ಟಿ ಎಸ್ ವೇಣುಗೋಪಾಲ್
60ರ ಕೊನೆಯ ಭಾಗದಲ್ಲಿ ಕೊಲ್ಕತ್ತೆಯ ರಾಜಕೀಯ ವಾತಾವರಣ ಪ್ರಕ್ಷುಬ್ಧವಾಗಿತ್ತು. ಅದು ಸೇನ್ ಅವರ ರಾಜಕೀಯ ನಿಲುವು ತೀವ್ರವಾಗಿದ್ದ ಸಮಯ. ಸಿನಿಮಾ ಅವರಿಗೆ ಒಂದು ಸಾಮಾಜಿಕ ಬದಲಾವಣೆಯ ಮಾಧ್ಯಮವಾಗಿತ್ತು. ಸಿನಿಮಾವನ್ನು ಒಂದು ರಾಜಕೀಯ ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳುವುದಕ್ಕೆ ಅವರಿಗೆ ಯಾವುದೇ ಹಿಂಜರಿಕೆಯೂ ಇರಲಿಲ್ಲ. ಆದರೆ ಅದಕ್ಕೊಂದು ಭಾವನಾತ್ಮಕ ಸಮರ್ಥನೆ ಇರಬೇಕೆಂದು ಭಾವಿಸಿದ್ದರು. ಸಿನಿಮಾ ಅಂದರೆ ಹೀಗೇ ಇರಬೇಕು, ಆದರ ಸ್ವರೂಪ ಹೀಗೆ ಇರಬೇಕು. ಇಂತಹ ಥಿಯರಿಗಳು ಅವರಿಗೆ ಸರಿ ಅಂತ ತೋರಲಿಲ್ಲ. ತಮ್ಮದೇ ಆದ ಕ್ರಮವನ್ನು ಕಂಡುಕೊಂಡರು. ಕೆಲವೊಮ್ಮೆ ಅದು ರಿಯಲಿಸ್ಟಿಕ್ ಮಾದರಿಯಲ್ಲಿದ್ದರೆ, ಕೆಲವೊಮ್ಮೆ ಅದು ಸರ್ರಿಯಲಿಸ್ಟ್ ಹಾದಿಯನ್ನು ಹಿಡಿಯುತ್ತಿತ್ತು. ಕಚ್ಚಾ ಡಾಕ್ಯುಮಂಟರಿಯ ದೃಶ್ಯಗಳನ್ನು ಕಥೆಯೊಳಗೆ ಹೆಣೆಯುತ್ತಿದ್ದರು. ಪ್ರಜ್ಞಾಪೂರ್ವಕವಾಗಿಯೇ ಈ ಶೈಲಿಯನ್ನು ಆರಿಸಿಕೊಂಡಿದ್ದರು.
ಮೃಣಾಲ್ ಸೇನ್ ಹುಟ್ಟಿದ್ದು ಪೂರ್ವ ಬಂಗಾಲದಲ್ಲಿ. ಅಮೇಲೆ ಓದು ಮುಂದುವರೆಸಲು ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದ ವಿಭಜನೆಯ ನೋವು ಅವರನ್ನು ಗೀಳಾಗಿ ಕಾಡಲಿಲ್ಲ. ಕೊಲ್ಕತ್ತಾದಲ್ಲಿ ಬೆರೆತು ಕೊಲ್ಕತ್ತದವರೇ ಆಗಿಬಿಟ್ಟರು. ಜೀವನದುದ್ದಕ್ಕೂ ಅವರ ಕಾಳಜಿಯೆಲ್ಲಾ ಕೊಲ್ಕತ್ತಾ ಮತ್ತು ಅಲ್ಲಿಯ ಜನರ ಬಗ್ಗೆಯೇ ಆಗಿತ್ತು. ಕೊಲ್ಕತ್ತಾ ಅವರಿಗೆ ಸ್ಪೂರ್ತಿಯ ತಾಣವಾಗಿದ್ದಂತೆಯೇ ಕಿರಿಕಿರಿಯೂ ಜಾಗವೂ ಆಗಿತ್ತು. ತಮ್ಮ ಸುತ್ತಲ ಆಗುಹೋಗುಗಳ ಕುರಿತಂತೆ ಸದಾ ಅವರಿಗೆ ಒಂದು ರೀತಿಯ ಅತೃಪ್ತಿ ಕಾಡುತ್ತಿತ್ತು. ಈ ಅತೃಪ್ತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತಲೇ ಇದ್ದರು.
ಅವರಿಗೆ ಸಿನಿಮಾದಲ್ಲಿ ಅಂತಹ ಆಸಕ್ತಿಯೇನಿರಲಿಲ್ಲ. ಅವರು ಅಷ್ಟಾಗಿ ಸಿನಿಮಾಗಳನ್ನು ನೋಡುತ್ತಲೂ ಇರಲಿಲ್ಲ. ಆಕಸ್ಮಿಕವಾಗಿ ಓದಿದ ರುಡೋಲ್ಫ್ ಅರ್ನ್ಹೈಮ್ ಅವರ ದಿ ಆರ್ಟ್ ಆಫ್ ಫಿಲ್ಮ್ ಪುಸ್ತಕ ಅವರ ಒಲವನ್ನೇ ಬದಲಿಸಿಬಿಟ್ಟಿತು. ಅದು ಸಿನಿಮಾದಲ್ಲ್ಲಿ ಇವೆಲ್ಲಾ ಸಾಧ್ಯವಾ? ಎಂಬ ಬೆರಗನ್ನು ಅವರಲ್ಲಿ ಮೂಡಿಸಿತು. ನಂತರ ವ್ಲಾಡಿಮಿರ್ ನಿಲ್ಸನ್ ಅವರ ಸಿನೆಮಾ ಆಸ್ ಗ್ರಾಫಿಕ್ ಆರ್ಟ್ ಪುಸ್ತಕ ಓದಿದರು. ನಿಲ್ಸನ್ ಖ್ಯಾತ ನಿರ್ದೇಶಕ ಐಸೆನ್ಸ್ಟೀನ್ ಅವರ ಶಿಷ್ಯ.
ಅಲ್ಲಿಂದ ಮುಂದೆ ಮೃಣಾಲ್ ಹೆಚ್ಚೆಚ್ಚು ಸಿನಿಮಾಗಳನ್ನು ನೋಡಲು ಪ್ರಾರಂಭಿಸಿದರು. ಹೆಚ್ಚಾಗಿ ಭಾರತೀಯ ಸಿನಿಮಾಗಳನ್ನು ನೋಡುತ್ತಿದ್ದರು. ಅವರಿಗೆ ಅವು ಇಷ್ಟವಾಗುತ್ತಿರಲಿಲ್ಲ. ಅವುಗಳನ್ನು ತುಂಬಾ ದ್ವೇಷಿಸುತ್ತಿದ್ದರು. ಸಿನಿಮಾ, ಅದರ ಕಲಾತ್ಮಕತೆ, ಇತ್ಯಾದಿ ವಿಷಯಗಳ ಬಗ್ಗೆ ಬರೆಯಲು ಪ್ರಾರಂಭಿಸಿದರು. ಕೊಲ್ಕತ್ತೆಯ ಕಾಲೇಜುಗಳಲ್ಲಿ ರ್ಯಾಡಿಕಲ್ ಚಳುವಳಿ ವ್ಯಾಪಕವಾಗಿದ್ದ ಕಾಲ ಅದು. ಯಾವುದೇ ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿಯೂ ಅದರಿಂದ ಪ್ರಭಾವಿತವಾಗದೇ ಇರುವುದಕ್ಕೆ ಸಾಧ್ಯವಿರಲಿಲ್ಲ. ಕೊಲ್ಕತ್ತೆಯಲ್ಲಂತೂ ಅದು ಸಾಧ್ಯವೇ ಇರಲಿಲ್ಲ. ಮೃಣಾಲ್ ಸೇನ್ ಅದರ ಸಮ್ಮೋಹಿನಿಗೆ ಒಳಗಾದರು. ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್) ಪ್ರದರ್ಶಿಸುತ್ತಿದ್ದ ನಾಟಕಗಳನ್ನು ನೋಡಿದರು. ಅದು ಅವರ ಮೇಲೆ ಸಾಕಷ್ಟು ಪರಿಣಾಮ ಬೀರಿದವು. ಅವರು ನೇರವಾಗಿ ಇಪ್ಟಾದಲ್ಲಿ ಪಾಲ್ಗೊಳ್ಳದಿದ್ದರೂ ಅದರಿಂದ ರಂಗಭೂಮಿಯ ಚಟುವಟಿಕೆಗಳಲ್ಲಿ ಅವರಿಗೆ ಆಸಕ್ತಿ ಕೆರಳಿತು. ಅವರ ಸಾಮಾಜಿಕ ಪ್ರಜ್ಞೆ ತೀವ್ರಗೊಂಡಿತು.
ಇಂಪೀರಿಯಲ್ ಲೈಬ್ರರಿಯಲ್ಲಿ ಕುಳಿತು ಸಿಕ್ಕ ಪುಸ್ತಕಗಳನ್ನೆಲ್ಲಾ ಓದಲು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರಿಗೆ ಋತ್ವಿಕ್ ಘಟಕ್, ಸಲೀಲ್ ಚೌಧುರಿ ಮುಂತಾದವರ ಪರಿಚಯವಾಯಿತು.
ಇವಿಷ್ಟೇ ಅವರಿಗೆ ಸಿನಿಮಾ ರಂಗಕ್ಕೆ ಕಾಲಿಡುವುದಕ್ಕೆ ಇದ್ದ ತಯಾರಿ. ಒಂದು ಕಡೆ ಐಸೆನ್ಸ್ಟೀನ್ ಮತ್ತು ಅವರ ಗೆಳೆಯರ ಮಾದರಿಯ ರಷ್ಯನ್ ಸಿನಿಮಾ ಕುರಿತ ಓದು. ಇನ್ನೊಂದು ಕಡೆ ಭಾರತೀಯ ಮುಖ್ಯವಾಹಿನಿಯ ಅವರು ಇಷ್ಟಪಡದ ಸಿನಿಮಾಗಳನ್ನು ನೋಡಿದ ಅನುಭವ. 1956ರಲ್ಲಿ ಯಾರೋ ಒಂದು ಕಥೆ ತಂದರು. ಸೇನ್ ಚಿತ್ರಕಥೆ ಬರೆದರು. ರಾತ್ಬೋರ್ ಸಿನಿಮಾ ಮಾಡಿಯೇ ಬಿಟ್ಟರು. ಅದೊಂದು ಕೆಟ್ಟ ಸಿನಿಮಾ. ತೆಗೆದವರಿಗೇ ನೋಡುವುದಕ್ಕೆ ನಾಚಿಕೆಯಾಗುವಂತಹ ಸಿನಿಮಾ. ಅದೊಂದು ಘೋರ ದುರಂತ. ಅದು ಇಡೀ ಜಗತ್ತಿನಲ್ಲಿ ತಯಾರಾದ ಅತ್ಯಂತ ಕೆಟ್ಟ ಸಿನಿಮಾಗಳಲ್ಲಿ ಕೆಟ್ಟ ಸಿನಿಮಾ ಅಂತ ಅವರೇ ಹೇಳಿಕೊಂಡಿದ್ದಾರೆ. ಅದನ್ನು ನೋಡಿ ಅವರಿಗೇ ಎಷ್ಟು ಕಸಿವಿಸಿಯಾಯಿತೆಂದರೆ, ಕೆಲವು ದಿನ ಮನೆಬಿಟ್ಟು ಹೊರಗೆ ಬರಲೇ ಇಲ್ಲ. ಯಾರೊಂದಿಗೂ ಮಾತೂ ಆಡುತ್ತಿರಲಿಲ್ಲ. ಎರಡು ವರ್ಷ ಏನು ಮಾಡಲಿಲ್ಲ. ಪಾಪ ಔಷಧಿ ಮಾರುವ ಕೆಲಸ ಬಿಟ್ಟು ಆ ಸಿನಿಮಾ ತೆಗೆದಿದ್ದರು.
ನಂತರ ’ನೀಲ್ ಆಕಾಶೇರ್ ನೀಚೆ’ ಸಿನಿಮಾ ತೆಗೆದರು. ಅದು ಅಷ್ಟು ಕಳಪೆಯಾಗಿರಲಿಲ್ಲ. ಆದರೆ ಅಂತಹ ಒಳ್ಳೆಯ ಸಿನಿಮವೂ ಅಲ್ಲ. ಅವರಿಗೆ ಅದು ಅಷ್ಟೇನೂ ಇಷ್ಟವಾಗಿರಲಿಲ್ಲ. ಆದರೂ ಕೆಲವರು ಮೆಚ್ಚಿಕೊಂಡಿದ್ದರು. ಅದನ್ನು ನೋಡಿದ ನೆಹರೂ ಮೆಚ್ಚಿಕೊಂಡಿದ್ದಷ್ಟೇ ಅಲ್ಲ ಗೆಳೆಯರಿಗೆ ನೋಡಲು ಶಿಫಾರಸ್ಸು ಬೇರೆ ಮಾಡುತ್ತಿದ್ದರು.
ಇದನ್ನೂ ಓದಿ:ಬೆಂಗಳೂರಿನ ಕಲಾಗ್ರಾಮದಲ್ಲಿ ಜರುಗಿದ ಹಾಡ್ಲಹಳ್ಳಿ ರಂಗೋತ್ಸವ
ಅವರ ಮೂರನೇ ಸಿನಿಮಾ ಭೈಷೆ ಶ್ರಾವಣ್. ಅದು ಸಿನಿಮಾ ಕ್ಷೇತ್ರದಲ್ಲಿ ಮೃಣಾಲ್ ಅವರಿಗೆ ಒಂದು ಸ್ಥಾನವನ್ನು ತಂದುಕೊಟ್ಟಿತು. ವೆನಿಸ್ ಫಿಲ್ಮೋತ್ಸವದಲ್ಲ್ಲಿ ಪ್ರದರ್ಶನಗೊಂಡಿತು. ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತು. ಅದರಲ್ಲಿ ಸಾಮಾಜಿಕ ಅಸಮಾನತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಬಂಗಾಲದ ಬರಗಾಲದ ಚಿತ್ರಣ ಅದರಲ್ಲಿದೆ, ಆದರೆ ಅದು ಬರಗಾಲವನ್ನು ಕುರಿತ ಸಿನಿಮಾ ಅಲ್ಲ. ಒಂದು ಮಿಲಿಯನ್ ಜನ ಸತ್ತರು ಅನ್ನುವ ವರದಿ ನಿಮಗಲ್ಲಿ ಸಿಗುವುದಿಲ್ಲ. ಅಂತಹ ದೊಡ್ಡ ದುರಂತದಲ್ಲಿ ಮನುಷ್ಯ ತನ್ನಲ್ಲಿ ಉಳಿದಿರಬಹುದಾದ ಅಲ್ಪ ಸ್ವಲ್ಪ ಮಾನವೀಯ ಸಜ್ಚನಿಕೆಯನ್ನೂ ಹೇಗೆ ಕಳೆದುಕೊಳ್ಳುತ್ತಾನೆ ಎಂಬುದನ್ನದು ತೋರಿಸುತ್ತದೆ. ಅಲ್ಲಿ ಮುಖ್ಯವಾಗುವುದು ಮಾನವ ಸಂಬಂಧಗಳು. ಅದರ ಮೂಲಕ ನಾನು ನಡೆಯುವುದನ್ನು ಕಲಿತೆ ಎಂದು ಸೇನ್ ಹೇಳಿಕೊಂಡಿದ್ದಾರೆ.
ಬೈಷೆ ಶ್ರಾವಣ್ ನಂತರ ಅವರ ಸಿನಿಮಾ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಕಾಣಿಸಿಕೊಂಡಿತು. ಬಹುಶಃ ಅವರು ಅಂತರರಾಷ್ಟ್ರೀಯ ಸಿನಿಮಾಗಳಿಗೆ ತೆರೆದುಕೊಂಡಿದ್ದು ಕಾರಣವಿರಬಹುದು. ಆ ಸಮಯದಲ್ಲಿ ಅವರು ತೆಗೆದ ಭುವನ್ ಶೋಮ್ ಭಾರತದ ಹೊಸ ಅಲೆಯ ಸಿನಿಮಾದ ಒಂದು ಪ್ರಮುಖ ಮೈಲುಗಲ್ಲು ಎನ್ನುತ್ತಾರೆ. ಅದರಲ್ಲಿ ಬಹುಪಾಲು ಜನರಿಗೆ ಅದು ಸಿನಿಮಾದ ಮೊದಲ ಅನುಭವ, ಮೊದಲ ಪ್ರಯತ್ನ. ಅದರ ಛಾಯಾಗ್ರಾಹಕ ಕೆ ಕೆ ಮಹಾಜನ್ ಆಗಷ್ಟೇ ಡಿಪ್ಲಮೊ ಮುಗಿಸಿ ಬಂದಿದ್ದರು. ನಾಯಕಿಯಾಗಿ ನಟಿಸಿರುವ ಸುಹಾಸಿನಿ ಕ್ಯಾಮೆರಾಕ್ಕೆ ಮುಖತೋರಿಸಿದ್ದು ಅದೇ ಮೊದಲ ಬಾರಿ. ಅಷ್ಟೇ ಅಲ್ಲ ಅದರಲ್ಲಿ ಕಂಠದಾನ ಮಾಡಿರುವ ಅಮಿತಾಬ್ ಬಚ್ಚನ್ ಅವರದ್ದೂ ಕೂಡ ಮೊದಲ ಚಿತ್ರ ಅದು. ಅದಕ್ಕಾಗಿ ಅವರು ಪಡೆದ 300 ರೂಪಾಯಿ ಅವರ ಚಿತ್ರ ಬದುಕಿನ ಮೊದಲ ಸಂಭಾವನೆ! ಅದರಲ್ಲಿ ಸೊಗಸಾಗಿ ನಟಿಸಿರುವ ಉತ್ಪಲ್ದತ್ ಅವರ ಮೊದಲ ಹಿಂದಿ ಚಿತ್ರ ಅದು. ಭುವನ್ ಶೋಮ್ ಚಿತ್ರದ ರಚನೆಯಲ್ಲೂ ಒಂದು ಹೊಸ ಪ್ರಯತ್ನವಿದೆ. ಆನಿಮೇಷನ್ ಬಳಸಿದ್ದಾರೆ. ತಮಾಷೆಯ ಅಂಶ ಇದೆ. ಆ ಮೂಲಕ ಚಾಪ್ಲಿನ್ ಅಂಶ ಕಾಣುತ್ತದೆ. ಹಲವು ರೀತಿಯ ಪಾತ್ರಗಳು ಬರುತ್ತವೆ. ಹೀಗೆ ಹಲವು ಕಾರಣಕ್ಕೆ ಅದು ಆಸಕ್ತಿ ಕೆರಳಿಸಿತ್ತು.
