ಗುತ್ತಿಗೆದಾರರ ಬಿಲ್‌ ಬಾಕಿ ಬಿಜೆಪಿ ಬೀದಿ ನಾಟಕ ಮಾಡುತ್ತಿದೆ:ಸಚಿವ ದಿನೇಶ್‌ ಗುಂಡೂರಾವ್

ಬೆಂಗಳೂರು:ಗುತ್ತಿಗೆದಾರರ ಬಿಲ್‌  ಬಾಕಿ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಬಿಜೆಪಿಯವರು ಬೀದಿ ನಾಟಕ ಮಾಡುತ್ತಿದ್ದಾರೆ. ಆದರೆ, ತಮ್ಮ ಅಧಿಕಾರದ ಅವಧಿಯಲ್ಲಿ ನಡೆದಿರುವ  ಕಾಮಗಾರಿಗಳ ಬಿಲ್‌ ಪಾವತಿಯನ್ನು ಬಾಕಿ ಉಳಿಸಿಕೊಂಡಿರುವುದು ಏಕೆ ಎಂದು ಉತ್ತರಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಅವಧಿಯ ಕೋವಿಡ್‌ ಹಗರಣ ತನಿಖೆ ನಿಶ್ಚಿತ: ಸಚಿವ ದಿನೇಶ್‌ ಗುಂಡುರಾವ್‌

ಬಿಜೆಪಿ ಸರ್ಕಾರ 40% ಕಮಿಷನ್‌ಗಾಗಿ ಗುತ್ತಿಗೆದಾರರ ಬಿಲ್‌ ತಡೆ ಹಿಡಿದಿದ್ದಾರೆ ಎಂದು ಪಶ್ನಿಸಿರುವ ಗುಂಡೂರಾವ್‌,ಬಿಜೆಪಿ ಸರ್ಕಾರ ಖಜಾನೆ ಲೂಟಿ ಮಾಡಿದ ಕಾರಣಕ್ಕಾಗಿಯೇ ಗುತ್ತಿಗೆದಾರರ ಬಿಲ್‌ ಪಾವತಿ ಬಾಕಿ ಉಳಿಸಿಕೊಂಡಿರುವುದು. ತಮ್ಮ ಅವಧಿಯಲ್ಲೇ ಗುತ್ತಿಗೆದಾರರಿಗೆ ಬಾಕಿ ಪಾವತಿಸಿದ್ದರೆ ಗುತ್ತಿಗೆದಾರರಿಗೆ ಈ ಕಷ್ಟ ಯಾಕೆ ಬರುತ್ತಿತ್ತು. ಈಗ ಶುದ್ಧ ಸತ್ಯಹರಿಶ್ಚಂದ್ರರಂತೆ ಪೋಸ್‌ ಕೊಡುವ ಬಿಜೆಪಿಯವರಿಗೆ ಗುತ್ತಿಗೆದಾರರ ಪರ ನಿಲ್ಲುವ ಯಾವ ನೈತಿಕತೆಯೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ಬಿಜೆಪಿಯವರಂತೆ ಗುತ್ತಿಗೆದಾರರ ಬಳಿ ಒಂದೇ ಒಂದು ಪರ್ಸೆಂಟ್‌ ಕಮಿಷನ್‌ ಕೂಡ ಕೇಳಿಲ್ಲ. ಗುತ್ತಿಗೆದಾರರ ಅಸೋಸಿಯೇಷನ್‌ ಕೂಡ ನಮ್ಮ ಮೇಲೆ ಕಮಿಷನ್‌ ಆರೋಪ ಹೊರಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ನಡೆಸದೆ ಬಿಲ್‌ ಪಡೆದಿರುವ ಆರೋಪವಿದೆ. ಈ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಂದ ಬಳಿಕ ಬಿಲ್‌ ಪಾವತಿಸುತ್ತೇವೆ ಎಂದು ಗುಂಡೂರಾವ್‌ ತಿಳಿಸಿದ್ದಾರೆ.

ಗುತ್ತಿಗೆ ಹಗರಣದ ತನಿಖೆಯಾಗಿ ಅದರ ವರದಿ ಬರುವವರೆಗೂ ಬಿಲ್‌ ಹಣ ತಡೆ ಹಿಡಿಯುವುದು ಅನಿವಾರ್ಯ. ನಿಯಮಾನುಸಾರ ಕಾಮಗಾರಿ ಮಾಡಿರುವ ಯಾವ ಗುತ್ತಿಗೆದಾರರು ಭಯ ಬೀಳುವ ಅವಶ್ಯಕತೆಯಿಲ್ಲ. ಅವರ ಹಣ ಬಿಡುಗಡೆಯಾಗಲಿದೆ. ಆದರೆ, ಯಾರು ಅಕ್ರಮವೆಸಗಿದ್ದಾರೋ ಅಂತಹವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ. ಈ ತನಿಖೆಯಿಂದ ಬಿಜೆಪಿ ಅವರ ಕರ್ಮಕಾಂಡವೂ ಬಯಲಾಗಲಿದೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *