ನಾ ದಿವಾಕರ
ದೇಶದ ಹೆಸರೂ ಸಹ ಭಾವನಾತ್ಮಕ ರಾಜಕಾರಣದ ಒಂದು ಅಸ್ತ್ರವಾಗುತ್ತಿರುವುದು ವಿಷಾದಕರ
ವ್ಯಕ್ತಿಗಳ, ಸ್ಥಾವರಗಳ ಅಥವಾ ಸ್ಥಳಗಳ ಹೆಸರು ಬದಲಾಯಿಸುವ ಒಂದು ಪರಂಪರೆಗೆ ಸುದೀರ್ಘ ಇತಿಹಾಸವೇ ಇದೆ. ಹಾಗೆಯೇ ಈ ನಾಮಕರಣ/ಮರು ನಾಮಕರಣದ ಪ್ರವೃತ್ತಿಯ ಹಿಂದೆ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳೂ, ಊಳಿಗಮಾನ್ಯ ಪದ್ಧತಿಯ ಶತಮಾನಗಳ ಸಾಂಸ್ಕೃತಿಕ ಅಡಿಪಾಯವೂ ಇದೆ. ಸಾಮಾನ್ಯವಾಗಿ ಪಿತೃಪ್ರಧಾನತೆಯನ್ನು ಪೋಷಿಸಿಕೊಂಡು ಬರುವ ಯಾವುದೇ ಸಮಾಜದಲ್ಲಿ ಊಳಿಗಮಾನ್ಯದ ಯಜಮಾನಿಕೆಯ ಸಂಸ್ಕೃತಿಯೂ ಆಳವಾಗಿರುವುದರಿಂದ, ಸಮಾಜದ ಪ್ರಬಲ ವರ್ಗಗಳು ಅಥವಾ ಗುಂಪುಗಳು ತಮ್ಮ ವರ್ಗ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲೆಂದೇ ಸಾರ್ವಜನಿಕ ವಲಯದಲ್ಲಿ ಸ್ಥಾವರಗಳ/ಸ್ಥಳಗಳ ಅಥವಾ ಕೆಲವೊಮ್ಮೆ ಹೊಸದಾಗಿ ಉಗಮಿಸುವ ದೈವಗಳ ಹೆಸರುಗಳನ್ನೂ ತಮ್ಮ ಯಜಮಾನಿಕೆಯ ಒಂದು ಭಾಗವಾಗಿ ಸೂಚಿಸಲು ಮುಂದಾಗುತ್ತವೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮತದ ಸರ್ಕಾರಗಳು ಇದಕ್ಕೆ ಹೊರತಾದುವಲ್ಲ. ಕಾಂಗ್ರೆಸ್ ಆಳ್ವಿಕೆಯಲ್ಲಿದ್ದ ಇದೇ ಪ್ರವೃತ್ತಿಯನ್ನು ಈಗ ಬಿಜೆಪಿ ಆಳ್ವಿಕೆಯಲ್ಲೂ ಕಾಣುತ್ತಿದ್ದೇವೆ.
ಭಾರತದ ಸಂದರ್ಭದಲ್ಲಿ ಸಾಂಸ್ಕೃತಿಕ ನೆಲೆಯಲ್ಲೂ ಶತಮಾನಗಳಿಂದ ಬೇರೂರಿರುವ ಪಿತೃಪ್ರಧಾನತೆ ಹಾಗೂ ಊಳಿಗಮಾನ್ಯ ಧೋರಣೆಗಳ ಫಲವಾಗಿಯೇ ಪುರುಷ ಸಮಾಜ ತನ್ನ ಸಾಮಾಜಿಕ-ಸಾಂಸ್ಕೃತಿಕ ಪ್ರಾಬಲ್ಯವನ್ನೇ ಬಳಸಿಕೊಂಡು, ಮಹಿಳೆಯರನ್ನೂ ಈ ಹೆಸರು ಬದಲಾವಣೆಯ ಪ್ರಕ್ರಿಯೆಗೆ ಗುರಿಯಾಗಿಸಿರುತ್ತದೆ. ಈ ವ್ಯವಸ್ಥೆಯ ಒಡಲಲ್ಲೇ ಬೆಳೆದುಬಂದಿರುವ ಜಾತಿ ಪದ್ಧತಿಯಲ್ಲಿ ಪುರುಷಾಧಿಪತ್ಯದ ನೆಲೆಗಳು ಇಂದಿಗೂ ಪ್ರಬಲವಾಗಿದ್ದು, ಮದುವೆಯಾದ ಕೂಡಲೇ ಹೆಂಡತಿಯ ಹೆಸರನ್ನು ತನ್ನಿಚ್ಚೆಯಂತೆ ಬದಲಾಯಿಸುವ ಅಥವಾ ತನ್ನ ಜಾತಿ/ಧರ್ಮದ ಅಸ್ಮಿತೆಗೆ ಅನುಗುಣವಾಗಿ ನಾಮಕರಣ ಮಾಡುವ ಪರಂಪರೆ ಇವತ್ತಿಗೂ ಜಾರಿಯಲ್ಲಿದೆ. ವಿಶೇಷವಾಗಿ ಮೇಲ್ಜಾತಿಯ ಸಂಪ್ರದಾಯಸ್ಥ ಕುಟುಂಬಗಳಲ್ಲಿ ಮದುವೆಯಾದ ಹೆಣ್ಣುಮಕ್ಕಳೂ ಸಹ ತಮ್ಮ ಹೊಸ ಹೆಸರುಗಳನ್ನೇ, ಗೋತ್ರ ಸಮೇತವಾಗಿ ಅಧಿಕೃತವಾಗಿ ಬಳಸುವುದನ್ನೂ ಕಾಣಬಹುದು. ಇದು ಸಮಾಜದಲ್ಲಿ ಆಳವಾಗಿರುವ ಗಂಡಾಳ್ವಿಕೆಯ ಒಂದು ಲಕ್ಷಣವಷ್ಟೆ.
ಗಂಡಾಳ್ವಿಕೆಯ ಸಮಾಜ
ಬಾಹ್ಯ ಸಮಾಜದಲ್ಲೂ ಇದೇ ಪುರುಷಾಧಿಪತ್ಯದ ಲಕ್ಷಣಗಳನ್ನು ಆಡಳಿತ ವ್ಯವಸ್ಥೆಯಲ್ಲಿ, ಆಳ್ವಿಕೆಯ ಮಾದರಿಗಳಲ್ಲಿ ಹಾಗೂ ಸಾರ್ವಜನಿಕ ನೀತಿಗಳಲ್ಲಿ ಗುರುತಿಸಬಹುದು. ರಸ್ತೆ, ಉದ್ಯಾನ, ವೃತ್ತ, ಚೌಕ, ಸೇತುವೆ, ಮೇಲ್ಸೇತುವೆ, ಅಂಡರ್ಪಾಸ್ ಹಾಗೂ ಸಾರ್ವಜನಿಕ ಬಳಕೆಯ ಕಟ್ಟಡಗಳು, ಸಾಂಸ್ಥಿಕ ಸ್ಥಾವರಗಳೂ ಸಹ ಹೆಸರು ಬದಲಾವಣೆಗೆ ಒಳಗಾಗುತ್ತಿರುತ್ತವೆ. ಇಲ್ಲಿ ಮಹಿಳೆಯರ ಹೆಸರುಗಳು ಕಂಡುಬಂದರೂ, ನಾಮಕರಣ ಮಾಡುವ ಹಾಗೂ ಹೆಸರು ಬದಲಾಯಿಸುವ ಅಂತಿಮ ಅಧಿಕಾರ/ವಿವೇಚನೆ ಪ್ರಬಲ ವರ್ಗಗಳ ಪುರುಷಾಡಳಿತದ ಕೈಯ್ಯಲ್ಲೇ ಇರುತ್ತದೆ. ಇದೇ ಪರಂಪರೆಯನ್ನು ರಾಜಕೀಯ ವಲಯದಲ್ಲಿ ಸಾಂಸ್ಕೃತಿಕ ಚೌಕಟ್ಟಿನೊಳಗೇ ಪೋಷಿಸಿಕೊಂಡು ಬರುತ್ತಿರುವ ಬಿಜೆಪಿ ಕ್ರೀಡಾಂಗಣಗಳನ್ನೂ ಬಿಡದೆ, ಹೆಸರುಗಳನ್ನು ಬದಲಾಯಿಸುತ್ತಿದ್ದು, ರಸ್ತೆ, ಸೇತುವೆ, ಸಂಸ್ಥೆ, ಸ್ಥಾವರಗಳನ್ನು ದಾಟಿ ಈಗ ದೇಶದ ಹೆಸರನ್ನು ಬದಲಿಸುವ ಆಲೋಚನೆಯಲ್ಲಿರುವಂತೆ ತೋರುತ್ತಿದೆ.
ಬಿಜೆಪಿಯ ವಕ್ತಾರರು ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸುವ ಇರಾದೆ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಈಗ ನಡೆಯುತ್ತಿರುವ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ವಿವಿಧ ದೇಶಗಳ ಗಣ್ಯರನ್ನು ಔತಣಕೂಟಕ್ಕೆ ಆಹ್ವಾನಿಸುವ ಪತ್ರಿಕೆಯಲ್ಲಿ “ President of Bharat ” ಎಂದು ನಮೂದಿಸಿರುವುದು ಈ ಚರ್ಚೆಗಳನ್ನು ಹುಟ್ಟುಹಾಕಿದೆ.
ಇಂಗ್ಲಿಷ್ ಹೊರತು ಇತರ ಭಾರತೀಯ ಭಾಷೆಗಳಲ್ಲಿ ಭಾರತದ ರಾಷ್ಟ್ರಪತಿ ಎಂದೇ ಸಂಬೋಧಿಸಲಾಗುವುದಾದರೂ ಆಂಗ್ಲ ಭಾಷೆಯಲ್ಲಿ ಅಂತಾರಾಷ್ಟ್ರೀಯ ಪತ್ರವ್ಯವಹಾರಗಳಲ್ಲಿ ಇಂಡಿಯಾ ಎಂದೇ ಬಳಕೆಯಾಗುವುದು ವಾಡಿಕೆಯಾಗಿದೆ. ಈ ವಿವಾದದ ಕಾವು ಏರುತ್ತಲೇ ಬಿಜೆಪಿಯ ಕೆಲವು ನಾಯಕರ ಅತಿರೇಕದ ಉತ್ಸಾಹ Government of India ಎನ್ನುವುದನ್ನು Government of Bharat ಎಂದು ಬದಲಾಯಿಸುವ ಹಂತಕ್ಕೆ ತಲುಪಿದೆ. ಅತ್ಯುತ್ಸಾಹ ಮತ್ತು ಅತಿರೇಕಗಳ ನಡುವೆಯೇ ರಾಜಕೀಯ ಭಿನ್ನಾಭಿಪ್ರಾಯಗಳೂ ತಲೆದೋರಿದ್ದು, ವಿರೋಧ ಪಕ್ಷಗಳ ಒಕ್ಕೂಟ INDIA ಗೆ ಪ್ರತಿಕ್ರಿಯೆಯಾಗಿ ಭಾರತ್ ಪದವನ್ನು ಮುನ್ನೆಲೆಗೆ ತರುತ್ತಿರುವ ಆರೋಪಗಳೂ ಕೇಳಿಬರುತ್ತಿವೆ. ಜನಮಾನಸದಲ್ಲಿ ಗೌರವಪೂರ್ವಕವಾಗಿ ನೆಲೆಸಿರುವ ʼಭಾರತʼ ಇಂದು ಭಾವನಾತ್ಮಕ ರಾಜಕಾರಣದ ಅಸ್ತ್ರವಾಗಿದೆ.
ಇಷ್ಟಕ್ಕೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ಕಾರಗಳ ಅಧಿಕೃತ ಪತ್ರವ್ಯವಹಾರಗಳಲ್ಲಾಗಲಿ, ರಾಜ್ಯಗಳ ನಡುವಿನ ಅಧಿಕೃತ ವ್ಯವಹಾರಗಳಲ್ಲಾಗಲಿ ಭಾರತ ಎಂಬ ಪದ ಅಪಥ್ಯವೇನೂ ಆಗಿಲ್ಲ. ಭಾರತ್ ಎನ್ನುವ ಪದವನ್ನು ಇಂಡಿಯಾ ಎಂಬ ಆಂಗ್ಲ ಪದದ ಸಂವಾದಿಯಾಗಿ ಬಹುತೇಕ ಎಲ್ಲ ಭಾಷೆಗಳಲ್ಲೂ ಬಳಸಲಾಗುತ್ತಿದೆ. ಆದರೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಇಂಡಿಯಾ ಎಂಬ ಪದವನ್ನೇ ಬಳಸಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಆಂತರಿಕವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಎಂದೇ ಕರೆಯಲ್ಪಡುತ್ತದೆ. ಬಹುತೇಕ ಎಲ್ಲ ಸಾರ್ವಜನಿಕ ಉದ್ದಿಮೆ, ಸಂಸ್ಥೆ ಹಾಗೂ ವಾಣಿಜ್ಯ ಘಟಕಗಳಲ್ಲೂ ಇದನ್ನು ಗಮನಿಸಬಹುದು. ಬೆಂಗಳೂರಿನ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನಮ್ಮ ಕಣ್ಣೆದುರಿನ ಸಾಕ್ಷಿಯಾಗಿದೆ. ಇಲ್ಲಿ ಭಾರತ ಅಥವಾ ಇಂಡಿಯಾ ಎಂಬ ಪದಗಳು ಸಂವಾದಿಯಾಗಿ ಸಂಬೋಧನೆಗೊಳಪಟ್ಟರೂ ಅನುವಾದಿತ ಪದಗಳಾಗಿ ರೂಪುಗೊಂಡಿಲ್ಲ. ಬದಲಾಗಿ ಸಾರ್ವಜನಿಕ ವಲಯದಲ್ಲಿ ಸಾಮಾನ್ಯ ನಾಗರಿಕರ ಭಾಷಾ ಬಳಕೆಯ ನೆಲೆಯಲ್ಲಿ ಸ್ಥಾಪಿತವಾಗಿವೆ.
ಸಾಂವಿಧಾನಿಕ ಪ್ರಶ್ನೆಗಳು
ಅಧಿಕೃತ ಬಳಕೆಗೂ ಸಹ ಭಾರತದ ಸಂವಿಧಾನದಲ್ಲೇ Union of India Or Bharat ಎಂದು ಹೇಳಲಾಗಿದೆ. ಅಂದರೆ ಇಂಡಿಯಾದ ಒಕ್ಕೂಟ ಅಥವಾ ಭಾರತ ಎಂಬ ಪದವನ್ನು ಮುಕ್ತವಾಗಿ ಬಳಸುವ ವಿವೇಚನಾಧಿಕಾರವನ್ನು ಸಂವಿಧಾನವೇ ನಮಗೆ ನೀಡಿದೆ. ಆದರೆ ಅಧಿಕೃತ ದಾಖಲೆಗಳಲ್ಲಿ ಇಂಡಿಯಾ ಬಳಕೆಯಲ್ಲಿರಬೇಕಾಗುತ್ತದೆ. ಬ್ರಿಟೀಷ್ ವಸಾಹತು ಆಳ್ವಿಕೆಯಿಂದ ವಿಮೋಚನೆ ಪಡೆದ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಬ್ರಿಟೀಷ್ ಸಂಸತ್ತು ಅನುಮೋದಿಸಿದ್ದ Indian Independence Act 1947 ಅನ್ವಯ ಇಂಡಿಯಾ ಮತ್ತು ಪಾಕಿಸ್ತಾನ ಎಂದು ಎರಡು ಡೊಮಿನಿಯನ್ಗಳನ್ನು ಸೃಷ್ಟಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ವತಂತ್ರ ಭಾರತವನ್ನು ಇಂಡಿಯಾ ಎಂದು ಕರೆಯುವುದಕ್ಕೆ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಹಿಂದೂಸ್ತಾನ ಅಥವಾ ಭಾರತ್ ಎಂದು ಹೆಸರಿಡುವಂತೆ ಸೂಚಿಸಿತ್ತು. ಆದರೆ ಬ್ರಿಟೀಷ್ ಇಂಡಿಯಾಗೆ ಉತ್ತರಾಧಿಕಾರಿಯಾಗಿ ಭಾರತ ಒಂದು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಳ್ಳುವುದರಿಂದ ಅಂತಾರಾಷ್ಟ್ರೀಯ ಕಾನೂನುಗಳ ಅನ್ವಯ ತನ್ನ ಅಂತಾರಾಷ್ಟ್ರೀಯ ಅಸ್ತಿತ್ವವನ್ನು ಇಂಡಿಯಾ ಎಂದು ಗುರುತಿಸಿಕೊಳ್ಳುವುದಾಗಿ ತೀರ್ಮಾನಿಸಿತ್ತು. ವಿಶ್ವಸಂಸ್ಥೆಯಲ್ಲೂ ಸಹ ಇಂಡಿಯಾ ಎಂದೇ ಭಾರತವನ್ನು ಅಧಿಕೃತವಾಗಿ ಗುರುತಿಸಲಾಯಿತು. ಎಲ್ಲ ರೀತಿಯ ಅಂತರರಾಷ್ಟ್ರೀಯ, ಬಹುರಾಷ್ಟ್ರೀಯ ವೇದಿಕೆಗಳಲ್ಲಿ ಇಂಡಿಯಾ ಎಂದೇ ಅಂದಿನಿಂದ ಇಂದಿನವರೆಗೂ ಬಳಕೆಯಲ್ಲಿದೆ.
ಇದನ್ನೂ ಓದಿ:ಜಿ20 ಶೃಂಗಸಭೆ | ಬಡತನವನ್ನು ಪ್ಲಾಸ್ಟಿಕ್ ಹಾಕಿ ಮುಚ್ಚುತ್ತಿರುವ ಕೇಂದ್ರ ಸರ್ಕಾರ!