60ರ ಕೊನೆಯ ಭಾಗದಲ್ಲಿ ಕೊಲ್ಕತ್ತೆಯ ರಾಜಕೀಯ ವಾತಾವರಣ ಪ್ರಕ್ಷುಬ್ಧವಾಗಿತ್ತು. ಅದು ಸೇನ್ ಅವರ ರಾಜಕೀಯ ನಿಲುವು ತೀವ್ರವಾಗಿದ್ದ ಸಮಯ. ಸಿನಿಮಾ ಅವರಿಗೆ ಒಂದು ಸಾಮಾಜಿಕ ಬದಲಾವಣೆಯ ಮಾಧ್ಯಮವಾಗಿತ್ತು. ಸಿನಿಮಾವನ್ನು ಒಂದು ರಾಜಕೀಯ ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳುವುದಕ್ಕೆ ಅವರಿಗೆ ಯಾವುದೇ ಹಿಂಜರಿಕೆಯೂ ಇರಲಿಲ್ಲ. ಆದರೆ ಅದಕ್ಕೊಂದು ಭಾವನಾತ್ಮಕ ಸಮರ್ಥನೆ ಇರಬೇಕೆಂದು ಭಾವಿಸಿದ್ದರು. ಸಿನಿಮಾ ಅಂದರೆ ಹೀಗೇ ಇರಬೇಕು, ಆದರ ಸ್ವರೂಪ ಹೀಗೆ ಇರಬೇಕು. ಇಂತಹ ಥಿಯರಿಗಳು ಅವರಿಗೆ ಸರಿ ಅಂತ ತೋರಲಿಲ್ಲ. ತಮ್ಮದೇ ಆದ ಕ್ರಮವನ್ನು ಕಂಡುಕೊಂಡರು. ಕೆಲವೊಮ್ಮೆ ಅದು ರಿಯಲಿಸ್ಟಿಕ್ ಮಾದರಿಯಲ್ಲಿದ್ದರೆ, ಕೆಲವೊಮ್ಮೆ ಅದು ಸರ್ರಿಯಲಿಸ್ಟ್ ಹಾದಿಯನ್ನು ಹಿಡಿಯುತ್ತಿತ್ತು. ಕಚ್ಚಾ ಡಾಕ್ಯುಮಂಟರಿಯ ದೃಶ್ಯಗಳನ್ನು ಕಥೆಯೊಳಗೆ ಹೆಣೆಯುತ್ತಿದ್ದರು. ಪ್ರಜ್ಞಾಪೂರ್ವಕವಾಗಿಯೇ ಈ ಶೈಲಿಯನ್ನು ಆರಿಸಿಕೊಂಡಿದ್ದರು.
ಆ ಅವಧಿಯಲ್ಲಿ ರ್ಯಾಡಿಕಲ್ ಚಳುವಳಿಗಳನ್ನು ಪ್ರಬಲವಾಗಿ ಹತ್ತಿಕ್ಕಲಾಗುತ್ತಿತ್ತು. ಎಡಪಂಥೀಯ ಚಳುವಳಿಗಾರರು ತಮ್ಮ ಮನೆಮಠಗಳನ್ನು ಬಿಟ್ಟು ತಲೆಮರೆಸಿಕೊಂಡು ಹೋಗುತ್ತಿದ್ದ ಕಾಲ ಅದು. ಯಾವುದೇ ಚಳುವಳಿಗಳು, ಮೆರವಣಿಗೆಗಳು ನಡೆಯುವುದಕ್ಕೆ ಸಾಧ್ಯವೇ ಇರಲಿಲ್ಲ. ಆ ಸಮಯದಲ್ಲಿ ಕಲ್ಕತ್ತಾ 71 ಬಿಡುಗಡೆಯಾಯಿತು. ಅದು ಮಾನವನ ಶೋಷಣೆಯ ಕರಾಳ ಮುಖವನ್ನು ಚಿತ್ರಿಸುತ್ತಿತ್ತು. ಕಲ್ಕತ್ತೆಯ ಮೂರು ಪ್ರಮುಖ ಥಿಯೇಟರುಗಳಲ್ಲಿ ಅದರ ಮೂರೂ ಷೋಗಳು, ಮೂರು ವಾರಗಳ ಕಾಲ ನಿರಂತರವಾಗಿ ಹೌಸ್ ಫುಲ್ ಆದವು.
ಅದು ಅಷ್ಟು ಯಶಸ್ವಿಯಾಗುವುದಕ್ಕೆ ಸಿನಿಮಾ ಮಾತ್ರ ಕಾರಣವಾಗಿರಲಿಲ್ಲ. ಆ ಸಮಯ ಹಾಗಿತ್ತು. ಅದೊಂದು ರೀತಿ ಜನ ಟಿಕೇಟ್ ಕೊಂಡು ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸಿದ ಅನುಭವ. ಪೋಲಿಸರು ಎಷ್ಟೋ ’ವಾಂಟೆಡ್’ ಜನರನ್ನು ಸಿನಿಮಾ ಕ್ಯೂನಲ್ಲಿ ಅರೆಸ್ಟ್ ಮಾಡಿಕೊಂಡು ಹೋಗುತ್ತಿದ್ದರು. ಸೇನ್ ಎರಡು ಮೂರು ವರ್ಷಗಳ ಹಿಂದಿನಿಂದಲೇ ಕೊಲ್ಕತ್ತೆಯಲ್ಲಿ ನಡೆಯುತ್ತಿದ್ದ ಹಲವಾರು ಮೆರವಣಿಗೆಗಳನ್ನು ಚಿತ್ರಿಸಿಕೊಂಡಿದ್ದರು. ಅವೆಲ್ಲವನ್ನೂ ಆ ಚಿತ್ರದಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಚಿತ್ರಿತರಾಗಿದ್ದ ಎಷ್ಟೋ ಹುಡುಗರು ಪೋಲಿಸರಿಂದ ಕೊಲೆಗೀಡಾಗಿದ್ದರು. ಅವರನ್ನು ನೋಡಲು ಅವರ ಮನೆಯವರು, ಸ್ನೇಹಿತರು ಸಿನಿಮಾಕ್ಕೆ ಬರುತ್ತಿದ್ದರು. ಮತ್ತೆ ಮತ್ತೆ ನೋಡುತ್ತಿದ್ದರು. ಎದೆಬಿರಿಯುವಂತೆ ಅಳುತ್ತಿದ್ದರು. ಅವರನ್ನು ಸಮಾಧಾನ ಪಡಿಸುವುದೇ ಒಂದು ಸಾಹಸದ ಕೆಲಸವಾಗಿತ್ತು.
ಕಲ್ಕತ್ತಾ 71, ಅದಕ್ಕೆ ಮೊದಲು ತೆಗೆದಿದ್ದ ಇಂಟರ್ವ್ಯೂ ಹಾಗೂ ಅದಾದ ಮೇಲೆ ತೆಗೆದ ಪಾದಾತಿಕ್ ರಾಜಕೀಯ ತ್ರಿವಳಿಗಳಾಗಿದ್ದವು. ಮೂರನೇ ಸಿನಿಮಾ ತೆಗೆಯುವ ವೇಳೆಗೆ ಸೇನ್ ಸ್ವಲ್ಪ ಮಟ್ಟಿಗೆ ಬದಲಾಗಿದ್ದರು. ಮೊದಲೆರಡು ಸಿನಿಮಾಗಳಲ್ಲಿ ಅವರಿಗೆ ಎಡಪಂಥೀಯ ಚಳುವಳಿಯ ಬಗ್ಗೆ ಮೆಚ್ಚುಗೆ ಹಾಗೂ ಗೌರವ ಇತ್ತು. ನಂತರವೂ ಅದೇ ಗೌರವ ಉಳಿದಿತ್ತ್ತು. ಆದರೆ ಪದಾತಿಕ್ ಸಿನಿಮಾದಲ್ಲಿ ಅವರು ಹೆಚ್ಚು ಧ್ಯಾನಸ್ಥರಾಗಿದ್ದರು. ಅದು ಪೋಲಿಸರಿಂದ ಹಾಗೂ ತನ್ನ ಸಂಗಾತಿಗಳಿಂದ ತಪ್ಪಿಸಿಕೊಂಡು ಹೋಗುತ್ತಿದ್ದ ಒಬ್ಬ ಯುವ ಕಾಮ್ರೇಡನ ಮನಸ್ಥಿತಿಯನ್ನು ಚಿತ್ರಿಸುತ್ತದೆ. ಅಲ್ಲಿ ನಕ್ಸಲೀಯ ಚಳುವಳಿಯ ಸಾಮರ್ಥ್ಯ ಹಾಗೂ ಮಿತಿಯನ್ನು ವಿಶ್ಲೇಷಿಸುತ್ತಾರೆ. ಒಂದು ರಾಜಕೀಯ ಸೋಲಿನ ಮೂಲವನ್ನು ಸೇನ್ ನೈತಿಕ ಸೋಲಿನಲ್ಲಿ ಕಾಣುತ್ತಾರೆ. ಚಳುವಳಿಗಳು ಮಾನವನ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿರುವುದಕ್ಕೆ ಕಾರಣಗಳನ್ನು ಹುಡುಕುತ್ತಾರೆ. ಆ ಮೂಲಕ ಒಂದು ಸ್ವವಿಮರ್ಶೆಯನ್ನು ಮಾಡಿಕೊಳ್ಳುತ್ತಾರೆ. ಅವರು ಚಳುವಳಿಯಿಂದ ಹೊರಗೆ ನಿಂತು ಅದನ್ನು ಅವಹೇಳನ ಮಾಡುವುದಿಲ್ಲ, ನಿಂದಿಸುವುದಿಲ್ಲ. ಉಪದೇಶ ಮಾಡುವುದಿಲ್ಲ. ಯಾವಾಗಲೂ ಸ್ವವಿಮರ್ಶೆ ಎನ್ನುವುದು ನಿಂದನೆಯಾಗಿಬಿಡುವ ಅಪಾಂವಿರುತ್ತದೆ. ಅವೆರಡರ ನಡುವಿನ ಅಂತರ ತುಂಬಾ ಕಡಿಮೆ. ಸೇನ್ಗೆ ಇದರ ಬಗ್ಗೆ ಸ್ಪಷ್ಟತೆಯಿತ್ತು. ರಾಜಕೀಯದಿಂದ ಸೇನ್ ದೂರಬಂದಿದ್ದಾರೆ ಅನ್ನುವ ಟೀಕೆಗಳು ಬಂದವು. ಅವರಲ್ಲಿ ಮಿಲಿಟೆನ್ಸಿ ಕಡಿಮೆಯಾಗಿದೆ ಅಂತ ಹಲವರು ವಿಮರ್ಶೆ ಬರೆದರು.
ಸೇನ್ ತಮ್ಮ ಮೊದಲ ಸಿನಿಮಾಗಳಲ್ಲಿ ಶೋಷಣೆ ಹಾಗೂ ಅದರ ಕಾರಣವನ್ನು ಶೋಧಿಸುತ್ತಿದ್ದರು. ಜೊತೆಗೆ ತುಂಬಾ ಕ್ರೋಧ ಇತ್ತು. ’ನಾನು ತುಂಬಾ ಕೂಗುತ್ತಿದ್ದೆ. ಹೊಸ ಸಮಾಜದ ನಿರ್ಮಾಣದ ಬಗ್ಗೆ ಮಾತನಾಡುತ್ತಿದ್ದೆ. ಅದ್ಭುತ ಭವಿಷ್ಯದ ಬಗ್ಗೆ ಮಾತನಾಡುತ್ತಿದ್ದೆ. ಅದು ಸಧ್ಯದಲ್ಲೆ ಬಂದು ಬಿಡುತ್ತೆ ಅಂತ ನಂಬಿದ್ದೆ. ಬಹುಶಃ ಅದು ತುಂಬಾ ಸರಳೀಕರತವಾದ ತೀರ್ಮಾನವಾಗಿತ್ತು ಅಂತ ಈಗ ಅನ್ನಿಸುತ್ತದೆ. ಆಗ ನನ್ನ ನಂಬಿಕೆಗಳೇ ಹಾಗಿದ್ದವು. ಆಗ ಅದೇ ಪ್ರಧಾನವಾದ ಸಾಮಾಜಿಕ ಹಾಗೂ ರಾಜಕೀಯ ನಂಬಿಕೆಗಳಾಗಿದ್ದವು. ಈಗ ಅಲ್ಲಿಂದ ದೂರ ಬಂದಿದ್ದೇನೆ. ಆತ್ಮವಲೋಕನ, ಸ್ವವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ನನ್ನ ಒಳಗನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಏಕ್ ದಿನ ಪ್ರತಿದಿನ್ ಸಿನಿಮಾದಲ್ಲಿ ನನ್ನ ಕಾಳಜಿಯೆಲ್ಲವೂ ಒಳಗಿನ ಜಗತ್ತು, ಅದರ ನಿಗೂಢತೆ, ಅದರ ನಿರಾಶೆಗಳು, ಗೊಂದಲಗಳು ಹಾಗೂ ಸಾಮರ್ಥ್ಯ ಇವೆಲ್ಲವನ್ನೂ ಅರ್ಥಮಾಡಿಕೊಳ್ಳುವತ್ತ ಇತ್ತು.
