ್ ಜಿ, ಪುತ್ತೂರಿನ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಜಾಗೊಳಿಸಿದೆ.
ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ಗೆ ಮಾನ ಮರ್ಯಾದೆ ಇದೆಯೆ?: ಸೌಜನ್ಯ ಪರ ಹೋರಾಟದಲ್ಲಿ ಮಾಜಿ ಶಾಸಕ ವಸಂತ ಬಂಗೇರ
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ಪೀಠವು, ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡು ತೀರ್ಪು ಪ್ರಕಟಿಸಿದ ನಂತರ ಮರು ತನಿಖೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಆರೋಪಿಗಳನ್ನು ಖುಲಾಸೆಗೊಳಿಸಿದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕು ಸೇರಿದಂತೆ ವಿವಿಧ ಹಕ್ಕಗಳನ್ನು ಸಂತ್ರಸ್ತೆಯ ಪೋಷಕರಿಗೆ ಹಾಗೂ ತನಿಖಾ ಸಂಸ್ಥೆಗೆ ಕಾನೂನಿನಲ್ಲಿ ಅವಕಾಶವಿದೆ ಎಂದು ಪೀಠವು ಅರ್ಜಿದಾರರ ವಕೀಲರಿಗೆ ಮೌಖಿಕವಾಗಿ ಸೂಚಿಸಿದೆ.
ಮರುತನಿಖೆಗೆ ಆಗ್ರಹಿಸಿ ಭಾರೀ ಸಾರ್ವಜನಿಕ ಪ್ರತಿಭಟನೆಗಳು ನಡೆಯುತ್ತಿವೆ ಎಂದು ವಕೀಲರು ಸೂಚಿಸಿದಾಗ, ಪೀಠವು ನಾವು ಕಾನೂನಿಗೆ ಬದ್ಧವಾಗಿದ್ದು, ಸಾರ್ವಜನಿಕ ಗ್ರಹಿಕೆಯ ಆಧಾರದ ಮೇಲೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಮೌಖಿಕವಾಗಿ ಸ್ಪಷ್ಟಪಡಿಸಿತು. ಅಲ್ಲದೆ, ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಕೇಂದ್ರೀಯ ತನಿಖಾ ದಳದಿಂದ ಪ್ರಕರಣದ ಮರು ತನಿಖೆಗಾಗಿ 2018 ರಲ್ಲಿ ಸಂತ್ರಸ್ತ ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು 2021 ರಲ್ಲಿ ಹೈಕೋರ್ಟ್ ತಿರಸ್ಕರಿಸಿದೆ ಎಂದು ಅರ್ಜಿಯಲ್ಲಿ ಸಲ್ಲಿಸಿದ ದಾಖಲೆಗಳ ಆಧಾರದಲ್ಲಿ ಪೀಠವು ಹೇಳಿದೆ.
2014ರಲ್ಲಿ ಸೌಜನ್ಯ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಿದ್ದ ಸಿಬಿಐ, 2015ರಲ್ಲಿ ಸಂತೋಷ್ ರಾವ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಸಿಬಿಐ ಚಾರ್ಜ್ಶೀಟ್ ಸಲ್ಲಿಸಿದ್ದ ಸಂತೋಷ್ ರಾವ್ ಅವರನ್ನು ವಿಶೇಷ ನ್ಯಾಯಾಲಯವು ಜೂನ್ 2023 ರ ತೀರ್ಪಿನಲ್ಲಿ ಖುಲಾಸೆಗೊಳಿಸಿದೆ.
ವಿಡಿಯೊ ನೋಡಿ: ತಿಂಗಳ ಪಗಾರ ಕಮ್ಮಿ- ಅದೂ ಸರಿಯಾಗಿ ಬರಲ್ಲ- ಸಂಜೀವಿನಿ ನೌಕರರ ಆಕ್ರೋಶ Janashakthi Media