ಇತ್ತೀಚೆಗೆ ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಗ್ರೀಸ್ ದೇಶಕ್ಕೆ ಭೇಟಿ ನೀಡಿದ್ದಾಗಲೂ ಉಭಯ ದೇಶಗಳು ಸಹಿ ಮಾಡಿದ ಒಡಂಬಡಿಕೆಯನ್ನು “ India-Greece Joint Statement ”ಎಂದೇ ಗುರುತಿಸಲಾಗಿದೆ. ಭಾರತದ ಪ್ರಧಾನಿ ಗ್ರೀಸ್ ಪ್ರಧಾನಿಯನ್ನು ಆಹ್ವಾನಿಸುವ ಪತ್ರದಲ್ಲೂ ಸಹ ಇಂಡಿಯಾಗೆ ಭೇಟಿ ನೀಡುವಂತೆಯೇ ನಮೂದಿಸಲಾಗಿದೆ. ವಿವಿಧ ದೇಶಗಳ ರಾಯಭಾರಿಗಳಿಗೆ ಭಾರತ ಸರ್ಕಾರದಿಂದ ನೀಡಲಾಗುವ ಸಿಂಹ ಲಾಂಛನದ ಅಡಿಯಲ್ಲಿ ಹಿಂದಿ ಭಾಷೆಯಲ್ಲಿ “ ರಾಷ್ಟ್ರಪತಿ ಭಾರತ್ ಗಣತಂತ್ರ” ಎಂದಿದ್ದರೆ, ಆಂಗ್ಲ ಭಾಷೆಯಲ್ಲಿ President- Republic Of India ಎಂದೇ ಹೇಳಲಾಗಿದೆ. ಅಂದರೆ ಭಾರತ ಸರ್ಕಾರದ ಎಲ್ಲ ವ್ಯವಹಾರಗಳಲ್ಲಿ ಆಂಗ್ಲಭಾಷೆಯ India ಗೆ ಸಂವಾದಿಯಾಗಿ ಭಾರತ ಎಂದು ಬಳಸಲಾಗುತ್ತಿದೆಯೇ ಹೊರತು ಅಧಿಕೃತ ದಾಖಲೆಗಳಲ್ಲಿ ಬದಲಾವಣೆಗಳಾಗಿಲ್ಲ. 1987ರಲ್ಲಿ ಸಂವಿಧಾನ ತಿದ್ದುಪಡಿ 58ರ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹಿಂದಿ ಭಾಷೆಯಲ್ಲಿ ಸಂವಿಧಾನವನ್ನು ಅಥವಾ ಸಂವಿಧಾನದ ಅಂಶಗಳನ್ನು ಪ್ರಕಟಿಸುವ ಹಾಗೂ ನ್ಯಾಯ ಪ್ರಕ್ರಿಯೆಯಲ್ಲೂ ಬಳಸುವ ವಿವೇಚನಾಧಿಕಾರವನ್ನು ನೀಡಲಾಗಿದೆ.
ಭಾರತದ ಸಂವಿಧಾನದ ಆಂಗ್ಲ ಆವೃತ್ತಿಯ ಅನುಚ್ಛೇದ 1 (1) ರಲ್ಲಿ “ India̧ that is Bharat ̧ shall be a Union of States ” ಎಂದೇ ಹೇಳಲಾಗಿದೆ. ಸಂವಿಧಾನ ರಚನೆ ಮತ್ತು ವಿನ್ಯಾಸದಲ್ಲಿ ಪ್ರಥಮ ಆದ್ಯತೆಯನ್ನು ಇಂಡಿಯಾ ಎಂಬ ಪದಕ್ಕೇ ನೀಡಲಾಗಿದೆ. ಸಂವಿಧಾನದ ಹಿಂದಿ ಆವೃತ್ತಿಯಲ್ಲಿ “ ಭಾರತ್ ಅರ್ಥಾತ್ ಇಂಡಿಯಾ ರಾಜ್ಯೋಂ ಕಾ ಸಂಘ್ ಹೋಗಾ ” ಎಂದು ಉಲ್ಲೇಖವಾಗಿದೆ. ಇಲ್ಲಿ ಅರ್ಥಾತ್ ಎಂದರೆ ʼ ಅಂದರೆ ʼ ಎನ್ನುವ ಅರ್ಥ ಬರುತ್ತದೆ. ಹಿಂದಿ ಆವೃತ್ತಿಯಲ್ಲಿ ಭಾರತ್ ಎಂಬ ಪದಕ್ಕೆ ಪ್ರಾಶಸ್ತ್ಯ ನೀಡಲಾಗಿರುವುದು ವಾಸ್ತವ. ಈ ತರ್ಕದ ಹಿನ್ನೆಲೆಯಲ್ಲೇ ಭಾರತದಲ್ಲಿ ಆಂತರಿಕವಾಗಿ ಎಲ್ಲ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವ್ಯವಹಾರಗಳಲ್ಲೂ ಆಂಗ್ಲ ಭಾಷೆಯ India ಹಾಗೂ ಹಿಂದಿ ಅಥವಾ ಪ್ರಾದೇಶಿಕ ಭಾಷೆಯ ಭಾರತ ಪದವನ್ನು ಬಳಸಲಾಗುತ್ತಿದೆ. ಭಾರತದ ಗೆಜೆಟ್ ಸಹ “ Gezette of India ”ಎಂದಿದ್ದು ಹಿಂದಿ ಆವೃತ್ತಿಯಲ್ಲಿ “ ಭಾರತ್ ಕಾ ರಾಜಪತ್ರ ” ಎಂದಿದೆ.