ಸಾಮಾಜಿಕ ಬದಲಾವಣೆಗಾಗಿ ಸಿನಿಮಾವನ್ನು ಬಳಸಿಕೊಳ್ಳಬಹುದೆಂದು ಅವರು ಬಲವಾಗಿ ನಂಬಿದ್ದರು. ಅದು ಸ್ವಲ್ಪ ಮಟ್ಟಿಗೆ ನಿಜವಿರಬಹುದು. ಸಿನಿಮಾದಿಂದ ಈಗಾಗಲೇ ಮಿಲಿಟೆಂಟ್ ಆಗಿರುವವರು ಇನ್ನಷ್ಟು ಮಿಲಿಟೆಂಟ್ ಆಗಬಹುದು. ಆದರೆ ಹೊರಗುಳಿದವರನ್ನು ಪ್ರೇರೇಪಿಸುವುದಕ್ಕೆ ಅದರಿಂದ ಸಾಧ್ಯವಾಗುವುದಿಲ್ಲ. ಬ್ಯಾಟಲ್ ಷಿಪ್ ಪೊಟೆಮ್ಕಿನ್ ಅಂತಹ ಹತ್ತು ಸಿನಿಮಾ ತೆಗೆದರೂ ಸರ್ಕಾರವೊಂದನ್ನು ಉರುಳಿಸೋದು ಸಾಧ್ಯವಿಲ್ಲ ಎಂಬುದನ್ನು ಸೇನ್ ಮನಗಂಡರು. ಬದಲಾವಣೆ ಆಗಬೇಕಾದರೆ ನಿಜವಾಗಿ ಬೇಕಿರುವುದು ಸೂಕ್ತವಾದ ವಾತಾವರಣ. ಅಂತಹ ವಾತಾವರಣದ ಸೃಷ್ಟಿಗೆ ಸಿನಿಮಾದಂತಹ ಮಾಧ್ಯಮಗಳು ಸಹಾಯಕವಾಗಬಲ್ಲದು. ಸಾಹಿತ್ಯ ಹಾಗೂ ಇತರ ಮಾಧ್ಯಮಗಳಂತೆ ಸಿನಿಮಾಕ್ಕೂ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಅದು ಒಂದು ವಾತಾವರಣವನ್ನು ಸೃಷ್ಟಿಸುತ್ತದೆ. ಒಂದು ರೀತಿಯ ಚರ್ಚೆಯನ್ನು ಅದು ಪ್ರಚೋದಿಸಬಹುದು. ಅದಕ್ಕೆ ಬೇಕಾದ ಮಾಹಿತಿಯನ್ನು ಒದಗಿಸುವುದು ನನ್ನ ಕೆಲಸ. ಅದು ತಟಸ್ಥ ನಿಲುವಿನಿಂದ ಬಂದ ಮಾಹಿತಿಯಲ್ಲ. ಅದರಲ್ಲಿ ನನ್ನ ನಿಲುವು ಇರುತ್ತದೆ. ಈ ಚರ್ಚೆಯ ಪ್ರಕ್ರಿಯೆಯಲ್ಲಿ ನಿಮ್ಮನ್ನು ಪ್ರೇಕ್ಷಕರಾಗಿ ಸಕ್ರಿಯವಾಗಿ ತೊಡಗುವಂತೆ ಸಿನಿಮಾ ಮಾಡಬಹುದು. ನಿಯೊ ರಿಯಲಿಸಂನ ಪ್ರವರ್ತಕ ಜವಟೀನಿ ಕೂಡ ಅಂತಹುದೇ ಒಂದು ತೀರ್ಮಾನಕ್ಕೆ ಬಂದಿದ್ದ. ಸಿನಿಮಾ ಸಮಾಜವನ್ನು ಬದಲಿಸುತ್ತೆ ಅಂದುಕೊಂಡಿದ್ದೆ. ಸಿನಿಮಾ ಹ್ಯಾಸ್ ಫೇಲ್ಡ್ ಮಿ ಮಿಸರಬಲಿ ಎಂದು ಜವಟೀನಿಯೇ ಸೇನ್ಗೆ ಹೇಳಿದ್ದರಂತೆ. ಸಿನಿಮಾದಿಂದ ಫ್ಯಾಸಿಸಂಅನ್ನು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಹೆಚ್ಚೆಂದರೆ ಫ್ಯಾಸಿಸಂ ಕಡೆ ಹೋಗುತ್ತಿರುವ ಸಮಾಜದಲ್ಲಿ ಒಂದು ಚರ್ಚೆ ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಸಬಹುದು.
ಸೇನರ ನಿಲುವು ಬದಲಾಗುವುದಕ್ಕೆ ಬದಲಾದ ರಾಜಕೀಯ ಪರಿಸ್ಥಿತಿಯೂ ಕಾರಣ. ಅವರು ನಂಬಿಕೊಂಡಿದ್ದ ಎಡಪಕ್ಷಗಳು ನಿರಾಸೆ ಮೂಡಿಸಿದ್ದವು. ಹಾಗಾಗಿ ಒಂದು ಆತ್ಮಾಲೋಕನದ, ಸ್ವವಿಮರ್ಶೆಯ ಅವಶ್ಯಕತೆ ಇತ್ತು. ತಪ್ಪನ್ನು ಬೇರೆಯವರಲ್ಲಿ, ಹೊರಗಡೆ ಹುಡುಕದೇ ತಮ್ಮಲ್ಲೇ ನೋಡಿಕೊಳ್ಳುವ ಅವಶ್ಯಕತೆ ಜರೂರಾಗಿತ್ತು.
ಇದನ್ನೂ ಓದಿ:ನವಕರ್ನಾಟಕ ಪ್ರಕಾಶನಕ್ಕೆ ಪ್ರತಿಷ್ಠಿತ ರಾಷ್ಷ್ರೀಯ ಪ್ರಶಸ್ತಿ
ಇಂತಹ ಆತ್ಮಾವಲೋಕನದ ಪ್ರಕ್ರಿಯೆಯಲ್ಲಿ ಬದುಕನ್ನು ನೋಡುವ ಅವರ ದೃಷ್ಟಿಯೂ ಬದಲಾಗುತ್ತಾ ಬಂತು. ದೊಡ್ಡ ದೊಡ್ಡ ನಾಟಕೀಯ ಘಟನೆಗಳು ನಿಜಜೀವನದಲ್ಲಿ ಅಪರೂಪ. ಅದರ ಸುತ್ತ ಕಥೆ ಹೆಣೆಯುವುದು ವಾಸ್ತವಕ್ಕೆ ವಿಮುಖವಾಗುವ ಪಲಾಯನದಂತೆ ಅವರಿಗೆ ಕಾಣಿಸತೊಡಗಿತು. ವಾಸ್ತವ ಬದುಕಿನಲ್ಲಿ ಅಂತಹ ದೊಡ್ಡ ದೊಡ್ಡ ಘಟನೆಗಳು ನಡೆಯುತ್ತಿರುವುದಿಲ್ಲ. ಬೆಳಗ್ಗಿನಿಂದ ರಾತ್ರಿಯವರೆಗೆ ನಗಣ್ಯ ಅಂತ ತಳ್ಳಿಹಾಕಿಬಿಡಬಹುದಾದ ಸಣ್ಣಪುಟ್ಟ ಘಟನೆಗಳೇ ನಡೆಯುತ್ತಿರುತ್ತವೆ. ಅವೇ ನಮ್ಮ ಬದುಕಿನ ಭಾಗಗಳಾಗಿರುತ್ತವೆ ಮತ್ತು ನಮ್ಮ ಬದುಕನ್ನು ರೂಪಿಸುತ್ತಿರುತ್ತವೆ. ಅವುಗಳ ನಡುವೆಯೇ ನಾವು ಬೆಳೆಯುತ್ತಿರುತ್ತೇವೆ. ನಮ್ಮ ವಿವೇಚನೆಯೂ ರೂಪುಗೊಳ್ಳುತ್ತಿರುತ್ತದೆ. ಹಾಗಿದ್ದಾಗ ಅಂತಹ ಸಣ್ಣಪುಟ್ಟ ಘಟನೆಗಳನ್ನೇ ಬಳಸಿಕೊಂಡು ಚಿತ್ರಕತೆಯನ್ನು ಏಕೆ ಕಟ್ಟಬಾರದು ಅನ್ನುವ ಪ್ರಶ್ನೆ ಅವರನ್ನು ಕಾಡತೊಡಗಿತು. ನಾಟಕೀಯವಾಗಿ ತೋರಬಹುದಾದ ’ಪ್ರಮುಖ’ ಘಟನೆಗಳನ್ನು ಬಿಟ್ಟು ಇಂತಹ ಅಮುಖ್ಯ ಘಟನೆಗಳು, ದಿನನಿತ್ಯದ ಬದುಕಿನ ತೀರಾ ಸಾಮಾನ್ಯವಾದ ಘಟನೆಗಳು ಅವರ ಚಿತ್ರದ ವಸ್ತುಗಳಾದವು. ನಾನು ಪ್ರತಿದಿನದ ಆಗುಹೋಗುಗಳಿಂದ ಸಣ್ಣ ಸಣ್ಣ ವಿಷಯಗಳನ್ನು ಹೆಕ್ಕಿಕೊಂಡು, ಅವುಗಳಿಗೆ ಒಂದು ರೂಪಕೊಟ್ಟು, ಅವುಗಳ ಮೂಲಕ ಒಂದು ಪರಿಕಲ್ಪನೆಯನ್ನು ಬೆಳೆಸಲು ಪ್ರಯತ್ನಿಸಿದೆ.
ಕ್ರಮೇಣ ಅವರ ಗಮನ ನಗರ ಜೀವನದ ಕಡೆಗೆ ತಿರುಗಿತ್ತು. ಎಲ್ಲಾ ಒತ್ತಡ, ಹತಾಶೆಗಳ ನಡುವೆಯೂ ಜನರಲ್ಲಿ ವ್ಯಕ್ತವಾಗುತ್ತಿದ್ದ ಬದುಕುಳಿಯುವ ಹಂಬಲ (ಇನ್ಸ್ಟಿಂಗ್ಟ್) ಅವರ ಆಸಕ್ತಿಯನ್ನು ಕೆರಳಿಸಿತು. ಅದರಲ್ಲೂ ಇಂತಹ ಇನ್ಸ್ಟಿಂಗ್ಟ್ ಅನ್ನು ಅವರು ಮಧ್ಯಮವರ್ಗದಲ್ಲಿ ಪ್ರಧಾನವಾಗಿ ಕಂಡರು. ಏಕ್ದಿನ್ ಪ್ರತಿದಿನ್ ಸಿನಿಮಾದ ವಸ್ತುವೇ ಇದಾಯಿತು. ಅದರಲ್ಲಿ ಒಂದು ಕುಟುಂಬದ ಇಡೀ ಜವಾಬ್ದಾರಿಯನ್ನು ಮನೆಯ ಹಿರಿಮಗಳು ನೋಡಿಕೊಳ್ಳುತ್ತಿರುತ್ತಾಳೆ. ಇಡೀ ಕುಟುಂಬ ಅವಳ ದುಡಿಮೆಯನ್ನು ಆಧರಿಸಿರುತ್ತದೆ. ಒಂದು ದಿನ ಕೆಲಸಕ್ಕೆ ಹೋದವಳು ಮತ್ತೆ ಬರುವುದಿಲ್ಲ. ಮನೆಯವರು ಕಾಯುತ್ತಾ ಪರಸ್ಪರ ದೋಷಾರೋಪಣೆ ಮಾಡಿಕೊಳ್ಳುತ್ತಾ ರಾತ್ರಿ ಕಳೆಯುತ್ತಾರೆ. ಎಲ್ಲರೂ ನೈತಿಕವಾಗಿ ಅದಕ್ಕೆ ಜವಾಬ್ದಾರರು. ಆದರೆ ಸಿನಿಮಾ ಹತಾಶೆಯಲ್ಲಿ ಮುಗಿಯುವುದಿಲ್ಲ. ಅಮ್ಮ ಮರುದಿನ ಒಲೆ ಹಚ್ಚುತ್ತಾಳೆ, ಮತ್ತೆ ಜೀವನ ಪ್ರಾರಂಭವಾಗುತ್ತದೆ. ಹತಾಶೆಯ ಆಂತರ್ಯದಲ್ಲೇ ನಮ್ಮಲ್ಲಿ ಮುಂದೆ ಸಾಗುವುದಕ್ಕೆ, ಬದುಕನ್ನು ಮುಂದುವರಿಸುವುದಕ್ಕೆ ಬೇಕಾದ ಶಕ್ತಿಯೂ ಇರುತ್ತದೆ. ಈ ಶಕ್ತಿಯಿಂದಾಗಿಯೇ ನಮಗೆ ಎಂತಹ ಬಿಕ್ಕಟ್ಟಿನ ನಡುವೆಯೂ ಬದುಕನ್ನು ಸಾಗಿಸುವುದಕ್ಕೆ ಸಾಧ್ಯವಾಗುವುದು.
ಹೀಗೆ ಒಳಗಿನೆಡೆಗಿನ ಪಯಣ ಮುಖ್ಯವಾದಂತೆಲ್ಲಾ ಅವರು ಶತ್ರುಗಳನ್ನು ಹೊರಗೆ ಹುಡುಕುವುದನ್ನು ಬಿಟ್ಟು, ತಮ್ಮೊಳಗೇ ಹುಡುಕಲುವ ಪ್ರಯತ್ನಿಸಿದರು. ನಮ್ಮನ್ನು ಸಂತರು ಅಂದುಕೊಂಡುಬಿಡುತ್ತೇವೆ. ನಮ್ಮ ಸುತ್ತ ಇರುವವರು ಕೂಡ ನಮ್ಮನ್ನು ಸಂತರನ್ನಾಗಿಸುತ್ತಿರುತ್ತಾರೆ. ಆ ಬಗ್ಗೆ ನಾವು ಎಚ್ಚರದಿಂದಿರಬೇಕು. ಸದಾ ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕು. ಏಕ್ ದಿನ ಅಚಾನಕ್ ಸಿನಿಮಾ ಒಂದರ್ಥದಲ್ಲಿ ಅವರ ಆತ್ಮಚರಿತ್ರೆ. ಸಿನಿಮಾದಲ್ಲಿ ಹೀರೋ ಒಂದು ಗಂಟೆಯೊಳಗೆ ಬರುತ್ತೇನೆ ಎಂದು ಹೇಳಿಹೋದವನು ಬರುವುದಿಲ್ಲ. ಅವನು ಕಣ್ಮರೆಯಾಗಿ ಒಂದು ವರ್ಷವಾಗಿರುತ್ತದೆ. ಸಿನಿಮಾ ಅಂತ್ಯವಾಗುತ್ತದೆ. ಆ ಒಂದು ವರ್ಷದ ಆವಧಿಯಲ್ಲಿ ಮಕ್ಕಳು ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಆ ಪ್ರಕ್ರಿಯೆಯಲ್ಲಿ ನರಳುತ್ತಾರೆ. ಆ ನರಳುವಿಕೆಯಲ್ಲೇ ಬೆಳೆಯುತ್ತಾರೆ. ಅಪ್ಪ ನಿಜವಾಗಿ ಏನು ಅನ್ನುವುದನ್ನು ಅರ್ಥಮಾಡಿಕೊಳ್ಳುತ್ತಾರೆ. ಆ ಪ್ರಕ್ರಿಯೆಯಲ್ಲಿ ಮೃಣಾಲ್ ಸೇನ್ ತಮನ್ನೂ ಪರೀಕ್ಷೆಗೆ ಒಡ್ಡಿಕೊಳ್ಳುತ್ತಾರೆ.
ಅವರ ಕರೀಜ್ ಸಿನಿಮಾ ಇನ್ನೊಂದು ಬಗೆಯಲ್ಲಿ ಇದೇ ಕೆಲಸ ಮಾಡುತ್ತದೆ. ಅದರಲ್ಲಿ ಮನೆಕೆಲಸದ ಹುಡುಗ ಸಾಯುತ್ತಾನೆ. ಬಡಹುಡುಗನ ತಂದೆಯನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಯುತ್ತದೆ. ಮಗನ ಸಾವಿನಿಂದ ಘಾಸಿಗೊಂಡ ಅಪ್ಪ ಶವಸಂಸ್ಕಾರ ಮಾಡಿ ಮಾಲಿಕನ ಮನಗೆ ಬರುತ್ತಾನೆ. ನೀವು ಘರ್ಷಣೆಯ ಹೊಸ್ತಿಲಲ್ಲಿ ಇರುತ್ತೀರಿ. ಆದರೆ ಘರ್ಷಣೆ ಆಗುವುದಿಲ್ಲ. ವಾಸ್ತವ ಜೀವನದಲ್ಲೂ ಆಗುವುದಿಲ್ಲ. ಬಹುಶಃ ಕ್ರಾಂತಿಕಾರಿ ಅಂತ್ಯ ಅಂದರೆ, ಅವನು ಮನೆ ಒಡೆಯನ ಕೆನ್ನೆಗೆ ಹೊಡೆಯಬೇಕಿತ್ತು. ಅಥವಾ ಆ ಥರದ್ದು ಏನೋ ಮಾಡಬೇಕಿತ್ತು. ಆದರೆ ಅಂತಹ ಯಾವುದೇ ಘಟನೆಯೂ ಜರಗುವುದಿಲ್ಲ. ನಮಸ್ಕರಿಸಿ ಬರುತ್ತಾನೆ. ಅವನು ಹೊಡೆಯದೇ ಬಿಟ್ಟ ಏಟು ನಮ್ಮನ್ನು, ನಿಮ್ಮನು, ಮನೆಯ ಒಡೆಯನನ್ನು ಬಡಿಯುತ್ತದೆ.
ಹೀಗೆ ಸೇನ್ ಸಿನಿಮಾದಿಂದ ಸಿನಿಮಾಕ್ಕೆ, ದಿನದಿಂದ ದಿನಕ್ಕೆ ಬದಲಾಗುತ್ತಾ, ಬೆಳೆಯುತ್ತಾ ಸಾಗಿದರು. ಪ್ರತಿ ಸಿನಿಮಾ ಆದ ಮೇಲು ಇದೊಂದು ರಿಹರ್ಸಲ್ ಅಗಿದ್ದರೆ ಚೆನ್ನಾಗಿತ್ತು. ಎಷ್ಟೊಂದು ತಪ್ಪುಗಳಿವೆ ಸರಿಪಡಿಸಿಕೊಳ್ಳಬಹುದಿತ್ತು, ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನ್ನಿಸುತ್ತಿಂತೆ. ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುತ್ತಾ ನಮ್ಮಂತಹವರನ್ನು ಸದಾ ಪ್ರಶ್ನಿಸಿಕೊಳ್ಳುವುದಕ್ಕೆ ತಮ್ಮ ನಡೆಗಳ ಮೂಲಕ ಒತ್ತಾಯಿಸುತ್ತಾ ಹೋದರು. ಈ ಕಾರಣಕ್ಕೆ ಮೃಣಾಲ್ ಸೇನ್ ಅಂತಹವರು ನಮಗೆ ತುಂಬಾ ಮುಖ್ಯರಾಗುತ್ತಾರೆ.