ಆಗಸ್ಟ್ 10ರ ‘ಅಮೋಘ’ ಇವೆಂಟ್!

ಪ್ರಧಾನಿಗಳು ಲೋಕಸಭೆಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾಜರಿರುವಂತೆ ಮಾಡುವಲ್ಲಿ ವಿಪಕ್ಷಗಳು ಯಶಸ್ವಿಯಾದವು; ಅದೇ ವೇಳೆಗೆ ಮಣಿಪುರದ ಭೀಕರ ಹಿಂಸಾಚಾರದ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸುವಲ್ಲಿ ಆಳುವ ಕೂಟವೂ ಯಶಸ್ವಿಯಾದಂತೆ ಕಾಣುತ್ತದೆ. ಆದರೆ ಅಲ್ಲಿನ ಜನಗಳ ಸಂಕಟ-ನೋವುಗಳಿಗೆ ಪರಿಹಾರ ಸಿಕ್ಕಿಲ್ಲ.

ಈ ಕೆಳಗಿನ ವ್ಯಂಗ್ಯಚಿತ್ರ ಆಗಸ್ಟ್ 10ರಂದು ಟೈಂಸ್ ಆಫ್ ಇಂಡಿಯ ದೈನಿಕದ ವ್ಯಂಗ್ಯಚಿತ್ರಕಾರ ಸಂದೀಪ ಅಧ್ವರ್ಯು ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಾಕಿದ ಚಿತ್ರ- “ಅಮೋಘ ತೆರೆಯುವಿಕೆ”!

ಅಮೋಘವಾದದ್ದು ಏನು ತೆರೆಯಲಿತ್ತು? ‘ಬಾಯಿ’!

ಹೌದು, ಅಂದು ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳು ಎರಡನೇ ಸುತ್ತಿನ ಮೌನ ಮುರಿಯಬೇಕಾಗಿತ್ತು-ಮಣಿಪುರದ ಹಿಂಸಾಚಾರದ ಬಗ್ಗೆ. ಜುಲೈ 20ರಂದು, ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ 79ದಿನಗಳ ನಂತರ, ಅದೂ ಜುಲೈ 18ರಂದು ಈ ಹಿಂಸಾಚಾರದ ಭೀಕರತೆಯನ್ನು ಪ್ರತಿನಿಧೀಕರಿಸಿದ ಒಂದು ವೀಡಿಯೋ ಬಯಲಾಗಿ ದೇಶದ ಸರ್ವೋಚ್ಚ ನ್ಯಾಯಾಲಯವೇ ಅಲ್ಲಿನ ಡಬಲ್ ಇಂಜಿನ್ ಸರಕಾರವನ್ನು ತರಾಟೆಗೆ ತಗೊಳ್ಳುವಂತಾದಾಗ, ಅವರು ಸಂಸತ್ತಿನ ಹೊರಗೆ 30 ಸೆಕೆಂಡುಗಳ ಕಾಲ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದರು-ಬಹುಶಃ ನಿರ್ವಾಹವಿಲ್ಲದೆ. ನಂತರ ಈ ಹಿಂಸಾಚಾರದ ಭೀಕರತೆಗಳು, ಅದರ ಹಿಂದಿದ್ದ ಹುನ್ನಾರಗಳೂ ಒಂದೊಂದಾಗಿ ಬಯಲಾಗುತ್ತಿದ್ದಾಗ, ಒಂದೆಡೆಯಲ್ಲಿ ಸುಪ್ರಿಂ ಕೋರ್ಟಿನ ಕಟು ಟಿಪ್ಪಣಿಗಳು, ಇನ್ನೊಂದೆಡೆಯಲ್ಲಿ ಹಿಂಸಾಚಾರ ಮುಂದುವರೆಯುತ್ತಲೇ ಇದ್ದಾಗ, ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಈ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾಗ ಅವರು ಸಂಸತ್ತಿಗೂ ಬರಲಿಲ್ಲ, ಮತ್ತೆ ಬಾಯಿ ತೆರೆಯಲೂ ಇಲ್ಲ. ಪ್ರತಿಪಕ್ಷಗಳು, ತಮ್ಮ ಸಂಖ್ಯಾ ಬಲಹೀನತೆಯ ಅರಿವಿದ್ದರೂ, ಅವರು ಸದನಕ್ಕೆ ಬರುವಂತೆ ಮತ್ತು ಮೌನ ಮುರಿಯುವಂತೆ ಮಾಡಲು ಅವಿಶ್ವಾಸ ಠರಾವನ್ನು ಮಂಡಿಸಿದವು. ಕೊನೆಗೂ ಲೋಕಸಭಾಧ್ಯಕ್ಷರು ಆಗಸ್ಟ್ 8ರಿಂದ ಇದರ ಮೇಲೆ ಚರ್ಚೆ ನಡೆಯುತ್ತದೆ, ಆಗಸ್ಟ್ 10ರಂದು ಪ್ರಧಾನಿಗಳು ಅದಕ್ಕೆ ಉತ್ತರ ನೀಡುತ್ತಾರೆ ಎಂದು ನಿರ್ಧರಿಸಬೇಕಾಗಿ ಬಂತು. ಪ್ರತಿಪಕ್ಷಗಳ ಕಾರ್ಯತಂತ್ರ ಅಷ್ಟರ ಮಟ್ಟಿಗೆ ಸಫಲವಾಗಿತ್ತು.

