ವಿಶ್ವಜಾನಪದ ದಿನಾಚರಣೆ ; ಯಾಕೆ ಮತ್ತು ಹೇಗೆ ಆಚರಿಸಬೇಕು?

ಡಾ. ಅರುಣ್ ಜೋಳದಕೂಡ್ಲಿಗಿ 

ಇದೇ ಜನರ ಮಾಧ್ಯಮವಾದ ಜನಪದದಲ್ಲಿ ಆಳುವ ವರ್ಗಗಳು, ಪ್ರಬಲ ಜಾತಿಗಳು, ಪ್ರಭಾವಿ ಶಕ್ತಿಗಳು ತಮಗೆ ಬೇಕಾದ ಒಪ್ಪಿಗೆಯನ್ನು ಪಡೆಯಲು ಸುಳ್ಳುಕಥನ, ಪುರಾಣ, ವಿಧಿನಿಷೇಧಗಳನ್ನು ಬೆರೆಸಲಾಯಿತು. ಹಾಗಾಗಿ ನಮಗೆ ಲಭ್ಯವಿರುವ ಜಾನಪದ ಆಕರಗಳು ಜನರ ನಿಸರ್ಗಸತ್ಯ ಮತ್ತು ಆಳುವ ವರ್ಗಗಳು ಈ ಜನಪದ ಮಾಧ್ಯಮದಲ್ಲಿ ತುರುಕಿದ ಸುಳ್ಳುಗಳ ಮಿಶ್ರಣವಾಗಿದ್ದು ಒಂದರೊಳಗೊಂದು ಬೆರೆತಿವೆ. ಹಾಗಾಗಿಯೇ ಜನಪದವೆಂದರೆ, ಬಹುಪಾಲು ಯಥಾಸ್ಥಿತಿಯನ್ನು ಮುಂದುವರಿಸುವ ಪ್ರಭಾವಿ ವಾಹಕವಾಗಿದೆ.

**********

ಆಗಸ್ಟ್ 22, ಜಗತ್ತಿನ ಜನಪದ ಸಮುದಾಯಗಳಿಗೂ ವಿದ್ವಾಂಸರಿಗೂ ಒಂದು ಅವಿಸ್ಮರಣೀಯ ದಿನ. ಕಾರಣ, ವಿಲಿಯಂ ಜಾನ್ ಥಾಮ್ಸ್ ಎಂಬ ಬ್ರಿಟಿಷ್ ಪ್ರಾಚೀನ ಅನ್ವೇಷಕ ಅಂಬೋಸ್ ಮೆರ್ತಾನ್ ಎನ್ನುವ ಗುಪ್ತನಾಮದಲ್ಲಿ 1846ರ ಆಗಸ್ಟ್ 12ರಂದು `ದಿ ಅಥೇ ನಿಯಂ’ ಎನ್ನುವ ಪತ್ರಿಕೆಗೆ ಒಂದು ಪತ್ರ ಬರೆಯುತ್ತಾನೆ. ಈ ಪತ್ರ ಅದೇ ತಿಂಗಳ 22ರಂದು ಪ್ರಕಟವಾಗುತ್ತದೆ. ಪತ್ರದಲ್ಲಿ ‘ದಾಸ್ ವೋಕ್’ ಮತ್ತು ‘ಜನಪ್ರಿಯ ಪಳೆಯುಳಿಕೆ’ ಎಂದು ಕರೆಯುತ್ತಿದ್ದ ಜನರ ಪರಂಪರೆಯ ಸಂಗತಿಗಳ ಅಧ್ಯಯನಕ್ಕೆ ‘ಫೋಕ್‌ಲೋರ್’ ಎಂದು ಕರೆಯಬಹುದೆಂದು ಸೂಚಿಸಿದ. ‘ಫೋಕ್’ ಎಂದರೆ ಜನ, ‘ಲೋರ್’ ಎಂದರೆ ಆ ಜನರ ಜ್ಞಾನ ಅಥವಾ ತಿಳಿವಳಿಕೆ ಎಂದು ವಿವರಿಸುತ್ತಾನೆ. ಆಗ ಮೊದಲ ಬಾರಿಗೆ ‘FOLKLORE’ ಎನ್ನುವ ಪದವು ಮುದ್ರಿತ ರೂಪದಲ್ಲಿ ಅಕಡೆಮಿಕ್ ವಲಯದ ಬಳಕೆಗೆ ಬರುತ್ತದೆ. ಈ ಚಾರಿತ್ರಿಕ ದಿನದ ನೆನಪಿಗಾಗಿ ಆ ದಿನವನ್ನು ವಿಶ್ವ ಜಾನಪದ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಇಂದಿಗೆ ‘ಫೋಕ್‌ಲೋರ್’ ಪದವು ಬಳಕೆಗೆ ಬಂದು 177 ವರ್ಷಗಳಾದವು.

