ಇದೊಂದು ಚುನಾವಣಾ ಭಾಷಣ ಎಂದು ಇಂದಿನ ಅವರ ಭಾಷಣವನ್ನು ಟೀಕಿಸಲಾಗಿದೆ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 10ನೇ ಬಾರಿಗೆ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. 2024 ರ ಲೋಕಸಭೆ ಚುನಾವಣೆ ನಡೆಯಲಿದ್ದು, ಈ ಅವಧಿಯ ಕೊನೆಯ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭಾರತದ ನಾಗರಿಕರನ್ನು “ಕುಟುಂಬದ ಸದಸ್ಯರು”(ಪರಿವರ್ಜನ್) ಎಂದು ಪದೇ ಪದೇ ಸಂಬೋಧಿಸಿದ ಪ್ರಧಾನಿ ಮೋದಿ, ಮುಂದಿನ ವರ್ಷ ಇದೇ ಸ್ಥಳದಿಂದ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಜನರಿಗೆ ನೀಡಿದ ಭರವಸೆಗಳ ಪ್ರಗತಿಯನ್ನು ಪಟ್ಟಿ ಮಾಡುವುದಾಗಿ ಹೇಳಿದ್ದಾರೆ.
“ಮುಂದಿನ ವರ್ಷ, ಆಗಸ್ಟ್ 15 ರಂದು, ಇದೇ ಕೆಂಪು ಕೋಟೆಯಿಂದ, ನಾನು ರಾಷ್ಟ್ರವು ಸಾಧಿಸಿದ ಪ್ರಗತಿಯನ್ನು ಪಟ್ಟಿ ಮಾಡುತ್ತೇನೆ. ನಿಮ್ಮ ಶಕ್ತಿ, ನಿಮ್ಮ ಸಂಕಲ್ಪ ಮತ್ತು ನಿಮ್ಮ ಯಶಸ್ಸಿನ ಬಗ್ಗೆ ಇನ್ನೂ ಹೆಚ್ಚಿನ ಆತ್ಮವಿಶ್ವಾಸದಿಂದ ಹೇಳುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎನ್ಇಪಿ ರದ್ದು:ಸಿಎಂ ಸಿದ್ದರಾಮಯ್ಯ
“ಬದಲಾವಣೆಯ ಭರವಸೆ ನನ್ನನ್ನು ಇಲ್ಲಿಗೆ ಕರೆತಂದಿತು, ನನ್ನ ಕಾರ್ಯಕ್ಷಮತೆ ನನ್ನನ್ನು ಮತ್ತೊಮ್ಮೆ ಇಲ್ಲಿಗೆ ಕರೆತಂದಿತು. ಮುಂಬರುವ ಐದು ವರ್ಷಗಳು ಅಭೂತಪೂರ್ವ ಅಭಿವೃದ್ಧಿ ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತದ ಕನಸನ್ನು ನನಸಾಗಿಸುವ ಸುವರ್ಣ ಕ್ಷಣವಾಗಿದೆ” ಎಂದು ಪ್ರಧಾನಿ ಹೇಳಿದ್ದಾರೆ.
“ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ. ನೀವು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಈಡೇರಿಸಲು ನಾನು ಪ್ರಯತ್ನಿಸಿದೆ. ಕಳೆದ ಐದು ವರ್ಷಗಳಲ್ಲಿ ನಾನು ನೀಡಿದ ಭರವಸೆಗಳು ನನಗೆ ಆತ್ಮವಿಶ್ವಾಸವನ್ನು ತಂದುಕೊಟ್ಟಿವೆ. ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಮೂಲಕ ನಾನು ನಿಮಗೆ ಭರವಸೆ ನೀಡಿದ್ದೇನೆ. ನಾನು ಶ್ರಮಿಸಿದ್ದೇನೆ. ರಾಷ್ಟ್ರ ಮತ್ತು ನಾನು ಹೆಮ್ಮೆಯಿಂದ ಕೆಲಸ ಮಾಡಿದ್ದೇವೆ” ಎಂದು ಪ್ರಧಾನಿ ಹೇಳಿದರು.
ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯು ದೇಶದ ಕನಸನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೂಚಿಸಿದ ಅವರು, ಮೂರು ಅಂಶಗಳು ಭಾರತದ ಎಲ್ಲಾ ಕನಸುಗಳನ್ನು ನನಸಾಗಿಸಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಳಬರು ಎರಡೂವರೆ ವರ್ಷಕ್ಕೆ ಸಚಿವ ಸ್ಥಾನದಿಂದ ಕೆಳಗಿಳಿಯಬೇಕು: ಸಚಿವ ಕೆ.ಎಚ್.ಮುನಿಯಪ್ಪ
ಈ ನಡುವೆ ಹಿಂಸಾಚಾರ ಪೀಡಿತ ಮಣಿಪುರದ ಬಗ್ಗೆ ಮಾತನಾಡಿದ ಪ್ರಧಾನಿ, ದೇಶವು ಮಣಿಪುರದ ಜನರೊಂದಿಗೆ ಇದ್ದು, ರಾಜ್ಯದಲ್ಲಿ ಮಾತುಕತೆಯ ಮೂಲಕ ಶಾಂತಿಯನ್ನು ಸಾಧಿಸಲಾಗುವುದು ಎಂದು ಹೇಳಿದ್ದಾರೆ. “ನಿರಂತರ ಹಿಂಸಾಚಾರದ ಹೊರತಾಗಿಯೂ ರಾಜ್ಯದಿಂದ ಶಾಂತಿಯ ಸುದ್ದಿಗಳು ನಿರಂತರವಾಗಿ ಬರುತ್ತಿವೆ. ದೀರ್ಘಾವಧಿಯ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಪರಿಹಾರಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ಒಟ್ಟಾಗಿ ಆ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿದೆ ಮತ್ತು ಅದನ್ನು ಮುಂದುವರಿಸುತ್ತದೆ” ಎಂದು ಅವರು ಹೇಳಿದ್ದಾರೆ.
ಮೇ 3 ರಂದು ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭವಾಗಿದ್ದು, ಈ ವರೆಗೂ 150 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಹಿಂಸಾಚಾರದಿಂದಾಗಿ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಮಣಿಪುರದ ಬಗ್ಗೆ ಪ್ರಧಾನಿ ಮೌನವಾಗಿರುವುದಕ್ಕೆ ಪ್ರತಿಪಕ್ಷಗಳು ನಿರಂತರವಾಗಿ ಟೀಕಿಸುತ್ತಿವೆ. ಇತ್ತೀಚೆಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲೂ ಹಿಂಸಾಚಾರದ ಬಗ್ಗೆ ಮಾತಾಡುವಂತೆ ಪ್ರತಿಪಕ್ಷಗಳು ಪ್ರತಿಭಟನೆಗಳು ನಡೆಸಿದ್ದವು. ಕೊನೆಗೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಪ್ರಧಾನಿ ಮಣಿಪುರದ ಬಗ್ಗೆ ಮಾತಾಡುವಂತೆ ಮಾಡಲಾಗಿತ್ತು.
ಮುಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಹಲವು ರಾಜ್ಯಗಳ ಅಸೆಂಬ್ಲಿ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯತ್ತ ದೃಷ್ಟಿ ನೆಟ್ಟಿರುವ ಪ್ರಧಾನಿ ಮೋದಿ, ತ್ರಿವರ್ಣ ಧ್ವಜದ ನೆರಳಿನಲ್ಲಿ ಕಳೆದ 10 ವರ್ಷಗಳ ರಿಪೋರ್ಟ್ ಕಾರ್ಡ್ ನೀಡಿದ್ದಾರೆ. ಇದೊಂದು ಚುನಾವಣಾ ಭಾಷಣ ಎಂದು ಇಂದಿನ ಅವರ ಭಾಷಣವನ್ನು ಟೀಕಿಸಲಾಗಿದೆ.
ಇದನ್ನೂ ಓದಿ: 77ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ 5ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪಿಸಿದ :ಸಿಎಂ ಸಿದ್ಧರಾಮಯ್ಯ
“ನಾವು ಹಳೆಯ ಚಿಂತನೆಯನ್ನು ಬಿಟ್ಟಿದ್ದೇವೆ ಮತ್ತು ನಾನು ಇಂದು ಉದ್ಘಾಟಿಸುತ್ತಿರುವ ಯಾವುದೇ ಯೋಜನೆಗಳು ಕಳೆದ 10 ವರ್ಷಗಳ ಪರಿಕಲ್ಪನೆಯಾಗಿವೆ. ‘ಸರ್ವಜನ್ ಹಿತೇ ಸರ್ವಜನ್ ಸುಖೇ’ ಎಂಬ ತತ್ವದ ಮೇಲೆ ನಾವು ಕೆಲಸ ಮಾಡುತ್ತೇವೆ. ಗ್ರಾಮೀಣ ಮಹಿಳೆಯರಿಗೆ ಶೌಚಾಲಯ ಒದಗಿಸುವುದು, ಬಡವರಿಗೆ ಬ್ಯಾಂಕ್ ಖಾತೆ ತೆರೆಯುವುದು, ನಗರ ಪ್ರದೇಶದ ಬಡವರಿಗೆ ಅಗ್ಗದ ವಸತಿ ಸಾಲ ನೀಡುವುದು, 5G ಅನುಷ್ಟಾನ ಮತ್ತು ಹೊಸ ಸಂಸತ್ತನ್ನು ನಿರ್ಮಿಸುವುದು ನಮ್ಮ ಎಲ್ಲಾ ಗುರಿಗಳನ್ನು ನಾವು ಪೂರೈಸಿದ್ದೇವೆ”
“ಇದು ಹೊಸ ಮತ್ತು ಆತ್ಮವಿಶ್ವಾಸದ ಭಾರತ, ಇದು ಎಂದಿಗೂ ಸೋಲುವುದಿಲ್ಲ, ದಣಿವಾಗುವುದಿಲ್ಲ ಅಥವಾ ನಿಲ್ಲುವುದಿಲ್ಲ. ಇಂದು, ನಮ್ಮ ಗಡಿಗಳು ಈಗ ಸುರಕ್ಷಿತವಾಗಿವೆ, ಏಕೆಂದರೆ ನಾವು ನಮ್ಮ ರಕ್ಷಣಾ ಪಡೆಗಳನ್ನು ಯುದ್ಧಕ್ಕೆ ಸಿದ್ಧಗೊಳಿಸುತ್ತಿದ್ದೇವೆ. ರಕ್ಷಣಾ ವಲಯದ ಸುಧಾರಣೆಗಳಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಭಯೋತ್ಪಾದನಾ ದಾಳಿಗಳು ಈಗ ಹಳೆಯ ವಿಷಯವಾಗಿದೆ ಮತ್ತು ಅಂತಹ ಘಟನೆಗಳು ಗಣನೀಯವಾಗಿ ಕಡಿಮೆಯಾಗಿದೆ. 2014 ರಲ್ಲಿ, ನಾವು ಆರ್ಥಿಕವಾಗಿ 10 ನೇ ಸ್ಥಾನಕ್ಕೆ ಬಂದಿದ್ದೇವೆ, ಈಗ ನಾವು ಜನರ ಪ್ರಯತ್ನಗಳಿಂದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ” ಎಂದು ಪ್ರಧಾನಿ ಹೇಳಿದ್ದಾರೆ.
ವಿಡಿಯೊ ನೋಡಿ: ಸೌಜನ್ಯ ಪ್ರಕರಣ : ಹೋರಾಟದ ದಾರಿ ತಪ್ಪಿಸುತ್ತಿದೆಯಾ ಬಿಜೆಪಿ?! Janashakthi Media