ವಸಾಹತುಶಾಹಿಯಿಂದ ಸ್ವತಂತ್ರವಾಗಿ 77ನೇ ವರ್ಷಕ್ಕೆ ಕಾಲಿಡುವ ಸಮಯದಲ್ಲಿ ದೇಶದ ಪ್ರಧಾನಿ ಸಂಸತ್ತಿಗೆ ಬಂದು ಬಾಯಿ ತೆರೆಯುವುದನ್ನು ಸಂಭ್ರಮಿಸಬೇಕಾಗಿ ಬಂದಿರುವ ಪರಿಸ್ಥಿತಿ ಏರ್ಪಟ್ಟಿರುವುದನ್ನು ಈ ವ್ಯಂಗ್ಯಚಿತ್ರ ಬಿಂಬಿಸಿದೆ.

ಪ್ರತಿಪಕ್ಷಗಳ ಸದಸ್ಯರು ಈ ಚರ್ಚೆಯಲ್ಲಿ ಮುಖ್ಯವಾಗಿ ಮಣಿಪುರದಲ್ಲಿ ಮೂರು ತಿಂಗಳ ನಂತರವೂ ಡಬಲ್ ಇಂಜಿನ್ ಸರಕಾರಗಳು ಹಿಂಸಾಚಾರ ತಡೆಯುವಲ್ಲಿ ಶೋಚನೀಯವಾಗಿ ವಿಫಲವಾಗಿರುವುದು ಏಕೆ ಎಂದು ಪ್ರಶ್ನಿಸಿದರು.

ಠರಾವು ಮಂಡಿಸಿದ್ದ ಕಾಂಗ್ರೆಸ್‍ ಸದಸ್ಯ ಗೌರವ್‍ ಗೊಗೊಯ್ ಚರ್ಚೆಯನ್ನು ಆರಂಭಿಸಿದ್ದರು. ಸದಸ್ಯತ್ವ ಮರುಸ್ಥಾಪನೆಯ ವಿಜಯದೊಂದಿಗೆ ಸದನವನ್ನು ಮತ್ತೆ ಪ್ರವೇಶಿಸಿದ ರಾಹುಲ್‍ ಗಾಂಧಿ ಆಳುವ ಪಕ್ಷದ ರಾಜಕೀಯ ಮಣಿಪುರವನ್ನು ಇಬ್ಭಾಗ ಮಾಡಿದೆ, ಭಾರತ ಮಾತೆಯನ್ನು ಕೊಂದಿದೆ ಎಂದರು. ಮಣಿಪುರಕ್ಕೆ ಬೆಂಕಿ ಹಚ್ಚಿದಿರಿ, ಈಗ ಅದನ್ನುಹರ್ಯಾಣಕ್ಕೂ ವಿಸ್ತರಿಸುತ್ತಿದ್ದೀರಿ ಎಂದರು. ಸಿಪಿಐ(ಎಂ)ನ ಸದಸ್ಯ ಎ ಎಂ ಆರಿಫ್ ಮಾತಾಡುತ್ತ ಈ ಪ್ರಧಾನಿ ನಮ್ಮ ಸಂಸದೀಯ ಇತಿಹಾಸದಲ್ಲೇ ಸದನದಲ್ಲಿ ಅತೀ ಕಡಿಮೆ ಹಾಜರಾತಿಯ ದಾಖಲೆ ನಿರ್ಮಿಸಿದ್ದಾರೆ ಎಂದರು. ‘ವಿಶ್ವಗುರು’ ಆಗಬಯಸುವ ದೇಶದ ಪ್ರಧಾನಿಗಳು ವಿಭಜನೆಯ ಮುಖಂಡರು ಎಂದು ಜಗತ್ತಿನ ಮಾಧ್ಯಮಗಳು ಹೇಳುವ ಪರಿಸ್ತಿತಿ ಬಂದಿದೆ. ಮಣಿಪುರದಲ್ಲಿ ಕಂಡಿರುವ ವಿಭಜನೆಯಿಂದ ರಾಜಕೀಯ ಲಾಭ ಪಡೆಯುವ ಪ್ರವೃತ್ತಿ ಈಗ ಹರ‍್ಯಾಣಕ್ಕೂ ವಿಸ್ತರಿಸಿದೆ ಎಂದ ಅವರು ಏಕರೂಪದ ನಾಗರಿಕ ಸಂಹಿತೆಯನ್ನು ತರುವ ಪ್ರಯತ್ನದ ಹಿಂದೆಯೂ ಇದೇ ಪ್ರವೃತ್ತಿ ಇದೆ ಎಂದರು. ಪರಿಸ್ಥಿತಿ ಎಂತಹ ಮಟ್ಟವನ್ನು ತಲುಪಿದೆಯೆಂದರೆ ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸಿ ಅಲ್ಲಿ ಕಾನೂನು ವ್ಯವಸ್ಥೆ ಮತ್ತು ಸಂವಿಧಾನಿಕ ಏರ್ಪಾಟು ಮುರಿದು ಬಿದ್ದಿದೆ ಎನ್ನುತ್ತ ಅತ್ಯಾಚಾರಗಳ ತನಿಖೆಯನ್ನು ಮಹಾರಾಷ್ಟ್ರದ ನಿವೃತ್ತ ಡಿಜಿಪಿಗೆ ವಹಿಸಿದೆ ಎಂಬ ಸಂಗತಿಯತ್ತ ಆರಿಫ್ ಗಮನ ಸೆಳೆದರು.

‘ಚುನಾವಣಾ ರ್ಯಾಲಿಯಲ್ಲಿ ಇದ್ದಂತಿತ್ತು’

ಅತ್ತ ಗೃಹಮಂತ್ರಿಗಳು ಸೇರಿದಂತೆ ಆಳುವ ಕೂಟದ ಸದಸ್ಯರು ಇಂತಹ ಸಂಪೂರ್ಣ ವಿಫಲತೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಸಿದರು. ಪ್ರಧಾನಮಂತ್ರಿಗಳು ಕೂಡ ಇದೇ ಜಾಡಿನಲ್ಲಿ ಮುಂದುವರೆದು ಚುನಾವಣಾ ಪ್ರಚಾರದ ಶೈಲಿಯಲ್ಲೇ ಮಾತಾಡಿದರು ಎಂದು ವರದಿಯಾಗಿದೆ;

ಎಷ್ಟೆಂದರೆ, 2014ರಲ್ಲಿ ಅವರು ಪ್ರಧಾನ ಮಂತ್ರಿಗಳಾದಾಗ, ದೇಶದಲ್ಲಿ ಹೊಸ ರೀತಿಯ ರಾಜಕೀಯ ಆರಂಭವಾಗಿದೆ ಎಂದು ತುಂಬು ಮನಸ್ಸಿನಿಂದ ಸ್ವಾಗತಿಸಿದ್ದ ಹಿರಿಯ ಪತ್ರಕರ್ತೆ ತವ್ಲೀನ್‍ ಸಿಂಗ್‍ ಕೂಡ ಪ್ರಧಾನಿಗಳ ‘ಉತ್ತರ’ ಎಂಬುದು ಬಹಳ ದೀರ್ಘವಾದ, ಬೋರಿಂಗ್‍ ಆಗಿದ್ದ ಭಾಷಣವಾಗಿತ್ತು, ಲೋಕಸಭೆಯಲ್ಲಿನ ಭಾಷಣಕ್ಕಿಂತ ಹೆಚ್ಚಾಗಿ ಚುನಾವಣಾ ಭಾಷಣದಂತಿತ್ತು ಎಂದು ಕಟುವಾಗಿ ಟೀಕಿಸಿದ್ದಾರೆ (ಇಂಡಿಯನ್‍ ಎಕ್ಸ್ ಪ್ರೆಸ್‍, ಆಗಸ್ಟ್ 14). ನಿಜ, ಇತ್ತೀಚಿನ ದಿನಗಳಲ್ಲಿ ಇವರು ಪ್ರಧಾನಿಗಳ ಒಬ್ಬ ಪ್ರಮುಖ ಟೀಕಾಕಾರರಾಗಿದ್ದಾರೆ. ಆದರೂ ಅವಿಶ್ವಾಸ ಠರಾವಿನ ಮೇಲಿನ ಚರ್ಚೆಗೆ ಪ್ರಧಾನಿ ಗಳ ಉತ್ತರದ ಬಗ್ಗೆ ಅವರ ಈ ಟಿಪ್ಪಣಿಯನ್ನು ನೋಡಿ:

ಇದನ್ನೂ ಓದಿ:ಡಾ. ಅಂಬೇಡ್ಕರ್ ಮತ್ತು ಏಕರೂಪ ನಾಗರಿಕ ಸಂಹಿತೆ

“ಅವರು ತಾನೇನೋ ಮಹತ್ತಾದುದನ್ನು ಹೇಳಿದ್ದೇನೆಂದು ಭಾವಿಸಿ ತನ್ನ ಎಂಪಿಗಳು ಘೋಷಣೆ ಕೂಗುವಂತೆ ಉತ್ತೇಜಿಸುತ್ತಿದ್ದಾಗ (ನಾವು) ಚುನಾವಣಾ ರ್ಯಾಲಿಯಲ್ಲಿದ್ದೇವೆಯೇ ಎಂಬ ಭಾವನೆ ಗಟ್ಟಿಯಾಗುತ್ತಿತ್ತು. ಸಂಸತ್ತಿನಲ್ಲಿ ಅವರ ಮಂದಿ ಅವರೊಬ್ಬ ದೈವಮಾನವ, ಅವರ ಆಶೀರ್ವಾದಗಳಿಲ್ಲದೆ ತಮ್ಮ ಸೀಟುಗಳನ್ನು ಗೆಲ್ಲಲು ತಮಗೆ ಸಾಧ್ಯವಾಗದು ಎಂದು ನಂಬಿದವರು, ಆದರೂ ಅವರು ‘ಮೋದಿ, ಮೋದಿ, ಮೋದಿ’ ಎಂದು ಬೊಬ್ಬೆ ಹಾಕಬೇಕಿತ್ತೇ, ತಾವು ಸಂಸತ್‍ ಸದಸ್ಯರಲ್ಲ, ಬದಲಿಗೆ ಭೋಪರಾಕು ಕೂಗುವವರು ಎಂಬಂತೆ?”

‘ಉತ್ತರ’ದ ಭಾಷಣ ಒಂದೂವರೆ ಗಂಟೆ ಸಾಗಿದರೂ ಮಣಿಪುರದ ಪ್ರಸ್ತಾಪವೇ ಬರದಿರುವುದನ್ನು ಪ್ರತಿಭಟಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಮೇಲೆ ಪ್ರಧಾನಿಗಳು  ಮಣಿಪುರದ ಬಗ್ಗೆ ಮಾತು ಆರಂಭಿಸಿದರು. ರಾಜಕೀಯ ವಿಶ್ಲೇಷಕರೆಲ್ಲರೂ ಗಮನಿಸಿದ ಸಂಗತಿಯೆಂದರೆ ಒಟ್ಟು ಎರಡು ಗಂಟೆ, 13 ನಿಮಿಷಗಳ ‘ಉತ್ತರ’ದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವೂ ಗಂಭೀರವಾಗಿ ಪರಿಗಣಿಸಿದ ಮಣಿಪುರದ ಸನ್ನಿವೇಶಕ್ಕೆ ಪ್ರಧಾನಿಗಳು ಕೊಟ್ಟದ್ದು ಸುಮಾರು 8ನಿಮಿಷದಷ್ಟು ಮಾತ್ರ-ಅದೂ ಔಪಚಾರಿಕ ಆಶಯಗಳಷ್ಟೇ-ಮೂರ್ತವಾದ ಭರವಸೆಗಳನ್ನೇನೂ ಕೊಡಲಿಲ್ಲ. ಪರಿಸ್ಥಿತಿ ಏಕೆ ಇಷ್ಟು ಭೀಕರವಾಯಿತು ಎಂಬ ಪ್ರಶ್ನೆಗಳಿಗೂ ನೇರ ಉತ್ತರ ನೀಡಲಿಲ್ಲ. ಎಲ್ಲದಕ್ಕೂ ಕಾಂಗ್ರೆಸ್ಸೇ ಕಾರಣ ಎಂಬ ಜಪ ಇವರ ಆಳ್ವಿಕೆಗೂ ಹತ್ತು ವರ್ಷಗಳಾಗುತ್ತ ಬಂದರೂ ಮುಂದುವರೆದಿತ್ತು.

‘ನಕಾರಾತ್ಮಕತೆ’ ಮತ್ತು ‘ತಕ್ಕ ಉತ್ತರ’

ನಿಜ, ಹಿಂಸಾಚಾರದಲ್ಲಿ ಸತ್ತವರಲ್ಲಿ ‘ದಾವೇದಾರರಿಲ್ಲದ ಹೆಚ್ಚಿನ ಹೆಣಗಳು ನುಸುಳುಕೋರರದ್ದು ‘ಎಂದು ಕೇಂದ್ರ ಸರಕಾರದ ಪರವಾಗಿ ಸಾಲಿಸಿಟರ್ ಜನರಲ್ ಸುಪ್ರಿಂ ಕೋರ್ಟಿಗೆ ವಿಚಾರಣೆ ವೇಳೆಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಂದಿರುವ ಪ್ರತಿಭಟನೆಗಳ ಬಗ್ಗೆಯಾಗಲೀ, ವಾಸ್ತವವಾಗಿ ಅವುಗಳಲ್ಲಿ ಸುಮಾರು 20 ಬಿಟ್ಟು ಉಳಿದವೆಲ್ಲವೂ ಗುರುತಿಸಲ್ಪಟ್ಟಿವೆ, ಮಣಿಪುರದಲ್ಲಿ ಉಂಟಾಗಿರುವ ಜನಾಂಗೀಯ ವಿಭಜನೆಯಿಂದಾಗಿ ಅವರ ಸಂಬಂಧಿಕರು ಆಸ್ಪತ್ರೆಗಳಿಗೆ ಹೋಗಿ ಅವನ್ನು ತೆಗೆದುಕೊಳ್ಳಲು ಆಗಿಲ್ಲ, ಇದೂ ಅಲ್ಲಿನ ಪರಿಸ್ಥಿತಿಗೆ ಇನ್ನೊಂದು ಸಾಕ್ಷಿ ಎಂಬ ವಿವರಣೆಯ ಬಗ್ಗೆಯಾಗಲೀ, ಮತ್ತು ಆಳುವ ಪಕ್ಷ ಪ್ರಚಾರ ಮಾಡುವಂತೆ ಇದು ಮಾದಕ ಪದಾರ್ಥಗಳ ಕಳ್ಳವ್ಯಾಪಾರದ ಸಮಸ್ಯೆಯನ್ನು ನಿಭಾಯಿಸಲು ಮಾಡಿದ ಪ್ರಯತ್ನದಿಂದಾಗಿ ಉಂಟಾದ ಸಮಸ್ಯೆಯಲ್ಲ, ಏಕೆಂದರೆ ಸ್ವತಃ ಮುಖ್ಯಮಂತ್ರಿಗಳೇ ಈ ಸಮಸ್ಯೆಯ ಭಾಗವಾಗಿದ್ದಾರೆ ಎಂದು ಈ ಬಗ್ಗೆ ತನಿಖೆ ನಡೆಸಿರುವ ಅಲ್ಲಿಯ ಒಬ್ಬ ಮಾಜೀ ಪೋಲಿಸ್ ಅಧಿಕಾರಿಯೇ ಸ್ಪಷ್ಟವಾಗಿ ಹೇಳಿರುವುದರ ಬಗ್ಗೆಯಾಗಲೀ ಪ್ರಧಾನಿಗಳು ‘ಸ್ಪಷ್ಟೀಕರಣ’ ನೀಡುತ್ತಾರೆ ಎಂಬ ನಿರೀಕ್ಷೆಯಂತೂ ಬಹುಶಃ ಯಾರಿಗೂ ಇರಲಿಲ್ಲ. ಏಕೆಂದರೆ, ಹಿಂದಿನ ದಿನವೇ ಗೃಹಮಂತ್ರಿಗಳು ಅವರು ಪೂರ್ಣವಾಗಿ ಸಹಕರಿಸುತ್ತಿದ್ದಾರೆ, ಅವರು ರಾಜೀನಾಮೆ ನೀಢುವ ಸಂದರ್ಭವೇ ಇಲ್ಲ ಎಂದು ಸರ್ಟಿಫಿಕೇಟ್‍ ಕೊಟ್ಟಿದ್ದರು.

ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ ಪ್ರೆಸ್‍ನಲ್ಲಿ ಮೂವರು ಮುಸ್ಲಿಂ ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದು, ಅದಕ್ಕೆ ಸಮರ್ಥನೆ ಎಂಬಂತೆ ದೇಶದ ಪ್ರಧಾನಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿಯ ಹೆಸರೆತ್ತಿದ ಆರ್‌ಪಿಎಫ್ ಜವಾನನ ಮಾತನ್ನು ಖಡಾಖಂಡಿತವಾಗಿ ನಿರಾಕರಿಸಲು ಈ ಸಂದರ್ಭವನ್ನಾದರೂ ಬಳಸುತ್ತಾರೆ ಎಂಬ ನಿರೀಕ್ಷೆ ಕೆಲವರಲ್ಲಾದರೂ ಇತ್ತೇನೋ-ಅದೂ ಹುಸಿಯಾಯಿತು ಎಂದು ಇನ್ನು ಕೆಲವು ರಾಜಕೀಯ ವೀಕ್ಷಕರು ಗಮನಿಸಿದ್ದಾರೆ.

ಇಷ್ಟೇ ಅಲ್ಲ, ಮಣಿಪುರ ಕೇಂದ್ರಬಿಂದುವಾಗಿದ್ದ ಈ ಚರ್ಚೆಯಲ್ಲಿ ಮಣಿಪುರದ, ಅದರಲ್ಲೂ ಹಿಂಸಾಚಾರ ಪೀಡಿತ ಪ್ರದೇಶವನ್ನು ಪ್ರತಿನಿಧಿಸುವ ಆಳುವ ಮೈತ್ರಿಕೂಟಕ್ಕೆ ಸೇರಿದ ಎನ್‍ಪಿಎಫ್‍ ನ ಒಬ್ಬ ಸಂಸತ್‍ ಸದಸ್ಯರು ಮಾತಾಡಬಯಸಿದ್ದರೂ, ಅವರಿಗೆ ಮಾತಾಡಲು ಅವಕಾಶ ನೀಡಲಿಲ್ಲ ಎಂದು ವರದಿಯಾಗಿದೆ(ದಿ ಹಿಂದು, ಆಗಸ್ಟ್ 12). ಆಳುವ ಕೂಟದ ಇನ್ನೊಂದು ಪಕ್ಷವಾದ ಎಂಎನ್‍ಎಫ್‍ನ ಮಿಝೋರಾಂನ ರಾಜ್ಯಸಭಾ ಸದಸ್ಯರು ಅವಿಶ್ವಾಸ ಠರಾವಿನ ಪರವಾಗಿ ಮಾತನಾಡುವಾಗ ಅವರ ಮೈಕನ್ನು ಆಫ್‍ ಮಾಡಲಾಯಿತು ಎಂದು ದೂರಿದ್ದಾರೆ.

ಅಂತೂ, ನಿರೀಕ್ಷಿಸಿದಂತೆ ಠರಾವು ಬಿದ್ದು ಹೋಯಿತು. “ನಾವು ಅವಿಶ್ವಾಸ ಠರಾವನ್ನು ಸೋಲಿಸಿದೆವು, ಇಡೀ ದೇಶದಲ್ಲಿ ನಕಾರಾತ್ಮಕತೆ ಹರಡುವುದಕ್ಕೆ ಸರಿಯಾದ ಉತ್ತರ ನೀಡಿದೆವು, ನಿಜಸ್ಥಿತಿ ಗೆ ಅಂಜಿ ವಿಪಕ್ಷಗಳವರು ಮಧ್ಯದಲ್ಲೇ ಹೊರಗೆ ಹೋದರು..” ಎಂದು ನಂತರ ಪ್ರಧಾನಿಗಳು ಗೇಲಿ ಮಾಡಿದರು ಎಂದೂ ವರದಿಯಾಗಿದೆ.

ಸಂಕಟ ಮುಂದುವರೆಯುತ್ತಿದೆ

ಆದರೆ ಈ ಚರ್ಚೆ ಆರಂಭವಾಗುವ ಹಿಂದಿನ ದಿನವೇ ಸರ್ವೋಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ಮಾನವೀಯ ಆಯಾಮಗಳ ತನಿಖೆ ನಡೆಸಲು ಮೂವರು ಮಹಿಳಾ ಹೈಕೋರ್ಟ್‍ ನ್ಯಾಯಾಧೀಶರುಗಳ ಸಮಿತಿಯನ್ನು ರಚಿಸಿತು, ಸಿಬಿಐ ತನಿಖೆಯನ್ನು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ನಡೆಸಬೇಕು ಎಂದಿತು, ಮಹಾರಾಷ್ಟ್ರದ ನಿವೃತ್ತ ಡಿಜಿಪಿ ದತ್ತಾತ್ರೇಯ ಪಡ್ಸಾಲ್ಗೀಕರ್ ರನ್ನು ಉಸ್ತುವಾರಿ ಅಧಿಕಾರಿಯಾಗಿ ನೇಮಿಸಿದ್ದಲ್ಲದೆ, ರಾಜಸ್ತಾನ, ಮಧ್ಯಪ್ರದೇಶ, ಝಾರ್ಖಂಡ್‍, ಒಡಿಶ, ಮತ್ತು ದಿಲ್ಲಿ ಯಿಂದ ಐವರು ಡಿಎಸ್‍ಪಿ ಹುದ್ದೆಯ ಅಧಿಕಾರಿಗಳನ್ನು ಸಿಬಿಐಗೆ ಒದಗಿಸಬೇಕು, ಇವರಲ್ಲಿ ಒಬ್ಬರಾದರೂ ಮಹಿಳಾ ಅಧಿಕಾರಿಯಾಗಿರಬೇಕು ಎಂದು ಗೃಹ ಮಂತ್ರಾಲಯಕ್ಕೆ ನಿರ್ದೇಶನ ನೀಡಿತು ಎಂಬುದು ಗಮನಾರ್ಹ.

ಕಾಂಗ್ರೆಸ್, ಕಾಂಗ್ರೆಸ್,ಕಾಂಗ್ರೆಸ್,ಕಾಂಗ್ರೆಸ್,ಕಾಂಗ್ರೆಸ್,ಕಾಂಗ್ರೆಸ್,.. .. .. ..ಮತ್ತು ಮಣಿಪುರ
ವ್ಯಂಗ್ಯಚಿತ್ರ: ಅಲೋಕ್‍ ನಿರಂತರ್, ಸಕಾಳ್

42 ವಿಶೇಷ ತನಿಖಾ ತಂಡ(ಎಸ್‍ಐಟಿ)ಗಳನ್ನು ರಚಿಸಬೇಕು ಎಂದೂ ನಿರ್ದೇಶನ ನೀಡಿದ ನ್ಯಾಯಾಲಯ ಇವು ಪತ್ರಿಯೊಂದೂ ತಮಗೆ ನಿರ್ದಿಷ್ಟಪಡಿಸಿದ ಪ್ರತಿಯೊಂದು ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ದೂರುಗಳನ್ನು ಪಡೆಯಬೇಕು, ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು ಎಂದೂ ಅದು ತಾಕೀತು ಮಾಡಿದೆ.

ವಿಪಕ್ಷಗಳು ಪ್ರಧಾನಿಗಳು ಲೋಕಸಭೆಯಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾಜರಿರುವಂತೆ ಮಾಡುವಲ್ಲಿ ಯಶಸ್ವಿಯಾದವು; ಅದೇ ವೇಳೆಗೆ ಮಣಿಪುರ ಹಿಂಸಾಚಾರದ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸುವಲ್ಲಿ ಆಳುವ ಕೂಟವೂ ಯಶಸ್ವಿಯಾದಂತೆ ಕಾಣುತ್ತದೆ. ಆದರೆ ಅಲ್ಲಿನ ಜನಗಳ ಸಂಕಟ- ನೋವುಗಳಿಗೆ ಪರಿಹಾರ ಸಿಕ್ಕಿಲ್ಲ.

(ಸಂಗ್ರಹ:ಕೆ.ವಿ.)

Donate Janashakthi Media

Leave a Reply

Your email address will not be published. Required fields are marked *