ನಾಮಪತ್ರದಲ್ಲಿ ಸುಳ್ಳು ಮಾಹಿತಿ : ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ

ಹೈಕೋರ್ಟ್ ಆದೇಶ

ಬೆಂಗಳೂರು: ಕಳೆದ ಬಾರಿ ಸಂಸತ್ತು ಚುನಾವಣೆ ಸಂದರ್ಭದಲ್ಲಿ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್‌ ಸೆಪ್ಟೆಂಬರ್-1 ಶುಕ್ರವಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿ ಅಧಿಸೂಚನೆ

ಜೆಡಿಎಸ್‌ನ ಏಕೈಕ ಸಂಸದ, ಹಾಸನ ಲೋಕಸಭಾ ಕ್ಷೇತ್ರದ ಎಂಪಿ ಪ್ರಜ್ವಲ್ ರೇವಣ್ಣ ಅವರು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಸ್ತಿ ಘೋಷಣೆ ವಿವರ, ಪ್ರಮಾಣ ಪತ್ರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು 2019ರಲ್ಲಿ ಹೈಕೋರ್ಟ್ ನಲ್ಲಿ ಅವರ ವಿರುದ್ಧ ಅರ್ಜಿ ಸಲ್ಲಿಕೆಯಾಗಿತ್ತು.

ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ ಪ್ರಜ್ವಲ್ ರೇವಣ್ಣ ಅವರು ಚೊಚ್ಚಲ ಪ್ರಯತ್ನದಲ್ಲೇ ಜಯ ಗಳಿಸಿದ್ದರು. ಆದರೆ ಅಫಿಡವಿಟ್​ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿ ಅರಕಲಗೂಡು ಮಂಜು ಹಾಗೂ ವಕೀಲ ದೇವರಾಜೇಗೌಡ  2019ರ ಜೂನ್ 26ರಂದು ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಪ್ರಜ್ವಲ್ ರೇವಣ್ಣ

ಪ್ರಜ್ವಲ್ ಸರ್ಕಾರಿ ಜಮೀನು ಖರೀದಿಸಿದ್ದಾರೆ, ಆದಾಯ ತೆರಿಗೆ ವಂಚಿಸಿದ್ದಾರೆ. ಬೇನಾಮಿ ಆಸ್ತಿ ಗಳಿಸಿದ್ದಾರೆ. ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ಕನ್ವೆನ್ಶನ್‌ ಸೆಂಟರ್ ಕಟ್ಟಡ ಕನಿಷ್ಠ 5 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಅದರ ಮೌಲ್ಯವನ್ನು 14 ರೂ. ಲಕ್ಷ ಎಂದು ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರೂ. ಹೊಂದಿದ್ದರೂ ಕೇವಲ 5 ಲಕ್ಷ ಇದೆ ಎಂದು ತೋರಿಸಿದ್ದಾರೆ ಎಂದು  ದೇವರಾಜೇಗೌಡ ಆರೋಪಿದ್ದರು.

ಹೈಕೋರ್ಟ್‌ ಆದೇಶದ ಪ್ರಕಾರ ಇನ್ನು 6 ವರ್ಷಗಳ ಕಾಲ  ಪ್ರಜ್ವಲ್‌ ರೇವಣ್ಣ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *