ಶ್ರಮ ಜಗತ್ತಿನ ಸವಾಲುಗಳೂ ಅಮೃತಕಾಲದ ಆಶಯವೂ

ನಾ ದಿವಾಕರ 

ಸ್ವತಂತ್ರ ಭಾರತ 100 ವರ್ಷಗಳನ್ನು ಪೂರೈಸುವ ವೇಳೆಗೆ ಸಮನ್ವಯದ ತಳಪಾಯ ಗಟ್ಟಿಯಾಗಿರಬೇಕು

ಇನ್ನು 25 ವರ್ಷಗಳಿಗೆ ಸ್ವತಂತ್ರ ಭಾರತ ತನ್ನ ನೂರು ವರ್ಷಗಳನ್ನು ಪೂರೈಸಲಿದೆ. 75 ವರ್ಷಗಳ ಕಾಲ ದೇಶದ ಶ್ರಮಿಕ ವರ್ಗದ ಬೆವರಿನ ದುಡಿಮೆ, ಬೌದ್ಧಿಕ ವಲಯದ ಜ್ಞಾನ ಸಂಪತ್ತು ಹಾಗೂ ಸಾಂಸ್ಕೃತಿಕ ವಲಯದ ವೈವಿಧ್ಯತೆಯ ನೆಲೆಗಳು ಭಾರತವನ್ನು ಒಂದು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಕಾಪಾಡಿಕೊಂಡು ಬಂದಿದೆ. ಸಾಂಸ್ಕೃತಿಕ ವೈವಿಧ್ಯತೆಯನ್ನು ಹಾಗೂ ಮತಧಾರ್ಮಿಕ-ಜನಾಂಗೀಯ ವೈಶಿಷ್ಟ್ಯಗಳನ್ನು ಕಾಪಾಡಿಕೊಳ್ಳುವುದರ ಮೂಲಕವೇ ಭಾರತದ ಅಖಂಡತೆ ಮತ್ತು ಏಕತೆಯನ್ನು ಸಂರಕ್ಷಿಸಲು ಸಾಧ್ಯ ಎಂಬ ವಾಸ್ತವವನ್ನು ಮನಗಂಡೇ ಸ್ವಾತಂತ್ರ್ಯಪೂರ್ವದ ಚಿಂತಕರು, ರಾಜಕೀಯ ನೇತಾರರು, ತತ್ವಜ್ಞಾನಿಗಳು ಹಾಗೂ ದಾರ್ಶನಿಕ ನಾಯಕರು ಭಾರತದ ಸಂವಿಧಾನಕ್ಕೆ ಒಂದು ವಿಶಿಷ್ಟ ಆಯಾಮವನ್ನು ಕಲ್ಪಿಸಿದ್ದಾರೆ. ಸಂವಿಧಾನವು ಪ್ರತಿಪಾದಿಸುವ ಸಮಾನತೆ ಮತ್ತು ಸಮನ್ವಯದ ಹಾದಿಗಳನ್ನು ಮತ್ತಷ್ಟು ವಿಸ್ತರಿಸುತ್ತಾ ಅಡ್ಡಿಯಾಗುವ ಎಲ್ಲ ಅಪಸವ್ಯಗಳನ್ನೂ ನಿವಾರಿಸುತ್ತಾ ಮುನ್ನಡೆಯುವ ಮೂಲಕ ಭಾರತ ಅಮೃತ ಕಾಲದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

ಆದರೆ ವರ್ತಮಾನದ ಭಾರತ ಈ ಹಾದಿಯಲ್ಲಿ ಕ್ರಮಿಸುತ್ತಿದೆಯೇ ? ಈ ಜಟಿಲ ಪ್ರಶ್ನೆಗೆ ಇವತ್ತಿನ ಸಮಾಜ ಉತ್ತರ ಕಂಡುಕೊಳ್ಳಬೇಕಿದೆ. ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಗಲಭೆಗಳು, ಸನಿಹದಲ್ಲೇ ಇರುವ ಭಾರತದ ಮಿಲಿನಿಯಂ ಸಿಟಿ (ಶತಮಾನದ ನಗರ) ಎಂದೇ ಹೆಸರಾದ ಡಿಜಿಟಲ್‌ ಔದ್ಯಮಿಕ ಜಗತ್ತಿನ ಕೇಂದ್ರ ಬಿಂದು ಗುರುಗ್ರಾಮ್‌ಗೆ ವ್ಯಾಪಿಸುತ್ತಿರುವ ಕೋಮು-ಮತದ್ವೇಷದ ಹೊಗೆ ಮತ್ತು ಈಶಾನ್ಯ ಭಾರತದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹ ಮತ್ತು ಮಹಿಳಾ ದೌರ್ಜನ್ಯಗಳು ನಾವು ನೀಡಬಹುದಾದ ಉತ್ತರಕ್ಕೆ ಬೌದ್ಧಿಕವಾಗಿ-ಭೌತಿಕವಾಗಿ ಅಡ್ಡಿಯಾಗುತ್ತವೆ. ನಿಜ, ಭಾರತ ತನ್ನ ನೂರು ವರ್ಷಗಳನ್ನು ಪೂರೈಸುವ ವೇಳೆಗೆ ಒಂದು ಪ್ರಬುದ್ಧ ರಾಷ್ಟ್ರವಾಗಿ ವಿಶ್ವ ಭೂಪಟದಲ್ಲಿ ಕಂಗೊಳಿಸಬೇಕು. ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಶಸ್ತ್ರಾಸ್ತ್ರಗಳು ನೆರವಾಗುತ್ತವೆ ಆದರೆ ಪ್ರಬುದ್ಧ ರಾಷ್ಟ್ರವಾಗಲು ನಮ್ಮ ಸಾಮಾಜಿಕ ತಳಹದಿಯನ್ನು, ಸಾಂಸ್ಕೃತಿಕ ಅಡಿಪಾಯವನ್ನು ಮತ್ತಷ್ಟು ಮಾನವೀಯಗೊಳಿಸಬೇಕಾಗುತ್ತದೆ.

ಮತೀಯ ರಾಜಕಾರಣದ ಪ್ರತಿಫಲ

ಈ ಪ್ರಕ್ರಿಯೆಗೆ ಅಡ್ಡಿಯಾಗುವ ಯಾವುದೇ ಬೆಳವಣಿಗೆಗಳನ್ನು ತೆರೆದ ಕಣ್ಣಿನಿಂದ, ಮುಕ್ತ ಮನಸ್ಸಿನಿಂದ ನೋಡುವುದು ಒಂದು ಆರೋಗ್ಯಕರ ಸಮಾಜದ ಆದ್ಯತೆಯಾಗಬೇಕು. ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನೇ ಭಂಗಗೊಳಿಸುವಂತಹ ಪ್ರವೃತ್ತಿಗಳು ಢಾಳಾಗಿ ಗೋಚರಿಸುತ್ತವೆ. ಮುಸ್ಲಿಮರೇ ಪ್ರಧಾನವಾಗಿರುವ ಈ ಜಿಲ್ಲೆಯು ಭಾರತದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆ ಎಂದೇ ಕುಖ್ಯಾತವಾಗಿದೆ. ಈ ಜಿಲ್ಲೆಗೆ ಅತಿ ಸಮೀಪವಾಗಿ ಭಾರತದ ಐಟಿ ಹಬ್‌ ಅಥವಾ ಮಾಹಿತಿ ತಂತ್ರಜ್ಞಾನ-ಹಣಕಾಸು ಕೇಂದ್ರ ಎಂದೇ ಗುರುತಿಸಲ್ಪಟ್ಟಿರುವ ಗುರುಗ್ರಾಮ (ಗುರ್ಗಾಂವ್) ಜಿಲ್ಲೆಯೂ ಇದೆ.  ಬೆಂಗಳೂರು ಮತ್ತು ಮುಂಬೈ ನಂತರ ಮೂರನೆಯ ಸ್ಥಾನದಲ್ಲಿರುವ ಗುರುಗ್ರಾಮದಲ್ಲಿ 250 ಫಾರ್ಚೂನ್‌-500 ಕಂಪನಿಗಳಿವೆ. ಸಾವಿರಾರು ಜನರಿಗೆ ಉದ್ಯೋಗ, ಲಕ್ಷಾಂತರ ಜನರಿಗೆ ಜೀವನೋಪಾಯ ಒದಗಿಸುವ ಹರಿಯಾಣದ ಈ ಹಣಕಾಸು ರಾಜಧಾನಿಯು ರಾಜ್ಯ ಬೊಕ್ಕಸಕ್ಕೆ ಅತಿ ಹೆಚ್ಚಿನ ಕೊಡುಗೆಯನ್ನೂ ನೀಡುತ್ತದೆ. ಗುರುಗ್ರಾಮ ರಾಜಧಾನಿಗೆ ಅತಿ ಸಮೀಪದಲ್ಲಿದ್ದು, ಎನ್‌ಆರ್‌ಸಿ ಎಂದು ಕರೆಯಲಾಗುವ ರಾಷ್ಟ್ರೀಯ ರಾಜಧಾನಿ ಪ್ರದೇಶದ ಒಂದು ಭಾಗವಾಗಿದೆ.

ಆದರೆ ಇಂತಹ ಸಿರಿವಂತಿಕೆಯ ಕೇಂದ್ರದಿಂದ ತುಸು ದೂರ ಇರುವ ನೂಹ್‌ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರೇ ವಾಸವಾಗಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಜಿಲ್ಲೆಯ ಶೇ 80ರಷ್ಟು ಜನರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು ಬಹುಪಾಲು ಜನರು ಕಾರ್ಮಿಕರೇ ಆಗಿದ್ದಾರೆ. 2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅನುಸಾರ ನೂಹ್‌ ಜಿಲ್ಲೆಯಲ್ಲಿ ಶಾಲಾ ಶಿಕ್ಷಣ ಪಡೆಯುತ್ತಿರುವ ಆರು ವರ್ಷಕ್ಕೆ ಮೇಲ್ಪಟ್ಟ ಹೆಣ್ಣುಮಕ್ಕಳ ಸಂಖ್ಯೆ ಶೇ 51.2ರಷ್ಟಿದೆ.  ಪಕ್ಕದ ಗುರುಗ್ರಾಮದಲ್ಲಿ ಇದು ಶೇ 80.9ರಷ್ಟಿದ್ದರೆ ರಾಜ್ಯದಲ್ಲಿ ಶೇ 73.8ರಷ್ಟಿದೆ. ಜಿಲ್ಲಾ ವಿಂಗಡನೆಯ ಮುನ್ನ ಇದು ಮೇವಾತ್‌ ಜಿಲ್ಲೆಯಾಗಿತ್ತು. 2017ರಲ್ಲಿ ಗುರ್ಗಾಂವ್‌ ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡು ಐಟಿ ಕ್ಷೇತ್ರದ ಉದ್ಯಮಿಗಳ ಕೇಂದ್ರಸ್ಥಾನವಾಗಿತ್ತು. ಇದೇ ಸಮೀಕ್ಷೆಯ ಅನುಸಾರ ಮಹಿಳಾ ಸಾಕ್ಷರತೆಯ ಪ್ರಮಾಣ ಗುರುಗ್ರಾಮದಲ್ಲಿ ಶೇ 85.4ರಷ್ಟಿದ್ದರೆ, ರಾಜ್ಯದಲ್ಲಿ ಶೇ 79.7ರಷ್ಟಿದೆ. ನೂಹ್‌ ಜಿಲ್ಲೆಯಲ್ಲಿ ಶೇ 41.9ರಷ್ಟಿದೆ.

ಇದನ್ನೂಓದಿ:ನೂಹ್‍ನಿಂದ ಗುರುಗ್ರಾಮ್‍ ವರೆಗೆ ಕೋಮುದಳ್ಳುರಿ –“ಕೋಮು ಧ್ರುವೀಕರಣದ ಸಂಘಟಿತ ಪ್ರಯತ್ನ”

ಡಿಜಿಟಲ್‌ ಆರ್ಥಿಕತೆಯ ಉಚ್ಛ್ರಾಯ ಹಂತದಲ್ಲಿರುವ ಭಾರತ ನವ ಉದಾರವಾದದ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಐದು ಟ್ರಿಲಿಯನ್‌ ರಾಷ್ಟ್ರವಾಗಿ ಚೀನಾ ದೇಶವನ್ನೂ ಹಿಂದಿಕ್ಕುವ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿದೆ. ಈ ಸಾಧನೆಯ ಹಿಂದೆ ಗುರುಗ್ರಾಮವಷ್ಟೇ ಅಲ್ಲದೆ ಮುಂಬೈ, ಹೈದರಾಬಾದ್‌, ಬೆಂಗಳೂರು, ಚೆನ್ನೈ, ಅಹಮದಾಬಾದ್‌, ಸೂರತ್‌, ಭೂಪಾಲ್‌ ಹಾಗೂ ಇತರ ಮಹಾ ನಗರಗಳಲ್ಲಿನವ ಔದ್ಯಮಿಕ-ವಾಣಿಜ್ಯ ಉದ್ದಿಮೆಗಳ ಕೊಡುಗೆಯೂ ಇದೆ. ಆದರೆ ಈ ಐದು ಟ್ರಿಲಿಯನ್‌ ಡಾಲರ್‌ಗಳ ಹಿಂದೆ ಲಕ್ಷಾಂತರ ಟ್ರಿಲಿಯನ್‌ ಶ್ರಮದ ಬೆವರಹನಿಗಳು ದೇಶದೆಲ್ಲೆಡೆ ಶೋಷಣೆಗೊಳಗಾಗುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇಂದು ಗುರುಗ್ರಾಮ್‌ ಒಂದು ಅತ್ಯಾಧುನಿಕ ವಾಣಿಜ್ಯ ನಗರಿಯಾಗಿ ವಿಶ್ವಭೂಪಟದಲ್ಲಿ ತನ್ನ ಐಷಾರಾಮಿ ಚಿತ್ರಗಳೊಂದಿಗೆ ಪ್ರಕಾಶಿಸುತ್ತಿದ್ದರೆ ಈ ನಿರ್ಮಾಣ ಕಾರ್ಯದ ಹಿಂದೆ ಲಕ್ಷಾಂತರ ದುಡಿಮೆಯ ಕೈಗಳಿರುತ್ತವೆ. ದುಡಿಮೆಗಾರರ ಬೆವರಿನ ದುಡಿಮೆ ಇರುತ್ತದೆ. ಹಾಗೆಯೇ ಮಾರುಕಟ್ಟೆಯ ಶೋಷಣೆಯೂ ಇರುತ್ತದೆ.

ಶ್ರಮ ಮತ್ತು ಬಂಡವಾಳದ ವೈರುಧ್ಯ

ಗುರುಗ್ರಾಮದ ಪಕ್ಕದಲ್ಲೇ ಇರುವ ನೂಹ್‌ ಅಥವಾ ಮೇವಾತ್‌ ಅಂತಹ ಒಂದು ಶ್ರಮಜೀವಿಗಳ ಜಿಲ್ಲೆಯಾಗಿದೆ. ಇಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹೇಳಿದ “ ಭಾರತದಲ್ಲಿ ಕೇವಲ ಶ್ರಮ ವಿಭಜನೆ ಇಲ್ಲ, ಶ್ರಮಿಕರ ವಿಭಜನೆಯೂ ಇದೆ “ ಎಂಬ ದಾರ್ಶನಿಕ ನುಡಿಗಳು ನೆನಪಾಗುತ್ತವೆ. ಈ ಶ್ರಮಶಕ್ತಿಯನ್ನು ಪ್ರತಿನಿಧಿಸುವ ವಲಸೆ ಕಾರ್ಮಿಕರು, ತಳಮಟ್ಟದ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗಗಳು ಗುರುಗ್ರಾಮವನ್ನು ಭಾರತದ ಮಿಲಿನಿಯಮ್‌ ಸಿಟಿ ಆಗಿಸಿದ್ದಾರೆ. ಪ್ರತಿಯೊಂದು ಗಗನ ಚುಂಬಿ ಕಟ್ಟದ ಹಿಂದೆಯೂ ಒಂದು ಕೊಳೆಗೇರಿ ಇರುತ್ತದೆ ಎಂಬ ಚಾರಿತ್ರಿಕ ನಾಣ್ಣುಡಿಯನ್ನು ಪುನರ್‌ ಮನನ ಮಾಡಿಕೊಂಡಾಗ, ಆಧುನಿಕ ಭಾರತದ ಭವ್ಯ ನಗರಗಳ ಹಿಂದೆ, ಝಗಮಗಿಸುವ ರಸ್ತೆಗಳ ಹಿಂದೆ, ಅತ್ಯಾಧುನಿಕ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ, ಮೇಲ್‌ಸೇತುವೆ, ಮೆಟ್ರೋ , ರೈಲು ಮಾರ್ಗಗಳು ಹಾಗೂ ವಿಮಾನ ನಿಲ್ದಾಣಗಳ ಹಿಂದೆ ಇದೇ ರೀತಿಯ ಕೊಳೆಗೇರಿಗಳು ಇಂದಿಗೂ ಉಸಿರುಗಟ್ಟಿ ಬದುಕುತ್ತಿರುವುದನ್ನು ಗಮನಿಸಬಹುದು. ಒಂದು ಸಮೃದ್ಧ ರಾಜ್ಯದ ಹಣಕಾಸು ರಾಜಧಾನಿ-ಮಿಲಿನಿಯಮ್‌ ನಗರದ ಸಮೀಪದಲ್ಲಿಯೇ ದೇಶದ ಅತ್ಯಂತ ಕಡುಬಡತನದ ಜಿಲ್ಲೆಯೂ ಇರುವ ಒಂದು ವಿಡಂಬನೆಯನ್ನು , ಪ್ರಬುದ್ಧ ಸಮಾಜವಾಗಿ ನಾವು ಹೇಗೆ ನೋಡಬೇಕು ?

ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ ಎಂಬ ಕಾರಣಕ್ಕೆ ಅದು ಹಿಂದುಳಿದಿದೆಯೇ ಅಥವಾ ಬೆಳೆಯುತ್ತಿರುವ ಭಾರತದ ಔದ್ಯಮಿಕ ಸಾಮ್ರಾಜ್ಯದ ಕಾಲಾಳುಗಳನ್ನು ಒದಗಿಸುವ ಶೋಷಿತ ದುಡಿಮೆಗಾರರ ಜಿಲ್ಲೆ ಎಂಬ ಕಾರಣಕ್ಕಾಗಿಯೋ ? ಈ ಸಂಕೀರ್ಣ ಪ್ರಶ್ನೆಗೆ ನಾವು ಉತ್ತರ ಶೋಧಿಸಬೇಕಿದೆ. ಇಂತಹ ಒಂದು ಜಿಲ್ಲೆಯಲ್ಲಿ ಬಡತನ, ಹಸಿವೆ, ಅಕ್ಷರ ವಂಚಿತ ನೋವು, ನಾಗರಿಕ ಸೌಲಭ್ಯ ವಂಚಿತ ಯಾತನೆ, ಅವಕಾಶವಂಚಿತ ವೇದನೆ, ಸಾಮಾಜಿಕ ತಾರತಮ್ಯ-ದೌರ್ಜನ್ಯಗಳ ಸುತ್ತ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಮನುಜ ಸಂಬಂಧಗಳ ಸುತ್ತ ಒಂದು ಮಾನವ ಪ್ರಜ್ಞೆ ರೂಪುಗೊಳ್ಳಬೇಕಲ್ಲವೇ ? ಸ್ವಾತಂತ್ರ್ಯ ಗಳಿಸಿ 75 ವರ್ಷಗಳು ಕಳೆದರೂ ರಾಜಧಾನಿಗೆ ಸಮೀಪದ ಒಂದು ಜಿಲ್ಲೆ ದೇಶದ ಅತ್ಯಂತ ಕಡುಬಡತನದ-ಹಿಂದುಳಿದ ಜಿಲ್ಲೆಯಾಗಿ ಉಳಿದಿರುವುದು ಒಂದು ಚಾರಿತ್ರಿಕ ದುರಂತವಾದರೆ, ಈ ಜಿಲ್ಲೆ ಆಧುನಿಕ ಭಾರತದ ಮಿಲಿನಿಯಮ್‌ ಸಿಟಿಯ ಸಮೀಪ ಇರುವುದು ಸಮಕಾಲೀನ ಇತಿಹಾಸದ ವಿಡಂಬನೆ ಅಲ್ಲವೇ ?

ನೂಹ್‌ ಮತ್ತು ಗುರುಗ್ರಾಮ್‌ನಲ್ಲಿ ನಡೆಯುತ್ತಿರುವ ಕೋಮು ಗಲಭೆಗಳು ಹಠಾತ್ತನೆ ನಿರ್ವಾತದಲ್ಲಿ ಸೃಷ್ಟಿಯಾದ ವಿದ್ಯಮಾನಗಳಲ್ಲ. ಕಳೆದ ಮೂರು ನಾಲ್ಕು ದಶಕಗಳಿಂದಲೂ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಈ ಬೆಳವಣಿಗೆಗಳನ್ನು ವಿಭಿನ್ನ ಆಯಾಮಗಳಲ್ಲಿ ನೋಡುತ್ತಲೇ ಬಂದಿದ್ದೇವೆ. ಒಂದು ಧಾರ್ಮಿಕ ಉತ್ಸವ ಅಥವಾ ಮೆರವಣಿಗೆ, ಅದರ ಮೇಲೆ ದಾಳಿ ಮಾಡುವ ಮತ್ತೊಂದು ಗುಂಪು, ಈ ದಾಳಿಗೆ ಪ್ರತೀಕಾರವಾಗಿ ʼ ಧಾರ್ಮಿಕ ʼ ಉತ್ಸವಗಳಲ್ಲಿ ಭಾಗವಹಿಸಿರುವ ಗುಂಪುಗಳಿಂದಲೇ ಪ್ರತಿದಾಳಿ, ಮಾರಕಾಸ್ತ್ರಗಳ ಬಳಕೆ, ಶಸ್ತ್ರಾಸ್ತ್ರಗಳ ಹೇರಳ ಲಭ್ಯತೆ ಮತ್ತು ಅನೇಕ ಸಂದರ್ಭಗಳಲ್ಲಿ ಪೊಲೀಸರ ಮೌನ ಅಥವಾ ನಿಷ್ಕ್ರಿಯತೆ ಇವೆಲ್ಲವೂ ಸ್ವತಂತ್ರ ಭಾರತ ಕಂಡಿರುವ ದುರಂತ ವಾಸ್ತವಗಳು. ಗುರುಗ್ರಾಮದಂತಹ ಆಧುನಿಕ ವಾಣಿಜ್ಯ ನಗರಿಯ ಮಸೀದಿಯಲ್ಲಿ ಇಮಾಮ್‌ ಒಬ್ಬರು ದುಷ್ಕರ್ಮಿಯ ಗುಂಡೇಟಿಗೆ ಬಲಿಯಾಗುವುದು ಏನನ್ನು ಸೂಚಿಸುತ್ತದೆ ?

