ತುಮಕೂರು: ಸೆಪ್ಟೆಂಬರ್-1 ರಿಂದ 3ರವರೆಗೆ ತುಮಕೂರು ನಗರದಲ್ಲಿ 8ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನ ಆಯೋಜಿಸಲಾಗಿದೆ ಎಂದು AIDSO ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
“ಶಿಕ್ಷಣವೆಂದರೆ ಅಗಾಧ ಪ್ರಮಾಣದ ಮಾಹಿತಿಯನ್ನು ಮೆದುಳೊಳಗೆ ತುಂಬಿಕೊಂಡು, ಜೀವನವಿಡೀ ಜೀರ್ಣವೇ ಆಗದಂತೆ ಅಲ್ಲಿಯೇ ಕೊಳೆಸುವಂತಹದ್ದಲ್ಲ. ನಮಗೆ ಜೀವನವನ್ನು ಕಟ್ಟಿಕೊಳ್ಳುವ, ಮನುಷ್ಯರನ್ನಾಗಿಸುವ ಮೌಲ್ಯಗಳನ್ನು ಬೆಳೆಸುವ – ಈ ಎಲ್ಲ ವಿಚಾರಗಳನ್ನು ಸಮೀಕರಿಸುವಂತಹ ಶಿಕ್ಷಣ ಬೇಕು. ಶಿಕ್ಷವು ಕೇವಲ ಮಾಹಿತಿ ಎಂದಾಗಿಬಿಟ್ಟರೆ, ಗಂಥಾಲಯಗಳೇ ಪ್ರಪಂಚದ ಮಹಾನ್ ಸಂತರುಗಳಾಗಿ ಮತ್ತು ವಿಶ್ವಕೋಶವೇ ಋಷಿಗಳಾಗಿರುತ್ತಿದ್ದವು. ” ಶಿಕ್ಷಣದ ಗುರಿ ಮತ್ತು ಮಹತ್ವದ ಕುರಿತು ವಿವೇಕಾನಂದರು ಈ ರೀತಿ ಹೇಳುತ್ತಾರೆ. ಅಂತೆಯೇ, ನಮ್ಮ ದೇಶದ ನವೋದಯ ಚಿಂತಕರಾದ ಈಶ್ವರಚಂದ್ರ ವಿದ್ಯಾಸಾಗರ್, ರಾಜಾರಾಮ್ ಮೋಹನ್ ರಾಯ್, ಜ್ಯೋತಿರಾವ್ ಫುಲೆ ಸಾವಿತ್ರಿಬಾಯಿ ಫುಲೆ ಇವರು ವೈಜ್ಞಾನಿಕ, ಪ್ರಜಾತಾಂತ್ರಿಕ ಹಾಗೂ ಧರ್ಮನಿರಪೇಕ್ಷ ಶಿಕ್ಷಣ ನಮ್ಮದಾಗಬೇಕು ಎಂಬ ಮಹತ್ತರ ಆಶಯಗಳನ್ನು ಹೊಂದಿದ್ದರು. ಅಪ್ರತಿಮ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಈ ಮೇಲಿನ ಆಶಯಗಳನ್ನು ಎತ್ತಿ ಹಿಡಿಯುತ್ತಾ, ಮುಂದುವರೆದು ಶಿಕ್ಷಣಕ್ಕೆ ಹಣ ಒದಗಿಸುವ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು ಎಂದು ಹೇಳಿದ್ದರು. ಒಟ್ಟಾರೆಯಾಗಿ ಶಿಕ್ಷಣವು ಹುಟ್ಟುವ ಪ್ರತಿಯೊಂದು ಮಗುವಿನ ಹಕ್ಕು ಎನ್ನುವುದು ಕೇವಲ ಮಾತಾಗಿ ಉಳಿಯದೆ, ಕ್ರಿಯೆಯಲ್ಲಿ ಅದನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದ್ದರು ಎಂದು ಹೇಳಿದರು.
ಇದನ್ನೂ ಓದಿ:ವಸತಿ ನಿಲಯಗಳ ಹೆಚ್ಚಳ, ವಿದ್ಯಾರ್ಥಿ ವೇತನ-ಫಲಿತಾಂಶ ಬಿಡುಗಡೆಗಾಗಿ ಎಐಡಿಎಸ್ಒ ಪ್ರತಿಭಟನೆ
ಆದರೆ, ಪ್ರಸ್ತುತ ಶಿಕ್ಷಣವು ಈ ಎಲ್ಲ ಆಶಯಗಳಿಂದ ಕ್ರಮೇಣ ದೂರವಾಗುತ್ತಿದೆ ಎನ್ನುವುದನ್ನು ನಾವೆಲ್ಲರೂ ಬಹಳ ನೋವಿನಿಂದ ಗಮನಿಸುತ್ತಿದ್ದೇವೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ಶೈಕ್ಷಣಿಕ ವಲಯವನ್ನು ಅಭಿವೃದ್ಧಿಗೊಳಿಸಿ, ಕಡೆಯ ಮಗುವಿಗೂ ಶಿಕ್ಷಣ ದಕ್ಕುವಂತೆ ಮಾಡುವುದು ಅವರ ಆದ್ಯತೆಯಾಗಿ ಉಳಿದಿಲ್ಲ. ಬದಲಿಗೆ, ಸರ್ಕಾರವು ತನ್ನ ಶೈಕ್ಷಣಿಕ ನೀತಿ-ನಿಲುವುಗಳ ಮೂಲಕ ಶಿಕ್ಷಣವನ್ನು ಮತ್ತಷ್ಟು ಖಾಸಗೀಕರಣಗೊಳಿಸುತ್ತಿದೆ. ಒಂದೆಡೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಂಪೂರ್ಣ ನಿರ್ವಹಣೆ -ಅಂದರೆ, ಹಣ ಒದಗಿಸುವ, ಮೂಲಭೂತ ಸೌಕರ್ಯಗಳನ್ನು ನೀಡುವ, ಅಗತ್ಯ ಸಂಖ್ಯೆಯ ಶಿಕ್ಷಕರನ್ನು ನೇಮಿಸುವ ತನ್ನ ಮುಖ್ಯ ಕರ್ತವ್ಯಗಳಿಂದ ಸರ್ಕಾರವು ತಪ್ಪಿಸಿಕೊಳ್ಳುತ್ತ, ಮತ್ತೊಂದೆಡೆ ಎನ್ಈಪಿ -2020, ಸ್ವಯಂ ಹಣಕಾಸು ಸಂಸ್ಥೆಗಳು(ಕಾಲೇಜು ನಡೆಸಲು ವಿದ್ಯಾರ್ಥಿಗಳಿಂದಲೇ ಪೂರ್ತಿ ಹಣ ಪಡೆಯುವುದು), ಸರ್ಕಾರಿ ಶಾಲೆಗಳ ವಿಲೀನ (ಕಡಿಮೆ ಹಾಜರಾತಿ ಇರುವ ಶಾಲೆಗಳನ್ನು ಮುಚ್ಚುವುದು), ನಾಲ್ಕು ವರ್ಷಗಳ ಪದವಿ ಕೋರ್ಸ್ ಮುಂತಾದ ಹತ್ತು ಹಲವು ನೀತಿಗಳ ಮೂಲಕ ಸರ್ಕಾರವು ಶಿಕ್ಷಣವನ್ನು ಖಾಸಗಿ ಮಡಿಲಿಗೆ ಹಾಕಿ, ಲಕ್ಷಾಂತರ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ತಳ್ಳುತ್ತಿದೆ ಎಂದರು.
ಶಿಕ್ಷಣ ಮತ್ತು ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಎಐಡಿಎಸ್ಓ ಸಂಘಟನೆಯು ಕರ್ನಾಟಕ ರಾಜ್ಯದಲ್ಲಿ ಕಳೆದ 5 ದಶಕಗಳಿಂದಲೂ ಚಳುವಳಿಗಳನ್ನು ಬೆಳೆಸುತ್ತಾ ಬಂದಿದೆ. ಶುಲ್ಕ ಏರಿಕೆ ವಿರೋಧಿ ಚಳುವಳಿ, ಹಾಸ್ಟೆಲ್ ಚಳುವಳಿಗಳು, ಸರ್ಕಾರಿ ಶಾಲೆ ಉಳಿಸಲು ಹೋರಾಟ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿಸಿ ಹೋರಾಟ, ಉಚಿತ ಬಸ್ ಪಾಸ್ ಗಾಗಿ ಹೋರಾಟ.. ಇನ್ನಿತರ ಹತ್ತಾರು ಚಳುವಳಿಗಳನ್ನು ಎಐಡಿಎಸ್ಓ ಮುನ್ನಡೆಸಿದೆ. ಕಳೆದ ವರ್ಷ ‘ಸಾರ್ವಜನಿಕ ಶಿಕ್ಷಣ ಉಳಿಸಿ’ ಬೃಹತ್ ಆಂದೋಲನವನ್ನು ನೀವೆಲ್ಲರೂ ಗಮನಿಸಿದ್ದೀರಿ. ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ 35 ಲಕ್ಷಕ್ಕೂ ಅಧಿಕ ಸಹಿಗಳನ್ನು ಸಂಗ್ರಹ ಮಾಡಿದ್ದೆವು. ರಾಜ್ಯದಲ್ಲಿ ಈ ಆಂದೋಲನವು ದೊಡ್ಡ ಪ್ರಭಾವ ಬೀರಿದ್ದು, ನೂರಾರು ಶಿಕ್ಷಕರು, ಪ್ರಾಂಶುಪಾಲರು, ಪೋಷಕರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು ಎಂದರು.
ಈಗ ನಮ್ಮ ಮುಂದಿರುವ ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನವು ಈ ಚಳುವಳಿಗಳನ್ನು ಮತ್ತಷ್ಟು ಬಲಗೊಳಿಸುವ ಗುರಿಯನ್ನು ಹೊಂದಿದೆ. ನವೋದಯ ಚಿಂತಕರ ಹಾಗೂ ಕ್ರಾಂತಿಕಾರಿಗಳ ಆಶಯವನ್ನು ನಾವು ಪೂರ್ಣಗೊಳಿಸಬೇಕು. ಈ ವಿದ್ಯಾರ್ಥಿ ಸಮ್ಮೇಳನದ ಮೂಲಕ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ಪ್ರಬಲ ಸಂಘಟಿತ ಹೋರಾಟಗಳನ್ನು ಬೆಳೆಸುವ ಸಂಕಲ್ಪವನ್ನು ನಾವು ತೊಡಬೇಕು, ಎಲ್ಲಿಯವರೆಗೂ ಶಿಕ್ಷಣವು ಸರ್ಕಾರಗಳ ಆದ್ಯತೆ ಆಗುವದಿಲ್ಲವೋ, ಅಲ್ಲಿಯವರೆಗೂ ನಮ್ಮ ಮೂಲಭೂತ ಹಕ್ಕುಗಳನ್ನು ಹೋರಾಟದ ಮೂಲಕವೇ ನಾವು ಗೆದ್ದುಕೊಳ್ಳಬೇಕು ಎಂದು ಎಐಡಿಎಸ್ಓ ನಂಬುತ್ತದೆ. ಸೆಪ್ಟೆಂಬರ್- 1 ರಿಂದ ಮತ್ತು 3 ರವರೆಗೆ ತುಮಕೂರಿನಲ್ಲಿ ಸಂಘಟಿಸಿರುವ ರಾಜ್ಯಮಟ್ಟದ ವಿದ್ಯಾರ್ಥಿ ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲಿದೆ. ಈ ಜವಾಬ್ದಾರಿಯನ್ನು ರಾಜ್ಯದ ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಮತ್ತು ದೃಢ ನಿಶ್ಚಯದೊಂದಿಗೆ ನಿಭಾಯಿಸಿ, ರಾಜ್ಯದಲ್ಲಿ ವಿದ್ಯಾರ್ಥಿ ಚಳುವಳಿಯನ್ನು ಮುನ್ನಡೆಸುವರು ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಸಮ್ಮೇಳನದ ಬೇಡಿಕೆಗಳು:
- ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಒದಗಿಸಿ!! 2.ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಿ!
- ಪಠ್ಯಕ್ರಮದ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮನಿರಪೇಕ್ಷ ವಾತಾವರಣವನ್ನು ರಕ್ಷಿಸಿ!
- ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಖಾತ್ರಿಪಡಿಸಿ
- ಎನ್ಈಪಿ-2 2020ರ ಅಪ್ರಜಾತಾಂತ್ರಿಕ ಹೇರಿಕೆಯನ್ನು ಕೈಬಿಡಿ.
- ಸ್ವಯಂ ಹಣಕಾಸು ಸಂಸ್ಥೆಗಳನ್ನು ನಿಲ್ಲಿಸಿ, ತಾರತಮ್ಯವಿಲ್ಲದೆ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಿರಿ!
- ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಿ
- ಅತಿಥಿ ಶಿಕ್ಷಕರ ಹಕ್ಕುಗಳನ್ನು ರಕ್ಷಿಸಿ!!!