ನವದೆಹಲಿ : ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳಿಗೆ ಮಾತ್ರ ಏಕೆ ಕ್ಷಮೆ?. ಇತರ ಪ್ರಕರಣಗಳ ಅಪರಾಧಿಗಳಿಗೂ ಇದೆ ಮಾನದಂಡ ಪಾಲಿಸಬೇಕಲ್ಲವೆ? ಎಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ಚಾಟಿ ಬೀಸಿದೆ.
ಗುರುವಾರ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ನ್ಯಾ.ಬಿ.ವಿ ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರಿದ್ದ ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಅಪರಾಧಿಗಳನ್ನು ಬಿಡುಗಡೆ ಮಾಡುವ ನೀತಿಯನ್ನು ಆಯ್ದ ಅಪರಾಧಿಗಳಿಗಷ್ಟೆ ಅನ್ವಯಿಸುವುದು ಸರಿಯಲ್ಲ. ಉಳಿದ ಅಪರಾಧಿಗಳಿಗೂ ಈ ಮಾನದಂಡ ಪಾಲಿಸಬೇಕು ಎಂದು ನ್ಯಾಯಪೀಠ ಹೇಳಿತು.
ಗುಜರಾತ್ ಸರ್ಕಾರದ ಪರವಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ, ಉಳಿದ ಅಪರಾಧಿಗಳಿಗೂ ಸಮಾನ ಮಾನದಂಡ ಅನುಸರಿಸಲು ಏಕೆ ಸಾಧ್ಯವಿಲ್ಲ? ಎಂದು ಪ್ರಶ್ನಿಸಿತು.
2002ರ ಗುಜರಾತ್ ಗಲಭೆಯ ಸಂದರ್ಭ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯ ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮರಣದಂಡನೆಗೆ ಒಳಗಾಗಿದ್ದ ಅಪರಾಧಿಗಳ ಶಿಕ್ಷೆಯನ್ನು ಬಳಿಕ ಜೀವಾವಧಿಯಾಗಿ ಮಾರ್ಪಡಿಸಲಾಗಿತ್ತು. ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಿದೆ. ಇದರ ವಿರುದ್ಧ ಬಿಲ್ಕಿಸ್ ಬಾನೊ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಏನು?
ಗುಜರಾತ್ ನಲ್ಲಿ 2002ರಲ್ಲಿ ನಡೆದಿದ್ದ ಗೋದ್ರಾ ಘಟನೆಯ ನಂತರದ ಹಿಂಸಾಚಾರದಲ್ಲಿ ಬಲ್ಕಿಸ್ ಬಾನು ಎಂಬ ಐದು ತಿಂಗಳ ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ಸಂದರ್ಭದಲ್ಲಿ ಆಕೆಯ ತಾಯಿ ಸೇರಿದಂತೆ ಆಕೆಯ ಕುಟುಂಬದ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಲ್ಲದೆ, ಆಕೆಯ ಮೂರು ವರ್ಷದ ಮಗು ಸೇರಿ ಕುಟುಂಬದ 7 ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಿಬಿಐಗೆ ಹೋಗಿತ್ತು.
2004ರಲ್ಲಿ ತನ್ನ ವರದಿ ಸಲ್ಲಿಸಿದ್ದ ಸಿಬಿಐ, ಪ್ರಕರಣದಲ್ಲಿ ಗುಜರಾತ್ ಪೊಲೀಸ್ ಅಧಿಕಾರಿಗಳ ಪಾತ್ರವೂ ಇದ್ದು, ಅವರೂ ಸಹ ಈ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಿತ್ತು. ಗುಜರಾತ್ ಪೊಲೀಸ್ ಇಲಾಖೆಯ ಆರು ಪೊಲೀಸ್ ಅಧಿಕಾರಿಗಳು, ಇಬ್ಬರು ವೈದ್ಯರು ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿತ್ತು. 2008ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆದರೆ, 2022ರ ಆಗಸ್ಟ್ ನಲ್ಲಿ ಗುಜರಾತ್ ಸರ್ಕಾರ, ಅಪರಾಧಿಗಳ ಶಿಕ್ಷೆ ಪೂರ್ಣವಾಗುವುದಕ್ಕೂ ಕೆಲದಿನಗಳ ಮುಂಚೆಯೇ ಬಿಡುಗಡೆ ಮಾಡಿತ್ತು. ಇದನ್ನು ಬಿಲ್ಕಿಸ್ ಬಾನು ಪರವಾಗಿರುವ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಬಾನು ಅವರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಗುಜರಾತ್ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಗೆ ಈ ಕುರಿತಂತೆ ಉತ್ತರಿಸುವಂತೆ ನೋಟಿಸ್ ಜಾರಿಗೊಳಿಸಿತ್ತು.