‘ಪತ್ರಿಕೆಗಳು ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ–2023’ ಮಸೂದೆಯನ್ನು, ‘ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯಿದೆ,-1867’ ಅನ್ನು ಬದಲಿಗೆ ತರಲಾಗಿದೆ
ನವದೆಹಲಿ: ಆಗಸ್ಟ್ 3 ರಂದು ರಾಜ್ಯಸಭೆಯಿಂದ ಅಂಗೀಕರಿಸಲ್ಪಟ್ಟ ‘ಪತ್ರಿಕೆಗಳು ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ–2023’ರ ಕೆಲವು ‘ಕಠಿಣ ನಿಬಂಧನೆಗಳ’ ಬಗ್ಗೆ ಭಾರತೀಯ ಎಡಿಟರ್ಸ್ ಗಿಲ್ಡ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಎಡಿಟರ್ಸ್ ಗಿಲ್ಡ್, “ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಕಾರ್ಯಚಟುವಟಿಕೆಗಳ ಆಂತರಿಕ ವಿಚಾರಗಳಲ್ಲಿ ಕೈಯಾಡಿಸುವ ಮತ್ತು ಅನಿಯಂತ್ರಿತ ತಪಾಸಣೆಗಳನ್ನು ಮಾಡಲು ಈ ಮಸೂದೆ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ” ಎಂದು ಹೇಳಿದೆ.
ಪ್ರಸ್ತುತ ‘ಪತ್ರಿಕೆಗಳು ಮತ್ತು ನಿಯತಕಾಲಿಕಗಳ ನೋಂದಣಿ ಮಸೂದೆ–2023’ಯನ್ನು, ‘ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯಿದೆ,-1867’ ಅನ್ನು ಬದಲಿಗೆ ತರಲಾಗಿದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಹೊಸ ಮಸೂದೆಯನ್ನು ಸಮರ್ಥಿಸಿದ್ದು, ವ್ಯವಹಾರವನ್ನು ಸುಲಭಗೊಳಿಸಲು ಮತ್ತು ನಿಯತಕಾಲಿಕೆಗಳ ನೋಂದಣಿ ಪ್ರಕ್ರಿಯೆಯನ್ನು ಹೊಸ ಮಸೂದೆ ಸರಳಗೊಳಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಹೆಗ್ಗಡೆ ಪರ ಪ್ರತಿಭಟನೆಯಲ್ಲಿ ಸೌಜನ್ಯ ಕುಟುಂಬ ಸದಸ್ಯರ ಮೇಲೆ ಹಲ್ಲೆಗೆ ಯತ್ನ!
“ದೇಶದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳು ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಪತ್ರಿಕೆ ಅಥವಾ ನಿಯತಕಾಲಿಕವನ್ನು ಪ್ರಾರಂಭಿಸಲು ಅನುಮತಿ ನೀಡಲಾಗುವುದಿಲ್ಲ” ಎಂದು ಅನುರಾಗ್ ಠಾಕೂರ್ ರಾಜ್ಯಸಭೆಗೆ ತಿಳಿಸಿದ್ದಾರೆ.
“ಪತ್ರಿಕಾ ರಿಜಿಸ್ಟ್ರಾರ್ಗೆ ಮೀರಿದ ಅಧಿಕಾರ ವಿಸ್ತರಣೆ, ಕಾನೂನುಬಾಹಿರ ಚಟುವಟಿಕೆಗಾಗಿ ಶಿಕ್ಷೆಗೊಳಗಾದವರಿಗೆ ನೋಂದಣಿಗಳ ನಿರಾಕರಣೆ ಹಾಗೂ ರದ್ದತಿ, ಪತ್ರಿಕಾ ಸಂಸ್ಥೆಗಳ ಆವರಣಕ್ಕೆ ಪ್ರವೇಶಿಸುವ ಅಧಿಕಾರ ಮತ್ತು ನಿಯಮಗಳನ್ನು ರೂಪಿಸುವ ಅಧಿಕಾರ” ಮಸೂದೆಯ ಈ ನಾಲ್ಕು ಪ್ರಮುಖ ವಿಚಾರಗಳನ್ನು ಎತ್ತಿ ತೋರಿಸಿರುವ ಎಡಿಟರ್ಸ್ ಗಿಲ್ಡ್ ಅವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
”ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ವಿರುದ್ಧ ದೇಶದ್ರೋಹ ಸೇರಿದಂತೆ ಇತರ ಕ್ರಿಮಿನಲ್ ಕಾನೂನುಗಳು ಹಾಗೂ ಯುಎಪಿಎಯ ವ್ಯಾಪಕ ಮತ್ತು ಅನಿಯಂತ್ರಿತ ಬಳಕೆಯನ್ನು ಗಮನಿಸಿದರೆ, ಈ ಹೊಸ ನಿಬಂಧನೆಗಳ ಬಗ್ಗೆ ಎಡಿಟರ್ಸ್ ಗಿಲ್ಡ್ ತೀವ್ರ ಚಿಂತಿತವಾಗಿದೆ. ಸರ್ಕಾರವನ್ನು ಟೀಕಿಸುವ ವ್ಯಕ್ತಿಗಳಿಗೆ ಸುದ್ದಿ ಪ್ರಕಟಿಸುವ ಹಕ್ಕನ್ನು ನಿರಾಕರಿಸಿ ಈ ಕಾನೂನು ದುರುಪಯೋಗಪಡಿಸಿಕೊಳ್ಳಬಹುದಾದ ಅಪಾಯವಿದೆ” ಎಂದು ಗಿಲ್ಡ್ ಹೇಳಿದೆ.
ಇದನ್ನೂ ಓದಿ: ಸುಮ್ಮನಿರಿ, ಇಲ್ಲವೆಂದರೆ ಇಡಿ ನಿಮ್ಮ ಮನೆಗೆ ಬರುತ್ತೆ: ಸಂಸದರಿಗೆ ಸದನದಲ್ಲೆ ಬೆದರಿಕೆ ನೀಡಿದ ಸಚಿವೆ
“ಮಸೂದೆಯ ಸೆಕ್ಷನ್ 19 ಕೇಂದ್ರ ಸರ್ಕಾರಕ್ಕೆ ಭಾರತದಲ್ಲಿ ಸುದ್ದಿ ಪ್ರಕಟಣೆಯನ್ನು ಮಾಡಬೇಕಾದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸುವ ಅಧಿಕಾರವನ್ನು ನೀಡುತ್ತದೆ” ಎಂದು ಗಿಲ್ಡ್ ನೀಡಿದ ಹೇಳಿಕೆ ತಿಳಿಸಿದೆ.
EGI is deeply concerned about Press & Registration of Periodicals Bill, 2023, as it carries provisions that can have adverse impact on press freedom. Urges @loksabhaspeaker to refer bill to Parliamentary Committee. @narendramodi @MIB_India @Anurag_Office pic.twitter.com/WL1soJc1EM
— Editors Guild of India (@IndEditorsGuild) August 6, 2023
“ಪತ್ರಿಕಾ ಸ್ವಾತಂತ್ರ್ಯಕ್ಕೆ ನಿರ್ಣಾಯಕವಾಗಿ ಬೇಕಾಗಿರುವ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಲು ಸಂಸತ್ತಿನ ಆಯ್ಕೆ ಸಮಿತಿಗೆ ಮಸೂದೆಯನ್ನು ಉಲ್ಲೇಖಿಸಬೇಕು” ಎಂದು ಗಿಲ್ಡ್ ಲೋಕಸಭೆಯ ಸ್ಪೀಕರ್ ಅವರನ್ನು ಒತ್ತಾಯಿಸಿದೆ. ಮಸೂದೆಯನ್ನು 2019ರಲ್ಲಿ ಪ್ರಸ್ತಾಪಿಸಲಾಗಿತ್ತು ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು.
ವಿಡಿಯೊ ನೋಡಿ: ನ್ಯಾಷನಲ್ ಕೊ – ಆಪರೇಟಿವ್ ಬ್ಯಾಂಕ್ ವಿವಾದ : ದುಡಿದು ಕೂಡಿಟ್ಟ ದುಡ್ಡಿಗಾಗಿ ಪರದಾಡುತ್ತಿರುವ ಠೇವಣಿದಾರರು