ಹಾಗಾದರೆ ಜಾನಪದಕ್ಕೊಂದು ದಿನ ಬೇಕೇ ಎನ್ನುವ ಪ್ರಶ್ನೆ ಮೂಡುತ್ತದೆ. ಜಾನಪದ ಎಂದರೆ ಎಲ್ಲೋ ಹೊರಗಿರುವ ಜನಪದ ಕತೆ, ಗೀತೆ, ಕಲಾ ಪ್ರಕಾರಗಳು ಮಾತ್ರವಲ್ಲ, ಕ್ಷಣ ಕ್ಷಣವೂ ಲೋಕವನ್ನು ನೋಡುವ ನೋಟಕ್ರಮವನ್ನು ನಿರ್ದೇಶಿಸುತ್ತಲೇ ಬಹುಸಂಖ್ಯಾತ ಜನರಲ್ಲಿ ಅಡಗಿ ಕೂತ ಪರಂಪರೆಯ ಬೇರುಗಳ ಮೊತ್ತ ಎಂದು ಕರೆಯಬಹುದು. ಹಾಗಾಗಿ ಸಾಂಕೇತಿಕವಾಗಿ ಜಾನಪದಕ್ಕೆ ಒಂದು ದಿನ ಇರಬಹುದು. ಆದರೆ ಜಾನಪದದ ಬೇರುಗಳು ಕ್ಷಣಕ್ಷಣವೂ ಬಹುಜನರಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುತ್ತವೆ. ಹಾಗಿದ್ದೂ ವಿಶ್ವ ಜಾನಪದ ಎಂದು ನೋಡುವಾಗ, ಅಧಿಕಾರ ರಹಿತ ಸಾಮಾನ್ಯ ತಳವರ್ಗದ ಬಹುಸಂಖ್ಯಾತ ಜನರ ಅಭಿವ್ಯಕ್ತಿ ಮಾಧ್ಯಮ ಎಂದು ಗುರುತಿಸಬಹುದು.

ಕಣ್ಣಿಗೆ ಕಾಣುವ, ಸ್ಪರ್ಶಕ್ಕೆ ಸಿಗುವ ಕೇಳಿಸಿಕೊಳ್ಳಲು ಸಾಧ್ಯವಾಗುವ, ದಿನದ ಬದುಕಿಗೆ ನೆರವಾಗುವ ವಿದ್ಯಮಾನಗಳನ್ನು ಆಧಿಮ ಜನರು ಕೃತಜ್ಞತೆಯಿಂದ ಆರಾಧಿಸತೊಡಗಿದರು. ಅಂತೆಯೇ ಯಾವುದು ತಿಳಿವಿಗೆ ನಿಲುಕುವುದಿಲ್ಲವೋ ಯಾವುದು ನಿಗೂಢವೋ ಅಂಥವುಗಳ ಬಗೆಗೆ ಭಯಮಿಶ್ರಿತ ಅತಿಮಾನುಷ ಕಥನಗಳನ್ನು ಕಟ್ಟಿಕೊಂಡರು. ನಿಸರ್ಗಾರಾಧನೆ ರೂಪುಗೊಂಡದ್ದು ಹೀಗೆ. ಈ ಎಲ್ಲದರ ಒಳಗೂ ಇರುವ ಸಾಮಾನ್ಯ ಎಳೆ ಎಂದರೆ ನಿಸರ್ಗ ಸತ್ಯವನ್ನು ಕತೆ, ಗೀತೆ, ಗಾದೆ, ಒಗಟು, ಕಲೆ ಮುಂತಾಗಿ ಕಟ್ಟಿಕೊಂಡದ್ದು.

ಇದನ್ನೂ ಓದಿ:ಜೀವನದ ಸಂಕೀರ್ಣತೆಗಳಿಗೆ ರಾಗ-ರಂಗಸ್ಪರ್ಶ ಸುಶ್ರಾವ್ಯ ಗೀತೆಗಳ ನಡುವೆಯೇ ಬದುಕಿನ ಜಟಿಲ ಸಿಕ್ಕುಗಳನ್ನು ಕಾಣುವ ಒಂದು ಅಪೂರ್ವ ಪ್ರಯತ್ನ

ಇದೇ ಜನರ ಮಾಧ್ಯಮವಾದ ಜನಪದದಲ್ಲಿ ಆಳುವ ವರ್ಗಗಳು, ಪ್ರಬಲ ಜಾತಿಗಳು, ಪ್ರಭಾವಿ ಶಕ್ತಿಗಳು ತಮಗೆ ಬೇಕಾದ ಒಪ್ಪಿಗೆಯನ್ನು ಪಡೆಯಲು ಸುಳ್ಳುಕಥನ, ಪುರಾಣ, ವಿಧಿನಿಷೇಧಗಳನ್ನು ಬೆರೆಸಲಾಯಿತು. ಹಾಗಾಗಿ ನಮಗೆ ಲಭ್ಯವಿರುವ ಜಾನಪದ ಆಕರಗಳು ಜನರ ನಿಸರ್ಗಸತ್ಯ ಮತ್ತು ಆಳುವ ವರ್ಗಗಳು ಈ ಜನಪದ ಮಾಧ್ಯಮದಲ್ಲಿ ತುರುಕಿದ ಸುಳ್ಳುಗಳ ಮಿಶ್ರಣವಾಗಿದ್ದು ಒಂದರೊಳಗೊಂದು ಬೆರೆತಿವೆ. ಹಾಗಾಗಿಯೇ ಜನಪದವೆಂದರೆ, ಬಹುಪಾಲು ಯಥಾಸ್ಥಿತಿಯನ್ನು ಮುಂದುವರಿಸುವ ಪ್ರಭಾವಿ ವಾಹಕವಾಗಿದೆ.

ಅಂತೆಯೇ ಜಾತಿ, ಲಿಂಗ, ವರ್ಗ, ವರ್ಣಭೇದಗಳು ವಾರ್ಷಿಕವಾಗಿ ಜಾತ್ರೆ, ತೇರು, ಫೆಸ್ಟಿವಲ್‌ಗಳ ಹೆಸರಲ್ಲಿ ಪುನರ್ ನವೀಕರಣಗೊಳ್ಳುತ್ತವೆ. ಆದರೆ ಬಹುಪಾಲು ಸಂಸ್ಕೃತಿ ಚಿಂತಕರು, ಅಧ್ಯಯನಕಾರರು, ವಿಶ್ಲೇಷಕರು ಈ ಕಲಬೆರಕೆ ಆಕರಗಳನ್ನು ಸ್ವತಃ ಜನರೇ ಕಟ್ಟಿದ್ದಾರೆ ಎಂದು ಮೈದುಂಬಿ ವರ್ಣಿಸಿರುವುದು ಹೆಚ್ಚು. ಕುವೆಂಪು ಹೇಳುವಂತೆ, ಜನಪದ ಆಕರಗಳನ್ನು ಸೋಸಿ ಕಸ, ಕಡ್ಡಿ, ಕಲ್ಲು ಮಣ್ಣನ್ನು ಬೇರ್ಪಡಿಸಬೇಕಿದೆ. ಇಂತಹ ತಿಳಿವಳಿಕೆಯ ವಿಸ್ತರಣೆಗಾಗಿ ವಿಶ್ವ ಜಾನಪದ ದಿನದ ಅಗತ್ಯವಿದೆ. 

ಬ್ರೆಜಿಲ್ ಸರ್ಕಾರವು ಆಗಸ್ಟ್ 22 ಅನ್ನು ‘ಫೋಕ್‌ಲೋರ್ ಡೇ’ ಎಂದು 1965ರ ಆಗಸ್ಟ್ 17ರಂದು ಅಧಿಕೃತವಾಗಿ ಘೋಷಿಸಿತು. ಅಲ್ಲಿ ಪ್ರತಿವರ್ಷ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಾನಪದ ಅಧ್ಯಯನಕ್ಕೆ ಹೊಸ ಆಯಾಮ‌ ನೀಡಿದ ಅಮೆರಿಕಾ, ಫಿನ್ಲೆಂಡ್ ಮೊದಲಾದ ದೇಶಗಳು ಈ ಆಚರಣೆ ಮಾಡುವುದಿಲ್ಲ. ಕಾರಣ ಈ ಪದದ ಜನಕ ಬ್ರಿಟನ್ನಿನ ವಿದ್ವಾಂಸ ಆಗಿರುವ ಕಾರಣವಿರಬಹುದು.

ಆದರೆ ಭಾರತದಲ್ಲಿಯೂ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಕರ್ನಾಟಕ ಒಳಗೊಂಡಂತೆ ಕೆಲವು ರಾಜ್ಯಗಳು 2015ರ ನಂತರ ವಿಶ್ವ ಜಾನಪದ ದಿನವನ್ನು ಆಚರಿಸುತ್ತಿವೆ. ಆದರೆ ಈತನಕ ವಿಶ್ವಸಂಸ್ಥೆಯಾಗಲೀ, ಅದರ ಅಂಗಸಂಸ್ಥೆ ಯುನೆಸ್ಕೋ ಆಗಲೀ ವಿಶ್ವ ಜಾನಪದ ದಿನಕ್ಕೆ ಮಾನ್ಯತೆ ನೀಡಿಲ್ಲ. ಇದೀಗ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಇಂತಹದ್ದೊಂದು ಸುವರ್ಣಾವಕಾಶ ಇದೆ. ವಿಶ್ವ ಜಾನಪದ ದಿನದ ಅಧಿಕೃತ ಆಚರಣೆಗಾಗಿ ವಿಶ್ವ ವಿದ್ಯಾಲಯವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೂಲಕ ಯುನೆಸ್ಕೊ ಮತ್ತು ವಿಶ್ವಸಂಸ್ಥೆಗೆ ‘ವಿಶ್ವ ಜಾನಪದ ದಿನ’ವನ್ನು ಅಧಿಕೃತವಾಗಿ ಘೋಷಿಸಲು ವಿಶ್ವಜನರ ಪರವಾಗಿ ಹಕ್ಕೊತ್ತಾಯ ಮಂಡಿಸಬಹುದಾಗಿದೆ.

Donate Janashakthi Media

Leave a Reply

Your email address will not be published. Required fields are marked *