ಬೆಂಗಳೂರು: ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಹತ್ಯೆಯಲ್ಲಿ ಭಾಗಿಯಾಗಿರುವವರು ಯಾರೇ ಆಗಿದ್ದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದರು. ಗೌರಿ ಆಶಯಗಳ ಜೊತೆಗಿರುವ ಎಲ್ಲರೂ ನಿಟ್ಟುಸಿರು ಬಿಡುವಂತಹ ತೀರ್ಪು ಬರುತ್ತದೆ ಎಂದು ಅವರು ಭರವಸೆ ನೀಡಿದರು. ಗೌರಿ ಮೆಮೋರಿಯಲ್ ಟ್ರಸ್ಟ್ ಆಯೋಜಿಸಿದ್ದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ಸ್ಮರಣಾರ್ಥ ನಗರದ ಟೌನ್ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಸರ್ವಾಧಿಕಾರದ ಕಾಲದಲ್ಲಿ ಭಾರತವನ್ನು ಮರುಕಟ್ಟುವ ಕಲ್ಪನೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, “ಗೌರಿ ಲಂಕೇಶ್ ಅವರು ಪತ್ರಕರ್ತೆ ಎಂಬುದಕ್ಕಿಂತ ಅವರೊಬ್ಬ ಹೋರಾಟಗಾರ್ತಿ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಲ ನನ್ನನ್ನು ಭೇಟಿ ಮಾಡಿದ್ದರು. ಅವರು ಯಾವತ್ತೂ ಕೂಡ ವೈಯಕ್ತಿಕ ವಿಚಾರಗಳಿಗಾಗಿ ಭೇಟಿ ಮಾಡಿದವರಲ್ಲ. ನಮಗೆ ಸಹಾಯಮಾಡಿ, ಕುಟುಂಬಕ್ಕೆ ಸಹಾಯ ಮಾಡಿ, ಪತ್ರಿಕೆಗೆ ಸಹಾಯ ಮಾಡಿ ಎಂದವರಲ್ಲ. ಅವರು ಯಾವಾಗ ಭೇಟಿ ಮಾಡಿದರೂ ಕೋಮು ಸೌಹಾರ್ದತೆ, ರೈತರು, ಆದಿವಾಸಿಗಳ ಬಗ್ಗೆ ಮಾತನಾಡುತ್ತಿದ್ದರು. ಎಲ್ಲ ವರ್ಗದ ದನಿಯಾಗಿ ಕೆಲಸ ಮಾಡುತ್ತಿದ್ದರು” ಎಂದು ನೆನಪಿಸಿಕೊಂಡರು.
ಇದನ್ನೂ ಓದಿ: ಬಿಜೆಪಿ ಸರ್ಕಾರಿ ವಕೀಲರ ಮದುವೆಯಲ್ಲಿ ಲಲಿತ್ ಮೋದಿ ಭಾಗಿ!
“ಎಲ್ಲೇ ಅನ್ಯಾಯವಾದರೂ ಆ ಅನ್ಯಾಯವನ್ನು ಪ್ರತಿಭಟಿಸುವ, ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಗೌರಿ ಲಂಕೇಶ್ ಮಾಡುತ್ತಿದ್ದರು. ಇಂದು ಗೌರಿ ಲಂಕೇಶ್ ಹತ್ಯೆಯಾಗಿ ನಮ್ಮನ್ನು ಅಗಲಿದ್ದಾರೆ. ಅವರು ಬದುಕಬೇಕಿತ್ತು. ಅವರು ಕುಟುಂಬಕ್ಕಾಗಿ ಅಲ್ಲ, ಸಮಾಜದಲ್ಲಿ ದನಿ ಇಲ್ಲದೆ, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟ ಮಾಡಲಿಕ್ಕೆ ಗೌರಿ ಲಂಕೇಶ್ ಅವರು ಬದುಕಿರಬೇಕಿತ್ತು. ಅವರ ನೆನಪು ಕಾರ್ಯಕ್ರಮದಲ್ಲಿ ಭಾಗಿಯಾಗುವುದೇ ನಮಗೆಲ್ಲರಿಗೂ ಗೌರವ. ಗೌರಿಯನ್ನು ಕೊಂದ ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಗೌರಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಆರೋಪಿಗಳಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎನ್ನುವ ಭರವಸೆ ನನಗಿದೆ” ಎಂದು ಮುಖ್ಯಮಂತ್ರಿ ಹೇಳಿದರು.
“ಗೌರಿ ಲಂಕೇಶ್, ಕಲ್ಬುರ್ಗಿ, ಪನ್ಸಾರೆ, ದಬೋಲ್ಕರ್ ಅವರನ್ನು ಹತ್ಯೆ ಮಾಡಿದವರು ಮಹಾತ್ಮ ಗಾಂಧಿಯವರನ್ನು ಕೊಂದ ಮನಸ್ಥಿತಿಯವರು. ಕೋಮು ಸೌದಾರ್ದತೆಗಾಗಿ ಗಾಂಧೀಜಿ ಹೋರಾಟ ಮಾಡಿದ್ದರು. ಭಾರತ ದೇಶದಲ್ಲಿ ಇರುವ ಯಾರೇ ಕೂಡ ಬೇಧ ಮಾಡಬಾರದು. ಒಟ್ಟಾಗಿ ಬದುಕಬೇಕು ಎಂಬುದನ್ನು ಗಾಂಧೀಜಿ ಪ್ರತಿಪಾದನೆ ಮಾಡಿದರು. ಅದನ್ನು ಕೋಮುವಾದಿಗಳಿಗೆ ಸಹಿಸಲು ಆಗುತ್ತಿರಲಿಲ್ಲ. ಕೋಮುವಾದಿ ಶಕ್ತಿಗಳು ಮಹಾತ್ಮ ಗಾಂಧಿಯವರನ್ನು ಕೊಂದರು. ಅದೇ ಮನಸ್ಥಿತಿಯವರೇ ಗೌರಿ ಲಂಕೇಶ್ ಅವರನ್ನು ಕೊಂದಿದ್ದಾರೆ” ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದನ್ನೂ ಓದಿ: ತಲೆ ತೆಗೆಯಲು 10 ಕೋಟಿ ರೂ. ಬದಲು ನನ್ನ ತಲೆ ಬಾಚಲು 10 ರೂ. ಬಾಚಣಿಗೆ ಸಾಕು: ಉದಯನಿಧಿ ಸ್ಟಾಲಿನ್
“ಇಡೀ ದೇಶದಲ್ಲಿ ಯಾರೇ ಕೋಮುವಾದಿಗಳ ವಿರುದ್ಧ ದನಿ ಎತ್ತಿದರೂ, ಅವರಿಗೆ ಎದುರಿಸುವುದು, ಪತ್ರ ಬರೆಯುವುದು, ಜೀವ ಬೆದರಿಕೆ ಹಾಕುತ್ತಾನೆ. ಪ್ರಕಾಶ್ ರೈ ಹೇಳಿದಂತೆ ನಮ್ಮ ಭಯವೇ ಕೋಮುವಾದಿಗಳಿಗೆ ಶಕ್ತಿ. ನೀವ್ಯಾರೂ ಕೋಮುವಾದಿಗಳಿಗೆ ಹೆದರಬಾರದು. ನಿಮ್ಮೆಲ್ಲರ ಹೋರಾಟದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಸಂವಿಧಾನ ಉಳಿಯಬೇಕು ಎಂಬ ಮನಸ್ಸುಗಳು ನಮಗೆ ಶಕ್ತಿಯನ್ನು ಕೊಟ್ಟಿದ್ದಾರೆ. ನಮಗೆ ಶಕ್ತಿಯನ್ನು ನೀಡಿದವರ ಕನಸು ನುಚ್ಚುನೂರಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ” ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
“ವಿಚಾರವಾದಿಳಿಗೆ, ಕೋಮುವಾದಿ ಶಕ್ತಿಗಳ ವಿರುದ್ಧ ಮಾತನಾಡುವವರಿಗೆ ಬೆದರಿಕೆ ಹಾಕುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸರಿಗೆ ತಿಳಿಸಿದ್ದೇನೆ. ಮಹಾತ್ಮಗಾಂಧಿ, ಗೌರಿ ಲಂಕೇಶ್ ಮಾತ್ರವಲ್ಲ, ಯಾರ್ಯಾರು ಬಸವಾದಿ ಶರಣರು, ಅಂಬೇಡ್ಕರ್, ಬುದ್ಧನ ವಿಚಾರ ಧಾರೆಗಳನ್ನು ಆಚರಿಸುತ್ತಾ ಜಾತಿ ಅಸಮಾನತೆ, ಧರ್ಮ ಸಂಘರ್ಷವನ್ನು ವಿರೋಧಿಸುತ್ತಾರೋ ಅವರೆಲ್ಲರಿಗೂ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆ. ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಬಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಮಂತ್ರಿ, ಶಾಸಕಿ ಶೈಲಜಾ ಟೀಚರ್, ರೈತ ನಾಯಕ ರಾಕೇಶ್ ಟಿಕಾಯತ್, ನಟ ಪ್ರಕಾಶ್ ರಾಜ್, ರಾಜಕೀಯ ಹೋರಾಟಗಾರ್ತಿ ಏಂಜೆಲಾ ರಂಗದ್, ಪತ್ರಕರ್ತೆ ಸುಪ್ರಿಯಾ ಶ್ರೀ ನಟೆ, ಮುಸ್ಲಿಂ ಒಕ್ಕೂಟದ ಯಾಸಿನ್ ಮಲ್ಪೆ, ಮಾಜಿ ಸಚಿವ ಹೆಚ್. ಆಂಜನೇಯ, ಸಿನಿಮಾ ನಿರ್ಮಾಪಕಿ ಕವಿತಾ ಲಂಕೇಶ್, ಗೌರಿ ಟ್ರಸ್ಟ್ನ ದೀಪು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಡಿಯೊ ನೋಡಿ: ಮುಂದಿನ ಕೆಲವು ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ದೇಶವಾಗುತ್ತದೆಯೇ?Janashakthi Media