ಲಾಂಗ್‌ ಹಿಡಿದುಕೊಂಡು ಬಂದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ ವಿದ್ಯಾರ್ಥಿ!

ನಾಗಮಂಗಲ: ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ ತನಗೆ ಪಾಠ ಹೇಳುತ್ತಿದ್ದ ಉಪನ್ಯಾಸಕರಿಗೆ ಲಾಂಗ್‌ ತೋರಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆ, ಕುಣಿಗಲ್‌ ತಾಲೂಕಿನ ಯಡಿಯೂರು ಹೋಬಳಿಯ ಅವರೇಗೆರೆ ಗ್ರಾಮದ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಯೇ ಕಾಲೇಜಿನ ಉಪನ್ಯಾಸಕ ಚಂದನ್‌ ಅವರಿಗೆ ಲಾಂಗ್‌ ತೋರಿಸಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರಿಗೆ ಬೆದರಿಕೆ ಕರೆ

ವಿದ್ಯಾರ್ಥಿ ತರಗತಿಗೆ ಸರಿಯಾಗಿ ಬರುತ್ತಿಲ್ಲ, ಜೊತೆಗೆ ಆತನ ವರ್ತನೆಯೂ ಸರಿಯಿಲ್ಲ, ಪಾಠವನ್ನು ಸಹ ಸಮರ್ಪಕವಾಗಿ ಕಲಿಯುತ್ತಿಲ್ಲ. ಆದ್ದರಿಂದ ತಂದೆ ತಾಯಿಗಳಾದ ತಾವು ಆತನಿಗೆ ಬುದ್ಧಿ ಮಾತು ಹೇಳಿ, ಒಳ್ಳೆಯದನ್ನು ಕಲಿಯಲು ತಿಳಿಸಿ ಎಂದು ಪೋಷಕರಿಗೆ ಉಪನ್ಯಾಸಕ ಚಂದನ್‌ ದೂರು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಮರು ದಿನ ಬೈಕ್‌ನಲ್ಲಿ ಉಪನ್ಯಾಸಕರಿದ್ದ ಕೊಠಡಿಗೆ ಮಾಸ್ಕ್‌ ಧರಿಸಿಕೊಂಡು ಆಗಮಿಸಿ ಲಾಂಗ್‌ ಹಿಡಿದು ನನ್ನ ವಿಚಾರಕ್ಕೆ ಬಂದರೇ ತಕ್ಕ ಪಾಠ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ವಿದ್ಯಾರ್ಥಿಯ ವರ್ತನೆಯಿಂದ ಕಾಲೇಜಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ವೇಳೆ ಕೊಂಚ ವಿಚಲಿತರಾದ ಉಪನ್ಯಾಸಕರು ಘಟನೆಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಹ ಉಪನ್ಯಾಸಕರು ಸ್ಥಳೀಯ ಪೊಲೀಸರಿಗೆ ದೂರವಾಣಿ ಕರೆ ಮಾಡುವ ಮೂಲಕ ವಿಚಾರ ತಿಳಿಸಿದರು, ತಕ್ಷಣವೇ ಕಾಲೇಜಿಗೆ ಆಗಮಿಸಿದ ಪೊಲೀಸರು ಆತನ ಕೈಯಲ್ಲಿದ್ದ ಲಾಂಗ್‌ ಮತ್ತು ಆತನ ಬೈಕ್‌ನ್ನು, ಆತನನ್ನೂ ವಶಕ್ಕೆ ಪಡೆದು ಅವರ ತಂದೆ ತಾಯಿಗಳಿಗೆ ವಿಚಾರ ಮುಟ್ಟಿಸಿದರು.

ಈ ಸಂಬಂಧ ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅಧಿಕಾರಿಗಳು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *