ಲಕ್ನೋ: ಉತ್ತರ ಪ್ರದೇಶದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತ ವಿನಯ್ ಶ್ರೀವಾಸ್ತವ್ ಅವರ ಹತ್ಯೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಪುತ್ರ ವಿಕಾಸ್ ಕಿಶೋರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರ್ಮ್ ಆಕ್ಟ್ -30 ರ ಅಡಿಯಲ್ಲಿ ಪೊಲೀಸರು ಶನಿವಾರ ಎಫ್ಐಆರ್ ದಾಖಲಿಸಿದ್ದು, ಹತ್ಯೆಗಾಗಿ ದುಷ್ಕರ್ಮಿಗಳು ಬಳಸಿದ್ದ 32 ಬೋರ್ನ ಪರವಾನಗಿ ಪಡೆದ ಪಿಸ್ತೂಲ್ ವಿಕಾಸ್ ಕಿಶೋರ್ ಅವರದ್ದಾಗಿದೆ ಎಂದು ತಿಳಿಸಿದ್ದಾರೆ.
ಅಪರಾಧ ನಡೆದ ಸ್ಥಳದಲ್ಲಿ ವಿಕಾಸ್ ಕಿಶೋರ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಅವರು ತನ್ನ ಪಿಸ್ತೂಲ್ ಅನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡಿದ್ದರು. ಅಲ್ಲಿಂದ ಪಿಸ್ತೂಲ್ ಅನ್ನು ಪಡೆದಿದ್ದ ದುಷ್ಕರ್ಮಿಗಳು, ವಿನಯ್ ಶ್ರೀವಾಸ್ತವ್ ಅವರ ಹಣೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ: ಶಾಲೆ ತುಂಬಾ ಮಕ್ಕಳು, ಆದರೆ ಶಿಕ್ಷಕರಿಲ್ಲ; ಸ್ಪೀಕರ್ ಯು.ಟಿ. ಖಾದರ್ ಊರಿನ ಸರ್ಕಾರಿ ಶಾಲೆಯ ಕತೆಯಿದು!
ತಲೆದಿಂಬಿನ ಕೆಳಗೆ ಆಯುಧವನ್ನು ಸಾಂದರ್ಭಿಕವಾಗಿ ಇಟ್ಟುಕೊಂಡು ಬೇರೆಯವರ ಕೈಗೆ ಸುಲಭವಾಗಿ ಸಿಗುವಂತೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧಕ್ಕೆ ಬಳಸಲಾದ ಪಿಸ್ತೂಲ್ನ ಪರವಾನಗಿಯನ್ನು ರದ್ದುಗೊಳಿಸುವಂತೆಯೂ ಅವರು ಶಿಫಾರಸು ಮಾಡಿದ್ದಾರೆ. ಶಸ್ತ್ರಾಸ್ತ್ರ ಕಾಯಿದೆ-30 ರ ಪ್ರಕಾರ, ಆಯುಧದ ದುರುಪಯೋಗವನ್ನು ತಪ್ಪಿಸಲು ಅದು ಎಲ್ಲರಿಗೂ ತಲುಪದಂತೆ ಸುರಕ್ಷಿತ ಸ್ಥಳದಲ್ಲಿ ಇಡುವುದು ಆಯುಧದ ಮಾಲೀಕರ ಜವಾಬ್ದಾರಿಯಾಗಿದೆ.
ಬಿಜೆಪಿ ಕಾರ್ಯಕರ್ತ ವಿನಯ್ ಶ್ರೀವಾಸ್ತವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಅಂಕಿತ್ ವರ್ಮಾ, ಅಜಯ್ ರಾವತ್ ಮತ್ತು ಸಮೀಮ್ ಅಲಿಯಾಸ್ ಬಾಬಾ ಎಂಬ ಮೂವರನ್ನು ಶುಕ್ರವಾರ ಬಂಧಿಸಲಾಗಿದೆ. ಮೂವರ ವಿರುದ್ಧ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕೇಂದ್ರ ಸಚಿವ ಕೌಶಲ್ ಕಿಶೋರ್ ಅವರ ಪುತ್ರ ವಿಕಾಸ್ ಕಿಶೋರ್ ಪ್ರಸ್ತುತ ಬಿಜೆಪಿಯ ಪರಿಶಿಷ್ಟ ಜಾತಿ ವಿಭಾಗದ ಪ್ರಾದೇಶಿಕ ಉಪಾಧ್ಯಕ್ಷರಾಗಿದ್ದಾರೆ. ಹತ್ಯಗೀಡಾದ ವಿನಯ್ ಶ್ರೀವಾಸ್ತವ್ ಅವರು ವಿಕಾಸ್ ಕಿಶೋರ್ ಅವರ ನಿಕಟವರ್ತಿ ಎನ್ನಲಾಗಿದೆ. ಅಲ್ಲದೆ, 2017 ರಿಂದ ಕೌಶಲ್ ಕಿಶೋರ್ ಅವರ ಕುಟುಂಬದೊಂದಿಗೆ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: ʼಗ್ಯಾರಂಟಿʼಯಲ್ಲಿ ನೂರು ದಿನ ! ಐದು ವರ್ಷ ಕಳೆದರೂ ಅಚ್ಚರಿಯಿಲ್ಲ!!
“ವಿಕಾಸ್ ಕಿಶೋರ್ ಅವರ ಮನೆಯಲ್ಲಿ ಮದ್ಯ ಸೇವನೆ ಮತ್ತು ಜೂಜಾಟದ ನಂತರ ಆರೋಪಿಗಳು ಮತ್ತು ಹತ್ಯೆಗೀಡಾದ ವಿನಯ್ ನಡುವೆ ಜಗಳ ನಡೆದಿತ್ತು. ಇದರ ನಂತರ ಘಟನೆ ನಡೆದಿದೆ” ಎಂದು ಜಂಟಿ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ಆಕಾಶ್ ಕುಲ್ಹಾರಿ ಹೇಳಿದ್ದಾರೆ.
ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಅಪರಾಧಕ್ಕೆ ಬಳಸಿದ ಆಯುಧವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪಿಸ್ತೂಲ್ನಲ್ಲಿರುವ ಬೆರಳಚ್ಚುಗಳನ್ನು ತೆಗೆದುಕೊಳ್ಳಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವರದಿಯಾಗಿದೆ.
ವಿಡಿಯೊ ನೋಡಿ: ಮಾತು ಮತ್ತು ಹಾಡಿನ ಮೂಲಕ ಸೌಜನ್ಯ ಹೋರಾಟಕ್ಕೆ ಧ್ವನಿಯಾದ ಜನಪರ ಗಾಯಕ ಜನ್ನಿ Janashakthi Media