ಪ್ರೊ. ಪ್ರಭಾತ್ ಪಟ್ನಾಯಕ್
ಭಾರತದಲ್ಲಿ ಬಡತನ ಕುರಿತ ವಿಶ್ವಸಂಸ್ಥೆಯ ಅಂದಾಜು ಹುಸಿ ಸಂಭ್ರಮವಷ್ಟೇ
2005 ರಿಂದ 2019 ರ ನಡುವೆ ಭಾರತವು 41.5 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ ಎಂದು ಯುಎನ್ಡಿಪಿ ಘೋಷಿಸಿತು. ಭಾರತ ಸರಕಾರ ಅದನ್ನು ಸಂಭ್ರಮದಿಂದ ಪ್ರಚುರಗೊಳಿಸಿತು. ಆದರೆ ಯುಎನ್ಡಿಪಿಯ ‘ಬಡತನ’ ಎಂಬ ಪದದ ಅರ್ಥವು ನಾವು ಸಾಮಾನ್ಯವಾಗಿ ಬಳಸುವ ಬಡತನ ಎಂಬ ಪದ ಸೂಚಿಸುವ ಅರ್ಥಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳದಿದ್ದರೆ, 2022 ರಲ್ಲಿ ವಿಶ್ವ ಹಸಿವು ಸೂಚ್ಯಂಕದಲ್ಲಿ 121 ದೇಶಗಳ ಪೈಕಿ 107 ನೇ ಸ್ಥಾನಕ್ಕೆ ಜಾರಿರುವ ದೇಶವು ಅದೇ ಕಾಲದಲ್ಲಿ, ಹತ್ತಾರು ಕೋಟಿ ಜನರನ್ನು ಬಡತನದಿಂದ ಹೊರಗೆತ್ತಲು” ಹೇಗೆ ಸಾಧ್ಯವಾಯಿತು ಎಂಬುದನ್ನು ವಿವರಿಸುವುದು ಕಷ್ಟಸಾಧ್ಯವೇ ಸರಿ! ಇದು ಯುಎನ್ಡಿಪಿಯ ‘ಬಹು-ಆಯಾಮೀಯ ಬಡತನ’ ಎಂಬುದರ ಪರಿಭಾಷೆಯೇ ಎಷ್ಟೊಂದು ಬಡವಾಗಿದೆ ಎಂಬುದನ್ನು ಸೂಚಿಸುತ್ತದೆ.
ಈ ವರ್ಷದ ಏಪ್ರಿಲ್ 3 ರಂದು, ರಾಜ್ಯಸಭೆಯಲ್ಲಿ ಯೋಜನಾ ಖಾತೆಯ ರಾಜ್ಯ ಸಚಿವ ರಾವ್ ಇಂದರ್ಜೀತ್ ಸಿಂಗ್, 2011-12 ರ ನಂತರ ಬಡತನವನ್ನು ಅಂದಾಜು ಮಾಡಲು ಸರ್ಕಾರದ ಬಳಿ ಯಾವುದೇ ದತ್ತಾಂಶ ಇಲ್ಲ, ಆದ್ದರಿಂದ ಅಂದಿನಿಂದ ಎಷ್ಟು ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ತಿಳಿದಿಲ್ಲ ಎಂದು ಹೇಳಿದರು. ಆದರೂ, ಜುಲೈ 18 ರಂದು ಯುಎನ್ಡಿಪಿ 2005 ರಿಂದ 2019 ರ ನಡುವೆ ಭಾರತವು 41.5 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ ಎಂದು ಘೋಷಿಸಿತು; ನಿಜ, ಸಾಂಕ್ರಾಮಿಕ ನಂತರದ ಅವಧಿಯ ಯಾವುದೇ ಮಾಹಿತಿ ಅದರ ಬಳಿ ಇರಲಿಲ್ಲ, ಆದರೆ ಸಾಂಕ್ರಾಮಿಕ-ಪೂರ್ವ ಅವಧಿಯ ಬಗ್ಗೆ ಅದು ಹೇಳಿದ್ದು ಭಾರೀ ಉಬ್ಬರವನ್ನು ಸೃಷ್ಟಿಸಿತು. ಆದಾಗ್ಯೂ ಈ ಉಬ್ಬರದಲ್ಲಿ ಕಾಣದೇ ಹೋದ ಸಂಗತಿಯೆಂದರೆ, ಯುಎನ್ಡಿಪಿ ಯ ಬಡತನದ ಪರಿಕಲ್ಪನೆಯು ಸಾಮಾನ್ಯವಾಗಿ ಬಡತನ ಪದ ಏನನ್ನು ಅರ್ಥೈಸುತ್ತದೋ ಅದಕ್ಕಿಂತ ಬಹಳಷ್ಟು ಭಿನ್ನವಾಗಿದೆ ಮಾತ್ರವಲ್ಲ, ಯುಎನ್ಡಿಪಿ ಯ ಪರಿಕಲ್ಪನೆಯು ಸೈದ್ಧಾಂತಿಕವಾಗಿ ದೃಢವಾದದ್ದೂ ಅಲ್ಲ, ಸಾಂಖ್ಯಿಕವಾಗಿ ಕೂಡ ಸರಿಯಾದ ಆಧಾರವನ್ನು ಹೊಂದಿಲ್ಲ. ಅದು ಸೃಷ್ಟಿಸಿದ ಸಂಭ್ರಮ ಸುಳ್ಳೇ ಆಗಿತ್ತು.ಭಾರತದ ಅಧಿಕೃತ ಬಡತನದ ಅಂದಾಜುಗಳು, ಈಗ ನೇರವಾಗಿ ಪೌಷ್ಟಿಕಾಂಶದ ಅಭಾವವನ್ನು ಆಧರಿಸಿಲ್ಲದಿದ್ದರೂ, ಇನ್ನೂ ಅದರ ಆರಂಭ ಬಿಂದು ಪೌಷ್ಟಿಕತೆಯೇ ಆಗಿದೆ; ಮತ್ತು ಎನ್ಎಸ್ಎಸ್(ನ್ಯಾಷನಲ್ ಸ್ಯಾಂಪಲ್ ಸರ್ವೆ)ನ ದೊಡ್ಡ ಸ್ಯಾಂಪಲ್ ಗ್ರಾಹಕ ವೆಚ್ಚ ಸಮೀಕ್ಷೆಗಳು ಈ ಅಂದಾಜುಗಳಿಗೆ ಅಂಕಿ-ಅಂಶಗಳ ಆಧಾರವನ್ನು ಒದಗಿಸುತ್ತವೆ. 2011-12ರ ನಂತರದ ವರ್ಷಗಳಲ್ಲಿ ಬಡತನದ ಅಂದಾಜು ಇಲ್ಲ ಏಕೆಂದರೆ, ಆ ನಂತರ ಸಮೀಕ್ಷೆ ನಡೆದದ್ದು 2017-18 ರಲ್ಲಿ, ಅದರ ಫಲಿತಾಂಶಗಳನ್ನು ಕೇಂದ್ರ ಸರ್ಕಾರವು ಹತ್ತಿಕ್ಕಿತು ಮತ್ತು ತದನಂತರ ಯಾವುದೇ
ಸಮೀಕ್ಷೆಗಳು ನಡೆದಿಲ್ಲ.
ಇದಕ್ಕೆ ತದ್ವಿರುದ್ಧವಾಗಿ ಯುಎನ್ಡಿಪಿ ಹಲವಾರು ಸೂಚಕಗಳನ್ನು ತೆಗೆದುಕೊಳ್ಳುತ್ತದೆ, ಸಂಯೋಜಿತ ಅಳತೆಗೆ ಬರಲು ನಿರ್ದಿಷ್ಟ ತೂಕಗಳನ್ನು ನಿಯೋಜಿಸುತ್ತದೆ. ಈ ಸೂಚಕಗಳಲ್ಲಿ ಕೆಲವು : ದೇಹ-ದ್ರವ್ಯರಾಶಿ ಸೂಚ್ಯಂಕ(ಬಾಡಿ-ಮಾಸ್ ಇಂಡೆಕ್ಸ್-ಬಿಎಂಐ) 18.5 ಕೆ.ಜಿ./ಮೀ 2 ಗಿಂತ ಕೆಳಗಿದೆಯೇ; ಹಿಂದಿನ ಐದು ವರ್ಷಗಳಲ್ಲಿ ಕುಟುಂಬದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ಸಾವನ್ನಪ್ಪಿದೆಯೇ; ಶಾಲಾ ಪ್ರವೇಶ ವಯಸ್ಸಿಗಿಂತ ಆರು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ಮನೆಯ ಸದಸ್ಯರು ಕನಿಷ್ಠ ಆರು ವರ್ಷಗಳ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆಯೇ; ಯಾವುದೇ ಶಾಲಾ ವಯಸ್ಸಿನ ಮಗು ಅವನು ಅಥವಾ ಅವಳು ಎಂಟನೇ ತರಗತಿಯನ್ನು ಪೂರ್ಣಗೊಳಿಸುವ ವಯಸ್ಸಿನವರೆಗೆ ಶಾಲೆಗೆ ಹೋಗುತ್ತಿಲ್ಲವೇ; ಇತ್ಯಾದಿ.
ಈಗ, “ಆಧುನೀಕರಣ” ಕ್ಕೆ ಒಳಗಾಗುತ್ತಿರುವ ಯಾವುದೇ ಸಮಾಜದಲ್ಲಿ ಈ ಸೂಚ್ಯಂಕಗಳು ಸುಧಾರಣೆಯನ್ನು ತೋರಿಸುತ್ತಿರುತ್ತವೆ: ಹದಿನೆಂಟು ವರ್ಷಗಳ ಮಕ್ಕಳ ಸಾವಿನ ಪ್ರಮಾಣ ಇಳಿಯುತ್ತವೆ; ಗೆಳೆಯರ ಸಮವಯಸ್ಕರ ಒತ್ತಡ ಮತ್ತು ಆಕಾಂಕ್ಷೆಗಳು ಪೋಷಕರು ತಮ್ಮ ಮಕ್ಕಳನ್ನು (ವಿಶೇಷವಾಗಿ ಶಾಲೆಯ ಹಾಜರಾತಿಯಿಂದ ಮಗುವು ಉಚಿತ ಮಧ್ಯಾಹ್ನದ ಊಟಕ್ಕೆ ಅರ್ಹವಾಗುವುದಾದರೆ) ಶಾಲೆಗೆ ಕಳುಹಿಸುವಂತೆ ಮಾಡುತ್ತದೆ; ಮಕ್ಕಳು ಶಾಲೆಯಿಂದ ಹೊರಗುಳಿಯುವಾಗಲೂ, ಅದಕ್ಕೆ ಮೊದಲು ಕನಿಷ್ಠ ಆರು ವರ್ಷಗಳ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುವುದು ಸಾಮಾನ್ಯವಾಗುತ್ತದೆ; ಇತ್ಯಾದಿ. ಕುಟುಂಬದ ನಿಜ ಆದಾಯ ಕುಂಠಿತಗೊಂಡಾಗಲೂ ಈ ಎಲ್ಲಾ ಮಾನದಂಡಗಳು ನೆರವೇರಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಕುಟುಂಬಗಳ ಜೀವನ ಹದಗೆಡುತ್ತಿದ್ದರೂ, ಆ ಮೂಲಕ ಸಾಮಾನ್ಯವಾಗಿ ತಿಳಿದಿರುವ ಅರ್ಥದಲ್ಲಿ ಬಡತನ ಎಂಬುದು ದೇಶದಲ್ಲಿ ಹೆಚ್ಚುತ್ತಿದ್ದರೂ, ಯುಎನ್ಡಿಪಿ ಸೂಚ್ಯಂಕ ಬಡತನ ಇಳಿಯುತ್ತಿದೆ ಎಂದು ಸೂಚಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಕರ್ನಾಟಕಕ್ಕೆ ಅಕ್ಕಿ ನಿರಾಕರಿಸುವ ಆಹಾರ ನಿಗಮದ ವಿಲಕ್ಷಣ ತರ್ಕ
“ಬಹು ಆಯಾಮೀಯ ಬಡತನ” ಮತ್ತು ‘ಆಧುನೀಕರಣ’
ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಯುಎನ್ಡಿಪಿ ಹೇಳುವಂತೆ “ಬಹು ಆಯಾಮೀಯ ಬಡತನ” ಎಂಬುದನ್ನು ಬಿಂಬಿಸುವ ಅಳತೆಯು ಬಡತನದ ಕುಸಿತವನ್ನು “ಆಧುನೀಕರಣ” ಕ್ಕೆ ಸಮಾನಾರ್ಥಕವಾಗಿ ಮಾಡುತ್ತದೆ. ಆದರೆ ನಿಜವಾದ ಬಡತನವು ಕೇವಲ “ಆಧುನೀಕರಣ”ದ ಸಂಭವಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ, ಆಧುನೀಕರಣದ ವೆಚ್ಚವನ್ನು ಯಾರು ಭರಿಸುತ್ತಾರೆ, ದುಡಿಯುವ ಜನರೇ ಅಥವಾ ಶ್ರೀಮಂತರೇ ಎಂಬ ಪ್ರಶ್ನೆಗೆ ಸಂಬಂಧಿಸಿದೆ. ಆದರೆ ಯುಎನ್ಡಿಪಿ ಅಳತೆಯಲ್ಲಿ ಯಾವುದೂ ಈ ಪ್ರಶ್ನೆಗೆ ಸಂಬಂಧಿಸಿಲ್ಲ.
“ಆಧುನೀಕರಣ” ಭಾರತದಲ್ಲಿ ವೇಗವಾಗಿ ನಡೆಯುತ್ತಿದೆ ಮತ್ತು ಗಣನೀಯವಾಗಿ ಪ್ರಭುತ್ವದ ಅಡಿಯಲ್ಲಿ ನಡೆಯುತ್ತಿದೆ ಎಂಬ ಅಂಶವನ್ನು ನಿರಾಕರಿಸಲಾಗದು; ಯುಎನ್ಡಿಪಿ ಅಳತೆಯಲ್ಲಿ ಕಾಣುವುದು ಇದೇ. ಆದರೆ ಬಡತನವು ಸಾಮಾನ್ಯವಾಗಿ ಅರ್ಥಮಾಡಿಕೊಂಡಂತೆ, ನಾವು ನೋಡಿದಂತೆ, ಆಧುನೀಕರಣದ ವೆಚ್ಚಗಳೊಂದಿಗೆ ಸಂಬಂಧ ಹೊಂದಿದೆ “ಆಧುನೀಕರಣ”ಕ್ಕೆ ಸಾಮಾಜಿಕವಾಗಿ ಒದಗಿಸಬೇಕಾದ ಹಣಕಾಸು ಸಾಧನಗಳ ವೆಚ್ವವನ್ನು ಭರಿಸಲು ದುಡಿಯುವ ಜನರ ಬಳಕೆಯನ್ನು ಕಡಿತಮಾಡಲಾಗುತ್ತದೆಯೇ; ಮತ್ತು ಬದಲಾಗುತ್ತಿರುವ ಕಾಲಕ್ಕೆ
ಅನುಗುಣವಾಗಿ ತಮ್ಮ ಜೀವನವನ್ನು “ಆಧುನೀಕರಿಸಲು” ಕುಟುಂಬವು ತನ್ನ ಜೀವನಮಟ್ಟದಲ್ಲಿ ಕುಸಿತವನ್ನು ಅನುಭವಿಸಬೇಕೇ- ಇದು ಎಲ್ಲಕ್ಕಿಂತ ಹೆಚ್ಚಾಗಿ ಅದರ ಆಹಾರ ಬಳಕೆಯ ವೆಚ್ಚದಲ್ಲಿ ವ್ಯಕ್ತವಾಗುತ್ತದೆ (ಕುಟುಂಬದ ಆಯ-ವ್ಯಯ ಹೊಂದಾಣಿಕೆ ಕಠಿಣವಾದಾಗ ಅದು ಸಾಮಾನ್ಯವಾಗಿ ಅದರ ಆಹಾರ ಬಳಕೆಯ ವೆಚ್ಚವನ್ನು ಕಡಿತಗೊಳಿಸುತ್ತದೆ.)
ಪೌಷ್ಟಿಕತೆಯ ಅಭಾವ ಮತ್ತು ಬಡತನ ಇದು ಪ್ರಾಸಂಗಿಕವಾಗಿ, ಬಡತನವನ್ನು ಅಂದಾಜು ಮಾಡಲು ಪೌಷ್ಟಿಕಾಂಶವನ್ನು ಮೂಲಭೂತ ಮಾನದಂಡವಾಗಿ ತೆಗೆದುಕೊಳ್ಳುವುದರ
ಹಿಂದಿರುವ ತರ್ಕವಾಗಿದೆ. ಇದರ ಅರ್ಥ ಪೌಷ್ಠಿಕಾಂಶವನ್ನು ಮಾತ್ರವೇ ಪರಿಗಣಿಸಲಾಗುತ್ತದೆ (ಪೌಷ್ಠಿಕಾಂಶದ ಅಭಾವದ ಅಂಶಕ್ಕೆ ಒತ್ತು ನೀಡುವ ವಿದ್ವಾಂಸರನ್ನು “ಕ್ಯಾಲೋರಿ ಮೂಲಭೂತವಾದಿಗಳು” ಎಂದು ದೂಷಿಸುವವರು ತಪ್ಪಾಗಿ ಭಾವಿಸಿರುವಂತೆ) ಎಂದೇನೂ ಅಲ್ಲ್ಲ; ಆದರೆ ಪೌಷ್ಠಿಕಾಂಶದ ಕೊರತೆಯು ಒಟ್ಟಾರೆ ದರಿದ್ರೀಕರಣವನ್ನು ತೋರಿಸುವ ಒಂದು ಪಕ್ಕಾ ಒರೆಲ್ಲಾಗಿದೆ. ಪೌಷ್ಟಿಕಾಂಶ ಸೇವನೆಯ ಪ್ರಮಾಣವು ನಿಜ ಆದಾಯವನ್ನು ಬಿಂಬಿಸುತ್ತದೆ, ಖಂಡಿತವಾಗಿಯೂ, ಪ್ರಶ್ನಾರ್ಹವಾದ ಯಾವುದೋ ಗ್ರಾಹಕ ಬೆಲೆ-ಸೂಚ್ಯಂಕದಿಂದ ಹಣ
ಆದಾಯವನ್ನು ಕುಗ್ಗಿಸಿ ಅಳೆಯುವದಕ್ಕಿಂತ ಉತ್ತಮವಾದ ಸೂಚಕವಾಗಿದೆ. ಹದಗೆಡುತ್ತಿರುವ ಪೌಷ್ಠಿಕಾಂಶದ ಸೇವನೆಯು ಕುಟುಂಬದ ಜೀವನಮಟ್ಟ ಹದಗೆಡುತ್ತಿರುವುದರ ಸಾಕಷ್ಟು ವಿಶ್ವಾಸಾರ್ಹ ಲಕ್ಷಣವಾಗಿದೆ (“ಅತಿ-ಬಳಕೆಯನ್ನು” ತಪ್ಪಿಸಲು ಆರೋಗ್ಯದ ಕಾರಣಗಳಿಗಾಗಿ ಉದ್ದೇಶಪೂರ್ವಕವಾಗಿ ಅಂತಹ ಸೇವನೆಯನ್ನು ಕಡಿಮೆಗೊಳಿಸುವುದನ್ನು ಇಲ್ಲಿ ಪರಿಗಣಿಸಲಾಗದು).
ನಿಜ, ಯುಎನ್ಡಿಪಿ ಅಧಿಕಾರಿಗಳು ತಾವು ಅಪೌಷ್ಟಿಕತೆಯನ್ನು ನಿರ್ಲಕ್ಷಿಸುತ್ತಿಲ್ಲ ಎಂದು ವಾದಿಸುತ್ತಾರೆ; ಅವರು ತಯಾರಿಸಿದ ಸೂಚ್ಯಂಕದಲ್ಲಿ ಪೌಷ್ಟಿಕತೆಗೆ 1/6 ತೂಕವನ್ನು ನೀಡಲಾಗುತ್ತದೆ ತಾನೇ. ಆದರೆ ಪೌಷ್ಠಿಕಾಂಶದ ಅಭಾವ ಎಂದರೆ ಏನು ಎಂದು ಅವರು ಅರ್ಥೈಸುತ್ತಿರುವುದು ಸಂಪೂರ್ಣವಾಗಿ ವಿಭಿನ್ನವಾಗಿದೆ. ಅವರ ಅರ್ಥದಲ್ಲಿ ಅದು ಕ್ಯಾಲೋರಿ ಅಥವಾ ಪ್ರೋಟೀನ್ ಸೇವನೆಯಲ್ಲಿ ಕುಸಿತವಲ್ಲ, ಬದಲಿಗೆ 18.5 ಕೆಜಿ / ಮೀ 2 ಗಿಂತ ಕಡಿಮೆಯಿರುವ ವ್ಯಕ್ತಿಯ “ಬಾಡಿ ಮಾಸ್ ಇಂಡೆಕ್ಸ್” (ಬಿಎಂಐ). ಕಡಿಮೆಯಾದ ಕ್ಯಾಲೋರಿ ಅಥವಾ ಪ್ರೋಟೀನ್ ಸೇವನೆಯ ವಿಷಯದಲ್ಲಿ ಪೌಷ್ಟಿಕಾಂಶದ ಅಭಾವವು ಹಲವಾರು ಪರಿಣಾಮಗಳನ್ನು ಹೊಂದಿದೆ: ಇದು ಕೆಲಸ ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ; ಇದು ವ್ಯಕ್ತಿಯನ್ನು ರೋಗಗಳಿಗೆ ಗುರಿಯಾಗುವಂತೆ ಮಾಡುತ್ತದೆ, ಇತ್ಯಾದಿ. ಬಾಡಿ ಮಾಸ್ ಇಂಡೆಕ್ಸ್ನಲ್ಲಿನ ಕಡಿತವು ಅಂತಹ ಒಂದು ಪರಿಣಾಮವಾಗಿರಬಹುದಷ್ಟೇ. ಆದ್ದರಿಂದ ಯುಎನ್ಡಿಪಿ ಪೌಷ್ಠಿಕಾಂಶದ ಅಭಾವದ ಕೇವಲ ಒಂದು ಸಂಭವನೀಯ ಪರಿಣಾಮವನ್ನು ತೆಗೆದುಕೊಳ್ಳುತ್ತದೆ, ಬಿಎಂಐ ನಲ್ಲಿ ಕುಸಿತ, ಮತ್ತು ಅದು ಕೂಡ ಅದರ ಮೌಲ್ಯವು 18.5 ಕೆಜಿ/ಮಿ 2 ಮಿತಿಗಿಂತ ಕಡಿಮೆಯಾದಾಗ ಮಾತ್ರ, ಅದು ಮಾತ್ರವೇ ಅಂತಹ ಅಭಾವವನ್ನು ನಿರ್ಣಯಿಸುವ ಏಕೈಕ ಮಾನದಂಡವಾಗಿಸುತ್ತದೆ.
ವಾಸ್ತವವಾಗಿ, ಬಿಎಂಐ ನಲ್ಲಿನ ಇಳಿಕೆಯೆಂದರೇ, ಅದು ಅಗತ್ಯವಾಗಿ 18.5 ಕೆಜಿ/ಮೀ 2 ಗಿಂತ ಕೆಳಗೆ ಹೋಗುತ್ತದೆ ಎಂದು ಅರ್ಥವಲ್ಲ. ಅದು ನಿಗದಿತ ಮಿತಿಗಿಂತ ಕೆಳಗಿಳಿಯದೆಯೂ ಪೌಷ್ಟಿಕಾಂಶದ ಅಭಾವವು ಸ್ವಲ್ಪ ಸಮಯದವರೆಗೆ ಮುಂದುವರಿಯಬಹುದು. ಉದಾಹರಣೆಗೆ, 5 ಅಡಿ.8 ಇಂಚು ಎತ್ತರವಿರುವ ವ್ಯಕ್ತಿಯ ಬಿಎಂಐ 25 ಕೆಜಿ/ಮೀ 2 ರಿಂದ 18.5 ಕೆಜಿ/ಮೀ 2 ಕ್ಕೆ ಇಳಿಯಬೇಕಾದರೆ 18.8 ಕೆ.ಜಿ.ತೂಕವನ್ನು ಕಳೆದುಕೊಳ್ಳಬೇಕಾಗುತ್ತದೆ.; ಮತ್ತು ಆಹಾರವನ್ನು ಕಡಿಮೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಮಾತ್ರ ಅಂತಹ ತೂಕ ನಷ್ಟವನ್ನು
ತರಬಹುದು. ಸಂಕ್ಷಿಪ್ತವಾಗಿ, ಪೌಷ್ಟಿಕಾಂಶದ ಅಭಾವವು ಯುಎನ್ಡಿಪಿಯ ಬಡತನದ ಅಳತೆಯಲ್ಲಿ ಬಿಂಬಿತವಾಗದೆಯೇ ವ್ಯಕ್ತಿಯ ಯೋಗಕ್ಷೇಮ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ:ಮಣಿಪುರ ಬಿಕ್ಕಟ್ಟು -ಕೇಂದ್ರ ಸರ್ಕಾರ ಈಗಲಾದರೂ ಕಣ್ತೆರೆಯಬೇಕಿದೆ
ಸ್ಪಷ್ಟ ವ್ಯತ್ಯಾಸ
ಯುಎನ್ಡಿಪಿ ಅಂದಾಜು ಮತ್ತು ಎನ್ಎಸ್ಎಸ್ ದೊಡ್ಡ ಸ್ಯಾಂಪಲ್ ಸಮೀಕ್ಷೆಯಿಂದ ಮಾಡಿರುವ ಅಂದಾಜಿನ ನಡುವಿನ ವ್ಯತ್ಯಾಸವು ಈ ರೀತಿಯಲ್ಲಿ ಸ್ಪಷ್ಟವಾಗಿ ಕಾಣಬರುತ್ತದೆ:
- 2005-06ರಲ್ಲಿ ಭಾರತದಲ್ಲಿ 64.5 ಕೋಟಿ ಜನರು “ಬಹು ಆಯಾಮದ” ಬಡವರಿದ್ದರು ಮತ್ತು 2015-16 ರ ವೇಳೆಗೆ ಈ ಸಂಖ್ಯೆ 37.0 ಕೋಟಿಗೆ ಇಳಿದಿದೆ ಎಂದು ಯುಎನ್ಡಿಪಿ ಅಂದಾಜಿಸಿದೆ. ಇದರರ್ಥ ಈ ಎರಡು ದಿನಾಂಕಗಳ ನಡುವೆ 27.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ (ಮತ್ತು 2015-16 ಮತ್ತು 2019-20 ರ ನಡುವೆ ಇನ್ನೂ 14.0 ಕೋಟಿ ಜನರು ಬಡತನದಿಂದ ಹೊರಬರುವುದಿತ್ತು).
- ತದ್ವಿರುದ್ಧವಾಗಿ, 2017-18 ರಲ್ಲಿ 75 ನೇ ಸುತ್ತಿನ ಎನ್ಎಸ್ಎಸ್ ಸಮೀಕ್ಷೆಯು 2011-12 ಮತ್ತು 2017-18 ರ ನಡುವೆ ಗ್ರಾಮೀಣ ಭಾರತದಲ್ಲಿ, ಎಲ್ಲಾ ಸರಕು ಮತ್ತು ಸೇವೆಗಳ ಮೇಲಿನ ತಲಾ ನಿಜ ವೆಚ್ಚವು ಶೇಕಡಾ 9 ರಷ್ಟು ಕುಸಿದಿದೆ ಎಂದು ತೋರಿಸಿದೆ. ಈ ಅಂದಾಜು ಎಷ್ಟೊಂದು ಚಕಿತಗೊಳಿಸುವಂತದ್ದೆಂದರೆ, ಕೇಂದ್ರ ಸರ್ಕಾರವು ಅದನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ಆ ದತ್ತಾಂಶವನ್ನು ಸಾರ್ವಜನಿಕವಾಗಿ ಅಲಭ್ಯಗೊಳಿಸಿತು. (ಇಲ್ಲಿ ಉಲ್ಲೇಖಿಸಲಾದ ಶೇಕಡಾ 9 ರ ಕುಸಿತವು ಕೆಲವು ವ್ಯಕ್ತಿಗಳು ಆ ದತ್ತಾಂಶವನ್ನು ಹಿಂತೆಗೆದುಕೊಳ್ಳುವ ಮೊದಲೇ ಡೌನ್ಲೋಡ್ ಮಾಡಿದ್ದರಿಂದಾಗಿ ಲಭ್ಯವಾದದ್ದು. ಆ ಸಮಯದಲ್ಲಿ ಈ ಫಲಿತಾಂಶಗಳ ಕೆಲವು ಚರ್ಚೆಗಳು ಪತ್ರಿಕೆಗಳಲ್ಲಿ ಕಾಣಿಸಿಕೊಂಡವು).
- ಪ್ರತಿ ವ್ಯಕ್ತಿಗೆ ದಿನಕ್ಕೆ 2200 ಕ್ಯಾಲೊರಿಗಳನ್ನು ಪಡೆಯಲು ಸಾಧ್ಯವಾಗದ ಗ್ರಾಮೀಣ ಜನಸಂಖ್ಯೆಯ ಪ್ರಮಾಣ- ಇದು ಗ್ರಾಮೀಣ ಬಡತನವನ್ನು ಅಂದಾಜು ಮಾಡಲು ಭಾರತೀಯ ಯೋಜನಾ ಆಯೋಗವು ವಾಸ್ತವವಾಗಿ ಅನ್ವಯಿಸಿದ ಮೂಲ ಮಾನದಂಡ. ಇದು 1993-94ರಲ್ಲಿದ್ದ 58 %ದಿಂದ 2011-12ರಲ್ಲಿ 68% ಕ್ಕೆ ಹೆಚ್ಚಿತು; ಆದರೆ 2017-18 ರ ವೇಳೆಗೆ ಈ ಅಂಕಿ ಅಂಶವು ಅಂದಾಜು 77% ಕ್ಕೆ ಏರಿತು. ಅಂದರೆ, ಯುಎನ್ಡಿಪಿಯು ಲಕ್ಷಾಂತರ ಜನರು “ಬಹು ಆಯಾಮದʼ ಬಡತನದಿಂದ ಹೊರಬಂದಿದ್ದಾರೆ ಎಂದು ಅಂದಾಜಿಸಿರುವ ಅವಧಿಯ ಒಂದು ಭಾಗದಲ್ಲಿ, ಸಾಮಾನ್ಯವಾಗಿ ನಾವು ಅರ್ಥೈಸಿಕೊಂಡಿರುವ ಗ್ರಾಮೀಣ ಬಡತನದಲ್ಲಿ ಎಷ್ಟೊಂದು ತೀಕ್ಷ್ಣವಾದ ಏರಿಕೆ ಕಂಡುಬಂದಿತೆಂದರೆ, ಭಾರತ ಸರಕಾರ ಆ ದತ್ತಾಂಶವನ್ನೇ ಮುಚ್ಚಿಹಾಕಲು ನಿರ್ಧರಿಸಿತು! ಇದು ನಿಸ್ಸಂದೇಹವಾಗಿಯೂ ಸಮಯಸಾಧಕತನವೇ ಸರಿ.
ಇಲ್ಲಿಯವರೆಗೆ ನಾವು ಗ್ರಾಮೀಣ ಬಡತನದ ಬಗ್ಗೆ ಮಾತನಾಡಿದ್ದೇವೆ. ಸಾಂಕ್ರಾಮಿಕ ರೋಗದ ಮೊದಲು ಭಾರತದಲ್ಲಿ ನಿರುದ್ಯೋಗದ “ಎಂದಿನ ಸ್ಥಿತಿ-ಗತಿ” ದರವು ಹಿಂದಿನ 45 ವರ್ಷಗಳಲ್ಲಿ ಯಾವುದೇ ಸಮಯಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪಿತು, ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟಾಗಿ, ಸಾಮಾನ್ಯವಾಗಿ ನಾವು ಅರ್ಥಮಾಡಿಕೊಳ್ಳುವ ಬಡತನವು, ಯುಎನ್ಡಿಪಿ ನೀಡಿದ ಅನಿಸಿಕೆಗೆ ವ್ಯತಿರಿಕ್ತವಾಗಿ, ಕಡಿಮೆಯಾಗಿರಲು ಸಾಧ್ಯವಿಲ್ಲ ಎಂದು ಖಂಡಿತವಾಗಿಯೂ ಊಹಿಸಬಹುದು.
ಮೇಲೆ ಹೇಳಿರುವುದು ಯುಎನ್ಡಿಪಿಯ ಅಳತೆಯ ಬಗ್ಗೆ ಮಾಡಿರುವ ವಿಮರ್ಶೆ ಅಲ್ಲ, ಆದರೆ ಅದನ್ನು ಬಡತನದ ಅಳತೆ ಎಂದು ಕರೆದಿರುವುದರ ವಿಮರ್ಶೆಯಷ್ಟೇ. ಬಡತನಕ್ಕೆ ಏನಾಗುತ್ತಿದೆ ಎಂಬುದು ಭಾರತದಲ್ಲಿ ಬಿಸಿ-ಬಿಸಿ ಚರ್ಚೆಯ ವಿಷಯವಾಗಿದೆ. ಯುಎನ್ಡಿಪಿ ಬಡತನ- ನಿರ್ಮೂಲನೆಯ ಒಂದು ಚಿತ್ತಾಕರ್ಷಕ ಚಿತ್ರದೊಂದಿಗೆ, ಆದರೆ ‘ಬಡತನ’ ಎಂಬುದರ ಬಗ್ಗೆ ಪ್ರತಿಯೊಬ್ಬರೂ ಅರ್ಥಮಾಡಿಕೊಂಡಿರುವದಕ್ಕಿಂತ ಸಂಪೂರ್ಣ ಭಿನ್ನ ಅರ್ಥದಲ್ಲಿ ಬಳಸಿ ಈ ಚರ್ಚೆಗೆ ಧುಮುಕಿದೆ, ಈ ವ್ಯತ್ಯಾಸವನ್ನು ದೃಢವಾಗಿ ಮನಸ್ಸಿನಲ್ಲಿಟ್ಟುಕೊಳ್ಳದ ಹೊರತು, 2022
ರಲ್ಲಿ ವಿಶ್ವ ಹಸಿವು ಸೂಚ್ಯಂಕದಲ್ಲಿ 121 ದೇಶಗಳ ಪೈಕಿ 107 ನೇ ಸ್ಥಾನಕ್ಕೆ ಜಾರಿರುವ ದೇಶವು ಅದೇ ಕಾಲದಲ್ಲಿ, ಹತ್ತಾರು ಕೋಟಿ ಜನರನ್ನು “ಬಡತನದಿಂದ ಹೊರಗೆತ್ತಲು” ಹೇಗೆ ಸಾಧ್ಯವಾಯಿತು” ಎಂಬುದನ್ನು ವಿವರಿಸುವುದು ಕಷ್ಟಸಾಧ್ಯವೇ ಸರಿ!
(ಅನು:ಕೆ.ವಿ.)