ನಾವು ಎಡವುತ್ತಿರುವುದು ಇಂತಹ ಘಟನೆಗಳನ್ನು ವಿಶ್ಲೇಷಿಸುವ ವಿಧಾನದಲ್ಲಿ. ಕೊಲ್ಲುವವರ, ಕೊಲ್ಲಲ್ಪಡುವವರ, ದಾಳಿಕೋರರ ಹಾಗೂ ದಾಳಿಗೊಳಗಾದವರ ನಡುವೆ ಮತೀಯ ಅಸ್ಮಿತೆಗಳನ್ನು ಶೋಧಿಸುತ್ತಾ, ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಎಣಿಕೆ ಮಾಡಲಾಗುವ ಶವಗಳ ನಡುವೆಯೂ ಅದೇ ಅಸ್ಮಿತೆಗಳನ್ನು ಶೋಧಿಸಲು ಮುಂದಾಗುತ್ತೇವೆ. ಮೂಲಭೂತವಾದ-ಮತಾಂಧತೆ-ಮತದ್ವೇಷದ ನೆಲೆಗಳು ಆಳಕ್ಕಿಳಿದು ಪ್ರತಿಯೊಂದು ಸುಶಿಕ್ಷಿತ ಮನಸ್ಸಿನಲ್ಲೂ ತಮ್ಮ ಇರುವಿಕೆಯನ್ನು ಘನೀಕೃತಗೊಳಿಸಿರುವ ಹೊತ್ತಿನಲ್ಲಿ ಇಂತಹ ಘಟನೆಗಳು ನಡೆದಾಗ ಸಾಮುದಾಯಿಕ ಅಸ್ಮಿತೆಗಳು ಮತ್ತು ಇದನ್ನು ಪೋಷಿಸುವ ರಾಜಕೀಯ ಚಿಂತನೆಗಳು ಎಂತಹ ಅಮಾನುಷ ಘಟನೆಗಳನ್ನಾದರೂ ಸಮರ್ಥಿಸಿಕೊಳ್ಳಲು ಭೂಮಿಕೆಯನ್ನು ಒದಗಿಸಿಬಿಡುತ್ತವೆ. ಒಂದು ಧರ್ಮದ ಅನುಯಾಯಿಗಳ ಧಾರ್ಮಿಕ ಮೆರವಣಿಗೆಯ ಮೇಲೆ ದಾಳಿ ನಡೆಸುವುದು ಮಹಾಪರಾಧವೇ ಸರಿ. ಆದರೆ ಧಾರ್ಮಿಕ ಉತ್ಸವಗಳಲ್ಲಿ ಮಾರಕಾಸ್ತ್ರಗಳನ್ನು ಬಳಸುವುದು ಅಪರಾಧವಲ್ಲವೇ ? ಈ ಪ್ರಶ್ನೆಗೆ ಮತಾಂಧತೆ-ಮತದ್ವೇಷವನ್ನು ಹರಡುತ್ತಿರುವ ಪ್ರತಿಯೊಬ್ಬರೂ ಧರ್ಮಾತೀತವಾಗಿ ಉತ್ತರಿಸಬೇಕಿದೆ.

ನ್ಯಾಯಾನ್ಯಾಯಗಳ ನಿಷ್ಕರ್ಷೆ

ಮತ್ತೊಂದೆಡೆ ತ್ವರಿತ ನ್ಯಾಯ ವಿತರಣೆಯ ಹೆಸರಿನಲ್ಲಿ ಕೆಲವು ರಾಜ್ಯ ಸರ್ಕಾರಗಳು ಅನುರಿಸುವ ಅರಣ್ಯ ನ್ಯಾಯವನ್ನೂ ಸಹ ನಾಗರಿಕತೆಯುಳ್ಳ ಸಮಾಜ ಪರಾಮರ್ಶಿಸಬೇಕಿದೆ. ಕೋಮು ಗಲಭೆಗಳನ್ನು ಪ್ರಚೋದಿಸುವ, ಗಲಭೆಗಳಲ್ಲಿ ಪಾಲ್ಗೊಳ್ಳುವ  ಹಾಗೂ ಪ್ರತೀಕಾರವಾಗಿ ದಾಳಿ ನಡೆಸುವವರನ್ನು ಶಿಕ್ಷಿಸುವುದು ಕಾನೂನು-ನ್ಯಾಯ ವ್ಯವಸ್ಥೆಯ ಕರ್ತವ್ಯ. ಆದರೆ ದಂಗೆಕೋರರು ಪ್ರತಿನಿಧಿಸುವ ಇಡೀ ಸಮುದಾಯವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ಅವರ ಮನೆಗಳನ್ನೂ ಧ್ವಂಸ ಮಾಡುವ ಸರ್ಕಾರಗಳ ಬುಲ್ಡೋಜರ್‌ ಕಾರ್ಯಾಚರಣೆಯನ್ನು ಹೇಗೆ ವ್ಯಾಖ್ಯಾನಿಸಬೇಕು. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈ ಬುಲ್ಡೋಜರ್‌ಗಳಿಗೆ ಬ್ರೇಕ್‌ ಹಾಕಿದೆ. ಅಪರಾಧವು ನ್ಯಾಯಾಂಗ ಕ್ರಿಯೆಯ ಮೂಲಕ ಸಾಬೀತಾಗುವವರೆಗೂ ತಪ್ಪೆಸಗಿದ ವ್ಯಕ್ತಿ ಕೇವಲ ಆರೋಪಿಯಾಗಿರುತ್ತಾನೆ, ಅಪರಾಧಿಯಾಗುವುದಿಲ್ಲ. ಇದು ನ್ಯಾಯಶಾಸ್ತ್ರದ ಮೂಲ ತತ್ವ. ಆದರೆ ಬುಲ್ಡೋಜರ್‌ ನ್ಯಾಯದಲ್ಲಿ ಆರೊಪಿಯಷ್ಟೇ ಅಲ್ಲದೆ ಆತನ ಕುಟುಂಬವೇ ಶಿಕ್ಷೆಗೊಳಗಾಗುತ್ತದೆ. ವಾಸಿಸುವ ಮನೆಗಳನ್ನು ಧ್ವಂಸಗೊಳಿಸುವ ಬುಲ್ಡೋಜರ್‌ ಕಾರ್ಯಾಚರಣೆಗೆ ಕಾನೂನಿನ ಹೊದಿಕೆಯನ್ನೂ ನೀಡಲಾಗಿದ್ದು, ವಿಭಿನ್ನ ಕಾರಣಗಳಿಗಾಗಿ ಆರೋಪಿಗಳ ಇಡೀ ಕುಟುಂಬ ವರ್ಗ ನಿರ್ಗತಿಕರಾಗಬೇಕಾಗುತ್ತದೆ.

