ಬೆಂಗಳೂರು: ಸೌಜನ್ಯ ಪ್ರಕರಣದ ಕುರಿತು ಹೇಳಿಕೆ ನೀಡಿರುವ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಡೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.
ಸೌಜನ್ಯ ಎಂಬ ಮಗುವಿನ ಮೇಲಾದ ಬರ್ಬರಿಕ ಅತ್ಯಾಚಾರ ಮತ್ತು ಕೊಲೆ ಕುರಿತು ಘನವೆತ್ತ ಗೃಹ ಮಂತ್ರಿಗಳು ಇದು ಮುಗಿದ ಅಧ್ಯಾಯ ಎಂದು ಹೇಳಿರುವುದು ಅತ್ಯಂತ ವಿಷಾದನೀಯ.ಖಂಡನಾರ್ಹವು ಹೌದು.ತನಿಖೆಯಲ್ಲಾದ ದೋಷಗಳು, ಬಲಾಢ್ಯರನ್ನು ರಕ್ಷಿಸಲೆಂದೆ ನಡೆದ ಕಾನೂನಾತ್ಮಕ ಚಟುವಟಿಕೆಗಳು ಇಂದು ಸೌಜನ್ಯಳಂಥ ಅಸಂಖ್ಯ ಮಹಿಳೆಯರಿಗೆ ಯಾವುದೇ ಹಂತದಲ್ಲಿಯೂ ರಕ್ಷಣೆ ಇಲ್ಲ ಎಂಬುದನ್ನು ಸಾಕ್ಷೀಕರಿಸುತ್ತಿವೆ. ಮುಗಿದದ್ದು ತನಿಖೆ ಎಂಬ ನಾಟಕವೇ ಹೊರತು ,ನ್ಯಾಯ ನೀಡುವ ಪ್ರಕ್ರಿಯೆ ಅಲ್ಲ ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸೌಜನ್ಯ ಪ್ರಕರಣ;ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ವ್ಯಾಪಕ ಆಕ್ರೋಶ..!
ಸೌಜನ್ಯಳ ಘಟನೆಯಲ್ಲಿ ಯಾರು ಅಪರಾಧಿ ಅಲ್ಲ ಎಂದು ಹೇಳುವುದಷ್ಟೇ ತನಿಖಾ ಸಂಸ್ಥೆಯ ಕೆಲಸವೇ? ಯಾರು ಅಪರಾಧಿ ಎಂದು ಪತ್ತೆ ಹಚ್ಚಬೇಕಲ್ಲವೆ? ಇಂಥದೊಂದು ಜವಾಬ್ದಾರಿ ಸರಕಾರದು ಅಲ್ಲವೆ? ಹಾಗಾದರೆ ಅತ್ಯಾಚಾರದ ಪ್ರಕರಣಗಳು ನಡೆದಾಗಲೆಲ್ಲ ಯಾರನ್ನೊ ತಂದು ಬಲಿಪಶು ಮಾಡಿ ನಂತರ ಆತ ನಿರಪರಾಧಿ ಎಂದು ಕೈ ತೊಳೆದುಕೊಂಡು ಬಿಟ್ಟರೆ ಸಾಕೇ? ಹಾಗಾದರೆ ಅತ್ಯಾಚಾರಗಳಿಗೆ ಕೊನೆ ಎಲ್ಲಿ? ಗೃಹಸಚಿವರ ಹೇಳಿಕೆ ಅತ್ಯಂತ ಬೇಜಬ್ದಾರಿಯಿಂದ ಕೂಡಿದೆ. ನಿಜವಾದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಬೇಕಾದ ಸರಕಾರ ಸೋಲೊಪ್ಪಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಅಷ್ಟೇ ಅಲ್ಲ ಯಾರನ್ನೊ ರಕ್ಷಿಸುವ ಒತ್ತಾಯಕ್ಕೆ ಒಳಗಾಗಿದೆ ಎನಿಸುತ್ತಿದೆ ಎಂದರು.
ಸೌಜನ್ಯಳಿಗೆ ನ್ಯಾಯ ಸಿಗುವವರೆಗೂ ಈ ಅಧ್ಯಾಯ ಮುಗಿಯಲಾರದು ಎಂಬ ಎಚ್ಚರಿಕೆಯನ್ನು ಜನವಾದಿ ಮಹಿಳಾ ಸಂಘಟನೆ ಇತರ ಹತ್ತಾರು ಜೀವಪರ ಸಂಸ್ಥೆಗಳೊಂದಿಗೆ ಸೇರಿ ನೀಡಲೆಂದೆ ದಿನಾಂಕ 28-8-23 ರಂದು ಬೆಳ್ತಂಗಡಿ ಯಲ್ಲಿ ಮಹಾಧರಣಿ ನಡೆಸುತ್ತದೆ. ನಾಡಿನ ಮೂಲೆ ಮೂಲೆಯಿಂದ ಆಗಮಿಸುವ ಅಸಂಖ್ಯ ಹೋರಾಟಗಾರರು ಸರಕಾರಕ್ಕೆ ಮುಖಾಮುಖಿಯಾಗಲಿದ್ದಾರೆ. ಸೌಜನ್ಯಳ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒಳಪಡಿಸಬೇಕು. ಅಲ್ಲಿ ನಡೆದ ಅಸಹಜ ಸಾವುಗಳ ಬಗೆಗೆ ನ್ಯಾಯಾಂಗ ತನಿಖೆಯಾಗಬೇಕೆಂದು ಒತ್ತಾಯಿಸುತ್ತೇವೆ. ಸರಕಾರ ಈ ಕುರಿತು ತನ್ನ ನಿಲುವನ್ನು ಬದಲಿಸಿಕೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದು ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ದೇವಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.