ಇಂಡಿಯಾ-ಭಾರತ ಸಾಂವಿಧಾನಿಕ ಬಿಕ್ಕಟ್ಟುಗಳು
ಇಂಡಿಯಾ ಎಂಬ ಪದದ ಮೂಲ ಧಾತುವನ್ನು ಅರೇಬಿಕ್ ಅಥವಾ ಪರ್ಷಿಯನ್ ಮೂಲದಲ್ಲಿ ಕಾಣಬಹುದು. ಇಂಡಸ್ ಎಂದು ಕರೆಯಲಾಗುತ್ತಿದ್ದ ಸಿಂಧು ನದಿಯ ದಕ್ಷಿಣ ಅಥವಾ ಪೂರ್ವಕ್ಕೆ ಇದ್ದ ಭೂ ಪ್ರದೇಶವನ್ನು ಇಂಡಿಯಾ ಎಂದು ಕರೆಯಲಾಗುತ್ತಿತ್ತು. ಆಫ್ಘಾನ್ ಮತ್ತು ಮುಘಲರ ಆಳ್ವಿಕೆಯಲ್ಲಿ ಭಾರತೀಯ ಉಪಖಂಡದ ಉತ್ತರ ಭೂಪ್ರದೇಶಗಳನ್ನು ಹಿಂದುಸ್ತಾನ್ ಎಂದೇ ಕರೆಯಲಾಗುತ್ತಿತ್ತು. ಆನಂತರ ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲಿ ಇಡೀ ಭೂಪ್ರದೇಶವನ್ನು ಇಂಡಿಯಾ ಎಂದು ಗುರುತಿಸಲಾಯಿತು. ಇದೇ ಸಂದರ್ಭದಲ್ಲಿ ಭಾರತದ ಪ್ರಾಚೀನ ನಾಗರಿಕತೆಯ ಪುನರುತ್ಥಾನವನ್ನು ಬಯಸಿದ್ದ ಕೆಲವು ವಿದ್ವಾಂಸರು, ಗುಂಪುಗಳು ವಿದೇಶಿಯರು ನೀಡಿದ ಈ ಹೆಸರನ್ನು ಒಪ್ಪಲು ನಿರಾಕರಿಸಲಾರಂಭಿಸಿದ್ದರು. ಆ ಸಂದರ್ಭದಲ್ಲೇ ಭರತ ಖಂಡ ಎಂಬ ಮೂಲಧಾತುವಿನಿಂದ ಉಗಮಿಸಿದ ಭಾರತ್ ಎಂಬ ಪದವೂ ಚಾಲ್ತಿಗೆ ಬಂದಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಮುಂತಾದವರು ಹೆಚ್ಚು ಸಮನ್ವಯದ ಸಂಕೇತವಾಗಿ ಹಿಂದ್ ಪದವನ್ನು ಬಳಸುವಂತೆ ಆಗ್ರಹಿಸಿದ್ದರು. ಈಗಲೂ ಸಹ ಜೈ ಹಿಂದ್ ಎಂಬ ಪದವನ್ನು ಭಾವನಾತ್ಮಕವಾಗಿ ಬಳಸಲಾಗುತ್ತಿದೆ. Indus ಅಥವಾ ಸಿಂಧೂ ನದಿಯ ಚಾರಿತ್ರಿಕ ಅಸ್ಮಿತೆಯ ಹಿನ್ನೆಲೆಯಲ್ಲಿ ಬ್ರಿಟೀಷ್ ವಸಾಹತು ಸರ್ಕಾರ ಇಂಡಿಯಾ ಎಂಬ ಹೆಸರನ್ನು ಚಾಲ್ತಿಗೆ ತಂದಿತ್ತು. ಈಗ ಇದನ್ನು ನಿರಾಕರಿಸುವುದೆಂದರೆ ನಾವು ಸಿಂಧೂ ನದಿಯೊಡನೆ ಇರುವ ಪಾರಂಪರಿಕ ಸಂಬಂಧವನ್ನು ತೊಡೆದುಹಾಕಿದಂತೆಯೇ ಆಗುತ್ತದೆ.