ಇದನ್ನೂಓದಿ:ಕೋಮು ಸಂಘರ್ಷಗಳ ಹೊಸ ಆಯಾಮಗಳು

ನೂಹ್‌ನಂತಹ ಒಂದು ಜಿಲ್ಲೆಯಲ್ಲಿ ಶ್ರಮಜೀವಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವಾಗ ಅಲ್ಲಿ ಮತದ್ವೇಷ, ಮತಾಂಧತೆ ಮತ್ತು ಕೋಮುಭಾವನೆಗಳು ಬೇರೂರಲು ಕಾರಣವೇನು ? ಇದು ಪ್ರಜ್ಞಾವಂತ ಸಮಾಜವನ್ನು ಕಾಡಬೇಕಿರುವ ಪ್ರಶ್ನೆ. ಗುರುಗ್ರಾಮ ಒಂದು ಐಟಿ ಹಬ್‌ ಆಗಿದ್ದು ಅತಿರೇಕದ ಕೋಮುಗಲಭೆಗಳನ್ನು ಅಪೇಕ್ಷಿಸುವುದಿಲ್ಲ. ಏಕೆಂದರೆ ಅಲ್ಲಿ ಜಾಗತಿಕ ಹಣಕಾಸು ಬಂಡವಾಳಕ್ಕೆ ಪೆಟ್ಟು ಬೀಳುತ್ತದೆ. ಆದರೆ ಸಮೀಪದಲ್ಲೇ ಇರುವ ಮಾನವ ಬಂಡವಾಳದ ಒಂದು ಕೇಂದ್ರ ಕೋಮುದ್ವೇಷದ ದಳ್ಳುರಿಗೆ ಬಲಿಯಾಗುತ್ತದೆ. ಕಾರಣವೇನೆಂದರೆ ಮಾರುಕಟ್ಟೆಗೆ ಅಲ್ಲಿ ಶ್ರಮಿಕರ ಶ್ರಮಶಕ್ತಿಯ ಹೊರತು ಕಳೆದುಕೊಳ್ಳುವುದೇನೂ ಇರುವುದಿಲ್ಲ. ಶ್ರಮ, ಶ್ರಮಶಕ್ತಿ ಮತ್ತು ಶ್ರಮಿಕರನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯ ಮಾರುಕಟ್ಟೆಗೆ ಇರುತ್ತದೆ. ಹಾಗಾಗಿ ಈ ಶ್ರಮಲೋಕದೊಳಗಿನ ಮಾನವ ಕೇವಲ ಬಳಸಿ ಬಿಸಾಡುವ ಯಂತ್ರವಾಗಿ ಕಾಣುತ್ತಾನೆ. ಅವನ ಬದುಕು ಎಂದಾದರೂ ಹಿತ್ತಲಿಗೆ ಎಸೆಯಬೇಕಾದ ವಸ್ತುವಾಗಿ ಕಾಣುತ್ತದೆ. ಬಂಡವಾಳಶಾಹಿ ಮಾರುಕಟ್ಟೆ, ನವ ಉದಾರವಾದಿ ಬಂಡವಾಳ, ಔದ್ಯಮಿಕ ಹಿತಾಸಕ್ತಿ ಹಾಗೂ ಇವೆಲ್ಲವನ್ನೂ ಪೋಷಿಸುವ ರಾಜಕೀಯ ವ್ಯವಸ್ಥೆ ಶ್ರಮ ವಿಭಜನೆಯೊಂದಿಗೆ ಶ್ರಮಿಕರನ್ನೂ ವಿಭಜಿಸುತ್ತಲೇ ತನ್ನ ಶೋಷಣೆಯ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರುತ್ತದೆ.

ನೂಹ್‌ ಗಲಭೆಗಳು ಗುರುಗ್ರಾಮಕ್ಕೆ ಹಬ್ಬಿದ ಕೂಡಲೇ ಗಲಭೆಗಳು ನಿಯಂತ್ರಣಕ್ಕೆ ಬರುತ್ತವೆ. ಏಕೆಂದರೆ ಅಲ್ಲಿ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಡಿಜಿಟಲ್‌ ತಂತ್ರಜ್ಞಾನದ ಮಾರುಕಟ್ಟೆಯನ್ನು ರಕ್ಷಿಸುವುದು ಅನಿವಾರ್ಯವಾಗಿರುತ್ತದೆ. ಮತ್ತೊಂದೆಡೆ ನೂಹ್‌ ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾಗುವ ಶ್ರಮಿಕರ ಗುಡಿಸಲುಗಳು, ಮನೆಗಳು ಮಾರುಕಟ್ಟೆಯನ್ನು, ಆಡಳಿತ ವ್ಯವಸ್ಥೆಯನ್ನು ಬಾಧಿಸುವುದಿಲ್ಲ. ಇಲ್ಲಿ ನಾವು ಡಾ, ಬಿ.ಆರ್.‌ ಅಂಬೇಡ್ಕರ್‌ ಅವರ “ ಇಲ್ಲಿ ಶ್ರಮವಿಭಜನೆಯಷ್ಟೇ ಅಲ್ಲ ಶ್ರಮಿಕರ ವಿಭಜನೆ ಇದೆ ” ಎನ್ನುವ ದಾರ್ಶನಿಕ ನುಡಿಗಳನ್ನು ಕಾರ್ಲ್‌ಮಾರ್ಕ್ಸ್‌ನ “ ವಿಶ್ವ ಶ್ರಮಿಕರೇ ಒಂದಾಗಿ, ನೀವು ದಾಸ್ಯದ ಸಂಕೋಲೆಗಳ ಹೊರತು ಮತ್ತೇನೂ ಕಳೆದುಕೊಳ್ಳುವುದಿಲ್ಲ ” ಎಂಬ ಚಾರಿತ್ರಿಕ ಘೋಷಣೆಯೊಂದಿಗೆ ಅನುಸಂಧಾನ ಮಾಡಿದರೆ, ಅಮೃತ ಕಾಲದತ್ತ ದಾಪುಗಾಲು ಹಾಕುತ್ತಿರುವ ಭಾರತ ತನ್ನೊಳಗಿನ ವೈರುಧ್ಯಗಳನ್ನು ಗುರುತಿಸಿಕೊಳ್ಳುವುದು ಸುಲಭವಾಗುತ್ತದೆ.

ಗುರುಗ್ರಾಮದ ಸಿರಿತನʼ ಪಕ್ಕದಲ್ಲೇ ಇರುವ ʼನೂಹ್‌ ಜಿಲ್ಲೆಯ ದಾರಿದ್ರ್ಯʼ ಇವೆರಡೂ ಪ್ರತಿಮೆಗಳು ನಮಗೆ ನವ ಉದಾರವಾದಿ ಮಾರುಕಟ್ಟೆ ಜಗತ್ತಿನ ಒಂದು ರೂಪಕವಾಗಿ ಕಂಡಾಗ ಮಾತ್ರ ಬಂಡವಾಳಶಾಹಿ-ಮಾರುಕಟ್ಟೆ-ಕಾರ್ಪೋರೇಟ್‌ ಉದ್ಯಮ ಮತ್ತು ಮತಾಂಧ ರಾಜಕಾರಣದ ನಡುವಿನ ಸೂಕ್ಷ್ಮ ಸಂಬಂಧಗಳ ಎಳೆಗಳೂ ಅರ್ಥವಾಗಲು ಸಾಧ್ಯ. ನಾಗರಿಕತೆಯಾಗಿ ನಮ್ಮ ವೈಫಲ್ಯವನ್ನೂ ಗುರುತಿಸಿಕೊಳ್ಳಲು ಸಾಧ್ಯ.

೦-೦-೦-೦-

Donate Janashakthi Media

Leave a Reply

Your email address will not be published. Required fields are marked *