ಈಗ ನರೇಂದ್ರ ಮೋದಿ ಸರ್ಕಾರ ಮತ್ತು ಸಂಘಪರಿವಾರ ಭಾರತ ಎಂಬ ಹೆಸರನ್ನೇ ಅಧಿಕೃತವಾಗಿ ಬಳಸುವ ಇರಾದೆ ತೋರುತ್ತಿದೆ. ಜಿ-20 ಶಿಖರ ಶೃಂಗಸಭೆಯ ಆಹ್ವಾನ ಪತ್ರಿಕೆಯಲ್ಲಿ President of Bharat ಎಂದು ಬಳಸಿರುವುದು ಇದನ್ನೇ ಸೂಚಿಸುತ್ತದೆ. ಇನ್ನು ಮುಂದೆ ಆಂತರಿಕವಾಗಿ ಆಂಗ್ಲಭಾಷೆಯ ಪತ್ರ ವ್ಯವಹಾರ ಹಾಗೂ ದಾಖಲೆಗಳಲ್ಲೂ ಸಹ ಇಂಡಿಯಾ ಬದಲು ಭಾರತ ಎಂದು ಬಳಸುವ ಸಾಧ್ಯತೆಗಳಿವೆ. ಆದರೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಹೀಗೆ ಮಾಡುವುದೇ ಆದರೆ ಅಧಿಕೃತವಾಗಿ ಇಂಡಿಯಾ ಎಂಬ ಹೆಸರನ್ನು ತೆಗೆದುಹಾಕಿ ಭಾರತ ಎಂದು ಸಂವಿಧಾನ ತಿದ್ದುಪಡಿಯ ಮೂಲಕ ದಾಖಲಿಸಬೇಕಾಗುತ್ತದೆ. ಇದಕ್ಕೆ ರಾಜ್ಯಗಳ ಪ್ರತಿರೋಧವೂ ವ್ಯಕ್ತವಾಗುವ ಸಾಧ್ಯತೆಗಳಿವೆ. ಲೋಕಸಭೆಯ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ ಅವರ ಅಭಿಪ್ರಾಯದಲ್ಲಿ ಸರ್ಕಾರವು ಒಂದು ವೇಳೆ ಸದನದಲ್ಲಿ ನಿರ್ಣಯ ಮಂಡಿಸುವ ಮೂಲಕ ಈ ರೀತಿಯ ಬದಲಾವಣೆಗೆ ಬಯಸಿದರೆ ಅದು ಕಾರ್ಯಸಾಧುವಾಗುದಿಲ್ಲ.
ಅಧಿಕೃತ ಹೆಸರನ್ನು ʼಇಂಡಿಯಾʼ ದಿಂದ ʼಭಾರತʼ ಎಂದು ಬದಲಾಯಿಸಬೇಕಾದರೆ ಸಂವಿಧಾನದ ಅನುಚ್ಛೇದ 1ರ ತಿದ್ದುಪಡಿ ಅವಶ್ಯವಾಗುತ್ತದೆ. ನಂತರ ಇಂಡಿಯಾ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ ಭಾರತ ಎಂದು ನಮೂದಿಸಬೇಕಾಗುತ್ತದೆ. ತತ್ಪರಿಣಾಮವಾಗಿ ಎಲ್ಲ ಅನುಚ್ಛೇದಗಳಲ್ಲೂ ಈ ಬದಲಾವಣೆ ಮಾಡಬೇಕಾಗುತ್ತದೆ. ಇದು ವಿದೇಶಗಳೊಡಗಿನ ವ್ಯವಹಾರಗಳಲ್ಲಿ ಮತ್ತು ದಾಖಲೆಗಳಲ್ಲೂ ಸಹ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತದೆ ಎಂದು ಪಿ.ಡಿ.ಟಿ. ಆಚಾರ್ಯ ಹೇಳುತ್ತಾರೆ. 2016ರಲ್ಲಿ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ಟಿ.ಎಸ್ ಠಾಕೂರ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ಪೀಠವೂ ಸಹ ನಿರಂಜನ್ ಭಟ್ವಾಲ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸುತ್ತಾ “ ಭಾರತ ಅಥವಾ ಇಂಡಿಯಾ, ನೀವು ಭಾರತ್ ಎಂದು ಕರೆಯಲು ಬಯಸಿದರೆ ಹಾಗೆಯೇ ಮಾಡಿ, ಇತರರು ಇಂಡಿಯಾ ಎನ್ನಲು ಬಯಸಿದರೆ ಹಾಗೆ ಮಾಡಲಿ ” ಎಂದು ಹೇಳಿತ್ತು. ಆದರೆ ಅಧಿಕೃತವಾಗಿ ಇಂಡಿಯಾ ಹೆಸರನ್ನು ತೆಗೆದುಹಾಕಿ ಭಾರತ್ ಎಂದು ಹೆಸರಿಸುವ ಅವಶ್ಯಕತೆ ಇಲ್ಲ ಎಂದೂ ಸ್ಪಷ್ಟವಾಗಿ ಹೇಳಿತ್ತು.
ಚುನಾವಣಾ ರಾಜಕಾರಣ
ಈ ವಾಸ್ತವಗಳ ನಡುವೆಯೂ ಇಂಡಿಯಾ ಮತ್ತು ಭಾರತ ಪದಬಳಕೆಯ ನಡುವೆ ಏರ್ಪಟ್ಟಿರುವ ವಾಗ್ವಾದಗಳ ಹಿಂದೆ ಚುನಾವಣಾ ರಾಜಕಾರಣದ ಛಾಯೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. 2024ರ ಮಹಾ ಚುನಾವಣೆಗಳಿಗೂ ಮುನ್ನ ಸಾಮಾನ್ಯ ಜನತೆಯ ಮುಂದಿಡಲು ಪಾಕಿಸ್ತಾನ, ರಾಮಮಂದಿರ, ಆರ್ಟಿಕಲ್ 370, ತ್ರಿವಳಿ ತಲಾಖ್, ಏಕರೂಪ ನಾಗರಿಕ ಸಂಹಿತೆ ಹೀಗೆ ಯಾವುದೇ ಭಾವನಾತ್ಮಕ ವಿಚಾರಗಳು ಹೆಚ್ಚು ಉಪಯುಕ್ತವಾಗುವುದಿಲ್ಲ. ಇದರಲ್ಲಿ ಕೆಲವು ವಿಷಯಗಳು ತಮ್ಮ ಅಸ್ತಿತ್ವ ಮತ್ತು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಈ ದೃಷ್ಟಿಯಿಂದ ನೋಡಿದಾಗ ಬಿಜೆಪಿ ʼಇಂಡಿಯಾʼ ಹೆಸರನ್ನು ಬದಲಿಸಿ ʼಭಾರತʼ ಎಂದು ನಾಮಕರಣ ಮಾಡುವ ಆಲೋಚನೆಯನ್ನು ಹೊಂದಿರಬಹುದು. ತನ್ಮೂಲಕ ಸಾಮಾನ್ಯ ಜನರ ನಡುವೆ ʼ ಭಾರತ ʼ ಎಂಬ ಪದದ ಬಗ್ಗೆ ಇರುವ ಭಾವನಾತ್ಮಕ ಸಂಬಂಧವನ್ನು ಬಳಸಿಕೊಳ್ಳಬಹುದು. ಆದರೆ ಈಗಾಗಲೇ ವ್ಯಾಪಕವಾಗಿ ಬಳಕೆಯಲ್ಲಿರುವ ಭಾರತ ದೇಶದ ಯಾವುದೇ ಮೂಲೆಯಲ್ಲೂ ಅಪಥ್ಯ ಎನಿಸಿಕೊಂಡಿಲ್ಲ. ಹಾಗಾಗಿ ಬಿಜೆಪಿಯ ಈ ಭಾವನಾತ್ಮಕ ರಾಜಕಾರಣ ಫಲಕಾರಿಯಾಗದೆಯೂ ಹೋಗಬಹುದು.
ಪಿತೃಪ್ರಧಾನತೆ ಮತ್ತು ಊಳಿಗಮಾನ್ಯ ಧೋರಣೆಯ ಗಂಡಾಳ್ವಿಕೆಯ ಲಕ್ಷಣಗಳೇ ಬಹುಸಂಖ್ಯಾತವಾದಿ ಸಂಸದೀಯ ಬಹುಮತದ ಆಳ್ವಿಕೆಯನ್ನೂ ಆವರಿಸುವುದರಿಂದ, ಈ ಹೆಸರು ಬದಲಾವಣೆಯ ರಾಜಕಾರಣ ಮತ್ತಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡರೂ ಅಚ್ಚರಿಪಡಬೇಕಿಲ್ಲ. ಸದ್ಯಕ್ಕೆ ಸಂವಿಧಾನವೇ ಹೇಳಿರುವಂತೆ “ ಇಂಡಿಯಾ-ಅಂದರೆ ಭಾರತ ” ಎಂಬ ಅಧಿಕೃತ ಮಾನ್ಯತೆ ಪಡೆದಿರುವ ಸಂಬೋಧನೆ ಮತ್ತು ಬಳಕೆಯೇ ಚಾಲ್ತಿಯಲ್ಲಿರುವಾಗ ಈಗ ಎದ್ದಿರುವ ವಾಗ್ಯುದ್ಧ ಅನಗತ್ಯ ಎಂದೇ ಹೇಳಬಹುದು. ಭಾರತ